ಮೀಸಲಾತಿಯ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತಮಿಳುನಾಡಿನ ಮೆಡಿಕಲ್ ಕಾಲೇಜುಗಳಲ್ಲಿ ಒಬಿಸಿ ಕೋಟಾದವರಿಗೆ ಸೀಟು ಹಂಚಿಕೆ ಮಾಡುವ ಕುರಿತು ದಾಖಲಾದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮೀಸಲಾತಿಯ ಕುರಿತು ತನ್ನ ಅಭಿಪ್ರಾಯವನ್ನು ಸುಪ್ರಿಂ ಕೋರ್ಟ್ ವ್ಯಕ್ತಪಡಿಸಿದೆ.
“ಮೀಸಲಾತಿಯ ಹಕ್ಕು ಮೂಲಭೂತ ಹಕ್ಕಲ್ಲ. ಬದಲಾಗಿ ಅದೊಂದು ಕಾನೂನು ಅಷ್ಟೇ,” ಎಂದು ಜಸ್ಟೀಸ್ ಎಲ್ ನಾಗೇಶ್ವರ ರಾವ್ ಅವರು ಹೇಳಿದ್ದಾರೆ.
ತಮಿಳುನಾಡಿನ ಸಿಪಿಐ, ಡಿಎಂಕೆ ಹಾಗೂ ಇತರ ರಾಜಕೀಯ ನಾಯಕರು ತಮಿಳು ನಾಡಿನ ಮೆಡಿಕಲ್ ಕಾಲೇಜುಗಳಲ್ಲಿ 2020-21ನೇ ಸಾಲಿಗೆ ಹಿಂದುಳಿದ ವರ್ಗ ಹಾಗೂ ಇತರರಿಗೆ ಶೇಕಡಾ 50ರಷ್ಟು ಸೀಟುಗಳನ್ನು ಮೀಸಲಿಡಬೇಕೆಂದು ಆಗ್ರಹಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಒಬಿಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನಿರಾಕರಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಇವರ ವಾದವಾಗಿತ್ತು. ಇದರೊಂದಿಗೆ ಈ ಸಾಲಿನ NEET ಪರೀಕ್ಷೆಗಳ ಕೌನ್ಸೆಲಿಂಗ್ ಅನ್ನು ಕೂಡಾ ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಆದರೆ, ಈ ವಾದವನ್ನು ಪುರಸ್ಕರಿಸಲು ಒಪ್ಪದ ಸುಪ್ರಿಂಕೋರ್ಟ್, ಸಂವಿಧಾನದ 32ನೇ ವಿಧಿಯು ಮೂಲಭೂತ ಹಕ್ಕುಗಳ ರಕ್ಷಣೆಯ ಕುರಿತಾಗಿ ವಿವರಿಸುತ್ತದೆ. ಆದರೆ, ಮೀಸಲಾತಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುವುದೇ ಇಲ್ಲ ಎಂದು ಸುಪ್ರಿಂ ಅಭಿಪ್ರಾಯ ಪಟ್ಟಿತು.