ಲಾಕ್ಡೌನ್… ಕರೋನಾ ಸೋಂಕಿನ ದಾಳಿಯಿಂದ ಕಂಗೆಟ್ಟ ದೇಶವಾಸಿಗಳ ಪಾಲಿಗೆ ಒದಗಿ ಬಂದ ಇನ್ನೊಂದು ಹೊಡೆತ. ಗಾಯದ ಮೇಲೆ ಬರೆ ಎಳೆದಂತೆ, ಯಾವುದೇ ರೀತಿಯ ಮುನ್ಸೂಚನೆ ಇಲ್ಲದೇ ರಾಷ್ಟ್ರಾದ್ಯಂತ ಹೇರಿದ ಲಾಕ್ಡೌನ್ನಿಂದಾಗಿ ದೇಶದ ವ್ಯವಸ್ಥೆಯಲ್ಲಿನ ಪ್ರತೀ ಹುಳುಕುಗಳು ಎಲ್ಲರೆದುರು ಬೆತ್ತಲಾಗಿ ನಿಂತು ಬಿಟ್ಟವು. ಈಗ, ಲಾಕ್ಡೌನ್ನ ಅಸಫಲತೆಯನ್ನು ಮುಚ್ಚಿಹಾಕಿ ತಮ್ಮ ʼಇಮೇಜ್ʼ ವೃದ್ದಿಸುವಂತಹ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.
Also Read: ‘ಆತ್ಮ ನಿರ್ಭರ್’ ಎಂಬಿತ್ಯಾದಿ ಮಾತುಗಳಿಂದ ಮಂಟಪ ಕಟ್ಟುವ ಕಾಲವಲ್ಲ ಇದು. ಆಡದೇ ಮಾಡಬೇಕು!
ಲಾಕ್ಡೌನ್ ಘೋಷಣೆಯಾದ ಮೊದಲ ಹಲವು ದಿನಗಳಿಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಕೇಂದ್ರ ಗೃಹ ಮಂತ್ರಿಗಳು ಇತ್ತೀಚಿಗೆ ಒಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಪ್ಪುಗಳಿಗೆ ತೇಪೆ ಹಚ್ಚುವ ಕೆಲಸ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಆ ತೇಪೆಯ ಹಿಂದಿರುವ ಸೋಲನ್ನು ಮರೆಮಾಚುವ ಪ್ರಯತ್ನದಲ್ಲಿ ತಾವು ಇನ್ನಷ್ಟು ಬೆತ್ತಲಾಗುತ್ತಿದ್ದೇವೆ ಎನ್ನುವ ಸತ್ಯವನ್ನು ಅರಿಯಬೇಕಾಗಿದೆ. ಅದು ವಲಸೆ ಕಾರ್ಮಿಕರ ವಿಚಾರವಾಗಿರಬಹುದು, ಕರೋನಾವನ್ನು ದೇಶದಲ್ಲಿ ನಿಯಂತ್ರಿಸುವ ವಿಚಾರವಿರಬಹುದು ಅಥವಾ ಲಾಕ್ಡೌನ್ ಅನ್ನು ಸಮರ್ಥವಾಗಿ ನಿಭಾಯಿಸುವ ವಿಚಾರವಿರಬಹುದು ಈ ಎಲ್ಲಾ ವಿಚಾರದಲ್ಲಿ ವ್ಯವಸ್ಥೆಯಲ್ಲಿನ ಹುಳುಕುಗಳು ಇಂದು ದುತ್ತನೆ ಕಣ್ಣೆದುರು ಬಂದು ನಿಂತಿವೆ.
Also Read: ಮನೆ ಕುಸಿಯುತ್ತಿರುವಾಗಲೂ ಮಾರು ಗೆಲ್ಲುವ ಸಾಹಸ ಮೋದಿಯವರದು!
ತಮ್ಮ ಸಂದರ್ಶನದಲ್ಲಿ ಅಮಿತ್ ಶಾ ಅವರು, ತಾಳ್ಮೆ ಕಳೆದುಕೊಂಡ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೋಗಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ಆದರೆ, ಮಾನ್ಯ ಗೃಹ ಮಂತ್ರಿಗಳು ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ವಲಸೆ ಕಾರ್ಮಿಕರು ನಡೆಯಲು ಆರಂಭಿಸಿದ್ದು ಅವರಿಗೆ ಮಾಡಲು ಕೆಲಸವಿಲ್ಲವೆಂದು. ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದೇ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಅವರು ತಮ್ಮ ಕಾಲ್ನಡಿಗೆಯ ಪಯಣ ಆರಂಭಿಸಿದರು ಎನ್ನುವ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ.
Also Read: ಮೂರು ಹಂತದ ಲಾಕ್ಡೌನ್: ಸಾವಿರಾರು ಕಿಲೋಮೀಟರ್ ಹಾದಿ ಸವೆಸಿದ ವಲಸೆ ಕಾರ್ಮಿಕರು
ಬಹಳಷ್ಟು ಜನರು ಕೂಲಿ ಮಾಡಿ ಬದುಕು ಸಾಗಿಸುವ ವರ್ಗಕ್ಕೆ ಸೇರಿದವರು. ಅಂದು ದುಡಿದರೆ ಹೊಟ್ಟೆಗೆ ಹಿಟ್ಟು ಇಲ್ಲವಾದರೆ ಬರೀ ತಣ್ಣೀರು ಬಟ್ಟೆ ಎನ್ನುವ ಪರಿಸ್ಥಿತಿಯಲ್ಲಿದ್ದವರು. ಊಟಕ್ಕಾಗಿ, ಮನೆಯ ಬಾಡಿಗೆಗಾಗಿ ಕೂಲಿಯನ್ನೇ ಆಶ್ರಯಿಸಿದ್ದವರು ಇವರು. ಇನ್ನು ಅಜೀಂ ಪ್ರೇಮ್ಜಿ ಯೂನಿವರ್ಸಿಟಿಯ ಸರ್ವೆಯ ಪ್ರಕಾರ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ 80%ದಷ್ಟು ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್ನು 31%ದಷ್ಟು ಜನರಿಗೆ ಒಂದು ವಾರಕ್ಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನು ಕೊಳ್ಳುವ ಶಕ್ತಿಯಿರಲಿಲ್ಲ ಎಂಬ ಸತ್ಯ ತಿಳಿದು ಬಂದಿದೆ. ಈ ಸತ್ಯವನ್ನು ಹೇಗೆ ಮುಚ್ಚಿಡಲು ಸಾಧ್ಯ?
Also Read: ಲಾಕ್ ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡ ನಗರ ಪ್ರದೇಶದ ಶೇ.80ರಷ್ಟು ಜನ.!
ಇನ್ನು ಹಸಿವು ನೀಗಿಸಲು ಸರ್ಕಾರದಿಂದ ರೂಪಿತವಾದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಲ್ಲಿ ಭಾಗಶಃ ಯಶಸ್ವಿಯಾಯಿತಷ್ಟೇ. ಉಳಿದಂತೆ ಲಕ್ಷಾಂತರ ಬಡವರು, ಮಧ್ಯಮ ವರ್ಗದವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಒದಗಿ ಬಂದಿತ್ತು. ಇನ್ನು ಸರ್ಕಾರ ಮಾರ್ಚ್ 26ರಂದು ಘೋಷಿಸಿದ 1.70 ಲಕ್ಷ ಕೋಟಿ ಮೊತ್ತದ ಪರಿಹಾರವನ್ನು ಈಗಾಗಲೇ ಘೋಷಿಸಿರುವ ಯೋಜನೆಗಳೊಂದಿಗೆ ವಿಲೀನಗೊಳಿಸಿರುವುದು ಬೀದಿಯಲ್ಲಿದ್ದಂತಹ ಕಾರ್ಮಿಕರಿಗೆ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಸಾವಿರಾರು ಜನರು ಹಸಿವಿನಿಂದ ನರಳುತ್ತಿದ್ದರೂ, ದವಸ-ಧಾನ್ಯಗಳು ಸರ್ಕಾರಿ ಗೋದಾಮಿನಲ್ಲಿ ಕೊಳೆಯುತ್ತಿದ್ದವು. ಇದು ಸರ್ಕಾರದ ಆಡಳಿತ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ.
Also Read: ಕಡೆಗೂ ಕರೋನಾ ಕಷ್ಟಕ್ಕೆ ಕೈ ಹಿಡಿದ ಕೇಂದ್ರ ಸರ್ಕಾರ
ಇನ್ನು ಅತ್ಯಂತ ಗೊಂದಲಕಾರಿಯಾಗಿರುವ ಆತ್ಮನಿರ್ಭರ್ ಪ್ಯಾಕೇಜ್ನಲ್ಲಿ ಯಾವ ರೀತಿಯ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂಬುದರ ಕುರಿತು ಜನಸಾಮಾನ್ಯರಿಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ.
Also Read: ₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?
ತಡವಾಗಿಯಾದರೂ ಕೇಂದ್ರ ಸರ್ಕಾರ ವಿಶೇಷ ಶ್ರಮಿಕ್ ರೈಲು ಯೋಜನೆಯನ್ನು ಜಾರಿಗೆ ತಂದಿತು. , ವಲಸೆ ಕಾರ್ಮಿಕರ ಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿತು ಎನ್ನುವಷ್ಟರಲ್ಲಿ ಅಲ್ಲಿಯೂ ಅಸಮರ್ಥ ನಿರ್ವಹಣೆ ಮತ್ತೆ ಕಾರ್ಮಿಕರನ್ನು ಸಂಕಷ್ಟಕ್ಕೆ ಈಡು ಮಾಡಿತು. ಮೊದಲೇ ಕೈಯಲ್ಲಿ ಬಿಡಿಗಾಸು ಇಲ್ಲದೇ ನಡೆದುಕೊಂಡೇ ಊರು ಸೇರಲು ಹವಣಿಸುತ್ತಿದ್ದ ಬಡ ಕಾರ್ಮಿಕರಿಂದ ಟಿಕೆಟ್ ರೂಪದಲ್ಲಿ ಸುಲಿಗೆ ಮಾಡಲಾಯಿತು. ರೈಲುಗಳಲ್ಲಿ ಊಟ ನೀರಿನ ಅವ್ಯವಸ್ಥೆಯಂತೂ ಕಾರ್ಮಿಕರನ್ನು ಕಂಡು ಕೇಳರಿಯದ ನರಕದ ಕೂಪಕ್ಕೆ ತಳ್ಳಿತು.
Also Read: ಶ್ರಮಿಕ್ ರೈಲು ಎಂಬ ಸ್ವರ್ಗ ನರಕ ದರ್ಶನ! ಮುಂಬೈ ಟು ರೂರ್ಕೆಲಾ!
ಮಾನ್ಯ ಗೃಹ ಮಂತ್ರಿಗಳು ತಮ್ಮ ಸಂದರ್ಶನದಲ್ಲಿ ಇನ್ನೊಂದು ಕಡೆ ಹೇಳುತ್ತಾರೆ, ವಲಸೆ ಕಾರ್ಮಿಕರು ಕೇವಲ 5-6ವಾರಗಳಷ್ಟೇ ಕಷ್ಟ ಪಟ್ಟರು ಎಂದು. ಒಮ್ಮೆ ಕಣ್ಣು ತೆರೆದು ತಮ್ಮ ಭ್ರಮಾಲೋಕದಿಂದ ಹೊರಬಂದು ದೇಶವನ್ನು ನೋಡಿದ್ದರೆ, ಈಗಲೂ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಪಡುತ್ತಿರುವ ಪಾಡನ್ನು ನೋಡಬಹುದಿತ್ತು. ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟುಗಳನ್ನು ತಿಂದ ಸಂದರ್ಭವನ್ನು ನೋಡಬಹುದಿತ್ತು. ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಜಮಾಯಿಸಿದ್ದ ಸಾವಿರಾರು ವಲಸೆ ಕಾರ್ಮಿಕರ ಮುಖದಲ್ಲಿನ ದುಗುಡವನ್ನು ಕಾಣಬಹುದಾಗಿತ್ತು. ಸರ್ಕಾರವನ್ನು ನಂಬಿ ತಾವಿದ್ದಲ್ಲೇ ಕುಳಿತಿದ್ದ ಕಾರ್ಮಿಕರ ಕಣ್ಣುಗಳಲ್ಲಿ ಹಸಿವನ್ನು ನೋಡಬಹುದಿತ್ತು. ಆದರೆ, ಇದಾವುದನ್ನೂ ನೋಡಲು ಸರ್ಕಾರದ ಕಣ್ಣುಗಳಿಗೆ ಇಷ್ಟವಿರಲಿಲ್ಲ. ಎಂದಿನಂತೆ ಜಾಣ ಕುರುಡನ್ನು ಪ್ರದರ್ಶಿಸುತ್ತಾ, ತನ್ನ ಇಮೇಜ್ ಬೆಳೆಸುವ ಕಾರ್ಯಕ್ರಮವಾದ ʼಪ್ರೈಂ ಟೈಮ್ʼ ಶೋ ಮಾಡುವಲ್ಲಿ ವ್ಯಸ್ಥವಾಗಿತ್ತು.
Also Read: ಇಂದು ಮತ್ತೆ ಪ್ರೈಮ್ ಸ್ಪೀಚ್ ನೀಡಲಿರುವ ಮೋದಿ ಬಗ್ಗೆ ನಿರೀಕ್ಷೆಗಳು ಅಪಾರ
ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ ಕಾರ್ಮಿಕರಲ್ಲಿ ಸುಮಾರು 170ರಷ್ಟು ಜನರು ಅಪಘಾತಗಳಲ್ಲಿ ಸಾವನ್ನಪ್ಪಿದರು. ಶ್ರಮಿಕ್ ವಿಶೇಷ(?) ರೈಲುಗಳಲ್ಲಿ ಹಸಿವು, ಸೆಖೆ ಮತ್ತು ಚರ್ಮದ ಸೋಂಕಿಗೆ ತುತ್ತಾಗಿ ಸುಮಾರು 80 ಜನರು ಸಾವನ್ನಪ್ಪಿದರು. ಈ ಕುರಿತು ಸರ್ಕಾರ ಎಲ್ಲಿಯೂ ಚಕಾರವೆತ್ತಿಲ್ಲ ಎಂಬುದು ನಿಜಕ್ಕೂ ಬೇಸರ ಮೂಡಿಸುವಂತಹ ಸಂಗತಿ.
Also Read: ವಲಸೆ ವರಸೆ- 2: ವಲಸೆ ಕಾರ್ಮಿಕರನ್ನು ನಿರ್ದಯವಾಗಿ ನಡೆಸಿಕೊಂಡಿರುವ ನಾಗರಿಕ ಸಮಾಜಕ್ಕಿದೆ ತಕ್ಕ ಶಿಕ್ಷೆ
ಇನ್ನು ಹಲವು ತಜ್ಞರ ಪ್ರಕಾರ ಅನಗತ್ಯವಾಗಿ ʼಕಠಿಣʼವಾಗಿರುವಂತಹ ಹಾಗೂ ಅಸಂಬಧ್ದವಾಗಿರುವಂತಹ ಲಾಕ್ಡೌನ್ ಅನ್ನು ಹೇರಿ ಮೊದಲೇ ಧ್ವನಿ ಇಲ್ಲದಂತಾಗಿದ್ದ ಕಾರ್ಮಿಕ ವರ್ಗದ ಧ್ವನಿಯನ್ನು ಮತ್ತಷ್ಟು ಅಡಗಿಸುವ ಕಾರ್ಯ ನಡೆಯಿತು. ಇದಕ್ಕೆಲ್ಲಾ ಮೌನವಾಗಿ ಕಾರ್ಮಿಕ ವರ್ಗ ಬೆಲೆಯನ್ನೂ ತೆರಬೇಕಾಯಿತು. ಆದರೆ, ಈ ಎಲ್ಲಾ ವಿಷಯಗಳು ಗೃಹ ಸಚಿವರ ವಿಶ್ಲೇಷಣೆಯಲ್ಲಿ ಕಾಣ ಸಿಗಲಿಲ್ಲ. ಸಿಗುವ ಸಾಧ್ಯತೆಗಳೂ ಇಲ್ಲ.
Also Read: ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ