ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ 147 ರನ್ ಗೆ ಆಲೌಟಾಗಿದೆ.
ದುಬೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡ 19.5 ಓವರ್ ಗಳಲ್ಲಿ 147 ರನ್ ಗೆ ಪತನಗೊಂಡಿತು.
ಪಾಕಿಸ್ತಾನ ತಂಡ ಆರಂಭದಲ್ಲೇ ನಾಯಕ ಹಾಗೂ ವಿಶ್ವದ ನಂ.1 ಆಟಗಾರ ಬಾಬರ್ ಅಜಮ್ (10) ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಂತರ ಬಂದ ಫಕರ್ ಅಜಮ್ (10) ಕೂಡ ನಿರ್ಗಮಿಸಿದ್ದರಿಂದ ಪಾಕ್ ತತ್ತರಿಸಿತು.
ಆದರೆ ಮೊಹಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹಮದ್ 3ನೇ ವಿಕೆಟ್ ಗೆ 45 ರನ್ ಪೇರಿಸಿ ತಂಡವನ್ನು ಆಧರಿಸಿದರು. ರಿಜ್ವಾನ್ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿ ಔಟಾದರೆ, ಇಫ್ತಿಕಾರ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿದರು.
ಇವರಿಬ್ಬರು ನಿರ್ಗಮಿಸಿದ ನಂತರ ಪಾಕಿಸ್ತಾನ ತಂಡ ಮತ್ತೊಮ್ಮೆ ಕುಸಿತ ಅನುಭವಿಸಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.
ಭಾರತದ ಪರ ಭುವನೇಶ್ವರ್ ಕುಮಾರ್ 26 ರನ್ ನೀಡಿ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 25 ರನ್ ನೀಡಿ 3 ವಿಕೆಟ್ ಗಳಿಸಿದರು.