ಟಿಕ್ರಿ ಗಡಿಯಲ್ಲಿ ಕೃಷಿ ಕಾನೂನು ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯಾ ಪ್ರಕರಣವೆಂದು ಪೊಲೀಸರು ತಿಳಿಸಿದ್ದಾರೆ.
ಟಿಕ್ರಿಯ ಪಾರ್ಕ್ ಬಳಿ ಇರುವ ಮರವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಜಿಂದ್ ಪ್ರಾಂತ್ಯದ ಸಿಂಘ್ ವಾಲ್ ಗ್ರಾಮದ ಕರಮ್ ವೀರ್ ಸಿಂಗ್ (52 ವ.) ಎಂದು ಗುರುತಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಮೃತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ತೋರುತ್ತದೆ, ಮೃತ ವ್ಯಕ್ತಿಯ ಬಳಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದೆ. ಅವರ ಶವವನ್ನು ಶವಾಗಾರದಲ್ಲಿ ಇಡಲಾಗಿದೆ, ಅವರ ಕುಟುಂಬವು ಬಂದು ಅವರ ಒಪ್ಪಿಗೆ ನೀಡಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು… ಇದುವರೆಗೆ ತನಿಖೆಯಲ್ಲಿ ಯಾವುದೇ ಸಂದೇಹಾಸ್ಪದ ಸುಳಿವುಗಳೇನು ದೊರೆತಿಲ್ಲ ಎಂದ ತನಿಖಾಧಿಕಾರಿ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದ್ದಾರೆ.
ದೊರೆತಿರುವ ಆತ್ಮಹತ್ಯಾ ಪತ್ರದಲ್ಲಿ, ʼ“ಆತ್ಮೀಯ ರೈತ ಸಹೋದರರೇ, ಈ ಮೋದಿ ಸರ್ಕಾರವು ಒಂದಾದರ ಮೇಲೆ ಒಂದರಂತೆ ದಿನಾಂಕ ನೀಡುತ್ತಲೇ ಇದೆ. ಈ ಕರಾಳ ಕಾನೂನುಗಳು ಯಾವಾಗ ರದ್ದಾಗುತ್ತವೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಈ ಕರಾಳ ಕಾನೂನುಗಳು ರದ್ದಾಗುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ.” ಭಾರತೀಯ ಕಿಸಾನ್ ಯೂನಿಯನ್ ಝಿಂದಾಬಾದ್ ಎಂದು ಬರೆಯಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.