ಮನುಕುಲದ ಆಧುನಿಕ ಇತಿಹಾಸದಲ್ಲಿ ದೊಡ್ಡ ಸಾಧನೆಗಳಲ್ಲಿ ಒಂದಾದ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಅಮೆರಿಕದ ನಾಸಾ ಕಾರ್ಯಕ್ರಮದ ಬೆನ್ನೆಲುಬಾಗಿ ಕೆಲಸ ಮಾಡಿದ್ದವರಲ್ಲಿ ಒಬ್ಬರಾದ ಕ್ಯಾಥರೀನ್ ಜಾನ್ಸನ್ ತಮ್ಮ 101ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ನಾಸಾದ ದೊಡ್ಡ ಮಿಶನ್ಗಳ ಹಿಂದೆ ಕೆಲಸ ಮಾಡುತ್ತಿದ್ದ ಶಕ್ತಿಗಳಲ್ಲಿ ಒಂದಾದ ಜಾನ್ಸನ್ ಬಗ್ಗೆ, Hidden Figures ಚಿತ್ರದಲ್ಲಿ ಇವರ ವ್ಯಕ್ತಿತ್ವ ಹಾಗೂ ಕೊಡುಗೆಯನ್ನು ಅಮರವಾಗಿಸಲಾಗಿದೆ.
“ಇಂದು ನಮ್ಮ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮೊದಲಿಗರು ಹಾಗೂ ನಿಜವಾದ HiddenFigure ಕ್ಯಾಥರೀನ್ ಜಿ ಜಾನ್ಸನ್ರನ್ನು ಕಳೆದುಕೊಂಡಿದೆ. ಭಾರೀ ಅಸಮಾನತೆ ಹಾಗೂ ಅಸ್ಪೃಶ್ಯತೆಯ ಕಾಲಘಟ್ಟದಲ್ಲೂ ಸಹ ಅವರು ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಬೆಲೆ ಕಟ್ಟಲಾದ ಕೊಡುಗೆ ನೀಡುವ ಮೂಲಕ ತಮ್ಮ ಅಗಾಧ ಮನೋಬೌದ್ಧಿಕ ಶಕ್ತಿಯಿಂದ ಮನುಕುಲದ ಜ್ಞಾನ ಲೋಕದಲ್ಲಿ ಮುಂಚೂಣಿಯಲ್ಲಿದ್ದಾರೆ,” ಎಂದು ಅಮೆರಿಕದ ರಾಜಕೀಯ ನಾಯಕ ಮೈಕ್ ಪೆನ್ಸ್ ತಿಳಿಸಿದ್ದಾರೆ.
ಕ್ಯಾಥರೀನ್ರ ಈ ಕೊಡುಗೆಗಳಿಗಾಗಿ ಅವರಿಗೆ 2015 ಹಾಗೂ 2016ರಲ್ಲಿ ಅವರಿಗೆ Presidential Medal of Freedom ನೀಡಿ ಗೌರವಿಸಲಾಗಿದೆ. ಈ ಗೌರವನನ್ನು ಅವರಿಗೆ ಪ್ರದಾನ ಸಂದರ್ಭ ಇವರ ಕುರಿತಾಗಿ ಮಾತನಾಡಿದ್ದ ನಾಸಾದ ಅಂದಿನ ಮುಖ್ಯಸ್ಥರಾದ ಚಾರ್ಲ್ಸ್ ಬೋಲ್ಡನ್, “ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಅತ್ಯಂತ ಶ್ರೇಷ್ಠ ಮನಸ್ಸುಗಳಲ್ಲಿ ಅವರೂ ಒಬ್ಬರು,” ಎಂದಿದ್ದರು.
ಜಾನ್ಸನ್ ಗೌರವಾರ್ಥ 2016ರಲ್ಲಿ, ವರ್ಜೀನಿಯಾದ ಹ್ಯಾಂಪ್ಟನ್ನಲ್ಲಿರುವ ನಾಸಾದ ಸಂಶೋಧನಾ ಸೌಲಭ್ಯವೊಂದಕ್ಕೆ ಅವರ ಹೆಸರಿಡಲಾಗಿದೆ. 2018ರಲ್ಲಿ ಪಶ್ಚಿಮ ವರ್ಜೀನಿಯಾ ರಾಜ್ಯವು ಇವರ 100ನೇ ಜನ್ಮದಿನಾಚರಣೆ ಪ್ರಯುಕ್ತ ಅವರದ್ದೇ ಆದ ಪುತ್ಥಳಿಯನ್ನು ಸಹ ಸ್ಥಾಪಿಸಿದೆ.
ನಾಸಾದ ಎಲ್ಲ ದೊಡ್ಡ ಮಿಶನ್ಗಳ ಹಿಂದೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಮೇಧಾವಿಗಳಲ್ಲಿ ಒಬ್ಬರಾದ ಜಾನ್ಸನ್ ಹಾಗೂ ಅವರ ಸಹೋದ್ಯೋಗಿಗಳನ್ನು, ಅವರ ಕಾರ್ಯಕ್ಷಮತೆಯ ಕಾರಣದಿಂದ ’ಕಂಪ್ಯೂಟರ್ಗಳು’ ಎಂದು ಕರೆಯಲಾಗುತ್ತಿತ್ತು. ಜಾನ್ಸನ್ ಸೇರಿದಂತೆ ಈ ವಿಭಾಗದಲ್ಲಿ ಅನೇಕ ಕೃಷ್ಣ ವರ್ಣೀಯರು ಜಗತ್ತಿನ ಅತಿ ದೊಡ್ಡ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ದೊಡ್ಡ ಮಿಶನ್ಗಳ ಹಿಂದಿನ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ.
ಆದರೆ ಇವರುಗಳ ಬಗ್ಗೆ ಹೊರ ಜಗತ್ತಿಗೆ ಅಷ್ಟಾಗಿ ಗೊತ್ತಿರಲಿಲ್ಲ. 2016ರ ಆಸ್ಕರ್ ನಾಮಿನೇಟೆಡ್ ಚಿತ್ರವಾದ Hidden Figures ಬಿಡುಗಡೆಯಾದ ಬಳಿಕ ಈ ವಿಷಯ ಗೊತ್ತಾಗಿದೆ.
ಬಾಹ್ಯಾಕಾಶ ಏಜೆನ್ಸಿಯಲ್ಲಿ 33 ವರ್ಷಗಳ ಕಾಲ ಕೆಲಸ ಮಾಡಿದ ಜಾನ್ಸನ್, 1969ರಲ್ಲಿ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಅಮೆರಿಕದ ’ಅಪೋಲೋ’ ಮಿಶನ್ ಜೊತೆಗೆ ಮಂಗಳನ ಅಂಗಳದ ಅಧ್ಯಯನದಲ್ಲೂ ಗಣನೀಯ ಕೊಡುಗೆ ನೀಡಿದ್ದಾರೆ. 1962ರಲ್ಲಿ ಗಗನಯಾತ್ರಿ ಜಾನ್ ಗ್ಲೆನ್, ಭೂ ಪ್ರದಕ್ಷಿಣೆ ಮಾಡುವ ಐತಿಹಾಸಿಕ ಪ್ರೋಗ್ರಾಮ್ಗೂ ಮುನ್ನ, “ಸಂಖ್ಯೆಗಳ ಪರಿಶೀಲನೆಗೆ ಆ ಹುಡುಗಿಯನ್ನು ಕರೆಯಿಸಿ,” ಎನ್ನುವ ಮಟ್ಟದಲ್ಲಿ ಕ್ಯಾಥರೀನ್ ಅವರ ಗಣಿತದ ಕ್ಷಮತೆಯ ಮೇಲೆ ನಾಸಾ ಅವಲಂಬಿತವಾಗಿತ್ತು.
1950ರ ದಶಕದ ಅಂತ್ಯದ ದಿನಗಳಿಂದ ಅಮೆರಿಕ ಮತ್ತು ರಷ್ಯಾದ ನಡುವೆ ಇದ್ದ ಬಾಹ್ಯಾಕಾಶದ ರೇಸ್ನ ದಿನಗಳಲ್ಲಿ ಮಾನವರಹಿತ ರಾಕೆಟ್ ಉಡಾವಣೆಗಳಿಗೆ ಅಗತ್ಯವಾಗಿದ್ದ ಗಣಿತಶಾಸ್ತ್ರದ ಲೆಕ್ಕಾಚಾರಗಳನ್ನು ಕ್ಯಾಥರೀನ್ ಹಾಗೂ ಅವರ ತಂಡ ಮಾಡುತ್ತಿತ್ತು. ರಾಕೆಟ್ ಉಡಾವಣೆಗೂ ಮುನ್ನ ಪ್ರಯೋಗಾರ್ಥ ಉಡಾವಣೆಗಳು ಹಾಗೂ ಸುರಕ್ಷತಾ ಅಧ್ಯಯನಗಳ ಬಗೆಗಿನ ಎಲ್ಲಾ ಸಾಧ್ಯತೆಗಳನ್ನು ತಿಳಿಯಲು ಪೆನ್ಸಿಲ್ಗಳೂ, ಸ್ಲೈಡ್ ರೂಲ್ಗಳು ಹಾಗೂ ಮೆಕ್ಯಾನಿಕಲ್ ಕ್ಯಾಲ್ಕುಲೇಟಿಂಗ್ ಯಂತ್ರಗಳನ್ನು ಬಳಸಲಾಗುತ್ತಿತ್ತು.
ಇಷ್ಟೆಲ್ಲಾ ಇದ್ದರೂ ಸಹ ಆಗಿನ ದಿನಗಳಲ್ಲಿ ದೊಡ್ಡದೊಂದು ಸಾಮಾಜಿಕ ಕ್ಯಾನ್ಸರ್ ಆಗಿದ್ದ ಅಸ್ಪೃಶ್ಯತೆಯ ಕಾರಣ ಕ್ಯಾಥರೀನ್ ಹಾಗೂ ಅವರ ಸಂಗಡಿಗರನ್ನು ಶ್ವೇತ ವರ್ಣೀಯರು ತುಚ್ಛವಾಗಿ ಕಾಣುತ್ತಿದ್ದರು. ಅವರಿಗಾಗಿ ಪ್ರತ್ಯೇಕವಾದ ಊಟದ ಮನೆ ಹಾಗೂ ಶೌಚಾಲಯದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಜಾನ್ಸನ್ ತಮ್ಮ ಸಾಧನೆಯ ಪಥದಲ್ಲಿ ಬಂಡೆಗಲ್ಲಿನಿಂತೆ ಮುಂದುವರೆದರು.
ಪುಟ್ಟ ಹುಡುಗಿ ಆಗಿದ್ದ ದಿನಗಳಿಂದಲೂ ಸಂಖ್ಯಾಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಜಾನ್ಸನ್, ಮೆಟ್ಟಿಲುಗಳನ್ನು ಏರಿ ಇಳಿಯುವಾದಲೂ ಸಹ ಎಣಿಕೆ ಮಾಡುತ್ತಿದ್ದದ್ದರಿಂದ ಹಿಡಿದು ತಮ್ಮ ಮನೆಯಲ್ಲಿ ತಾವು ಇಡುತ್ತಿದ್ದ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕ ಹಾಕುತ್ತಿದ್ದರು.
ಅಸ್ಪೃಶ್ಯತೆಯ ಕಾರಣದಿಂದ ಕಪ್ಪು ಜನಾಂಗದವರಿಗೆ ಶಿಕ್ಷಣದಲ್ಲಿ ಸಾಕಷ್ಟು ಅವಕಾಶಗಳು ಸಿಗದೇ ಇದ್ದ ಕಾಲಘಟ್ಟದಲ್ಲಿ ಬೆಳೆದು ಬಂದ ಕ್ಯಾಥಾರೀನ್ ಪೋಷಕರು ಆಕೆಯ ಶಿಕ್ಷಣಕ್ಕೆಂದು ಕಪ್ಪು ವರ್ಣೀಯರಿಗೆಂದು ತೆರೆಯಲಾಗಿದ್ದ ಹೈಸ್ಕೂಲ್ನಲ್ಲಿ ತಮ್ಮ ಮಗಳನ್ನು ಸೇರಿಸಲು ತಾವಿದ್ದ ಜಾಗದಿಂದ 120 ಮೈಲಿ ದೂರದ ಊರಿಗೆ ಸ್ಥಳಾಂತರಗೊಂಡಿತ್ತು.
ತಮ್ಮ ಗಣಿತ ಕೌಶಲ್ಯಗಳಿಂದ 15ನೇ ವಯಸ್ಸಿನಲ್ಲಿ ಪಶ್ಚಿಮ ವರ್ಜೀನಿಯಾ ಸ್ಟೇಟ್ ಕಾಲೇಜಿಗೆ ಸೇರಿಕೊಂಡ ಜಾನ್ಸನ್, ಶಾಲೆಯ ಗಣಿತ ಕಾರ್ಯಕ್ರಮಗಳಲ್ಲಿ ಮುಂಚೂಣಿ ಪಾತ್ರ ವಹಿಸಿ ಮ್ಯಾತ್ನಲ್ಲಿ ಡಿಗ್ರೀಗಳನ್ನು ಸಂಪಾದನೆ ಮಾಡಿ, ಇದೇ ಪಶ್ಚಿಮ ವರ್ಜೀನಿಯಾ ವಿವಿಯಲ್ಲಿ ಪದವಿ ಪೂರೈಸಿದ ಮೊದಲ ಕಪ್ಪು ವರ್ಣೀಯರಲ್ಲಿ ಒಬ್ಬರಾಗಿದ್ದಾರೆ.
ಶಾಲೆಯಲ್ಲಿ ಏಳು ವರ್ಷಗಳ ಕಾಲ ಪಾಠ ಮಾಡಿದ ಅವರು, 1953ರಲ್ಲಿ ನಾಸಾಗೂ ಮುಂಚೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿದ್ದ National Advisory Committee for Aeronauticsನಲ್ಲಿ ತಮ್ಮಂತೆಯೇ ಇನ್ನೂ ಹತ್ತಾರು ಮಹಿಳೆಯೆರೊಂದಿಗೆ ಕೆಲಸ ಮಾಡಲು ಶುರು ಮಾಡಿದರು.
ಬಹುತೇಕ ಶ್ವೇತ ವಣಿರ್ಯ ಪುರುಷರಿಂದಲೇ ನಡೆಸಲ್ಪಟ್ಟ ಮಿಶನ್ ಒಂದರ ಭಾಗವಾಗಿ ಆಯ್ಕೆಯಾದ ಜಾನ್ಸನ್, 1961ರಲ್ಲಿ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಮೊದಲ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಆಯ್ಕೆಯಾಗಿದ್ದರು. ಈ ಸಂದರ್ಭ ರಾಕೆಟ್ನ ಪಥಗಳು, ಕಕ್ಷೆಗಳು ಹಾಗೂ ಉಡಾವಣಾ ಸಾಧ್ಯೆಗಳ ಬಗ್ಗೆ ಕ್ಯಾಲ್ಕುಲೇಟಿಂಗ್ ಮಾಡುತ್ತಿದ್ದರು ಜಾನ್ಸನ್.
ಕಂಪ್ಯೂಟರ್ ಯುಗದಲ್ಲೂ ಸಹ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾನ್ಸನ್ ಕೊಡುಗೆಗಳು ಅಬಾಧಿತವಾಗಿ ಮುಂದುವರೆದಿತ್ತು. 1986ರಲ್ಲಿ ಅವರು ನಾಸಾ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ 26 ಸಂಶೋಧನಾ ವರದಿಗಳನ್ನು ಬರೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಚಂದ್ರನ ಅಂಗಳಕ್ಕೆ ಕಳುಹಿಸಲಾದ ಮಿಶನ್ಗೆ ಕೊಡುಗೆ ಕೊಟ್ಟಿದ್ದು ತಾವು ಅತ್ಯಂತ ಹೆಮ್ಮೆಪಟ್ಟ ವಿಷಯವಾಗಿದೆ ಎನ್ನುತ್ತಾರೆ ಜಾನ್ಸನ್. ಚಂದ್ರನ ಅಂಗಳಕ್ಕಿ ಕಳುಹಿಸಲಾದ ಲ್ಯಾಂಡರ್ ಹಾಗೂ ಕಮಾಂಡ್ ಮಾಡ್ಯೂಲ್ಗಳ ನಡುವೆ ಸಿಂಕಿಂಗ್ ಮಾಡಲು ಬೇಕಾದ ಕ್ಲಿಷ್ಟಕರ ಲೆಕ್ಕಾಚಾರಗಳನ್ನು ಜಾನ್ಸನ್ ಮಾಡುತ್ತಿದ್ದರು.