ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ತಮ್ಮ ನಿಜವಾದ ಆಟ ಆರಂಭಿಸಿದ್ದಾರೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ನಾನು ಜಾತ್ಯಾತೀತ ತತ್ವವನ್ನು ಪಾಲಿಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎನ್ನುತ್ತಲೇ ಒಕ್ಕಲಿಗರ ಪ್ರಾಬಲ್ಯವಿರುವ ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ತಮ್ಮ ಪ್ರಭಾವವನ್ನು ಒರೆಗೆ ಹಚ್ಚುವ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಿಂದಲೇ ಅವರು ತಮ್ಮ ರಾಜಕೀಯದ ಹೊಸ ಆಟಕ್ಕೆ ಚಾಲನೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ವಾಪಸಾಗುವಾಗ ಯಾವ ಮಟ್ಟದ ಸ್ವಾಗತ ಕಾರ್ಯಕರ್ತರು, ಬೆಂಬಲಿರು ಮತ್ತು ಒಕ್ಕಲಿಗ ಸಮುದಾಯದವರಿಂದ ಸಿಕ್ಕಿತೋ ಅದೇ ರೀತಿಯ ಬೆಂಬಲ ಮೈಸೂರು ಭಾಗದಲ್ಲೂ ಸಿಕ್ಕಿದೆ. ಈ ಬೆಂಬಲ ಶಿವಕುಮಾರ್ ಅವರ ವೇಗವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬುದು ಮೈಸೂರಿನಲ್ಲಿ ಅವರು ಮಾತನಾಡಿದ ಶೈಲಿಯೇ ಹೇಳುತ್ತದೆ. ಅಷ್ಟೇ ಅಲ್ಲ, ಬಿಜೆಪಿ ಸೇರಿದಂತೆ ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡುತ್ತಾ ತಾವು ಜೈಲು ಸೇರಿದ ಬಳಿಕ ನಡೆದ ಪ್ರತಿಯೊಂದು ವಿದ್ಯಮಾನಗಳಿಗೂ ರಾಜಕೀಯ ತಿರುಗೇಟು ನೀಡುವ ಮಾತನಾಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಓಡಾಡುತ್ತಿರುವ ಶಿವಕುಮಾರ್ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕರ್ತರ ಸಭೆಗಳಲ್ಲೂ ಪಾಲ್ಗೊಂಡಿದ್ದಾರೆ. ಈ ವೇಳೆ ಅವರಿಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತ, ಅದಕ್ಕೆ ಮಾಡಿಕೊಂಡಿರುವ ಸಿದ್ಧತೆಗಳು ಮುಂದಿನ ದಿನಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಈ ಎರಡೂ ಜಿಲ್ಲೆಗಳಲ್ಲಿ ತಾವೊಬ್ಬ ಸಮುದಾಯದ ನಾಯಕನಾಗಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನೂ ನೀಡಿದ್ದಾರೆ.
ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಮತ್ತು ಅದನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಗುರುವಾರ ಸಭೆ ನಡೆಸಿದ ವೇಳೆ ಸಿದ್ದರಾಮಯ್ಯ ಅವರಿಗೇ ಟಾಂಗ್ ನೀಡುವ ಪ್ರಯತ್ನವಾಗಿತ್ತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ಸಚಿವರಾಗಿದ್ದ ತನ್ವೀರ್ ಸೇಠ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಎಂದು ಘೋಷಿಸಿಯೇ ಬಿಟ್ಟರು. ಆದರೆ, ಇದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ತಂದೆಯ ಪರವಾಗಿ ಮಾತನಾಡಿದರು. ನೀವು ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡುತ್ತೀರಿ ಎಂದಾಗಿದ್ದರೆ ನಾನು ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸುತ್ತಿದ್ದೆ ಎನ್ನುವ ಮೂಲಕ ಶಿವಕುಮಾರ್ ಅವರೇ ಈ ಎಲ್ಲಕ್ಕೂ ತೇಪೆ ಹಚ್ಚುವ ಕೆಲಸ ಮಾಡಿದರು.
ಆದರೆ, ಅವರು ಹೇಳಿದ ಚಕ್ರ ತಿರುಗಿಸುವುದು ಹೇಗೆ ಎಂಬುದು ಗೊತ್ತಿದೆ. ತಿರುಗಿಸಿ ತೋರಿಸುತ್ತೇನೆ. ಬೆಳಕಿದ್ದರೆ ಮಾತ್ರ ನಮ್ಮ ನೆರಳು ನಮ್ಮ ಬಳಿ ಇರುತ್ತದೆ. ಇದನ್ನು ಬಿಜೆಪಿ ಸ್ನೇಹಿತರು ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂಬ ಮಾತುಗಳ ಮರ್ಮವೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಷ್ಟೆ. ಏಕೆಂದರೆ, ಶಿವಕುಮಾರ್ ಅವರ ಪ್ರತಿ ಮಾತೂ ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡುವಂತಹದ್ದಾಗಿರುತ್ತದೆ. ಹೀಗಾಗಿ ಅವರ ಈ ಮಾತು ಬಿಜೆಪಿಯವರಿಗೆ ಮಾತ್ರವಲ್ಲ, ತಮ್ಮದೇ ಪಕ್ಷದಲ್ಲಿರುವವರಿಗೂ ಅನ್ವಯವಾಗುತ್ತದೆ ಎಂಬುದು ಸ್ಪಷ್ಟ. ಅದರಲ್ಲೂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಈ ಮಾತು ಹೇಳಿದ್ದಾರೆ ಎಂದರೆ ಸಹಜವಾಗಿಯೇ ಅದು ಸಿದ್ದರಾಮಯ್ಯ ಅವರಿಗೂ ಅನ್ವಯವಾಗುತ್ತದೆ.
ನಾನು ಮರವಾಗಿ ಬೆಳೆದಿದ್ದೇನೆ. ಈ ಮರದ ನೆರಳು ಎಲ್ಲರಿಗೂ ಸಿಗಬೇಕು ಎನ್ನುವ ಮೂಲಕ ಅವರು ಮುಂದಿನ ದಿನಗಳಲ್ಲಿ ನಿಮ್ಮಲ್ಲರ ನಾಯನಾಗುತ್ತೇನೆ ಎಂಬ ಅರ್ಥವನ್ನೂ ಸಾರಿದ್ದಾರೆ. ಅಂದರೆ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿರುವುದು. ಆದರೆ, ಮುಂದಿನ ದಿನಗಳಲ್ಲಿ ಇಲ್ಲಿ ನಾನಿರುತ್ತೇನೆ. ನಿಮ್ಮ ಆಟ ನಡೆಯುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನೂ ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ರವಾನಿಸಿದ್ದಾರೆ.
ವಿಶೇಷವೆಂದರೆ, ಡಿ. ಕೆ. ಶಿವಕುಮಾರ್ ಪಕ್ಷಾತೀತವಾಗಿ ಸಮುದಾಯದ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಿಮಾನ ನಿಲ್ದಾಣದಲ್ಲೇ ಶಿವಕುಮಾರ್ ಅವರನ್ನು ಬರಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಶಿವಕುಮಾರ್ ಅವರ ರಾಜಕೀಯ ಗುರು, ಬಿಜೆಪಿಯ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದರು. ಇದೀಗ ಮೈಸೂರಿನಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಜೆಡಿಎಸ್ ಮಾಜಿ ಸಚಿವರಾದ ಜಿ. ಟಿ. ದೇವೇಗೌಡ, ಡಿ. ಸಿ. ತಮ್ಮಣ್ಣ, ಸಾ. ರ. ಮಹೇಶ್ ಅವರನ್ನೂ ಜತೆ ಸೇರಿಸಿಕೊಂಡಿದ್ದಾರೆ, ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕರೆನಿಸಿಕೊಂಡಿರುವ ಎಲ್ಲಾ ಪ್ರಮುಖರ ಜತೆಗೂ ಉತ್ತಮ ಸಂಬಂಧವಿದ್ದು, ಮುಂದಿನ ದಿನಗಳಲ್ಲಿ ಅವರ ಸ್ಥಾನದಲ್ಲಿ ನಾನಿರುತ್ತೇನೆ ಎಂಬ ಸಂದೇಶವನ್ನು ನೀಡಿದ್ದಾರೆ.
ಇನ್ನು ಸ್ವಾಗತದ ವೇಳೆ ಬೆಂಬಲಿಗರು, ಅಭಿಮಾನಿಗಳು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸೇಬು ಹಣ್ಣಿನ ಹಾರ, ಹೂವಿನ ಹಾರ, ಹೂಗುಚ್ಛಗಳನ್ನು ನೀಡಿದ್ದಾರೆ. ಅಂದರೆ, ಸ್ವಾಗತಕ್ಕೆ ಪೂರ್ವಭಾವಿ ಸಿದ್ಧತೆ ಆಗಿರುವುದು ಸ್ಪಷ್ಟ. ಶಿವಕುಮಾರ್ ಅವರಿಗೆ ಗೊತ್ತಿದ್ದೋ ಅಥವಾ ಅವರೇ ವ್ಯವಸ್ಥೆ ಮಾಡಿಸಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ, ಈ ರೀತಿ ಲಕ್ಷಾಂತರ ರೂ. ವೆಚ್ಚ ಮಾಡಬೇಕಾದರೆ ಅದರ ಹಿಂದೆ ಇರುವ ರಾಜಕೀಯ ಉದ್ದೇಶ ಎಲ್ಲರಿಗೂ ಗೊತ್ತಾಗುತ್ತದೆ.
ಒಟ್ಟಿನಲ್ಲಿ ಕಳೆದೆರಡು ದಿನಗಳಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಶಿವಕುಮಾರ್ ಅವರು ಓಡಾಡಿದ ರೀತಿ, ಆಡಿದ ಮಾತುಗಳು, ಅವರ ವರಸೆಗಳು ರಾಜಕೀಯವಾಗಿ ಆ ಭಾಗದಲ್ಲಿ ಅವರು ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ದೇವೇಗೌಡರ ಕುಟುಂಬಕ್ಕೆ ಸೆಡ್ಡು
ಡಿ. ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಂತೆ ಕಾಣಿಸುತ್ತಿದೆಯಾದರೂ ಮಂಡ್ಯ ಮೈಸೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಗೌಡರ ಕುಟುಂಬಕ್ಕೆ ಸೆಡ್ಡುಹೊಡೆದು ಬೆಳೆಯುವುದಕ್ಕೆ ಹಿಂದೇಟು ಹಾಕುವುದಿಲ್ಲ. ಮೈತ್ರಿ ಸರ್ಕಾರ ರಚನೆ ಹೊರತಾಗಿ ದೇವೇಗೌಡರ ಕುಟುಂಬದೊಂದಿಗೆ ಹೋರಾಡಿಯೇ ಶಿವಕುಮಾರ್ ಈ ಮಟ್ಟಕ್ಕೆ ಬೆಳೆದವರು. ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾದಗಲೆಲ್ಲಾ ಸರ್ಕಾರದ ಜತೆ ಗಟ್ಟಿಯಾಗಿ ನಿಂತು ಸಮುದಾಯದವರ ರಕ್ಷಣೆಗೆ ನಾನಿದ್ದೇನೆ ಎಂದು ತೋರಿಸಿದ್ದರು. ಸಹಜವಾಗಿಯೇ ಇದು ಒಕ್ಕಲಿಗ ಸಮುದಾಯದಲ್ಲಿ ಶಿವಕುಮಾರ್ ಪರ ಒಲವು ಹೆಚ್ಚುವಂತೆ ಮಾಡಿತ್ತು. ಇದೀಗ ಮೈಸೂರು ಭಾಗದಲ್ಲಿ ಅವರಿಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತದ ಹಿಂದೆ ಈ ಒಲವು ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೌಡರ ಕುಟುಂಬಕ್ಕೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಪೆಟ್ಟು ಬೀಳುವುದು ಖಚಿತ.