ನೆರೆ ರಾಜ್ಯ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ಲಾಸ್ಟಿಕ್ ತಯಾರಿಕಾ ಕಂಪೆನಿಯಿಂದ ವಿಷಾನಿಲ ಸೋರಿಕೆಯಾಗಿದ್ದು ಹಲವು ಸಾವು-ನೋವುಗಳು ಸಂಭವಿಸಿರುವ ಕುರಿತು ವರದಿಯಾಗಿದೆ. ಬೆಳಗ್ಗಿನ ಜಾವ ಸುಮಾರು 2.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಇಲ್ಲಿಯವರೆಗೆ ಆರು ವರ್ಷದ ಮಗು ಸಹಿತ ಸುಮಾರು ಎಂಟು ಜನರು ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಷ್ಟು ಮಾತ್ರವಲ್ಲದೇ, ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ.
LG Polymers, ಎಂಬ ಕಂಪೆನಿಯ ಪ್ಲಾಸ್ಟಿಕ್ ತಯಾರಕಾ ಘಟಕದಿಂದ ಸ್ಟೈರೀನ್ ಅನಿಲ (Styrene Gas) ಸೋರಿಕೆಯಾಗಿದ್ದು, ಲಾಕ್ಡೌನ್ ನಂತರ ಕಂಪೆನಿಯನ್ನು ಆರಂಭಿಸಲು ತಯಾರಿ ನಡೆಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಸ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 40 ದಿನಗಳಿಂದ ಈ ಕೈಗಾರಿಕಾ ಘಟಕವು ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿತ್ತು, ಆದರೆ, ಘಟಕದ ನಿರ್ವಹಣೆಗಾಗಿ ಕೆಲವೇ ಕೆಲವು ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಅತೀ ಹೆಚ್ಚು ಭಾಧಿತವಾಗಿರುವ ಹಳ್ಳಿಯೆಂದರೆ, ಘಟನಾ ಸ್ಥಳದಿಂದ ಸುಮಾರು ಒಂದೂವರೆ ಸುತ್ತಳತೆಯಲ್ಲಿರುವ ವೆಂಕಟಪುರಂ ಎಂಬ ಹಳ್ಳಿ. ಸಾವಿರಕ್ಕೂ ಹೆಚ್ಚು ಜನರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಅಕ್ಕಪಕ್ಕದ ಐದು ಹಳ್ಳಿಗಳಲ್ಲಿ ವಾಸವಾಗಿದ್ದವರನ್ನು ಕೂಡಾ ಭದ್ರತಾ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅನಿಲ ಸೋರಿಕೆಯಿಂದಾಗಿ ಕೈಗಾರಿಕಾ ಘಟಕದ ಅಕ್ಕಪಕ್ಕದಲ್ಲಿರುವ ಸುಮಾರು ಒಂಬತ್ತು ಹಳ್ಳಿಗಳಿಗೆ ತೊಂದರೆಯುಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“5000 ಟನ್ ಸಾಮರ್ಥ್ಯದ ಟ್ಯಾಂಕ್ಗಳಿಂದ ಅನಿಲ ಸೋರಿಕೆಯಾಗಿದೆ. ಲಾಕ್ಡೌನ್ನಿಂದಾಗಿ ಆ ಟ್ಯಾಂಕ್ಗಳನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಇದರಿಂದಾಗಿ, ಟ್ಯಾಂಕ್ಗಳ ಒಳಗೆ ರಸಾಯನಿಕ ಪ್ರಕ್ರಿಯೆ ಆರಂಭವಾಗಿ, ಉಷ್ಣಾಂಶ ಹೆಚ್ಚಾದ ಕಾರಣ ಅನಿಲ ಸೋರಿಕೆಯಾಗಿದೆ,” ಎಂದು ವಿಶಾಖಪಟ್ಟಣಂನ ಪಶ್ಚಿಮ ವಲಯದ ಎಸಿಪಿ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಘಟನೆಯಿಂದ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಆಸ್ಪತ್ರೆಗಳಿಗೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಭೇಟಿ ನೀಡಲಿದ್ದಾರೆ.