ಇತ್ತೀಚಿನ NCRB ಡೇಟಾದ ಪ್ರಕಾರ2019 ಕ್ಕೆ ಹೋಲಿಸಿದರೆ 2020 ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇಕಡಾ 400 ಕ್ಕಿಂತ ಹೆಚ್ಚು ಹೆಚ್ಚಳ ವರದಿಯಾಗಿದೆ. ಅವುಗಳಲ್ಲಿ ಹೆಚ್ಚಿನವು , ಲೈಂಗಿಕವಾಗಿ ಅಶ್ಲೀಲ ಕೃತ್ಯದಲ್ಲಿ ಮಕ್ಕಳನ್ನು ಚಿತ್ರಿಸಿರುವುದನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದ ಅಥವಾ ಹಂಚಿರುವುದಕ್ಕೆ ಸಂಬಂಧಿಸಿದೆ.
ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶ (170), ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ವರದಿ ಮಾಡಿರುವ ಅಗ್ರ ಐದು ರಾಜ್ಯಗಳಾಗಿವೆ. ಆನ್‌ಲೈನ್ ಅಪರಾಧಗಳ ಒಟ್ಟು 842 ಪ್ರಕರಣಗಳಲ್ಲಿ, 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಅಶ್ಲೀಲವಾಗಿ ಚಿತ್ರಿಸಿರುವ ಪ್ರಕರಣಗಳಾಗಿವೆ.
2019 ರಲ್ಲಿ, ಮಕ್ಕಳ ವಿರುದ್ಧ 164 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, 2018 ರಲ್ಲಿ 117 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ ಮತ್ತು 2017 ರಲ್ಲಿ ಅಂತಹ 79 ಪ್ರಕರಣಗಳು ದಾಖಲಾಗಿದ್ದವು.

ಶಿಕ್ಷಣ ಮತ್ತು ಇತರ ಸಂವಹನ ಉದ್ದೇಶಗಳಿಗಾಗಿ ಅಂತರ್ಜಾಲದಲ್ಲಿ ಹೆಚ್ಚಿನ ಸಮಯವನ್ನು ಮಕ್ಕಳು ಕಳೆಯುತ್ತಿರುವಾಗ ಅನೇಕ ಅಪಾಯಗಳಿಗೆ ಗುರಿಯಾಗುತ್ತಾರೆ. ವಿಶೇಷವಾಗಿ ಆನ್‌ಲೈನ್ ಲೈಂಗಿಕ ನಿಂದನೆ, ಸೆಕ್ಸ್ಟಿಂಗ್, ಅಶ್ಲೀಲತೆಗೆ ಒಡ್ಡಿಕೊಳ್ಳುವುದು, ಪ್ರೊನೋಗ್ರಫಿ, ಸೈಬರ್-ಬೆದರಿಕೆ, ಆನ್‌ಲೈನ್ ಕಿರುಕುಳ ಮತ್ತು ಇತರ ಗೌಪ್ಯತೆ-ಸಂಬಂಧಿತ ಅಪಾಯಗಳಿಗೆ ಈಡಾಗುತ್ತಾರೆ ಎನ್ನುತ್ತಾರೆ ‘ಮಕ್ಕಳ ಹಕ್ಕುಗಳು ಮತ್ತು ನೀವು’ (CRY) ಸಿಇಒ ಪೂಜಾ ಮರ್ವಾಹಾ. ಕೋವಿಡ್ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ್ದು ಅವರು ಅನುಭವಿಸುವ ಅಪಾಯಗಳ ಪ್ರಮಾಣವನ್ನು ಹೆಚ್ಚಿಸಿದೆ ಎಂದೂ ಅವರು ಹೇಳುತ್ತಾರೆ.
UNICEF 2020ರ ವರದಿಯ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 13 ಪ್ರತಿಶತದಷ್ಟು ಮಕ್ಕಳು ಮತ್ತು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಜನರು ಮನೆಯಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದಾರೆ. ಭಾರತದಾದ್ಯಂತ ಸಾಂಕ್ರಾಮಿಕ ರೋಗದ ಸಮಯದಲ್ಲಿ ಶಿಕ್ಷಣಕ್ಕಾಗಿ ಆನ್‌ಲೈನ್ ಮಾಧ್ಯಮವನ್ನು ಬಳಸಲಾಯಿತು. ಆದರೆ ಶಿಕ್ಷಣ ಮತ್ತು ಇತರ ಉದ್ದೇಶಗಳಿಗಾಗಿ ಅಂತರ್ಜಾಲವನ್ನು ಪ್ರವೇಶಿಸುವ ಮಕ್ಕಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಡೊಮೇನ್‌ನಲ್ಲಿ ಯಾವುದೇ ಖಚಿತ ಡೇಟಾ ಲಭ್ಯವಿಲ್ಲ. ಲಭ್ಯವಿರುವ ಡೇಟಾವನ್ನೇ ಬಳಸಿ UNICEF (2020) ವರದಿಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ 16 ರಾಜ್ಯಗಳಲ್ಲಿ ಸುಮಾರು 37.6 ಮಿಲಿಯನ್ ಮಕ್ಕಳು ಆನ್‌ಲೈನ್ ತರಗತಿ ಮತ್ತು ರೇಡಿಯೊ ಕಾರ್ಯಕ್ರಮಗಳಂತಹ ವಿವಿಧ ದೂರಸ್ಥ ಕಲಿಕೆಯ ಉಪಕ್ರಮಗಳ ಮೂಲಕ ಶಿಕ್ಷಣವನ್ನು ಮುಂದುವರೆಸಿದ್ದಾರೆ ಎಂದು ಅಂದಾಜಿಸಿದೆ.

ಶಾಲೆಗಳು ಮುಚ್ಚಿದ್ದರಿಂದ ಹೆಚ್ಚಿದ ಒಂಟಿತನವು ಮಾದಕ ದ್ರವ್ಯ ಸೇವನೆ ಅಥವಾ ಆತಂಕಕ್ಕೆ ಕಾರಣವಾಗಬಹುದು. ಮತ್ತು ಇದನ್ನು ಮೀರಲು ಅವರು ಇಂಟರ್ನೆಟ್ ಅನ್ನು ಕಡ್ಡಾಯವಾಗಿ ಬಳಸಲು ಮುಂದಾಗಬಹುದು, ಆಕ್ಷೇಪಾರ್ಹ ವಿಷಯಗಳಿರುವ ಸೈಟ್ ಗಳನ್ನು ಪ್ರವೇಶಿಸಬಹುದು ಅಥವಾ ಬೆದರಿಸುವಿಕೆ ಅಥವಾ ನಿಂದನೆಗೆ ಗುರಿಯಾಗಬಹುದು ಎನ್ನುತ್ತಾರೆ ಮರ್ವಾಹಾ. ಅಂತರ್ಜಾಲ ಆಡಳಿತ ನೀತಿ ಮತ್ತು ಮಕ್ಕಳ ರಕ್ಷಣೆಗಾಗಿ ಇರುವ ವೇದಿಕೆಗಳ ನಡುವೆ ಒಗ್ಗಟ್ಟು ಅಗತ್ಯ ಎಂದು ಅವರು ಹೇಳುತ್ತಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (MWCD) ಮಕ್ಕಳ ಸುರಕ್ಷತೆಯನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಸೈಬರ್‌ಬುಲ್ಲಿಂಗ್‌ನ ಅಪರಾಧೀಕರಣ, ಸೆಕ್ಸ್‌ಟಿಂಗ್‌ನ ಅಪರಾಧೀಕರಣ ಮತ್ತು ಮಕ್ಕಳನ್ನು ಸೆಕ್ಸುವಲ್ ಅಬ್ಯೂಸ್‌ಗಾಗಿ ಬಳಸುವುದರ ಅಪರಾಧೀಕರಣ ಹಾಗೂ ಹಲವಾರು ಸೈಬರ್ ಸುರಕ್ಷತೆ ಸಮಸ್ಯೆಗಳ ಶಾಸನ ಮತ್ತು ನೀತಿ ಕ್ರಮಗಳಲ್ಲಿನ ಅಂತರವನ್ನು ಪರಿಹರಿಸಲು ಸಹಾಯ ಮಾಡಬಲ್ಲದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಕಿರುಕುಳಗಳ ಬಗ್ಗೆ ಮಕ್ಕಳ ಅನುಭವಗಳು ಮತ್ತು ಅವರು ಆನ್‌ಲೈನ್‌ನಲ್ಲಿ ಎದುರಿಸುತ್ತಿರುವ ಅಪಾಯಗಳ ಕುರಿತು ಪೋಷಕರು, ಶಿಕ್ಷಕರು ಮತ್ತು ಸಮಾಜದ ನಡುವೆ ಸೀಮಿತ ತಿಳುವಳಿಕೆ ಇದೆ. ಮಕ್ಕಳು ಸರಿಯಾಗಿರಲು ಹಾಗೂ ಜವಾಬ್ದಾರಿಯುತವಾಗಿರಲು ಮತ್ತು ಮಕ್ಕಳು ಏನನ್ನು ತಿಳಿದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಲು ಶಿಕ್ಷಕರು ಮತ್ತು ಪೋಷಕರಿಗೆ ಸಹಾಯ ಮಾಡುವ ಅವಶ್ಯಕತೆಯಿದೆ. ಅಸ್ತಿತ್ವದಲ್ಲಿರುವ ಜಾಗೃತಿ ನಿರ್ಮಾಣ ಕಾರ್ಯಕ್ರಮಗಳು ಸೀಮಿತ ವ್ಯಾಪ್ತಿಯನ್ನು ಹೊಂದಿವೆ ” ಎನ್ನುತ್ತಾರೆ ಮಾರ್ವಾಹಾ.