ಜಗತ್ತಿನಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ ಹತ್ತುಲಕ್ಷ ದಾಟಿದ್ದು,ಸಾವಿನ ಸಂಖ್ಯೆ 50,000 ಮುಟ್ಟಿದೆ. ಭಾರತದಲ್ಲಿ ಒಟ್ಟು 3072 ಕೊರೊನ ಸೋಂಕಿಗೆ ಪೀಡಿತರಾಗಿರುವ ಕುರಿತು ವರದಿಯಾಗಿದ್ದು, ಸಾವಿನ ಸಂಖ್ಯೆ 75 ಕ್ಕೆ ಬಂದು ನಿಂತಿದೆ.
ಕೇರಳದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ 306 ಕ್ಕೆ ಏರಿದ್ದು, ಇವತ್ತು ಹನ್ನೊಂದು ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ 254 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 50 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಶುಕ್ರವಾರದಂದು ಮುಂಬೈ ನಗರದಲ್ಲಿ 52 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (BMC) ಹೇಳಿದೆ. ಮಾಯಾನಗರಿ ಮುಂಬೈಯಲ್ಲಿ ಕರೋನಾ ಪೀಡಿತರ ಸಂಖ್ಯೆ 330 ಕ್ಕೆ ಏರಿದ್ದು, ರೋಗಕ್ಕೆ ಬಲಿಯಾದವರ ಸಂಖ್ಯೆ 22ಕ್ಕೆ ತಲುಪಿದೆ ಎಂದು BMC ಶುಕ್ರವಾರದಂದು ಸಂಜೆ ತಿಳಿಸಿದೆ.
ಪಂಜಾಬಿನಲ್ಲಿ ಎಂಟು ಹೊಸ ಪ್ರಕರಣಗಳು ದಾಖಲಾಗಿದ್ದು, ಕರೋನಾ ಸೋಂಕು ಪೀಡಿತರ ಸಂಖ್ಯೆ 65ಕ್ಕೆ ಏರಿದೆಯೆಂದು ಅಧಿಕಾರಿಗಳು ತಿಳಿಸದ್ದಾರೆ.
ಕರ್ನಾಟಕದಲ್ಲಿ ಇಂದು ಹದಿನಾರು ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕು ಧೃಢಪಟ್ಟವರ ಸಂಖ್ಯೆ 144 ತಲುಪಿದೆ. ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಸೋಂಕು ಹರಡಿದ್ದು, ಮೈಸೂರಿನಲ್ಲಿ 7, ಬೆಂಗಳೂರಿನಲ್ಲಿ 4, ಮಂಗಳೂರಿನಲ್ಲಿ 3, ಬಳ್ಳಾರಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಇಲ್ಲಿಯವರೆಗೆ ನಾಲ್ಕು ಮಂದಿ ರೋಗಿಗಳು ಸೋಂಕಿನಿಂದ ಮೃತಪಟ್ಟಿದ್ದು, ಹನ್ನೊಂದು ಮಂದಿ ಸೋಂಕು ಪೀಡಿತರು ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 94 ಮಂದಿಯನ್ನು ಸೋಂಕು ಶಂಕೆಯ ಹಿನ್ನಲೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. 1232 ಮಂದಿಯನ್ನು ಕ್ವಾರಂಟೈನ್ ಕೇಂದ್ರದಲ್ಲಿ ಹಾಗೂ 1752 ಮಂದಿಯನ್ನು ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿರಿಸಲಾಗಿದೆ. ರಕ್ತ ಹಾಗೂ ಗಂಟಲಿನ ದ್ರವದ ಪರೀಕ್ಷೆಗೆ 400 ಮಂದಿಯ ಮಾದರಿಯನ್ನು ಸಂಗ್ರಹಿಸಲಾಗಿದ್ದು,129 ರೋಗಿಗಳಿಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ದೆಹಲಿಯಲ್ಲಿ ಧಾರ್ಮಿಕ ಸಮಾವೇಶಕ್ಕೆ ಹೋಗಿ ಬಂದವರಲ್ಲಿ ಈಗಾಗಲೇ 16 ಮಂದಿಗೆ ಸೋಂಕು ಧೃಡಪಟ್ಟಿದೆ. ರಾಜ್ಯದಲ್ಲಿ ಈಗಾಗಲೇ ನಾಲ್ವರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದು, ಹನ್ನೊಂದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ’ ಎಂದು ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.