ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜ್ಯ ಸರ್ಕಾರ ಸರ್ಕಾರದ ವಿರುದ್ದ ಪ್ರತಿಭಟಿಸಿದ ಹೋರಾಟಗಾರರನ್ನು ಸಾಮಾಜಿಕ ಕಾರ್ಯಕರ್ತರನ್ನು ವಿವಿಧ ಆರೋಪಗಳನ್ನು ಹೊರಿಸಿ ಜೈಲಿಗಟ್ಟುವುದು ನಡೆದೇ ಇದೆ. ಅವುಗಳಲ್ಲಿ ಇತ್ತೀಚೆಗೆ ಸೇರ್ಪಡೆಗೊಂಡ ಪ್ರಬಲ ಅಸ್ತ್ರ ಎಂದರೆ ರಾಷ್ಟ್ರವಿರೋಧಿ ಮತ್ತು ಸಮಾಜ ವಿರೋಧಿ ಅರೋಪ ಹೊರಿಸಿ ಜೈಲಿಗಟ್ಟಲಾಗುತ್ತಿದೆ. ಹಾತ್ರಾಸ್ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಅಲ್ಲಿಗೆ ತೆರಳುತಿದ್ದ ಪತ್ರಕರ್ತರರನ್ನು ಬಂಧಿಸಿದ್ದುದು ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿತ್ತು. ಇದೀಗ ಬಂಧಿತ ಪತ್ರಕರ್ತ ಸಿದ್ದೀಕ್ ಕಪ್ಪನ್ ದೆಹಲಿ ಗಲಭೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಎಂ ಡಿ ಡ್ಯಾನಿಶ್ ಸೂಚನೆಯ ಮೇರೆಗೆ ಹತ್ರಾಸ್ಗೆ ಹೋಗುತ್ತಿದ್ದ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಮೂಲಕ ತಿಳಿಸಿದೆ.
ಕಳೆದ ವಾರ ನ್ಯಾಯಾಲಯದಲ್ಲಿ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್ನಲ್ಲಿ, ಕಪ್ಪನ್ ಮತ್ತು ಇತರ ಮೂವರು ಆರೋಪಿಗಳೊಂದಿಗೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಮತ್ತು ಸಾರ್ವಜನಿಕ ಶಾಂತಿಯನ್ನು ಅಡ್ಡಿಪಡಿಸಲು ಪೂರ್ವ ಯೋಜಿತ ರೀತಿಯಲ್ಲಿ ಹತ್ರಾಸ್ ಕಡೆಗೆ ಹೋಗುವಾಗಲೇ ಬಂದಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಆರೋಪಿಸಿದ್ದು ಕಪ್ಪನ್ ಸಮಾಜದೊಳಗಿನ ವರ್ಗ ಮತ್ತು ಜಾತಿ ಸಂಘರ್ಷ ಪ್ರಚೋದಿಸಲು ಹೊರಟಿದ್ದರು ಎಂದು ಆರೋಪಿಸಲಾಗಿದೆ. ಸರ್ಕಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕೇರಳ ಮೂಲದ ರಾಜಕೀಯ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್ಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೌಫ್ ಶೆರಿಫ್ ಅವರು ಕೂಡ ಗಲಭೆ ಸೃಷ್ಟಿಸಲು ಇವರಿಗೆ ಬೆಂಬಲ ನೀಡುತಿದ್ದರು ಎಂದು ಆರೋಪಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ ಗಲಭೆ ಆರೋಪಿಗಳಾದ ಎಂ ಡಿ ಡ್ಯಾನಿಶ್ ಮತ್ತು ರೌಫ್ ಶೆರಿಫ್ ಅವರು ಸಿದ್ದೀಕ್ ಕಪ್ಪನ್ ಮತ್ತು ಇತರ ಎಲ್ಲ ಸಹ-ಆರೋಪಿಗಳೊಂದಿಗೆ ಸೆಲ್ ಫೋನ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಅಫಿಡವಿಟ್ ಹೇಳಿದೆ. ಕಪ್ಪನ್ ಅವರ ಬಂಧನ ಮತ್ತು ಬಂಧನವನ್ನು ಪ್ರಶ್ನಿಸಿ ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.
ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಚಾರಣೆಯ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಬೊಪನ್ನಾ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠವು ವಿಚಾರಣೆಯನ್ನು ಜನವರಿ ಮೂರನೇ ವಾರಕ್ಕೆ ಮುಂದೂಡಿದೆ. KUWJ ಅವರ ವಕೀಲರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಗೆ ಉತ್ತರ ನೀಡಲು ಸಮಯಾವಕಾಶ ಕೋರಿದ ನಂತರ ವಿಚಾರಣೆಯನ್ನು ಮುಂದೂಡಲಾಯಿತು. ಅಫಿಡವಿಟ್ ನಲ್ಲಿ ಕಪ್ಪನ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸರ್ಕಾರ ಹೇಳಿದೆ. ಸರ್ಕಾರದ ಅಫಿಡವಿಟ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸುತ್ತದೆ, ಜಾಮೀನು ನೀಡಿದರೆ ಅವರು ಪರಾರಿ ಅಥವಾ ಲಭ್ಯವಿಲ್ಲದಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಪ್ರಕರಣದ ತನಿಖೆಯನ್ನು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಗೆ ಅಕ್ಟೋಬರ್ 23 ರಂದು ಹಸ್ತಾಂತರಿಸಲಾಗಿದೆ ಮತ್ತು ಪರಿಣಾಮಕಾರಿ ತನಿಖೆಗಾಗಿ” ಅವನ ಕಸ್ಟಡಿ ಅಗತ್ಯವಿದೆ ಎಂದು ಅದು ಪ್ರತಿಪಾದಿಸಿದೆ. ಆದ್ದರಿಂದ ಈ ಹಂತದಲ್ಲಿ ಆರೋಪಿಗಳ ಜಾಮೀನು ಅರ್ಜಿಯನ್ನು ಪುರಸ್ಕರಿಸಿದರೆ ಆರೋಪಿಯು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ, ಇದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯು ಸುಗಮ ತನಿಖೆಗೆ ಅಡ್ಡಿಯಾಗುತ್ತದೆ ಎಂದೂ ಸರ್ಕಾರ ತಿಳಿಸಿದೆ. ಕಪ್ಪನ್ ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಮತ್ತು ತನ್ನ ದುಷ್ಕೃತ್ಯಗಳನ್ನು ಮರೆಮಾಚುವ ಸಲುವಾಗಿ ತನ್ನ ಸಾಮಾಜಿಕ ಜಾಲ ತಾಣ ಖಾತೆಗಳ ವಿವರಗಳು ಮತ್ತು ಪಾಸ್ವರ್ಡ್ಗಳನ್ನು ಬಹಿರಂಗಪಡಿಸಿಲ್ಲ ಎಂದು ಅಫಿಡವಿಟ್ನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ ಕಪ್ಪನ್ ತನ್ನ ದೆಹಲಿ ನಿವಾಸದ ತಪ್ಪು ವಿಳಾಸವನ್ನು ಉದ್ದೇಶಪೂರ್ವಕವಾಗಿ ತಿಳಿಸುವ ಮೂಲಕ ತನಿಖಾ ತಂಡವನ್ನು ದಾರಿ ತಪ್ಪಿಸಿದ್ದು ಅವರ ಪಾಸ್ಪೋರ್ಟ್ ಕೂಡ ಎಲ್ಲಿದೆ ಎಂದು ತಿಳಿಸಿಲ್ಲ, ಮನೆಯಲ್ಲಿ ಶೋಧ ನಡೆಸುವಾಗ ಸಹಕರಿಸಿಲ್ಲ ಎಂದು ಫಿಡವಿಟ್ ತಿಳಿಸಿದೆ. ಕಪ್ಪನ್ ಅವರ ಕುಟುಂಬದವರಿಗೂ, ವಕೀಲರಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂಬ KUWJ ಆರೋಪವನ್ನು ರಾಜ್ಯ ಸರ್ಕಾರ ಅಫಿಡವಿಟ್ ನಲ್ಲಿ ನಿರಾಕರಿಸಿದೆ. ಇದಲ್ಲದೆ, ಕಪ್ಪನ್ ಮತ್ತು ಬಂಧಿತ ಇತರ ಮೂವರು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ನ ಕಾರ್ಯನಿರ್ವಾಹಕ ಸದಸ್ಯರಾಗಿದ್ದ ಪಿಎಫ್ಐ ಸದಸ್ಯರೊಂದಿಗೆ ನೇರವಾಗಿ ಮತ್ತು ನಿಕಟ ಸಂಬಂಧ ಹೊಂದಿದ್ದಾರೆ ಎಂಬ ಹಳೆಯ ಆರೋಪವನ್ನು ಅದು ಪುನರುಚ್ಚರಿಸಿದೆ.
ಕಳೆದ ನವೆಂಬರ್ 30 ರಂದು KUWJ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ, ಕಪ್ಪನ್ ಅವರನ್ನು ಲಾಠಿಯಿಂದ ಹೊಡೆದು, ಮೂರು ಬಾರಿ ಕಪಾಳಮೋಕ್ಷ ಮಾಡಿ, ಮಾನಸಿಕವಾಗಿ ಹಿಂಸಿಸಲಾಗಿದೆ ಎಂದು ತಿಳಿಸಿದ್ದರು. ಕಪ್ಪನ್ ಅವರ ವಕೀಲ ವಿಲ್ಸ್ ಮ್ಯಾಥ್ಯೂಸ್ ಅವರು ಕಪ್ಪನ್ ರನ್ನು ನವೆಂಬರ್ 21 ರಂದು 30 ನಿಮಿಷಗಳ ಕಾಲ ಭೇಟಿಯಾದಾಗ, ಕಪ್ಪನ್ ಅವರ ತೊಡೆಯ ಮೇಲೆ ಮೂರು ಬಾರಿ ಲಾಠಿಯಿಂದ ಹೊಡೆದು ಕನ್ನಡಕವನ್ನು ತೆಗೆದ ನಂತರ ಮೂರು ಬಾರಿ ಕಪಾಳಮೋಕ್ಷ ಮಾಡಿ, ಎಳೆದೊಯ್ದರು, ಅಲ್ಲದೆ ಅವರಿಗೆ ಔಷಧಿಗಳನ್ನೂ ಕೊಡದೆ ಬಲವಂತದಿಂದ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಎಚ್ಚರವಾಗಿರುವಂತೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದೆ. ಕಪ್ಪನ್ ತನ್ನ ಪತ್ರಿಕಾ ಕರ್ತವ್ಯಗಳನ್ನು ಮಾಡಲು ಮಾತ್ರ ಹತ್ರಾಸ್ಗೆ ಹೋಗುತಿದ್ದರು ಎಂದು ಅದು ತಿಳಿಸಿದೆ. ಆರೋಪಿ ಸಿದ್ದೀಕ್ ಕಪ್ಪನ್ ಅವರ ನಾರ್ಕೊ ಅನಾಲಿಸಿಸ್ ಟೆಸ್ಟ್ ಅಥವಾ ಬ್ರೈನ್ ಮ್ಯಾಪಿಂಗ್ ಟೆಸ್ಟ್ ಅಥವಾ ಲೈ ಡಿಟೆಕ್ಟರ್ ಟೆಸ್ಟ್, ಮಾಡಿಸುವಂತೆ ಆ ಮೂಲಕ ಕಪ್ಪನ್ ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ಅಫಿಡವಿಟ್ ತಿಳಿಸಿದೆ.
ಆದರೆ ಉತ್ತರ ಪ್ರದೇಶ ಸರ್ಕಾರದ ಅಫಿಡವಿಟ್ ಇದನ್ನು ನಿರಾಕರಿಸಿದ್ದು ಕಪ್ಪನ್ ಅವರನ್ನು ಬಂಧಿಸಿದ ನಂತರ ಅಕ್ಟೋಬರ್ 6 ರಂದು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಈ ಪರೀಕ್ಷೆಯ ಸಮಯದಲ್ಲಿ ಹೊಸ ಗಾಯಗಳಿಲ್ಲ ಎಂದು ತಿಳಿಸಿದೆ.