ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ತಮ್ಮ ಮತ್ತೊಂದು ‘ಕರೋನಾ ಭಾಷಣ’ದಲ್ಲಿ ಸಂಕಷ್ಟದಲ್ಲಿರುವ ಬಡವರ ನೆರವಿಗಾಗಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮುಂದಿನ ನವೆಂಬರ್ ವರೆಗೆ ವಿಸ್ತರಿಸುವುದಾಗಿಯೂ, ಅದರಿಂದಾಗಿ ಸುಮಾರು 80 ಕೋಟಿ ಬಡವರನ್ನು ಹಸಿವಿನಿಂದ ಪಾರು ಮಾಡಲಾಗುವುದೆಂದೂ ಹೇಳಿದ್ದಾರೆ.
ಈ ಹೇಳಿಕೆಯ ವಾಸ್ತವಿಕ ಅಂಕಿಅಂಶಗಳ ಕುರಿತ ಗೊಂದಲ, ಪ್ರಶ್ನೆಗಳೇನೇ ಇರಲಿ; ಸದ್ಯದ ಭಾರತದ ಕೋವಿಡ್-19 ಪ್ರಕರಣಗಳ ಆಘಾತಕಾರಿ ಪ್ರಮಾಣದ ಏರಿಕೆ ಮತ್ತು ಸೋಂಕನ್ನು ನಿಭಾಯಿಸುವಲ್ಲಿ ಈ ಕ್ಷಣದವರೆಗೆ ವೈಜ್ಞಾನಿಕವಾದ ಮತ್ತು ಕಾರ್ಯಸಾಧುವಾದ ಒಂದು ಕಾರ್ಯಯೋಜನೆಯನ್ನೇ ಹೊಂದಿಲ್ಲದ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಇದೊಂದು ಸಮಾಧಾನಕರ ಕ್ರಮ ಎಂಬುದರಲ್ಲಿ ಅನುಮಾನವಿಲ್ಲ.
ವೈರಾಣು ಸೋಂಕನ್ನು ತಡೆಯುವುದು, ಸೋಂಕಿತರನ್ನು ಗುರುತಿಸುವುದು ಮತ್ತು ಅಗತ್ಯವಿರುವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು ಮುಂತಾದ ಸಾಂಕ್ರಾಮಿಕ ರೋಗವೊಂದನ್ನು ನಿಭಾಯಿಸುವ ವಿವಿಧ ಪರಿಣಾಮಕಾರಿ ಕ್ರಮಗಳಲ್ಲಿ ಯಾವುದರಲ್ಲೂ ಭಾರತ ಈವರೆಗೆ ಒಂದು ಯಶಸ್ವಿ ಮಾದರಿ ಎಂಬುದನ್ನು ಕಂಡುಕೊಂಡಿಲ್ಲ (ಕೇರಳ ಹೊರತುಪಡಿಸಿ!). ನೂರು ದಿನಗಳ ಭೀಕರ ಲಾಕ್ ಡೌನ್ ಕೂಡ ಸೋಂಕಿಗೆ ಕಡಿವಾಣ ಹಾಕುವಲ್ಲಿ ಹೀನಾಯವಾಗಿ ಸೋತು ಹೋಯಿತು! ದೇಶದಲ್ಲಿ ಮೊದಲ ಪ್ರಕರಣ ವರದಿಯಾಗಿ ಬರೋಬ್ಬರಿ ಆರು ತಿಂಗಳು ಗತಿಸಿದರೂ ಈವರೆಗೂ ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಹೊಂದಿಸುವುದು ಕೂಡ ನಮ್ಮ ಆಡಳಿತಗಳಿಗೆ ಸಾಧ್ಯವಾಗಿಲ್ಲ. ಕರೋನಾ ಮತ್ತು ಅದರ ಭಾಗವಾದ ಲಾಕ್ ಡೌನ್ ನಿಂದ ಆಗಿರುವ ಆರ್ಥಿಕ ನಷ್ಟವನ್ನೇ ದೊಡ್ಡದು ಮಾಡಿ, ಕರೋನಾ ನಿಯಂತ್ರಣಕ್ಕೆ ಹಣಕಾಸಿನ ಕೊರತೆ ಎಂದು ಸಾರ್ವಜನಿಕರಿಂದ ದೇಣಿಗೆ ಎತ್ತಿದ ಬಳಿಕವೂ ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್, ಪಿಪಿಇ ಕಿಟ್ ಗಳನ್ನು ಒದಗಿಸುವಲ್ಲಿ ಸರ್ಕಾರಗಳು ಸೋತಿವೆ. ಕೊನೆಗೆ ಜನರ ದೇಣಿಗೆ ಹಣದ ಲೆಕ್ಕ ಕೂಡ ಕೊಡಲಾಗದ ಮಟ್ಟಿನ ನಾಚಿಗೆಗೇಡಿನ ವರಸೆಗೆ ಇಳಿದಿವೆ.
ಇಂತಹ ಹೇಯ ಮತ್ತು ಅಮಾನುಷ ವ್ಯವಸ್ಥೆಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ, ಬದಲಾಗಿ ಸ್ಫೋಟಕ ಪ್ರಮಾಣದಲ್ಲಿ ಹೆಚ್ಚುತ್ತಿರುವ ಸೋಂಕಿನ ನಡುವೆ ಬಡವರು ದಿನದ ದುಡಿಮೆ ಇಲ್ಲದೆ ಬದುಕುಳಿಯುವುದೇ ದುಸ್ತರವಾಗಿದೆ. ಆ ಹಿನ್ನೆಲೆಯಲ್ಲಿ ಕನಿಷ್ಟ ಮುಂದಿನ ನಾಲ್ಕೈದು ತಿಂಗಳಾದರೂ ಅನ್ನವಿಲ್ಲದಿದ್ದರೆ ಗಂಜಿಯಾದರೂ ಕುಡಿಯಬಹುದಾದಷ್ಟು ಉಚಿತ ಅಕ್ಕಿಯೋ, ಗೋಧಿಯೋ ಸಿಕ್ಕರೆ ಅದು ನಿಜಕ್ಕೂ ಬದುಕಿನ ಭರವಸೆಯೇ!
ಆದರೆ, ಇದೇ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂತ್ರಸ್ತರ ಹಸಿವು ನೀಗಿಸಲು ಘೋಷಿಸಿದ ಈ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(ಪಿಎಂಜಿಕೆಎವೈ) ಕಳೆದ ಮೂರು ತಿಂಗಳಲ್ಲಿ ನಿಜವಾಗಿಯೂ ಫಲಾನುಭವಿಗಳ ಹಸಿವು ನೀಗಿಸಿದೆಯೇ ಎಂಬುದು ಪ್ರಶ್ನೆ.
ಯೋಜನೆಯ ಪ್ರಕಾರ, ಮೊದಲನೆಯದಾಗಿ ಪಡಿತರ ಚೀಟಿದಾರರಾಗಿರುವ ದೇಶದ 80 ಕೋಟಿ ಜನರಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಈಗಾಗಲೆ ನೀಡುತ್ತಿರುವ ಪಡಿತರದೊಂದಿಗೆ ಹೆಚ್ಚುವರಿಯಾಗಿ ಮಾಸಿಕ(ಪ್ರತಿ ವ್ಯಕ್ತಿಗೆ) 5 ಕೆಜಿ ಅಕ್ಕಿ ಅಥವಾ ಗೋಧಿ ನೀಡುವುದು ಮತ್ತು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟಂಬಕ್ಕೆ(ಸುಮಾರು 23 ಕೋಟಿ ) ಪ್ರತಿ ತಿಂಗಳಿಗೆ ಒಂದು ಕೆಜಿ ದ್ವಿದಳ ಧಾನ್ಯ ನೀಡುವುದು ಗುರಿ. ಮಾರ್ಚ್ ನಲ್ಲಿ ಮೊದಲ ಹಂತದ ಲಾಕ್ ಡೌನ್ ಘೋಷಣೆಯ ಮಾರನೇ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಈ ವಿಶೇಷ ಯೋಜನೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಿಗೆ ಸೀಮಿತವಾಗಿತ್ತು. ಆ ಬಳಿಕ ಮೇನಲ್ಲಿ ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಪ್ಯಾಕೇಜ್ ನಡಿ ಮೇ ಮತ್ತು ಜೂನ್ ಅವಧಿಗೆ ಕೂಡ 8 ಕೋಟಿ ವಲಸೆ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ ತಲಾ 5 ಕೆಜಿ ಆಹಾರ ಧಾನ್ಯ ಮತ್ತು 1.96 ಕೋಟಿ ವಲಸೆ ಕಾರ್ಮಿಕರ ಕುಟುಂಬಗಳಿಗೆ ತಿಂಗಳಿಗೆ ತಲಾ ಒಂದು ಕೆಜಿ ದ್ವಿದಳ ಧಾನ್ಯ ನೀಡುವುದಾಗಿ ಘೋಷಿಸಲಾಗಿತ್ತು.
ಆದರೆ, ಜೂನ್ 29ರಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ಗರೀಬ್ ಕಲ್ಯಾಣ್ ಅನ್ನ ಯೋಜನೆಯಾಗಲೀ, ಆತ್ಮನಿರ್ಭರ್ ಭಾರತ ಪ್ಯಾಕೇಜ್ ಆಹಾರ ಧಾನ್ಯವಾಗಲೀ ನಿಗದಿತ ಗುರಿ ತಲುಪಿಲ್ಲ ಮತ್ತು ನಿಜವಾಗಿಯೂ ಎಲ್ಲಾ ಫಲಾನುಭವಿಗಳ ಹಸಿವು ನೀಗುಸುವಲ್ಲಿ ಸಫಲವಾಗಿಲ್ಲ ಎಂಬುದನ್ನು ಅಂಕಿಅಂಶ ಸಹಿತ ಧೃಢಪಡಿಸಿದೆ.
80 ಕೋಟಿ ಪಿಎಂಜಿಕೆಎವೈ ಯೋಜನೆ ಫಲಾನುಭವಿಗಳ ಪೈಕಿ ಸುಮಾರು 23 ಕೋಟಿ ಮಂದಿಗೆ, ಜೂನ್ ತಿಂಗಳು ಮುಗಿದರೂ ಆ ಅವಧಿಯ ಹೆಚ್ಚುವರಿ ಐದು ಕೆಜಿ ಪಡಿತರ ತಲುಪಿಲ್ಲ. ಅಂದರೆ, ಉದ್ದೇಶಿತ ಫಲಾನುಭವಿಗಳ ಪೈಕಿ ಶೇ.25ರಷ್ಟು ಮಂದಿಗೆ ಯೋಜನೆಯ ಪ್ರಯೋಜನ ತಲುಪಿಲ್ಲ. ಹಾಗೆ ನೋಡಿದರೆ, ಈ ವ್ಯತ್ಯಾಸ ಹೊಸತೇನೂ ಅಲ್ಲ. ಈ ಹಿಂದೆಯೂ ಆಹಾರ ಭದ್ರತೆ ಕಾಯ್ದೆಯಡಿಯ ಪಡಿತರ ವಿತರಣೆಯಲ್ಲಿ ಕೂಡ ಹೀಗೆ ಯೋಜನೆಯ ಫಲಾನುಭವಿಗಳಲ್ಲಿ ಶೇ.20-30ರಷ್ಟು ಮಂದಿ ಪ್ರಯೋಜನ ಪಡೆಯದೇ ಹೊರಗುಳಿಯುವುದು ಮಾಮೂಲಿಯಾಗಿತ್ತು. ಪಿಎಂಜಿಕೆಎವೈ ಯೋಜನೆಯಡಿಯಲ್ಲಿ ಏಪ್ರಿಲ್, ಮೇ ಮತ್ತು ಜೂನ್ ಅವಧಿಗೆ ಗುರಿಪಡಿಸಲಾಗಿದ್ದ ಒಟ್ಟು 11.95 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯದ ಪೈಕಿ ಈವರೆಗೆ 10.19 ದಶಲಕ್ಷ ಮೆಟ್ರಿಕ್ ಟನ್ ಫಲಾನುಭವಿಗಳಿಗೆ ತಲುಪಿದ್ದು, ಇನ್ನೂ ಶೇ.15ರಷ್ಟು; ಅಂದರೆ 1.75 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಬಡವರ ಕೈಸೇರಿಲ್ಲ! ದ್ವಿದಳ ಧಾನ್ಯದ ವಿಷಯದಲ್ಲಿ ಕೂಡ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ. ನಿಗದಿತ ಗುರಿಯ ಶೇ.75ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದ್ದು, 1.96 ಕೋಟಿ ಕುಟುಂಬಗಳಿಗೆ ತಲುಪಬೇಕಾಗಿದ್ದ 5.87 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯದ ಪೈಕಿ ಫಲಾನುಭವಿಗಳಿಗೆ ತಲುಪಿರುವುದು ಕೇವಲ 4.4 ಲಕ್ಷ ಮೆಟ್ರಿನ್ ಟನ್ ಮಾತ್ರ!
ಇದು ಪಿಎಂಜಿಕೆಎವೈ ಕಥೆಯಾದರೆ; ಆತ್ಮನಿರ್ಭರ್ ಭಾರತ ಪ್ಯಾಕೇಜಿನಡಿ ಆಹಾರ ಧಾನ್ಯ ವಿತರಣೆಯದು ಇನ್ನೂ ದುರಂತಗಾಥೆ. ದೇಶದ ವಲಸೆ ಕಾರ್ಮಿಕರ ಹಸಿವು ನೀಗಿಸುವ ಉದ್ದೇಶದ ಈ ಯೋಜನೆಯಡಿ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ(ಆಹಾರ ಭದ್ರತಾ ಕಾಯ್ದೆ ಫಲಾನುಭವಿಗಳಲ್ಲಿ ಶೇ.10ರಷ್ಟು ಮಂದಿ) 8 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸುವ ಗುರಿ ಹೊಂದಲಾಗಿದ್ದರೆ, ವಾಸ್ತವವಾಗಿ ಯೋಜಿತ ಮೇ ಮತ್ತು ಜೂನ್ ಅವಧಿಯಲ್ಲಿ ವಿತರಿಸಿರುವುದು ಕೇವಲ 99 ಸಾವಿರ ಮೆಟ್ರಿಕನ್ ಟನ್ ಮಾತ್ರ! ಅಂದರೆ; ಯೋಜಿತ ಗುರಿಯ ಪೈಕಿ ಶೇ.12ರಷ್ಟು ಮಾತ್ರ ವಿರತರಣೆ ಮಾಡಲಾಗಿದೆ!
ಮೇನಲ್ಲಿ ಒಟ್ಟು 8 ಕೋಟಿ ಮಂದಿ ಫಲಾನುಭವಿಗಳ ಪೈಕಿ ಸುಮಾರು 1.20 ಕೋಟಿ ವಲಸೆ ಕಾರ್ಮಿಕರು ಮಾತ್ರ ಪ್ರಧಾನ ಮಂತ್ರಿಗಳ ಈ ಬಹುಪ್ರಚಾರಿತ ಯೋಜನೆಯಿಂದ ಹೊಟ್ಟೆ ತುಂಬಿಸಿಕೊಂಡಿದ್ದು, ಇನ್ನುಳಿದ 6.80 ಕೋಟಿ ವಲಸೆ ಕಾರ್ಮಿಕರ ಹಸಿವು ನೀಗಿಸುವಲ್ಲಿ ಈ ಯೋಜನೆ ಸಂಪೂರ್ಣ ಸೋತಿದೆ. ಜೂನ್ ಅವಧಿಯಲ್ಲಿ ಕೇವಲ 89 ಲಕ್ಷ ಮಂದಿ ಮಾತ್ರ ಪಡಿತರ ಪಡೆದಿದ್ದು, ಇನ್ನುಳಿದ 7.11 ಕೋಟಿ ಮಂದಿಗೆ ಈ ಯೋಜನೆ ತಲುಪಿಯೇ ಇಲ್ಲ!
ಪ್ರಮುಖವಾಗಿ ವಲಸೆ ಕಾರ್ಮಿಕರನ್ನು ಪತ್ತೆ ಮಾಡುವುದು ಮತ್ತು ಅವರನ್ನು ಯೋಜನೆ ವ್ಯಾಪ್ತಿಗೆ ತಂದು ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯ ವಿತರಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಆತ್ಮ ನಿರ್ಭರ್ ಭಾರತ ಪ್ಯಾಕೇಜ್ ನಡಿ ವಲಸೆ ಕಾರ್ಮಿಕರ ಹಸಿವು ನೀಗಿಸುವಲ್ಲಿ ಹಿನ್ನಡೆಯಾಗಿದೆ ಎಂಬುದು ಸರ್ಕಾರಿ ಮೂಲಗಳ ವಿವರಣೆ. ಆದರೆ, ಒಂದು ದೇಶ, ಒಂದು ಪಡಿತರ ಯೋಜನೆಯಡಿ ಯಾವುದೇ ಭಾಗದ ಕಾರ್ಮಿಕರು ಯಾವುದೇ ಪ್ರದೇಶದ ಪಡಿತರ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯುಬಹುದು ಎಂಬ ನಿಯಮ ಈಗಾಗಲೇ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಹಾಗಿದ್ದರೂ ಯಾಕೆ ಬರೋಬ್ಬರಿ ಶೇ.88ರಷ್ಟು ಮಂದಿ ಅರ್ಹ ಫಲಾನುಭವಿಗಳು ಪ್ರಯೋಜನ ಪಡೆಯಲಾಗಿಲ್ಲ ಎಂಬುದು ಪ್ರಶ್ನೆ.
ಆ ಹಿನ್ನೆಲೆಯಲ್ಲಿ ವ್ಯವಸ್ಥೆಯೊಳಗಿನ ಇಂತಹ ಲೋಪಗಳನ್ನು ಸರಿಪಡಿಸದೇ ಹೋದರೆ, ಆಹಾರ ಧಾನ್ಯ ವಿತರಣೆಯ ಯೋಜನೆಯನ್ನು ತಿಂಗಳುಗಟ್ಟಲೆ ವಿಸ್ತರಿಸುವುದರಲ್ಲಿ ಅಥವಾ ಪ್ರಮಾಣ ಹೆಚ್ಚಳದಿಂದ ನಿಜವಾಗಿಯೂ ಹಸಿದವರಿಗೆ ಅನ್ನ ಸಿಗುವುದೇ? ಪ್ರಧಾನಮಂತ್ರಿಗಳು ತಮ್ಮ ಕರೋನಾ ಭಾಷಣಕ್ಕೆ ಮುನ್ನ ಕನಿಷ್ಟ ಈಗಾಗಲೇ ಕಳೆದ ಮೂರು ತಿಂಗಳಲ್ಲಿ ಇಂತಹ ತಮ್ಮ ಕ್ರಮಗಳು ಎಷ್ಟು ಫಲಕೊಟ್ಟಿವೆ? ತಮ್ಮ ಆಡಳಿತ ವ್ಯವಸ್ಥೆ ಎಷ್ಟರಮಟ್ಟಿಗೆ ತಮ್ಮ ಮಾತುಗಳನ್ನು ಕಾರ್ಯಗತಗೊಳಿಸಿದೆ ಎಂಬುದನ್ನು ಪರಿಶೀಲಿಸಿ ಹೊಸ ಘೋಷಣೆ ಮಾಡಿದ್ದರೆ ಬಹುಶಃ ಈ ಪ್ರಶ್ನೆಗಳು ಏಳುತ್ತಿರಲಿಲ್ಲ.
ಆದರೆ, ಹೀನಾಯವಾಗಿ ಸೋತುಹೋದ, ದೇಶದ ಬಡವರು ಮತ್ತು ದುರ್ಬಲ ವರ್ಗಗಳನ್ನು ಹೇಯ ಸಂಕಷ್ಟಕ್ಕೆ ನೂಕಿದ ಲಾಕ್ ಡೌನ್ ನನ್ನೇ ಮಹತ್ತರ ಯಶಸ್ಸು ಎಂಬಂತೆ ಬಿಂಬಿಸುವ ಪ್ರಧಾನಿಗಳು, ಇಂತಹ ಆತ್ಮಾವಲೋಕನದ ಪ್ರಯತ್ನ ಮಾಡುತ್ತಾರೆ ಎಂದು ನಿರೀಕ್ಷಿಸುವುದೇ ಹೇಗೆ? ಅಲ್ಲವಾ..