ಮಧ್ಯಪ್ರದೇಶದಲ್ಲಿ ಸಂಪ್ರಾದಾಯಿಕ ಎದುರಾಳಿಗಳಾಗಿದ್ದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈಗ ಹೊಸ ಸವಾಲುಗಳು ಉದ್ಭವಿಸಿವೆ. ಆಡಳಿತಾರೂಢ ಬಿಜೆಪಿ ಮಧ್ಯಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಮೊದಲ ಹಂತದ ಚುನಾವಣೆಯಲ್ಲಿ 133 ಸ್ಥಾನಗಳಲ್ಲಿ ಸುಮಾರು 100 ಅನ್ನು ಗೆದ್ದುಕೊಂಡಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮೂರು ಮೇಯರ್ ಸ್ಥಾನಗಳನ್ನು ಗೆದ್ದಿದ್ದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಎಐಎಂ) ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಮಧ್ಯಪ್ರದೇಶದ ರಾಜಕೀಯ ಲಗಾಯತ್ತಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಇತ್ತು. ಆದರೆ ಇತ್ತೀಚೆಗಷ್ಟೇ ಹುಟ್ಟುಕೊಂಡಿರುವ ಆಮ್ ಆದ್ಮಿ ಪಕ್ಷ ಬಿಜೆಪಿಯಿಂದ ಒಂದು ಮೇಯರ್ ಸ್ಥಾನವನ್ನು ಕಸಿದುಕೊಂಡಿದೆ. ಎಐಎಂಐಎಂ 4 ಕಾರ್ಪೊರೇಟರ್ ಸ್ಥಾನಗಳನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ. ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ತಾವು ಮತಗಳನ್ನು ವಿಭಜಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂಬುದನ್ನು ಸಾಬೀತುಪಡಿಸಿವೆ. ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ಬೆಳವಣಿಗೆಯಿಂದ ಕಾಂಗ್ರೆಸಿಗೆ ನಷ್ಟ ಆಗುವುದರ ಜೊತೆಗೆ ಮುಂದೊಂದು ದಿನ ಅದು ಬಿಜೆಪಿಗೂ ಮುಳುವಾಗಬಹುದು. ಎಐಎಂಐಎಂ ಸ್ಪರ್ಧೆಯಲ್ಲಿ ಇದ್ದರೆ ಬಿಜೆಪಿಗೆ ಜನಜನಿತ ಎಂಬುದು ರುಜುವಾತಾಗಿಬಿಟ್ಟಿದೆ.
ಸಿಂಗ್ರೌಲಿ ಮೇಯರ್ ಚುನಾವಣೆಯಲ್ಲಿ ಎಎಪಿಯ ರಾಣಿ ಅಗರ್ವಾಲ್, ಉಚಿತ ನೀರು, ಪರಿಣಾಮಕಾರಿ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸುವ ಬಗ್ಗೆ ಪ್ರಚಾರ ಮಾಡಿ ಬಿಜೆಪಿಯ ಚಂದ್ರಪ್ರತಾಪ್ ವಿಶ್ವಕರ್ಮ ಅವರನ್ನು 9,352 ಮತಗಳಿಂದ ಸೋಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಮತ್ತು ಸಿಂಗ್ರೌಲಿಯಲ್ಲಿ ರೋಡ್ಶೋ ನಡೆಸಿದ್ದ ಅರವಿಂದ ಕೇಜ್ರಿವಾಲ್, “ಮಧ್ಯಪ್ರದೇಶದ ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಮೇಯರ್ ಹುದ್ದೆಯನ್ನು ಗೆದ್ದ ಎಎಪಿ ಅಭ್ಯರ್ಥಿ ರಾಣಿ ಅಗರ್ವಾಲ್ ಅವರಿಗೆ ಅಭಿನಂದನೆಗಳು. ದೇಶದ ಮೂಲೆ ಮೂಲೆಯ ಜನರು ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ರಾಜಕೀಯವನ್ನು ಇಷ್ಟಪಡುತ್ತಿದ್ದಾರೆ” ಎಂದಿದ್ದಾರೆ.

ಇನ್ನು ಎಐಎಂಐಎಂ ನಾಲ್ಕು ಕಾರ್ಪೊರೇಟರ್ ಸ್ಥಾನಗಳನ್ನು ಗೆದ್ದಿದ್ದು ಈ ಪೈಕಿ ಜಬಲ್ಪುರ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಎರಡು ಮತ್ತು ಖಾಂಡ್ವಾ ಮತ್ತು ಬುರ್ಹಾನ್ಪುರ ಕಾರ್ಪೊರೇಷನ್ಗಳಲ್ಲಿ ತಲಾ ಒಂದೊಂದು ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಖಾಂಡ್ವಾದ ವಾರ್ಡ್ ಸಂಖ್ಯೆ 14 ರಲ್ಲಿ ಎಐಎಂಐಎಂ ಅಭ್ಯರ್ಥಿ ಶಕೀರಾ ಬಿಲಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ನೂರ್ಜಹಾನ್ ಬೇಗಂ ಅವರನ್ನು 285 ಮತಗಳ ಅಂತರದಿಂದ ಸೋಲಿಸಿ ಕಡೆ ಗಳಿಗೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮುಸ್ಲಿಂ ಪ್ರಾಬಲ್ಯದ ಬುರ್ಹಾನ್ಪುರದಲ್ಲಿ ಮೇಯರ್ ಸ್ಪರ್ಧೆಯಲ್ಲಿ ಎಐಎಂಐಎಂ ಕಾಂಗ್ರೆಸ್ಗೆ ತೀವ್ರ ಹೊಡೆತ ನೀಡಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಮಾಧುರಿ ಪಟೇಲ್ ಕಾಂಗ್ರೆಸ್ನ ಶಾನಾಜ್ ಇಸ್ಮಾಯಿಲ್ ಅವರನ್ನು ಕೇವಲ 388 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಎಐಎಂಐಎಂ ಮೇಯರ್ ಅಭ್ಯರ್ಥಿ 10,000 ಮತಗಳನ್ನು ಗಳಿಸಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಜಬಲ್ಪುರ, ಖಾಂಡ್ವಾ ಮತ್ತು ಬುರ್ಹಾನ್ಪುರ ಸೇರಿದಂತೆ ಈ ಚುನಾವಣೆಯಲ್ಲಿ ಓವೈಸಿ ವ್ಯಾಪಕ ಪ್ರಚಾರ ಮಾಡಿದ್ದರು.
ಮಧ್ಯಪ್ರದೇಶದ ರಾಜಕೀಯದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ಉಪಸ್ಥಿತಿಯ ಹೊರತಾಗಿಯೂ, ವಿವಿಧ ಹಂತದ ಚುನಾವಣೆಗಳು ಯಾವಾಗಲೂ ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆಯಾಗಿರುತ್ತಿತ್ತು. ಆದರೀಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿ ಮತ್ತು ಎಐಎಂಐಎಂ ಯಶಸ್ವಿ ಸಾಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ನಿದ್ದೆ ಕೆಡಿಸಿವೆ. ವಿಧಾನಸಭಾ ಚುನಾವಣೆಗೆ ಕೇವಲ 16 ತಿಂಗಳ ಮೊದಲು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು, ಆಮ್ ಆದ್ಮಿ ಪಕ್ಷ ಹಾಗೂ ಎಐಎಂಐಎಂ ಖಾತೆ ತೆರೆದಿರುವುದು ಕಾಂಗ್ರೆಸ್ಗೆ ಚಿಂತೆಗೆ ಕಾರಣವಾಗಿದೆ.
ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಅವರು, ಬಿಜೆಪಿಯಿಂದ 3 ಮೇಯರ್ ಹುದ್ದೆಗಳನ್ನು ಕಾಂಗ್ರೆಸ್ ಕಸಿದುಕೊಂಡಿದೆ. ಎಐಎಂಐಎಂ ಎಂಬುದು ಬಿಜೆಪಿಯ ‘ಬಿ ಟೀಮ್’ ಎಂದು ಬಣ್ಣಿಸಿದ್ದಾರೆ. ‘ಬಿಜೆಪಿ ಮತ್ತು ಅದರ ಬಿ ಟೀಂ ಎಐಎಂಐಎಂಗಳ ಭಾರೀ ಪ್ರಯತ್ನದ ನಂತರವೂ ಬುರ್ಹಾನ್ಪುರದಲ್ಲಿ ಕಾಂಗ್ರೆಸ್ ಕಠಿಣ ಹೋರಾಟವನ್ನು ನೀಡಿದೆ. 300 ಮತಗಳ ಕಡಿಮೆ ಅಂತರದಲ್ಲಿ ಸೋತಿದೆ. ಜಬಲ್ಪುರ ಸೇರಿದಂತೆ ಹಲವು ನಿಗಮಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಬುರ್ಹಾನ್ಪುರದಲ್ಲಿ ಮಾತ್ರ ಎಐಎಂಐಎಂ ಅಭ್ಯರ್ಥಿ 10,000 ಮತಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

57 ವರ್ಷಗಳ ನಂತರ ಗ್ವಾಲಿಯರ್ ಮೇಯರ್ ಸ್ಥಾನವನ್ನು ಮತ್ತು ಎರಡು ದಶಕಗಳ ನಂತರ ಜಬಲ್ಪುರ ಮತ್ತು ಚಿಂದಾವರ ಮೇಯರ್ ಸ್ಥಾನಗಳನ್ನು ಪಕ್ಷವು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಪಾಳಯ ಹೇಳಿದೆ. ಆದಾಗ್ಯೂ, ಪಕ್ಷವು ಗ್ವಾಲಿಯರ್ ಮತ್ತು ಜಬಲ್ಪುರ ಕಾರ್ಪೊರೇಶನ್ಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅಲ್ಲಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟಾಗಿದೆ. ಪಕ್ಷವು ತನ್ನ ನಾಲ್ಕು ಮೇಯರ್ ಸ್ಥಾನಗಳನ್ನು ಕಳೆದುಕೊಂಡಿದೆ. ಆದರೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶೇಕಡಾ 80ರಷ್ಟು ಸ್ಥಳೀಯ ಸಂಸ್ಥೆಗಳ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಎಐಎಂಐಎಂನ ಸಂಸದ ಪ್ರಭಾರಿ ಸಯ್ಯದ್ ಮಿನಾಜ್, ಈ ಫಲಿತಾಂಶಗಳು ಪಕ್ಷದ ನಿರೀಕ್ಷೆಗೆ ತಕ್ಕಂತೆ ಇಲ್ಲ ಮತ್ತು ಜುಲೈ 20ರಂದು ಪ್ರಕಟವಾಗುವ ಎರಡನೇ ಹಂತದ ಫಲಿತಾಂಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಎಎಪಿ ಕೂಡ ಎರಡನೇ ಹಂತದಲ್ಲಿ “ಉತ್ತಮ ಫಲಿತಾಂಶ” ಬರಬಹುದು ಎಂಬ ಆಶಾಭಾವವನ್ನು ಹೊಂದಿದೆ. 20 ಕಾರ್ಪೊರೇಟರ್ ಸ್ಥಾನಗಳನ್ನು ಪಡೆಯಬಹುದು ಎಂದು ಅದು ಹೇಳಿಕೊಂಡಿದೆ. ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಮತಗಳಿಕೆ ಗಣನೀಯವಾಗಿ ಹೆಚ್ಚಿದೆ ಎಂದು ಆಪ್ ನಾಯಕ ಅಕ್ಷಯ್ ಹುಂಕಾ ಹೇಳಿದ್ದಾರೆ. ಪಕ್ಷವು ರಾಜ್ಯದಲ್ಲಿ ಕಾರ್ಪೊರೇಟರ್ ಸ್ಥಾನಗಳಿಗೆ 2 ಸಾವಿರ ಅಭ್ಯರ್ಥಿಗಳನ್ನು ಮತ್ತು ಮೇಯರ್ ಸ್ಥಾನಗಳಿಗೆ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.






