ಒಂದು ಕಡೆ ಕರೋನಾ ಸೋಂಕು ರಾಕೆಟ್ ವೇಗದಲ್ಲಿ ಹಬ್ಬುತ್ತಿದ್ದು, ಜಾಗತಿಕ ಮಟ್ಟದಲ್ಲಿ ತೀರಾ ಕನಿಷ್ಟ ಮಟ್ಟದ ಪರೀಕ್ಷಾ ಪ್ರಮಾಣದಲ್ಲೇ ಭಾರತ ಮೂರನೇ ಅತಿ ಹೆಚ್ಚು ಪ್ರಕರಣಗಳು ದಾಖಲಾದ ದೇಶವಾಗಿ ಹೊರಹೊಮ್ಮಿದೆ. ಮತ್ತೊಂದು ಕಡೆ ಸೋಂಕು ಹರಡುವಿಕೆ ತಡೆಯುವಲ್ಲಿ ಪ್ರಮುಖ ಸಾಧನಗಳಾದ ಸ್ಯಾನಿಟೈಸರ್, ಮಾಸ್ಕ್ ಮುಂತಾದವುಗಳನ್ನು ಸದ್ದಿಲ್ಲದೆ ಅಗತಯ್ ವಸ್ತು ಪಟ್ಟಿಯಿಂದ ತೆಗೆದು ಮುಕ್ತ ಮಾರಾಟ ಮತ್ತು ದರಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕರೋನಾ ಸೋಂಕಿನ ಆರಂಭದಲ್ಲಿ; ಲಾಕ್ ಡೌನ್ ಹೇರಿಕೆಗೆ ಮುಂಚೆ, ಮಾ 13ರಂದೇ ಮಾಸ್ಕ್(2 ಮತ್ತು 3 ಪದರು ಸರ್ಜಿಕಲ್ ಮಾಸ್ಕ್ ಮತ್ತು ಎನ್ 95 ಮಾಸ್ಕ್), ಹ್ಯಾಂಡ್ ಸ್ಯಾನಿಟೈಸರುಗಳನ್ನು ಅಗತ್ಯ ವಸ್ತು ಪಟ್ಟಿಗೆ ಸೇರಿಸಿ ಅವುಗಳ ಅನಗತ್ಯ ದಾಸ್ತಾನು, ಕೃತಕ ಅಭಾವ ಸೃಷ್ಟಿ, ದುಬಾರಿ ಬೆಲೆಗೆ ಮಾರಾಟ ಮುಂತಾದ ಕಾಳಸಂತೆಯ ದಂಧೆಗಳಿಗೆ ಕಡಿವಾಣ ಹಾಕಿದ್ದ ಸರ್ಕಾರ, ಇದೀಗ ಸೋಂಕು ಭೀಕರ ಸ್ವರೂಪ ಪಡೆದಿರುವಾಗ, ಅಂತಹ ಸುರಕ್ಷಾ ಕ್ರಮಗಳ ಅಗತ್ಯ ಹಿಂದಿಗಿಂತ ಹೆಚ್ಚಿರುವಾಗ ಕೇಂದ್ರ ಬಿಜೆಪಿ ಸರ್ಕಾರ ಏಕಾಏಕಿ ಕಳೆದ ಮಂಗಳವಾರ ಈ ಸುರಕ್ಷಾ ಸಾಧನಗಳನ್ನು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.
ದೇಶದಲ್ಲಿ ಕರೋನಾ ಆರಂಭದಲ್ಲಿ ಈ ವಸ್ತುಗಳ ಲಭ್ಯತೆ ಕಡಿಮೆ ಇತ್ತು. ಹಾಗಾಗಿ ನೂರು ದಿನಗಳ ಅವಧಿಗೆ ಅವುಗಳನ್ನು ಅಗತ್ಯ ವಸ್ತುಗಳೆಂದು ಘೋಷಿಸುವ ಮೂಲಕ ಅವುಗಳ ಕಾಳಸಂತೆಗೆ ಕಡಿವಾಣ ಹಾಕಲಾಗಿತ್ತು. ಆದರೆ, ಈಗ ದೇಶದಲ್ಲಅಗತ್ಯಕ್ಕೆ ತಕ್ಕಷ್ಟು ಲಭ್ಯ ಇವೆ. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಅಲ್ಲಿನ ಲಭ್ಯತೆಯ ಮಾಹಿತಿ ಪಡೆದು, ಇದೀಗ ಆ ವಸ್ತುಗಳನ್ನು ಅಗತ್ಯವಸ್ತು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಲೀನಾ ನಂದನ್ ಹೇಳಿದ್ದಾರೆ.
Also Read: ದುಡಿಯುವ ಕೈಗಳ ಉದ್ಯೋಗ ಕಸಿದ ಕರೋನಾ ಸಂಕಷ್ಟದ ಹೊತ್ತಲ್ಲಿ ಕಾರ್ಮಿಕ ದಿನ
ಇಡೀ ದೇಶದಲ್ಲಿ ಮಾರಣಾಂತಿಕ ಕರೋನಾ ಸಮುದಾಯದ ಸೋಂಕಾಗಿ ಹರಡುತ್ತಿದ್ದು, ಅನಿರೀಕ್ಷಿತ ಪ್ರಮಾಣದಲ್ಲಿ ಹರಡುತ್ತಿದೆ. ಇಂತಹ ಹೊತ್ತಿನಲ್ಲಿ ಸೋಂಕಿನಿಂದ ಜನರನ್ನು ರಕ್ಷಿಸುವ ತೀರಾ ಅಗತ್ಯವಸ್ತುಗಳಾದ ಮಾಸ್ಕ್ ಮತ್ತು ಸ್ಯಾನಿಟೈಸ್ ಉತ್ಪನ್ನಗಳನ್ನು ಹೀಗೆ ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡುವುದು ಖಂಡಿತವಾಗಿಯೂ ಅವುಗಳ ದಿಢೀರ್ ದರ ಏರಿಕೆ ಮತ್ತು ಕಾಳಸಂತೆಯ ದಂಧೆಗೆ ಅವಕಾಶ ನೀಡಲಿದೆ. ಅಂತಹ ಬೆಳವಣಿಗೆ ಅಂತಿಮವಾಗಿ ಸೋಂಕು ನಿಯಂತ್ರಣದ ಮಹತ್ತರ ಉದ್ದೇಶವನ್ನೇ ಬುಡಮೇಲು ಮಾಡಲಿದೆ ಮತ್ತು ದುಬಾರಿ ಬೆಲೆಯ ಕಾರಣ ಕೊಳ್ಳಲು ಹಿಂಜರಿಯುವ ಜನಸಾಮಾನ್ಯರು ಸೋಂಕಿನ ಬಾಯಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂಬ ಸಂಗತಿಗಳ ಅರಿವಿದ್ದರೂ ಕೇಂದ್ರ ಬಿಜೆಪಿಯ ಈ ನಿರ್ಧಾರ, ಸಂತೆಯಲ್ಲಿ ಗಂಟುಗಳ್ಳತನದ ವರಸೆಯಲ್ಲದೆ ಬೇರಲ್ಲ.

ಹಾಗೆ ನೋಡಿದರೆ, ವಿಶ್ವಸಂಸ್ಥೆಯಿಂದ ಹಿಡಿದು ವಿವಿಧ ಸಾಂಕ್ರಾಮಿಕ ರೋಗ ತಜ್ಞರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸೇರಿದಂತೆ ರೋಗದ ಕುರಿತ ಮುನ್ನೆಚ್ಚರಿಕೆಯ ಸಲಹೆ ನೀಡುವ, ಮಾರ್ಗದರ್ಶಿ ಹೊರಡಿಸಿದ ಎಲ್ಲರೂ ಹೇಳಿರುವುದು ಸ್ಯಾನಿಟೈಸರ್ ಬಳಸಿ ಆಗಾಗ ಕೈತೊಳೆಯುವುದು ಮತ್ತು ಮಾಸ್ಕ್ ಬಳಕೆ ಹಾಗೂ ಭೌತಿಕ ಅಂತರ ಕಾಯ್ದುಕೊಳ್ಳುವುದೇ ಮುಖ್ಯವಾಗಿ ಸೋಂಕಿನಿಂದ ದೂರ ಉಳಿಯುವ ಪರಿಣಾಮಕಾರಿ ಕ್ರಮ ಎಂದು ಹೇಳಿವೆ. ಅಷ್ಟಾಗಿಯೂ ವೈಜ್ಞಾನಿಕವಾಗಿ ಸಾಬೀತಾಗಿರುವ ಇಂತಹ ಕ್ರಮಗಳಿಗೆ ಬೆಂಬಲ ನೀಡುವುದಕ್ಕಿಂತ ‘ಗೋ ಕರೋನಾ ಗೋ’, ಸಗಣಿ- ಗಂಜಲ ಸ್ನಾನ, ಗಂಜಲ ಕುಡಿಯುವುದು, ಹೋಮ-ಹವನ, ದೀಪ, ಮೊಂಬತ್ತಿ ಹಚ್ಚುವುದು, ಚಪ್ಪಾಳೆ ತಟ್ಟುವುದು, ಶಂಖ-ಜಾಗಟೆ ಬಾರಿಸುವ ಮೂಲಕವೇ ಕೇವಲ 21 ದಿನದಲ್ಲಿ ಕರೋನಾ ವಿರುದ್ಧ ಗೆಲ್ಲುವುದು ಮುಂತಾದ ಹಾಸ್ಯಾಸ್ಪದ, ನಗೆಪಾಟಲಿನ ವರಸೆಗಳಲ್ಲೇ ಹೆಚ್ಚು ನಂಬಿಕೆ ಇಟ್ಟಿರುವ ಮೋದಿಯವರ ಸರ್ಕಾರ, ಆರಂಭದಿಂದಲೂ ತೆರಿಗೆ ಮತ್ತು ಮಾರಾಟದ ವಿಷಯದಲ್ಲಿ ಈ ಬಗ್ಗೆ ಜನವಿರೋಧಿ ಧೋರಣೆಯನ್ನೇ ತಳೆದಿದೆ.
ಸ್ಯಾನಿಟೈಸರ್ ಮತ್ತು ಮಾಸ್ಕುಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್ ಟಿ ತೆರಿಗೆಯನ್ನು ರದ್ದು ಮಾಡಬೇಕು. ಆ ಮೂಲಕ ಆ ಜೀವರಕ್ಷಕ ವಸ್ತುಗಳನ್ನು ತೆರಿಗೆಮುಕ್ತಗೊಳಿಸಿ ಕೋವಿಡ್ ಸೋಂಕು ಮತ್ತು ಆ ಕುರಿತ ಲಾಕ್ ಡೌನ್ ನಿಂದಾಗಿ ಆದ ಆರ್ಥಿಕ ದಿವಾಳಿಯ ಹೊತ್ತಲ್ಲಿ ಜನರಿಗೆ ಸರ್ಕಾರ ನೆರವಾಗಬೇಕು ಎಂಬ ಕೂಗು ಕೋವಿಡ್ ಸಾಂಕ್ರಾಮಿಕದ ಆರಂಭದ ದಿನಗಳಿಂದಲೇ ಕೇಳಿಬರುತ್ತಲೇ ಇದೆ. ಲಾಕ್ ಡೌನ್ ಹೇರಿಕೆಯ ದಿನಗಳಿಂದಲೂ ಈ ಸರಕುಗಳು ಉತ್ಪಾದಕರು, ಮಾರಾಟಗಾರರು, ವೈದ್ಯಕೀಯ ಮತ್ತು ಆರೋಗ್ಯ ವಲಯದ ಪರಿಣತರು ಮತ್ತು ಸಾರ್ವಜನಿಕರು ಕೂಡ ಈ ಜೀವರಕ್ಷಕ ಸರಕುಗಳನ್ನು ತೆರಿಗೆಮುಕ್ತಗೊಳಿಸಿ, ಸಂಕಷ್ಟದ ಹೊತ್ತಲ್ಲಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ.
Also Read: ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಮೋದಿ ಸರ್ಕಾರ
ಈ ನಡುವೆ ಏಪ್ರಿಲ್ ಮೊದಲ ವಾರದಲ್ಲಿ ದೆಹಲಿ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಹೈಕೋರ್ಟುಗಳಲ್ಲೂ ಇದೇ ಬೇಡಿಕೆಯ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ನಂತರ ಸುಪ್ರೀಂಕೋರ್ಟಿನಲ್ಲೂ ಪ್ರಕರಣ ದಾಖಲಾಗಿತ್ತು. ಆದರೆ, ಎಲ್ಲಾ ನ್ಯಾಯಾಲಯಗಳು ಅಂತಹ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದವು! ಆ ಪೈಕಿ ಕೆಲವು ಪ್ರಕರಣಗಳನ್ನು ಅರ್ಜಿದಾರರೇ ಅಂತಿಮ ಹಂತದಲ್ಲಿ ವಾಪಸು ಪಡೆದರೆ, ಮತ್ತೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಎಂಬ ಹಿನ್ನೆಲೆಯಲ್ಲಿ ತಳ್ಳಿಹಾಕಿದ್ದವು.
ವಾಸ್ತವವಾಗಿ ಜನ ಮತ್ತು ವಿವಿಧ ವೃತ್ತಿಪರರು ಸಂಪೂರ್ಣ ಜಿಎಸ್ ಟಿ ರದ್ದು ಮಾಡುವಂತೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದರೆ, ಮೋದಿಯವರ ಸರ್ಕಾರ ಸಂಪೂರ್ಣ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿತ್ತು! ಏಪ್ರಿಲ್ ವರೆಗೆ ಶೇ.12ರಷ್ಟಿದ್ದ ಸ್ಯಾನಿಟೈಸರ್ ಮೇಲಿನ ಜಿಎಸ್ ಟಿ ತೆರಿಗೆ ದರವನ್ನು ಶೇ.18ಕ್ಕೆ ಏರಿಸಿತ್ತು! ಹಾಗೇ ಮಾಸ್ಕ್ ಗಳ ಮೇಲೆ ಕೂಡ ಶೇ.5ರಿಂದ ಶೇ.12ಕ್ಕೆ ತೆರಿಗೆ ಏರಿಕೆ ಮಾಡಲಾಯಿತು( ಹತ್ತಿಬಟ್ಟೆಯ ಹೊರತುಪಡಿಸಿ ಇತರೆ ಮಾಸ್ಕ್ ಮೇಲೆ)! ಆವರೆಗೆ ಸ್ಯಾನಿಟೈಸರನ್ನು ‘ಮೆಡಿಕ್ಯಾಮೆಂಟ್ಸ್’ ಸರಕು ವರ್ಗದಡಿ ಪರಿಗಣಿಸಿ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದರೆ, ಒಮ್ಮೆ ಕರೋನಾ ಸೋಂಕು ಉಲ್ಬಣಿಸಿದ ಬಳಿಕ ಸ್ಯಾನಿಟೈನಸರುಗಳಿಗೆ ಭಾರೀ ಬೇಡಿಕೆ ಕುದುರುತ್ತಿದ್ದಂತೆ ಆದಾಯದ ಮೂಲ ಎಂದು ಭಾವಿಸಿದ ಸರ್ಕಾರ ಅದನ್ನು ದಿಢೀರನೇ ‘ಡಿಸ್ ಇನ್ಫೆಕ್ಟಂಟ್(ಸೋಂಕುನಿವಾರಕ)’ ಸರಕು ವರ್ಗಕ್ಕೆ ಸೇರಿಸಿ ಶೇ.18ರಷ್ಟು ತೆರಿಗೆ ಹೇರಿತು. ಕ್ಷಾಮದ ಹೊತ್ತಲ್ಲಿ ಜನರ ಮೇಲೆ ತಲೆ ಕಂದಾಯ ಹೇರುವ ಈ ವರಸೆಗೆ ಚರಿತ್ರೆಯಲ್ಲಿ ಹಲವು ನಿದರ್ಶನಗಳಿರಬಹುದು. ಆದರೆ ,ಖಂಡಿತವಾಗಿಯೂ ಅಚ್ಛೇದಿನದ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಮೋದಿಯವರಿಂದ ಇಂತಹ ಜನದ್ರೋಹಿ ನಡೆಯನ್ನು ದೇಶದ ಜನಸಾಮಾನ್ಯರು ನಿರೀಕ್ಷಿಸಿರಲಿಲ್ಲ!
ಹಾಗೆ ನೋಡಿದರೆ, ಕೋವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಮೋದಿಯವರ ಸರ್ಕಾರ ಈ ಸಂಕಷ್ಟವನ್ನು ವಿಪತ್ತಿನ ಸಂದರ್ಭವಾಗಿ ನೋಡುವ ಬದಲು, ತನ್ನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಅಜೆಂಡಾಗಳನ್ನು ಜನರ ಮೇಲೆ ಹೇರುವ ಅವಕಾಶವಾಗಿ ಬಳಸಿಕೊಂಡಿದ್ದೇ ಹೆಚ್ಚು. ಅದಕ್ಕೆ ಹಲವು ಉದಾಹರಣೆಗಳು ಕಣ್ಣ ಮುಂದಿವೆ.
Also Read: ಸಂಕಷ್ಟದ ಹೊತ್ತಲ್ಲಿ ಮೋದಿಯ ಖಾಸಗೀಕರಣ ಸಮೃದ್ಧ ಕೊಯಿಲು!
ಸ್ಯಾನಿಟೈಸರ್ ಮತ್ತು ಹ್ಯಾಂಡ್ವಾಷ್ ಮೇಲೆ ಶೇ.12ರಿಂದ ಶೇ.18ಕ್ಕೆ ಜಿಎಸ್ ಟಿ ತೆರಿಗೆ ಹೆಚ್ಚಳ ಮಾಡಿ ಬಡವರು ಮತ್ತು ಜನಸಾಮಾನ್ಯರ ಸಂಕಷ್ಟದ ಹೊತ್ತಲ್ಲಿ ಅವರ ಹರಿದ ಜೇಬಿನ ಪಿಕ್ ಪಾಕೆಟ್ ಮಾಡಿದ ಮೋದಿಯವರ ಸರ್ಕಾರ, ಅಷ್ಟಕ್ಕೇ ಸುಮ್ಮನಾಗಲಿಲ್ಲ. ಜಿಎಸ್ ಟಿ ಅಥಾರಿಟಿಯ ಮೂಲಕ ಸೋಂಕು ತಡೆ ಮತ್ತು ಚಿಕಿತ್ಸೆಯಲ್ಲಿ ಬಳಕೆಯಾಗುವ ಟಿಷ್ಯೂ ಪೇಪರಿನಿಂದ ವೈರಾಣು ಪರೀಕ್ಷಾ ಕಿಟ್ ವರೆಗೆ ದುಬಾರಿ ತೆರಿಗೆ ವಿಧಿಸಿತು. ಹೊಸ ದರದ ಪ್ರಕಾರ ಟಿಷ್ಯೂ ಪೇಪರ್ ಮತ್ತು ನ್ಯಾಪ್ಕಿನ್, ಆಸ್ಪತ್ರೆ, ಕ್ವಾರಂಟೈನ್ ಸೆಂಟರ್ ಮುಂತಾದ ಕಡೆ ಬಳಕೆಯಾಗುವ ವಿವಿಧ ಸೋಂಕು ನಿವಾರಕಗಳು, ಕೈಗವಸುಗಳು, ಫೇಸ್ ಶೀಲ್ಡುಗಳು, ದೇಹದ ಉಷ್ಣಾಂಶ ಅಳೆಯುವ ಸಾಧನಗಳು, ಪಿಪಿಇ ಕಿಟ್ ಗಳ ಮೇಲೆ ಶೇ.18ರಷ್ಟು ತೆರಿಗೆ ಹೇರಲಾಯಿತು. ಜಿಎಸ್ ಟಿಯಲ್ಲಿ ಇರುವ ಅತ್ಯಧಿಕ ತೆರಿಗೆ ದರ ಹೇರುವ ಮೂಲಕ ಆ ವಸ್ತುಗಳನ್ನು ದುಬಾರಿ ಮಾಡಿದ ಸರ್ಕಾರ ಆ ಮೂಲಕ ಆದಾಯ ಹೆಚ್ಚಿಸಿಕೊಂಡಿತು.
ವಿಪರ್ಯಾಸದ ಸಂಗತಿ ಎಂದರೆ ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಕನಸು ಬಿತ್ತುತ್ತಿರುವ, ಅಚ್ಛೇದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸದ ಜಪ ಮಾಡುತ್ತಿರುವ ಮೋದಿಯವರ ಸರ್ಕಾರ, ತನ್ನದೇ ಭಾರತಮಾತೆಯ ಮಕ್ಕಳು ಜೀವ ಕಳೆದುಕೊಳ್ಳುವ ಭಯದಲ್ಲಿ, ಬದುಕಿನ ಆಸರೆಯಾದ ಉದ್ಯೋಗ, ಆದಾಯ ಕಳೆದುಕೊಂಡ ಸಂಕಷ್ಟದಲ್ಲಿರುವಾಗ ಹೀಗೆ ಭಾರೀ ತೆರಿಗೆ ಹೆಚ್ಚಳದ ಬರೆ ಕೊಡುತ್ತಿದ್ದರೆ, ಅತ್ತ ತೀರಾ ಮನುಷ್ಯ ವಾಸಕ್ಕೇ ಯೋಗ್ಯವಲ್ಲ ಎಂದು ಅದೇ ಮೋದಿಯವರ ಅಭಿಮಾನಿಗಳು, ಭಕ್ತಪಡೆಗಳು ಮತ್ತು ಸ್ವತಃ ಅವರ ಬಿಜೆಪಿ ಪಕ್ಷ ಬಣ್ಣಿಸುವ ಪಾಕಿಸ್ತಾನದಲ್ಲಿ ಕೋವಿಡ್ ಸಂಬಂಧಿತ ಎಲ್ಲಾ ವೈದ್ಯಕೀಯ ಮತ್ತು ಜೀವರಕ್ಷಕ ಸರಕುಗಳ ಮೇಲೆ ಸಂಪೂರ್ಣ ತೆರಿಗೆ ರದ್ದತಿ ಘೋಷಿಸಲಾಗಿದೆ!
Also Read: ವಿಜ್ಞಾನ, ವಾಸ್ತವಾಂಶಗಳ ಮೇಲೆ ಮತಪೆಟ್ಟಿಗೆ ರಾಜಕಾರಣದ ಸವಾರಿ!
ಪಾಕಿಸ್ತಾನದ ಪ್ರಮುಖ ದೈನಿಕ ‘ಡಾನ್’ನ ಮಾರ್ಚ್ 21ರ ವರದಿಯ ಪ್ರಕಾರ, ಮಾಸ್ಕ್, ಕೈಗವಸು, ಗಾಗಲ್ಸ್, ಮುಸುಕು ಸೇರಿದಂತೆ ಪಿಪಿಇ ಕಿಟ್ಗಳು ಸೇರಿದಂತೆ 60ಕ್ಕೂ ಹೆಚ್ಚು ವೈದ್ಯಕೀಯ ಬಳಕೆಯ ಮತ್ತು ಸುರಕ್ಷಾ ಸಾಧನಗಳ ಮೇಲಿನ ಕಸ್ಟಮ್ಸ್ ತೆರಿಗೆ, ರೆಗ್ಯುಲೇಟರಿ ತೆರಿಗೆ, ಮಾರಾಟ ತೆರಿಗೆ, ಸಂಗ್ರಹ ತೆರಿಗೆ ಸೇರಿದಂತೆ ಎಲ್ಲಾ ಬಗೆಯ ತೆರಿಗೆಯನ್ನು ತೆಗೆದುಹಾಕಿ, ಸಂಪೂರ್ಣ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ! ಜಾಗತಿಕವಾಗಿ, ಮತ್ತು ನೆರೆಹೊರೆಯ ರಾಷ್ಟ್ರಗಳ ಕೋವಿಡ್ ನಿರ್ಹವಣೆಗೆ ಮತ್ತು ಕರೋನಾ ಸಂಕಷ್ಟದ ಕಾಲದ ನಿರ್ವಹಣೆಗೆ ಹೋಲಿಸಿದರೆ ನಾವು ಎಲ್ಲಿದ್ದೀವಿ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.
ಭಕ್ತರ ಪ್ರಕಾರ ತೀರಾ ನಿಕೃಷ್ಟ, ತೀರಾ ಅಮಾನುಷ ಎಂದು ಪರಿಗಣಿಸಲಾಗುವ ದೇಶವೊಂದರಲ್ಲಿ, ಅಲ್ಲಿನ ತೀರಾ ದಿವಾಳಿಯಂಚಿನಲ್ಲಿರುವ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಜನಾರೋಗ್ಯದ ಉದ್ದೇಶದಿಂದ ಜೀವರಕ್ಷಕ ಸರಕುಗಳ ಮೇಲೆ ಸಂಪೂರ್ಣ ತೆರಿಗೆ ರದ್ದು ಮಾಡಲಾಗಿದೆ. ಆದರೆ, ಭಾರತದಲ್ಲಿ ಮಾತ್ರ, ಜನಾರೋಗ್ಯಕ್ಕಿಂತ, ಜನರ ಜೀವಕ್ಕಿಂತ ಸರ್ಕಾರದ ಬೊಕ್ಕಸವೇ ಮುಖ್ಯವಾಗಿ ಹೋಯಿತೆ? ಎಂಬುದು ಕಾಡುವ ಪ್ರಶ್ನೆ!