ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಆದಾಗ ಯೋಗೇಶ್ವರ್ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಆ ಬಳಿಕ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದ ಯೋಗೇಶ್ವರ್‌ಗೆ ಆಶ್ಚರ್ಯ ಕಾದಿತ್ತು. ಆ ಬಳಿಕ ಸಿಎಂ ಯಡಿಯೂರಪ್ಪ ಬಳಿ ಜೋರಾಗಿಯೇ ಗುಡುಗಿದ್ದರು ಎನ್ನಲಾಗಿತ್ತು. ವಿಜಯೇಂದ್ರ ಆಪ್ತನಾಗಿದ್ದ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ ಏನು ಎನ್ನುವ ಬಗ್ಗೆಯೂ ಬಹಳ ಚರ್ಚೆ ನಡೆದಿತ್ತು. ಇದೀಗ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗದೇ ಇರಲು ಕಾರಣ ಏನು ಎನ್ನುವುದು ತಿಳಿದು ಬಂದಿದೆ.
ಕನಕಪುರದ ಹಾರೋಬೆಲೆಯಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಏಸು ಕ್ರಿಸ್ತನ ಮೂರ್ತಿಯ ಪ್ರತಿಮೆ ಮಾಡಲು ಸಹಾಯ ಮಾಡಿದ್ದರು. ಕಳೆದ ಡಿಸೆಂಬರ್ 25ರಂದು ಕ್ರಿಸ್ತನ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆಯನ್ನೂ ನೆರವೇರಿಸಲಾಗಿತ್ತು. ಆ ಬಳಿಕ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದ ರಾಜ್ಯ ಸರ್ಕಾರ, ಹಾರೋಬೆಲೆ ಬೆಟ್ಟ ಶಿವನಬೆಟ್ಟ, ಅಲ್ಲಿ ಕ್ರೈಸ್ತರು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವು ಸಚಿವರು ಆರೋಪಿಸಿದ್ದರು. ಆ ಬಳಿಕ ಜಿಲ್ಲಾಧಿಕಾರಿಯಿಂದ ವರದಿಯನ್ನೂ ಕೇಳಲಾಗಿತ್ತು. ಏಕಾಏಕಿ ತಹಶೀಲ್ದಾರ್ ವರ್ಗಾವಣೆ ಮಾಡುವ ಮೂಲಕ ಅಚ್ಚರಿಯ ಘಟನೆಗಳೂ ನಡೆಯಿತು. ರಾಮನಗರ ಜಿಲ್ಲಾಧಿಕಾರಿ ಕಂದಾಯ ಸಚಿವರಿಗೆ ಇಂದು ವರದಿ ಸಲ್ಲಿಸಿದ್ದಾರೆ. ಇದನ್ನೇ ತನ್ನ ರಾಜಕೀಯ ಬೆಳವಣಿಗೆಗೆ ಮೆಟ್ಟಿಲು ಮಾಡಿಕೊಳ್ಳಲು ಮುಂದಾದ ಸಿ.ಪಿ ಯೇಗೇಶ್ವರ್ ಸಚಿವ ಸ್ಥಾನ ಕಳೆದುಕೊಂಡರು ಎನ್ನಲಾಗುತ್ತಾ ಇದೆ.

ಸರ್ಕಾರದಿಂದ ಹಾರೋಬೆಲೆಯಲ್ಲಿ ಕ್ರಿಸ್ತ ಮೂರ್ತಿ ಸ್ಥಾಪನೆಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಯೋಗೇಶ್ವರ್, ರಾಮನಗರಕ್ಕೆ ಸಂಘ ಪರಿವಾರವನ್ನು ತರುವಲ್ಲಿ ಯಶಸ್ವಿಯಾದರು. ಆರ್‌ಎಸ್‌ಎಸ್ ಸಂಘಟನೆ ಮೂಲಕ ಹೋರಾಟ ರೂಪಿಸಿದ ಸಿ.ಪಿ ಯೋಗೇಶ್ವರ್, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕನಕಪುರಕ್ಕೆ ಕರೆದುಕೊಂಡು ಬಂದು ದೊಡ್ಡ ಹೋರಾಟ ಮಾಡಲು ಯೋಜನೆ ರೂಪಿಸಿ ಭಾಗಶಃ ಯಶಸ್ಸನ್ನೂ ಕಂಡರು. ಆ ನಂತರ ಆರ್‌ಎಸ್‌ಎಸ್ ಪಥಸಂಚಲನ ಮಾಡುವ ಮೂಲಕ ಡಿ.ಕೆ ಶಿವಕುಮಾರ್‌ಅವರ ವಿರುದ್ಧ ಸಿ.ಪಿ ಯೋಗೇಶ್ವರ್ ತೊಡೆ ತಟ್ಟಿದ್ದರು.

ಡಿ.ಕೆ ಶಿವಕುಮಾರ್ ಕ್ರಿಸ್ತ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ಮಾಡುತ್ತಿದ್ದಂತೆ, ಆರ್. ಅಶೋಕ್, ಡಿಸಿಎಂ ಅಶ್ವತ್ಥ ನಾರಾಯಣ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದು ದೊಡ್ಡ ವಿವಾದ ಸ್ವರೂಪ ಪಡೆಯುವ ಮುನ್ಸೂಚನೆ ಅರಿತಿದ್ದ ಸಿಎಂ ಯಡಿಯೂರಪ್ಪ, ಕ್ರಿಸ್ತ ಮೂರ್ತಿ ಸ್ಥಾಪನೆ ಬಗ್ಗೆ ಹೇಳಿಕೆ ಕೊಡುವುದು ಬೇಡ, ಅನಿವಾರ್ಯವಾದರೆ ಆಲೋಚನೆ ಮಾಡಿ ಮಾತನಾಡಿ ಎಂದ ಸಂದೇಶ ಕೊಟ್ಟಿದ್ದರು. ಆದರೂ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಸಂಘ ಪರಿವಾರವನ್ನು ಎಳೆದು ತಂದು ವಿವಾದಕ್ಕೆ ತುಪ್ಪ ಸುರಿದರು. ಈ ನಡೆ ಯಡಿಯೂರಪ್ಪ ಅವರ ಕಣ್ಣು ಕೆಂಪಾಗುವಂತೆ ಮಾಡಿತ್ತು ಎನ್ನಲಾಗಿದೆ. ಡಿ.ಕೆ ಶಿವಕುಮಾರ್ ಹಾಗು ಬಿಎಸ್‌ಯಡಿಯೂರಪ್ಪ, ರಾಜಕಾರಣ ಹೊರತುಪಡಿಸಿ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಹೀಗಿದ್ದರೂ ಡಿ.ಕೆ ಶಿವಕುಮಾರ್ ಮೇಲೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಕೈ ಹಾಕಿದ್ದರಿಂದಲೇ ಸಚಿವ ಸ್ಥಾನ ತಪ್ಪಿಹೋಯ್ತು. ಇದೀಗ ಆರ್‌ಎಸ್‌ಎಸ್ ನಾಯಕರ ಮೂಲಕವೇ ಸಿ.ಪಿ ಯೋಗೇಶ್ವರ್ ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ ಎನ್ನಲಾಗ್ತಿದೆ.