ಕೋವಿಡ್ ಮತ್ತು ಅದರ ಬೆನ್ನಲ್ಲೇ ಹೇರಲ್ಪಟ್ಟ ಲಾಕ್‌ಡೌನ್ ಅನೇಕ ಜನರ ಉದ್ಯೋಗ, ಆಸರೆಯನ್ನು ಕಸಿದುಕೊಂಡದ್ದಷ್ಟೇ ಅಲ್ಲದೆ ದೇಶಾದ್ಯಂತ ಅಪರಾಧದ ಹೆಚ್ಚಳಕ್ಕೂ ಕಾರಣವಾಗಿತ್ತು. ಅದರಲ್ಲೂ ಹಿಂದೆಂದೂ ಕಂಡರಿಯದಷ್ಟು ಸೈಬರ್ ಅಪರಾಧಗಳು ದಾಖಲಾಗಿದ್ದವು. ಇದೀಗ ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 74 ಪ್ರತಿಶತ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಸ್‌ಎಂಬಿ) ಸೈಬರ್ ದಾಳಿಗೆ ಒಳಗಾಗಿವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡುಹಿಡಿದಿದೆ.
ಸೈಬರ್ ದಾಳಿಗೆ ಒಳಗಾದ ಶೇ .62 ರಷ್ಟು ಎಸ್‌ಎಂಬಿ ಸಂಸ್ಥೆಗಳು ಈ ದಾಳಿಗಳಿಂದಾಗಿ ರೂ. 3.5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೆಚ್ಚದ ವ್ಯವಹಾರಗಳು ನಷ್ಟವಾಗಿವೆ ಎಂದು ಹೇಳಿವೆ. 36 ಶೇಕಡಾ SMB ಗಳು ತಮ್ಮ ಸೈಬರ್ ಸೊಲ್ಯೂಷನ್‌ಗಳು ದಾಳಿಯನ್ನು ಪತ್ತೆಹಚ್ಚಲು ಅಥವಾ ತಡೆಯುವ ಸಾಮರ್ಥ್ಯ ಹೊಂದಿಲ್ಲ ಎಂದಿದ್ದಾರೆ. ಸಿಸ್ಕೊ ನಡೆಸಿದ Cybersecurity for SMBs: Asia Pacific Businesses Prepare for Digital Defense ಎನ್ನುವ ಶೀರ್ಷಿಕೆಯ ಅಧ್ಯಯನವು ಭಾರತದಲ್ಲಿ SMB ಗಳು ದಾಳಿಗಳಿಗೆ ಹೆಚ್ಚು ತುತ್ತಾಗುತ್ತಿವೆ ಮತ್ತು ಸೈಬರ್ ಭದ್ರತಾ ಬೆದರಿಕೆಗಳ ಬಗ್ಗೆ ಹೆಚ್ಚು ಚಿಂತಿತವಾಗಿವೆ ಎಂಬ ಅಂಶವನ್ನು ಹೊರಗೆಡವಿದೆ. ಸೈಬರ್ ದಾಳಿಯನ್ನು ಎದುರಿಸಿದ ನಾಲ್ಕು ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಲ್ಲಿ ಮೂರು ಉದ್ದಿಮೆಗಳು ಶೇಕಡಾ 85 ರಷ್ಟು ಗ್ರಾಹಕರ ಮಾಹಿತಿಯನ್ನು ಕಳೆದುಕೊಂಡಿದೆ ಮತ್ತು ಇದು ಅವರ ವ್ಯವಹಾರದ ಮೇಲೆ ಸ್ಪಷ್ಟವಾದ ಪರಿಣಾಮ ಬೀರುತ್ತದೆ ಎಂಬ ಅಂಶವನ್ನೂ ಅಧ್ಯಯನವು ಕಂಡುಹಿಡಿದಿದೆ.

ಈ ಅಧ್ಯಯನವನ್ನು ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ 14 ಮಾರುಕಟ್ಟೆಗಳಲ್ಲಿ 3,700 ಕ್ಕೂ ಹೆಚ್ಚು ವ್ಯಾಪಾರ ಮತ್ತು ಐಟಿ ಸೇವೆಗಳನ್ನು ಒದಗಿಸುವ ಉದ್ದಿಮೆದಾರರ ಸಮೀಕ್ಷೆಯನ್ನು ಆಧರಿಸಿ ಕೈಗೊಳ್ಳಲಾಗಿದೆ. ಭಾರತದಲ್ಲಿ ಶೇಕಡಾ 92 ರಷ್ಟು SMB ಗಳ ಮೇಲೆ ಪರಿಣಾಮ ಬೀರುವ ಮಾಲ್‌ವೇರ್ ದಾಳಿಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾಮದಲ್ಲಿ ಫಿಶಿಂಗ್(76 %) ಇದೆ. ಗ್ರಾಹಕರ ಡೇಟಾವನ್ನು ಕಳೆದುಕೊಳ್ಳುವುದರ ಜೊತೆಗೆ, ಸೈಬರ್ ದಾಳಿಗೊಳಗಾದ SMB ಗಳು ಆಂತರಿಕ ಇಮೇಲ್‌ಗಳು, ಉದ್ಯೋಗಿಗಳ ಡೇಟಾ, ಆಸ್ತಿ ಮತ್ತು ಹಣಕಾಸಿನ ಮಾಹಿತಿಯನ್ನು ಕಳೆದುಕೊಂಡಿವೆ. ಬಹುಪಾಲು SMB ಗಳು ಸೈಬರ್ ದಾಳಿಯು ತಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ ಮತ್ತು ಅದು ತಮ್ಮ ವ್ಯಾವಹಾರಿಕ ಪ್ರತಿಷ್ಠೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಹಾಗೂ ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಸಮೀಕ್ಷೆಯಲ್ಲಿ ಒಪ್ಪಿಕೊಂಡಿವೆ. ಶೇ.38 ರಷ್ಟು ಉದ್ಯಮಪತಿಗಳ ಪ್ರಕಾರ ಈ ಸೈಬರ್ ದಾಳಿಗಳ ಪ್ರಮುಖ ಕಾರಣವೆಂದರೆ ಸರಿಯಾದ ಸೈಬರ್ ಸೆಕ್ಯುರಿಟಿ ಪರಿಹಾರಗಳನ್ನು ಹೊಂದಿಲ್ಲದಿರುವುದು.
” SMBಗಳು ಡಿಜಿಟಲೀಕರಣಗೊಳ್ಳುತ್ತಿದ್ದಂತೆ ಗ್ರಾಹಕರು ಇರುವಲ್ಲಿಯೇ ಅವರನ್ನು ಸಂಪರ್ಕಿಸಲು ಮತ್ತು ಅವರಲ್ಲಿ ನಂಬಿಕೆಯನ್ನು ಬೆಳೆಸಲು ಅನುವು ಮಾಡಿಕೊಡುವಂತಹವು ಸೈಬರ್ ಭದ್ರತೆಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸೀಮಿತ ಸಂಪನ್ಮೂಲಗಳು ಮತ್ತು ಸಣ್ಣ ತಂಡಗಳೊಂದಿಗೆ ಕಾರ್ಯನಿರ್ವಹಿಸುತ್ತವೆ, ಆದ್ದರಿಂದ ತಂತ್ರಜ್ಞಾನದಲ್ಲಿನ ಸರಳತೆಯು ಯಶಸ್ವಿ ಭದ್ರತಾ ನಿಯೋಜನೆಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಧ್ಯಯನದ ಪ್ರಕಾರ, SMB ಗಳು ತಮ್ಮಲ್ಲಿ ಹಲವು ತಂತ್ರಜ್ಞಾನಗಳಿವೆ ಮತ್ತು ಅವುಗಳನ್ನು ಸಂಯೋಜಿಸುವುದು ಕಷ್ಟ ಎಂದು ಭಾವಿಸಿದ್ದಾರೆ ” ಎನ್ನುತ್ತಾರೆ ಸಿಸ್ಕೋ ಇಂಡಿಯಾ ಮತ್ತು ಸಾರ್ಕ್‌ನ ಸಣ್ಣ ಉದ್ಯಮಗಳ ವ್ಯವಸ್ಥಾಪಕ ನಿರ್ದೇಶಕರಾದ ಪನಿಶ್ ಪಿ.ಕೆ.












