ಬಸ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 11 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.
ನಾಸಿಕ್ ಬಳಿಯ ಔರಂಗಬಾದ್ ನಲ್ಲಿ ಡೀಸೆಲ್ ಹೊತ್ತೊಯ್ಯುತ್ತಿದ್ದ ಟ್ರೇಲರ್ ಟ್ರಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ ಗೆ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಶನಿವಾರ ಮುಂಜಾನೆ 5.15ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಬೆಂಕಿ ಎಷ್ಟು ವೇಗವಾಗಿ ಹರಡಿತು ಅಂದರೆ ಪ್ರಯಾಣಿಕರನ್ನು ರಕ್ಷಿಸಲು ಕೂಡ ಸಮಯ ಸಿಗಲಿಲ್ಲ. ಕೂಡಲೇ ಪೊಲೀಸರು ಹಾಗೂ ಅಂಬುಲೆನ್ಸ್ ಗೆ ಮಾಹಿತಿ ನೀಡಿದೆವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಪಿಎಂ ಕೇರ್ ಫಂಡ್ ನಿಂದ ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.






