ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಧರ್ಮವನ್ನು ಬದಲಾಯಿಸುವಂತೆ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದಾನೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ರಾಜ್ಯದ ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮೊದಲ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಿಂದೂ ಮಹಿಳೆಯ ತಂದೆ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಕುಟುಂಬವನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಅವರು ಆರೋಪಿಸಿದ್ದಾರೆ.
“ಯುವಕ ಯುವತಿಯನ್ನ ಅಪಹರಿಸಿದ್ದಾನೆ. ಆದ್ದರಿಂದ ಅವನ ವಿರುದ್ಧ ಈಗಾಗಲೇ ಮತ್ತೊಂದು ಪ್ರಕರಣ ದಾಖಲಾಗಿದೆ. ಮತಾಂತರಗೊಳ್ಳುವಂತೆ ಅವನು ಬಾಲಕಿಯ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಹೊಸ ಸುಗ್ರೀವಾಜ್ಞೆಯ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಬರೇಲಿ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂಸರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಲವ್ ಜಿಹಾದ್” ಸಂಬಂಧಿತ ಅಪರಾಧಗಳಿಗೆ ಗರಿಷ್ಠ 10 ವರ್ಷ ಶಿಕ್ಷೆ ವಿಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಯಾಬಿನೆಟ್ ಮಂಗಳವಾರ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ಹೊಸ ಕಾನೂನು ಮದುವೆಗಾಗಿ ಬಲವಂತದ ಮತಾಂತರವನ್ನು ನಡೆಸಿದ ಆರೋಪದಲ್ಲಿ ಒಂದರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು, 15,000 ದಂಡವನ್ನು ವಿಧಿಸುತ್ತದೆ.
ಹೊಸ ಕಾನೂನಿನ ಪ್ರಕಾರ, ಮಹಿಳೆಯ ಮತಾಂತರವು ಕೇವಲ ಮದುವೆ ಉದ್ದೇಶಕ್ಕಾಗಿ ಇದ್ದರೆ ಮದುವೆಯನ್ನು “ಅನೂರ್ಜಿತ” ಎಂದು ಘೋಷಿಸಲಾಗುತ್ತದೆ. ಮದುವೆಯ ನಂತರ ತಮ್ಮ ಧರ್ಮವನ್ನು ಬದಲಾಯಿಸಲು ಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.






