ಅತೀ ಹೆಚ್ಚು ಪ್ರಮಾಣದಲ್ಲಿ ಕಾರ್ಮಿಕರನ್ನು ಅವಲಂಬಿಸಿರುವ ಬೀಡಿ ಉದ್ಯಮ ದೇಶದಲ್ಲಿ ಅವನತಿಯ ಹಾದಿ ಹಿಡಿದಿದೆ. ಬೀಡಿ ವಿದೇಶ ವಿನಿಮಯ ತಂದು ಕೊಡುವ ಉದ್ಯಮ ಆಗಿದ್ದರೂ ಕಾನೂನು ಕಟ್ಟಳೆಗಳಿಂದ ಬೀಡಿ ಬೇಡಿಕೆ ಮತ್ತು ಮಾರಾಟ ಪ್ರಮಾಣ ಕುಸಿಯ ತೊಡಗಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಪ್ರಮುಖವಾಗಿ ಬೀಡಿ ಉದ್ಯಮವನ್ನು ಅವಲಂಬಿತವಾಗಿದ್ದು, ಕಳೆದ ಎರಡು ವರ್ಷಗಳಿಂದ ಬೀಡಿ ಮಾರಾಟವಾಗದೆ ದಾಸ್ತಾನು ಗೋದಾಮುಗಳಲ್ಲಿ ಕೊಳೆಯುತ್ತಿದೆ.
ಹತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ಹತ್ತು ಲಕ್ಷ ಮಂದಿ ಬೀಡಿ ಕಾರ್ಮಿಕರು ನೋಂದಾಯಿತರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಂಹಪಾಲು ಮಂದಿ ಬೀಡಿ ಸುತ್ತುವ ಕಾರ್ಮಿಕರು ಜೀವನಕ್ಕಾಗಿ ತಂಬಾಕು ಬಳಸಲಾಗುವ ಬೀಡಿ ಉದ್ಯಮವನ್ನು ಅವಲಂಬಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಬೀಡಿ ಕಾರ್ಮಿಕರ ಹೆಸರು ವಿವಿಧ ಸರಕಾರಿ ಇಲಾಖೆಗಳ ದಾಖಲೆಗಳಲ್ಲಿ ಕಂಡು ಬಂದರೂ ಕೇವಲ ಎರಡೂವರೆ ಲಕ್ಷ ಕಾರ್ಮಿಕರು ಮಾತ್ರ ಈಗ ಬೀಡಿ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಉಡುಪಿ ಮತ್ತು ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಅಂದಾಜು ಒಂದೂವರೆ ಲಕ್ಷ ಕಾರ್ಮಿಕರು ಸದ್ಯ ಅಲ್ಪ ಪ್ರಮಾಣದಲ್ಲಿ ಬೀಡಿ ಉದ್ಯಮವನ್ನು ಅವಲಂಬಿಸಿದ್ದಾರೆ.
The Cigarettes and Other Tobacco Products Act, 2003 or COTPA, 2003 ಕಾಯಿದೆ ಪರಿಣಾಮಕಾರಿ ಆಗಿ ಅನುಷ್ಠಾನ ಆಗತೊಡಗಿದ ಅನಂತರ ಬೀಡಿ, ಸೀಗರೇಟು ಮಾರಾಟ ಪ್ರಮಾಣ ಕುಸಿಯತೊಡಗಿದೆ. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆಯ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇವನೆ ಮಾಡುವಂತಿಲ್ಲ. ಕಾನೂನು ಪಾಲಕರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಿಡಿಯಾಗಿ ಬೀಡಿ, ಸಿಗರೇಟು ಮಾರಾಟ ಮಾಡುವಂತಿಲ್ಲ ಎಂದು ವಿರ್ಬಂಧ ಹೇರಿದ ಪರಿಣಾಮ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ ಎನ್ನಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದ ಜಿ ಎಸ್ ಟಿ ತೆರಿಗೆಯಿಂದ ಬೀಡಿ ಉದ್ಯಮದ ಮೇಲೂ ಬಹುದೊಡ್ಡ ಹೊಡೆತ ಆಗಿದೆ. ವ್ಯಾಟ್ ಕಾಲದಲ್ಲಿ ಶೇಕಡ 5ರಷ್ಟಿದ್ದ ತೆರಿಗೆ ಜಿ ಎಸ್ ಟಿ ಪ್ರಕಾರ ಬೀಡಿಗೆ ಶೇಕಡ 28ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಬೀಡಿ ಉದ್ಯಮಿಗಳ ಆದಾಯದ ಮೇಲೆ ಬಹುದೊಡ್ಡ ಕೊರತೆ ಆಗಿದ್ದರೆ, ಬೀಡಿ ಮಾರಾಟ ಬೆಲೆಯಲ್ಲೂ ಸಾಕಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಬೀಡಿ ದರ ಏರಿಕೆಯಾದ ಪರಿಣಾಮ ಗ್ರಾಹಕರ ಸಂಖ್ಯೆ ಕಡಿಮೆ ಆಗಲು ಕೂಡ ಕಾರಣವಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಬೀಡಿ ಉದ್ಯಮ ಅವನತಿ ಹಾದಿಯನ್ನು ಹಿಡಿದಿತ್ತು. ಕಾನೂನುಗಳು ಮಾರಾಟದ ಮೇಲೆ ತೊಡಕು ಉಂಟು ಮಾಡಿತ್ತು. ದೇಶದಲ್ಲಿ ಮೈಸೂರು, ಮಂಗಳೂರು, ಮುಂಬಯಿಯ ಬೀಡಿ ಕಂಪೆನಿಗಳು ವಿದೇಶಗಳಿಗೆ ಬೀಡಿ ರಫ್ತು ಮಾಡುತ್ತಿವೆ. ಅಮೆರಿಕಾದಲ್ಲಿ ಕೂಡ ಮಂಗಳೂರಿನ ಗಣೇಶ್ ಬೀಡಿ, ಪ್ರಕಾಶ್ ಬೀಡಿ, ಭಾರತ್ ಬೀಡಿಗಳಿಗೆ ವಿಶೇಷ ಬೇಡಿಕೆ ಇತ್ತು. ಸಿಗರೇಟಿಗಿಂತ ಭಿನ್ನ ರುಚಿಯನ್ನು ಸವಿಯಲು ಬೀಡಿ ಮೂಲಕ ಸಾಧ್ಯ ಆಗುವುದರಿಂದ ವಿದೇಶಿಯರಿಗೆ ಬೀಡಿ ಮೋಡಿ ಮಾಡಿತ್ತು. ಆಗ ಎಚ್ಚೆತ್ತುಕೊಂಡ ಸಿಗರೇಟು ಲಾಬಿ ಬೀಡಿ ಉದ್ಯಮದಲ್ಲಿ ಬಾಲ ಕಾರ್ಮಿಕರನ್ನು ಬಳಸಲಾಗುತ್ತಿದೆ ಎಂದು ಪ್ರಚಾರ ಮಾಡುವ ಮೂಲಕ ಬೀಡಿ ರಫ್ತು ವಿರುದ್ಧ ಪಿತೂರಿ ನಡೆಸಿತ್ತು. ಆದರೆ, ಈಗಲೂ ಬೀಡಿ ಹಲವು ದೇಶಗಳಿಗೆ ರಫ್ತು ಆಗುತ್ತಿದೆ.
ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಯೂನಿಯನ್ ಮುಖಂಡ ಮುಹಮ್ಮದ್ ರಫಿ ಅವರ ಪ್ರಕಾರ ಕಳೆದ ಐದು ವರ್ಷದಿಂದ ಬೀಡಿ ಉದ್ಯಮವು ತೀವ್ರ ಸಂಕಷ್ಟದಲ್ಲಿದೆ. ದೇಶದಲ್ಲಿ ಬೀಡಿ ಉದ್ಯಮವನ್ನೇ ನಂಬಿ ಬದುಕು ಸಾಗಿಸುವ ಕೋಟ್ಯಂತರ ಕಾರ್ಮಿಕರು ಸಂಕಷ್ಟದಲ್ಲಿದ್ದರೂ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೀಡಿ ಉದ್ಯಮವನ್ನು ಉಳಿಸಿ ಬೀಡಿ ಕಾರ್ಮಿಕರನ್ನು ರಕ್ಷಿಸುವ ಯಾವ ಕೆಲಸೂ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ದೇಶದಲ್ಲಿ ಸುಮಾರು ಎರಡು ಕೋಟಿ ನೌಕರರು ತಂಬಾಕು ಉತ್ಪಾದನೆ ಆಧಾರಿತ ಕೈಗಾರಿಕೆಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಇದರಲ್ಲಿ ತೆಂಡು ಎಲೆ ಸಂಗ್ರಹಿಸುವ ಉತ್ತರ ಭಾರತ ರಾಜ್ಯಗಳ 75 ಲಕ್ಷ ಆದಿವಾಸಿ ಬುಡಕಟ್ಟು ಜನರು ಸೇರಿದ್ದಾರೆ. ಅನಂತರ ತೆಂಡು ಎಲೆಗಳನ್ನು ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತದೆ. ಬೀಡಿ ಕಟ್ಟುವ ಕೆಲಸವನ್ನು ಗೃಹ ಉದ್ಯಮವಾಗಿ ಮಾಡಿಕೊಂಡಿರುವ ಕಾರ್ಮಿಕರಲ್ಲಿ ಮಹಿಳೆಯರೇ ಶೇ. 80. ಅನಂತರ ಸಿದ್ಧವಾದ ಬೀಡಿಯನ್ನು ಸಂಸ್ಕರಿಸಿ ಅದಕ್ಕೆ ಲೇಬಲ್ ಹಾಕುವ ಕೆಲಸದಲ್ಲಿ ಕೂಡ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೇಂದ್ರ ಸರಕಾರ ಶೇಕಡ 28ರಷ್ಟು ಜಿ ಎಸ್ ಟಿ ಹೇರಿಕೆ ಮಾಡಿದ ಮೇಲೆ ಶೇಕಡ 17 ರಿಂದ 20 ರಷ್ಟು ಬೀಡಿ ಮಾರಾಟ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಅಂಕಿ ಅಂಶಗಳಿಂದ ವ್ಯಕ್ತವಾಗುತ್ತದೆ. ನಿರ್ವಹಣಾ ವೆಚ್ಚದಲ್ಲಿ ಕೂಡ ಶೇಕಡ 33ರಷ್ಟು ಏರಿಕೆಯಾಗಿದ್ದು, ಬೀಡಿ ಕಂಪೆನಿಗಳ ಲಾಭಾಂಶದಲ್ಲಿ ಅರ್ಧಕರ್ಧ ಖೋತಾ ಆಗಿದೆ. ಬೀಡಿ ಉದ್ಯಮವು ಹಿಂದಿನಿಂದಲೂ ಬಲಪಂಥೀಯ ರಾಜಕೀಯ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಅಧಿಕಾರ ದೊರಕಿದ ಅನಂತರ ಬೀಡಿ ಉದ್ಯಮದ ಮೇಲೆ ಗದಾ ಪ್ರಹಾರ ಮಾಡಲಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಕರಾವಳಿಯ ಒಂದು ಕಾಲಘಟ್ಟದ ಜನರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಪಡೆಯುವಂತಾಗಲು ಅವರ ತಾಯಿ, ಸೋದರತ್ತೆ, ಚಿಕ್ಕಮ್ಮ, ಮತ್ತು ಅಕ್ಕಂದಿರು ಬೀಡಿ ಕಾರ್ಮಿಕರಾಗಿ ಸಂಪಾದಿಸಿದ ಹಣ ಬಹಳಷ್ಟು ಕಾರಣವಾಗಿದೆ. ಕರಾವಳಿಯ ಆರ್ಥಿಕ ಪರಿಸ್ಥಿತಿಯಲ್ಲಿ ಬೀಡಿ ಉದ್ಯಮದ ಪಾಲು ಕೂಡ ಗಮನಾರ್ಹವಾಗಿದೆ. ಆದರೆ, ಆರೋಗ್ಯದ ದೃಷ್ಟಿಯಿಂದ ನೋಡಿದರೆ ದೇಶದಲ್ಲಿ ವಾರ್ಷಿಕ ತಂಬಾಕು ಸೇವನೆಯಿಂದ 80,000 ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ತಂಬಾಕು ಸೇವನೆಯ ದುಷ್ಪರಿಣಾಮದಿಂದಾಗಿ ಅನಾರೋಗ್ಯ ಮತ್ತು ಚಿಕ್ಕ ಪ್ರಾಯದಲ್ಲೇ ಸಾವು ಸಂಭವಿಸುವುದರಿಂದಾಗಿ ಇದು ದೇಶದ ಆರ್ಥಿಕತೆಯ ಮೇಲೆ ಹೊರೆ ಆಗುತ್ತಿದೆ ಎಂಬ ವಾದವೂ ಕೂಡ ಇದೆ. ತಂಬಾಕು ಸಂಬಂಧಿ ಸಾವು ಮತ್ತು ಅನಾರೋಗ್ಯ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಸರಕಾರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡದೆ ನಿರ್ಬಂಧಗಳನ್ನು ವಿಧಿಸುತ್ತಿದೆ.
ಕರ್ನಾಟಕ ಕರಾವಳಿಯಲ್ಲಿ ಕಾರ್ಮಿಕರನ್ನು ಅವಲಂಬಿಸಿರುವ ಸಾಂಪ್ರದಾಯಿಕ ನೇಕಾರಿಕೆ, ಮಂಗಳೂರು ಹಂಚು ಉದ್ಯಮಗಳು ಸಂಪೂರ್ಣ ನೆಲ ಕಚ್ಚಿದ ಅನಂತರ ಬೀಡಿ ಉದ್ಯಮದ ಕೊನೆಯ ದಿನಗಳು ಹತ್ತಿರ ಆಗತೊಡಗಿದೆ. ಕರಾವಳಿಯಲ್ಲಿ ಮತ್ತೊಂದು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಗೋಡಂಬಿ ಸಂಸ್ಕರಣ ಉದ್ಯಮ, ಮೀನು ಸಂಸ್ಕರಣ ಘಟಕಗಳು ಕೂಡ ಸರಕಾರದ ತಪ್ಪು ನೀತಿಯಿಂದಾಗಿ ಸಂಕಷ್ಟ ಎದುರಿಸತೊಡಗಿವೆ.