ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡ್ ಪ್ರದರ್ಶನದ ಸಹಾಯದಿಂದ ಭಾರತ ತಂಡ 5 ವಿಕೆಟ್ ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿದೆ.
ದುಬೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡ 19.5 ಓವರ್ ಗಳಲ್ಲಿ 147 ರನ್ ಗೆ ಪತನಗೊಂಡಿತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆಂಬತ್ತಿದ ಭಾರತ ತಂಡ 2 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭಿಕ ಕೆಎಲ್ ರಾಹುಲ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ರೋಹಿತ್ ಶರ್ಮ ರನ್ ಗಳಿಸಲು ಪರದಾಡಿ 18 ಎಸೆತಗಳಲ್ಲಿ 1 ಸಿಕ್ಸರ್ ಸೇರಿದ 12 ರನ್ ಗಳಿಸಿ ಔಟಾದರು.
100ನೇ ಟಿ-20 ಪಂದ್ಯವಾಡಿದ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 35 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು. 4ನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ (35), ಸೂರ್ಯಕುಮಾರ್ (18) ಮತ್ತು ಹಾರ್ದಿಕ್ ಪಾಂಡ್ಯ (33 ರನ್, 17 ಎಸೆತ, 4 ಬೌಂಡರಿ, 1 ಸಿಕ್ಸರ್) ತಂಡವನ್ನು ಮುನ್ನಡೆಸಿದರು.

ಪಾಕಿಸ್ತಾನ ಕಾಡಿದ ಭುವಿ, ಹಾರ್ದಿಕ್
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭದಲ್ಲೇ ನಾಯಕ ಹಾಗೂ ವಿಶ್ವದ ನಂ.1 ಆಟಗಾರ ಬಾಬರ್ ಅಜಮ್ (10) ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಂತರ ಬಂದ ಫಕರ್ ಅಜಮ್ (10) ಕೂಡ ನಿರ್ಗಮಿಸಿದ್ದರಿಂದ ಪಾಕ್ ತತ್ತರಿಸಿತು.
ಆದರೆ ಮೊಹಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹಮದ್ 3ನೇ ವಿಕೆಟ್ ಗೆ 45 ರನ್ ಪೇರಿಸಿ ತಂಡವನ್ನು ಆಧರಿಸಿದರು. ರಿಜ್ವಾನ್ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿ ಔಟಾದರೆ, ಇಫ್ತಿಕಾರ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿದರು.
ಇವರಿಬ್ಬರು ನಿರ್ಗಮಿಸಿದ ನಂತರ ಪಾಕಿಸ್ತಾನ ತಂಡ ಮತ್ತೊಮ್ಮೆ ಕುಸಿತ ಅನುಭವಿಸಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು. ಕೊನೆಯಲ್ಲಿ ಶಹಬಾಜ್ ದಹಾನಿ 6 ಎಸೆತಗಳಲ್ಲಿ 2 ಸಿಕ್ಸರ್ ಸೇರಿದ 16 ರನ್ ಸಿಡಿಸಿ ಗಮನ ಸೆಳೆದರು.
ಭಾರತದ ಪರ ಭುವನೇಶ್ವರ್ ಕುಮಾರ್ 26 ರನ್ ನೀಡಿ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 25 ರನ್ ನೀಡಿ 3 ವಿಕೆಟ್ ಗಳಿಸಿದರು.