ವಿಧಾನಸಭೆ ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಪುನಶ್ಚೇತನ ನೀಡುವ ಕೆಲಸಕ್ಕೆ ಎಐಸಿಸಿ ಮುಂದಾಗಿದೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ಸ್ಥಾನಗಳಿಗೆ ಉತ್ತರಾಧಿಕಾರಿ ಆಯ್ಕೆಗಿಂತ ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಬಲಿಷ್ಠವಾಗಲು ಯಾರನ್ನು ಮುಂದುವರಿಸಬೇಕು ಎಂಬುದೇ ಇಲ್ಲಿ ಪ್ರಧಾನವಾಗಿದೆ.
ಈ ನಿಟ್ಟಿನಲ್ಲಿ ಎಐಸಿಸಿ ತನ್ನ ಪ್ರತಿನಿಧಿಗಳಾಗಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ಅವರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ವಿಶೇಷವೆಂದರೆ, ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಬಗ್ಗೆ ಕೆಲವು ಹಿರಿಯ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಇರುವುದರಿಂದ ಅವರನ್ನು ದೂರವಿಟ್ಟು ಈ ಬಾರಿ ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿದೆ. ಇಲ್ಲಿ ಉತ್ತರಾಧಿಕಾರಿಗಳ ನೇಮಕದ ಜತೆಗೆ ಸೋಲಿನ ಪರಾಪರಾಮರ್ಶೆಯೂ ನಡೆಯಲಿದೆ.
ರಾಜ್ಯದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗಲೇ ಸೋಲಿನ ಪರಾಮರ್ಶೆ ಮಾಡಬೇಕಿತ್ತು. ಆದರೆ, ಜೆಡಿಎಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಿದ ಖುಷಿಯಲ್ಲಿ ಈ ಕೆಲಸ ಆಗಿರಲಿಲ್ಲ. ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಾಗಲೂ ಸೋಲಿನ ಪರಾಮರ್ಶೆ ನಡೆಸಬೇಕು ಎಂದು ಹೇಳಲಾಯಿತಾದರೂ ಮೈತ್ರಿ ಸರ್ಕಾರಕ್ಕೆ ಅಪಾಯ ಎದುರಾಗಿದ್ದರಿಂದ ಆಗಲೂ ಕೆಲಸ ಸಾಗಲಿಲ್ಲ. ಇದೀಗ ಉಪ ಚುನಾವಣೆಯಲ್ಲೂ ಹೀನಾಯ ಸೋಲು ಅನುಭವಿಸಿ ಅದರ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ನಂತರ ಸೋಲಿನ ಪರಾಮರ್ಶೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.
ಬದಲಾಗಬೇಕಾಗಿರುವುದು ನಾಯಕರಲ್ಲ, ಅವರ ಧೋರಣೆ
ಸೋಲಿನ ಪರಾಮರ್ಶೆ ಮತ್ತು ನಾಯಕತ್ವ ಬದಲಾವಣೆ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲು ಬೆಂಗಳೂರಿಗೆ ಬಂದಿರುವ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ಅವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಿ ಎಐಸಿಸಿಗೆ ವರದಿ ಸಲ್ಲಿಸಬಹುದು. ನಾಯಕತ್ವ ಬದಲಾವಣೆಗೆ ಹೆಚ್ಚು ಮಂದಿ ಒತ್ತು ನೀಡಿದರೆ ಆ ಕುರಿತು ಮಾಹಿತಿ ನೀಡಬಹುದು. ಆದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾಗಬೇಕಿರುವುದು ನಾಯಕತ್ವವಲ್ಲ, ನಾಯಕರ ಧೋರಣೆ ಎಂಬುದನ್ನು ಎಐಸಿಸಿ ಮೊದಲು ಅರ್ಥಮಾಡಿಕೊಳ್ಳಬೇಕು.
ಏಕೆಂದರೆ, 2018ರ ವಿಧಾನಸಭೆ ಚುನಾವಣೆ ಹಾಗೂ 2019ರಲ್ಲಿ ನಡೆದ ಲೋಕಸಭೆ ಚುನಾವಣೆ, ವಿಧಾನಸಭೆ ಉಪ ಚುನಾವಣೆಗಳಲ್ಲಿ ಪಕ್ಷ ಸೋಲಲು ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013-2018) ಸರ್ಕಾರದ ಆಡಳಿತ ಕಾಂಗ್ರೆಸ್ ಸೋಲುವ ಮಟ್ಟಕ್ಕೆ ಹಾಳಾಗಿರಲಿಲ್ಲ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ, ಮೇಲ್ವರ್ಗದ ಸಮುದಾಯಗಳ ನಿರ್ಲಕ್ಷ್ಯ ಪಕ್ಷವನ್ನು ಸೋಲಿನ ದಡ ಸೇರಿಸಿತ್ತು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿಸಿದ್ದೇ ಸೋಲಿಗೆ ಕಾರಣವಾಯಿತು. ಅಧಿಕಾರಕ್ಕಾಗಿ ಪಕ್ಷದ ನಾಯಕರು, ಮುಖಂಡರು ಒಟ್ಟಾದರಾದರೂ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಶತ್ರುವಿನ, ಶತ್ರು ಮಿತ್ರ ಎಂಬಂತೆ ಕೆಲಸ ಮಾಡಿದರು. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆಯೂ ಕಾಂಗ್ರೆಸ್ಸನ್ನು ಸೋಲಿಸಿತು.
ಇನ್ನು ಉಪ ಚುನಾವಣೆಯ ಸೋಲು ಕಾಂಗ್ರೆಸ್ ನ ಸ್ವಯಂಕೃತಾಪರಾಧ. ಅನರ್ಹ ಶಾಸಕರ ವಿಶ್ವಾಸದ್ರೋಹ ಎಂಬ ಭಾವನಾತ್ಮಕ ವಿಚಾರ ಕೈಯ್ಯಲ್ಲೇ ಇದ್ದರೂ ನಾಯಕರ ನಡುವಿನ ಭಿನ್ನಮತ, ಅಸಮಾಧಾನಗಳು, ಸಿದ್ದರಾಮಯ್ಯ ಅವರಿಗೆ ಗೆಲುವಿನ ಜವಾಬ್ದಾರಿ ವಹಿಸಿದ್ದರಿಂದ ಪಕ್ಷದ ಹಿರಿಯ ನಾಯಕರು ಮುನಿಸಿಕೊಂಡಿದ್ದರಿಂದ ಕೇವಲ ಎರಡು ಸ್ಥಾನಗಳಿಗಷ್ಟೇ ಕಾಂಗ್ರೆಸ್ ತೃಪ್ತಿಪಡಬೇಕಾಯಿತು.
ಇವೆಲ್ಲಾ ಅಂಶಗಳು ಕಣ್ಣ ಮುಂದೆಯೇ ಇರುವಾಗ ಸೋಲಿನ ಪರಾಮರ್ಶೆ ಮಾಡಬೇಕಾದ ಅಗತ್ಯವಿಲ್ಲ. ನಾಯಕತ್ವ ಬದಲಾವಣೆಯ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಾಗಿಲ್ಲ. ಬದಲಾಗಿ ನಾಯಕರ ಧೋರಣೆ, ಮನಸ್ಥಿತಿಗಳು ಬದಲಾಗಬೇಕಾಗಿದೆ. ಇನ್ನೊಬ್ಬರ ನಾಯಕತ್ವದ ಮೇಲೆ ಸಿಟ್ಟು ಮಾಡಿಕೊಳ್ಳುವ ಬದಲು ವೈಯಕ್ತಿಕ ನಾಯಕತ್ವಕ್ಕಿಂತ ಪಕ್ಷದ ಗೆಲುವು ಮುಖ್ಯ. ಈ ಗೆಲುವಿನಲ್ಲಿ ನಮ್ಮ ಕೊಡುಗೆ ಇದ್ದರೆ ನಾಯಕತ್ವ ಹುಡುಕಿಕೊಂಡು ಬರುತ್ತದೆ ಎಂಬ ಧೋರಣೆ, ಯೋಚನೆ ನಾಯಕತ್ವದ ಆಸೆಯಲ್ಲಿರುವವರಿಗೆ ಇದ್ದಿದ್ದರೆ ರಾಜ್ಯದಲ್ಲಿ ಪಕ್ಷ ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲ.
ಇತಿಹಾಸದಿಂದ ಪಾಠ ಕಲಿಯಬೇಕಿದೆ ಕಾಂಗ್ರೆಸ್
ಸ್ವಾತಂತ್ರ್ಯಾನಂತರ 1983ರವರೆಗೆ ರಾಜ್ಯದಲ್ಲಿ ಏಕಸ್ವಾಮ್ಯ ಮೆರೆದಿದ್ದ ಕಾಂಗ್ರೆಸ್ಸಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪರಿವಾರ ಮೊದಲ ಬಾರಿ ಪೆಟ್ಟು ನೀಡಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತ್ತು. ನಂತರ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ಪಕ್ಷ ಗೆದ್ದು ಬಂದಿತ್ತು. ಆದರೆ, ಈ ನಾಯಕತ್ವದ ಮೇಲೆ ನಂಬಿಕೆ ಹೋದ ಪರಿಣಾಮ ಮತ್ತೆ ಜನತಾ ಪರಿವಾರ ಅಧಿಕಾರಕ್ಕೆ ಬಂತು. 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಅವರ ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಸರ್ಕಾರ ಹೆಚ್ಚು ದಿನ ಬಾಳದೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಯಿತು. ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ 2013ರಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕಿತ್ತು.
ಅಂದರೆ, ಕಾಂಗ್ರೆಸ್ ಸೋಲಿನ ಕಾರಣಗಳು ಇಲ್ಲೇ ಇವೆ. ಯಾವಾಗ ನಾಯಕತ್ವದ ಬಗ್ಗೆ ಇತರರಿಗೆ ಅಸಮಾಧಾನ ಹೆಚ್ಚಾಯಿತೋ ಆಗೆಲ್ಲಾ ಕಾಂಗ್ರೆಸ್ ಸೋತಿದೆ. ನಾಯಕರು ಒಗ್ಗಟ್ಟಾಗದೆ ಪರಸ್ಪರ ಕಾಲೆಳೆಯುತ್ತಾ ಅಧಿಕಾರಕ್ಕಾಗಿ ಹಪಹಪಿಸಿದಾಗೆಲ್ಲಾ ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿದಿದೆ. ಆದರೆ, ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಎಂಬ ನಾಯಕರ ಧೋರಣೆ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪದೇ ಪದೇ ಹಿನ್ನಡೆಯಾಗಲು ಕಾರಣವಾಗುತ್ತಿದೆ. ಹೀಗಾಗಿ ಸೋಲಿನ ಕಾರಣದಿಂದ ನಾಯಕತ್ವ ಬದಲಾವಣೆ ಮಾಡುವ ಮುನ್ನ ಕಾಂಗ್ರೆಸ್ ವರಿಷ್ಠರು ನಾಯಕರ ಧೋರಣೆ ಬದಲಾವಣೆ ಮಾಡಲು ಮುಂದಾಗಬೇಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಸ್ತುತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಎಂಬ ಕೇಂದ್ರದ ಬಿಜೆಪಿ ಸರ್ಕಾರದ ನಿಲುವುಗಳು ಬಿಜೆಪಿ ವಿರುದ್ಧ ಹೋರಾಟಕ್ಕೆ ಪ್ರಬಲ ಅಸ್ತ್ರಗಳನ್ನು ಒದಗಿಸಿದೆ. ಕಾಂಗ್ರೆಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ಹೋರಾಟಕ್ಕೆ ಇಳಿಯದಿದ್ದರೂ ಜನರೇ ಕೇಂದ್ರದ ನಿರ್ಧಾರದ ವಿರುದ್ಧ ಬೀದಿಗೆ ಬಿದ್ದಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಎಂಬ ಕೆಲಸಕ್ಕೆ ಬಾರದ ವಿಚಾರವನ್ನು ಹಿಡಿದುಕೊಂಡು ಕಾಲಹರಣ ಮಾಡುವ ಬದಲು ನಾಯಕರ ಧೋರಣೆ ಬದಲಾವಣೆ ಮಾಡಿ ಕೈಯ್ಯಲ್ಲಿರುವ ಎರಡು ಪ್ರಮುಖ ಅಸ್ತ್ರಗಳನ್ನು ಬಳಸಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಅವರನ್ನು ಇಳಿಸಬೇಕಿದೆ. ಆಗ ತಾನಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚುತ್ತದೆ.