ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಅಪ್ಪ ಸೋತದ್ದಕ್ಕೆ ಆತನ ಐದು ವರ್ಷದ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ! ಇದು ಜಗತ್ತಿನ ಯಾವುದೇ ಅನಾಗರಿಕ ನಾಡಲ್ಲಿ ನಡೆದದ್ದಲ್ಲ; ಬದಲಾಗಿ ಹೆಣ್ಣನ್ನು ಪೂಜಿಸುವ ಸನಾತನ ಸಂಸ್ಕೃತಿಯ ಭರತ ಖಂಡದಲ್ಲೇ!
ಹೌದು, ಇದು ನವ ಭಾರತ ಸಾಗುತ್ತಿರುವ ದಿಕ್ಕಿನ ಭಯಾನಕ ಹಾದಿಯ ಒಂದು ಸ್ಯಾಂಪಲ್. ಐಪಿಎಲ್ ಮ್ಯಾಚಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತ ಬೆನ್ನಲ್ಲೇ ತಂಡದ ಎಂ ಎಸ್ ಧೋನಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭೀಕರ ಟ್ರೋಲ್ ಆರಂಭವಾಗಿತ್ತು. ಕ್ರಿಕೆಟ್ ಅಭಿಮಾನಿಗಳೆಂದುಕೊಂಡವರ ಆಕ್ರೋಶ ಕೇವಲ ಧೋನಿ ಮತ್ತು ಅವರ ತಂಡದ ಪ್ರದರ್ಶನದ ಬಗ್ಗೆ ಇದ್ದಿದ್ದರೆ, ಟ್ರೋಲ್ ಮಾಡಿದವರನ್ನು ನಿರಾಶೆಹೊಂದಿದ ಉಗ್ರ ಅಭಿಮಾನಿಗಳೆಂದೂ, ಆ ಆಟವನ್ನು ಒಂದು ಕ್ರೀಡಾಸ್ಫೂರ್ತಿಯ ಕ್ರಿಕೆಟ್ ಎಂದೂ ಹೇಳಬಹುದಿತ್ತು ಮತ್ತು ಅಂತಹ ಹಿನ್ನೆಲೆಯಲ್ಲಿ ಅಂತಹ ಆಕ್ರೋಶಗಳೂ ಅತಿ ಎನಿಸಿದರೂ ಕೆಲಮಟ್ಟಿಗೆ ಸಹಜ ಎಂದೂ ಒಪ್ಪಿಕೊಳ್ಳಬಹುದಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಬುಧವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡ ಬೆನ್ನಲ್ಲೇ ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ ಕ್ರೀಡಾಸ್ಫೂರ್ತಿ, ಸಹಜ ಸೋಲಿನ ಹತಾಶೆ, ಆಕ್ರೋಶಗಳನ್ನು ಮೀರಿತ್ತು. ಧೋನಿ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದರು ಎಂಬ ಹಿನ್ನೆಲೆಯಲ್ಲಿ ಆರಂಭವಾದ ಟ್ರೋಲಿಂಗ್, ಯಾವ ಅತಿಗೆ ಹೋಯಿತು ಎಂದರೆ ಧೋನಿ ಮಾತ್ರವಲ್ಲದೆ, ಅವರ ಪತ್ನಿ ಮತ್ತು ಕೇವಲ ಐದು ವರ್ಷದ ಹಸುಗೂಸು ‘ಝೀವಾ’ಳನ್ನೂ ಕೂಡ ಅಸಹ್ಯಕರವಾಗಿ, ಅಮಾನುಷವಾಗಿ ಮತ್ತು ತೀರಾ ಮನುಷ್ಯರೆಲ್ಲಾ ತಲೆತಗ್ಗಿಸುವ ಮಟ್ಟಿಗೆ ಟ್ರೋಲ್ ಮಾಡಲಾಯಿತು.
ಐದು ವರ್ಷದ ಹಾಲುಗಲ್ಲದ ಹಸುಳೆಯ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆ ಹಾಕಲಾಯಿತು. ಅದೂ ಕೇವಲ 15-17 ವರ್ಷದ ಅಸಹ್ಯದ ವ್ಯಕ್ತಿಗಳು ಇಂತಹ ಬೆದರಿಕೆಯನ್ನು ಇನ್ಸ್ಟಾಗ್ರಾಂ ಮೂಲಕ ಧೋನಿಯರಿಗೆ ಹಾಕಿದ್ದಾರೆ! ಉಲ್ಲೇಖಿಸುವುದಿರಲಿ, ಕಲ್ಪಿಸಿಕೊಳ್ಳಲೂ ಆಗದ ಭಾಷೆಯ ಆ ಟ್ರೋಲ್ ಕಂಡು ಇಡೀ ಸಾಮಾಜಿಕ ಜಾಲತಾಣವೇ ಬೆಚ್ಚಿಬಿದ್ದಿದೆ. ಧೋನಿ ಮತ್ತು ಅವರ ಪತ್ನಿಯ ಇನ್ಸ್ಟಾಗ್ರಾಂ ಖಾತೆಯಲ್ಲಿಯೇ ಈ ಬೆದರಿಕೆಗಳನ್ನು ಹಾಕಲಾಗಿದೆ ಮತ್ತು ಅತ್ಯಾಚಾರ, ಕೊಲೆ ಬೆದರಿಕೆನ್ನೂ ಹಾಕಿರುವ ಕ್ರಿಕೆಟ್ ಅಭಿಮಾನಿಗಳು ಎಂದುಕೊಂಡವರ ಇಂತಹ ಹೇಯ ವರಸೆ ಇಡೀ ಜಗತ್ತು ದೇಶದ ಯುವ ಜನತೆಯ ಸಂಸ್ಕಾರ ಮತ್ತು ಬೆಳೆಯುತ್ತಿರುವ ಸಾಮಾಜಿಕ ಹಿನ್ನೆಲೆಯ ಬಗ್ಗೆ ಬೆಚ್ಚಿಬೀಳುವಂತೆ ಮಾಡಿದೆ.
ಪ್ರಮುಖವಾಗಿ ಕ್ರಿಕೆಟ್ ಸೇರಿದಂತೆ ವಿವಿಧ ರಂಗದ ಗಣ್ಯರು ಮತ್ತು ಸಾಮಾಜಿಕ ಕಾಳಜಿಯ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು, ಅಧಿಕಾರಸ್ಥ ರಾಜಕಾರಣಿಗಳು ಇಂತಹ ಸಮಾಜಘಾತುಕ ಶಕ್ತಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ ಮೂಲಭೂತವಾಗಿ, ಅಸಹ್ಯಕರ ಮತ್ತು ಮನುಕುಲವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಘಟನೆ ದೇಶ ಇಂದು ಎದುರಿಸುತ್ತಿರುವ ಹಲವು ಗಹನ ಸಂಗತಿಗಳ ಕುರಿತ ಸಾರ್ವಜನಿಕ ಚರ್ಚೆಗೂ ಇಂಬು ನೀಡಿದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಯಾವ ಲಂಗುಲಗಾಮು ಇಲ್ಲದ ವ್ಯವಸ್ಥೆ ಕನಿಷ್ಟ ಮನುಷ್ಯತ್ವದ ಯಾವ ಲಕ್ಷಣಗಳೂ ಇರದ ಹೊಸ ತಲೆಮಾರಿನ ಭಕ್ತ ಪರಂಪರೆಯ ಸಮೂಹದ ನಡುವೆ ಒಡ್ಡಬಹುದಾದ ಅಪಾಯಗಳ ಬಗ್ಗೆ ಯೋಚಿಸುವಂತೆ ಮಾಡಿದೆ.
ವ್ಯಕ್ತಿಯೊಬ್ಬನ ಸೋಲು, ಹಿನ್ನಡೆ, ತಪ್ಪುಗಳ ಸಂದರ್ಭದಲ್ಲಿ ಆತನನ್ನು ಟೀಕಿಸುವ ಸಭ್ಯತೆ, ಶಿಷ್ಟಾಚಾರಗಳನ್ನು ಮರೆತು, ವೈಯಕ್ತಿಕ ದಾಳಿ ನಡೆಸುವುದು, ವೈಯಕ್ತಿಕ ಸಂಬಂಧಗಳು, ಕುಟುಂಬ, ಮನೆಮಂದಿಯ ಮೇಲೆ ದಾಳಿ ನಡೆಸುವುದು, ನಿಂದಿಸುವುದು, ಹೇಯ ಮತ್ತು ಅಸಹ್ಯಕರ ಭಾಷೆಯಲ್ಲಿ ಬೆದರಿಸುವುದು ಮುಂತಾದ ಆನ್ ಲೈನ್ ಟ್ರೋಲ್ ಸಂಸ್ಕೃತಿಯನ್ನು ದೇಶದಲ್ಲಿ ಆರಂಭಿಸಿದ ‘ನವ ಭಾರತ’ದ ಮಾತನಾಡುವ ಮಂದಿಯ ಮಾನಸಿಕ ದಿವಾಳಿತನದ ಫಲ ಈ ವಿಪರೀತರ ವರ್ತನೆಯಲ್ಲವೆ? ಎದುರಾಳೀ ಪಕ್ಷ, ಸಿದ್ಧಾಂತ, ವ್ಯಕ್ತಿಗಳನ್ನು ಅದೇ ಸಿದ್ಧಾಂತ, ವಾದ, ಚರ್ಚೆಯ ಮೂಲಕ ಎದುರಿಸುವ ಬದಲು, ಅವರ ವೈಯಕ್ತಿಕ ಬದುಕು, ವೈಯಕ್ತಿಕ ಇತಿಮಿತಿಗಳು, ಅವರ ಕುಟುಂಬ, ಪತ್ನಿ, ಮಕ್ಕಳು, ತಾಯಿಯನ್ನು ಗುರಿಯಾಗಿಸಿಕೊಂಡು ಅಮಾನುಷ ಮತ್ತು ಹೇಯ ದಾಳಿ ನಡೆಸುವುದು, ಬೆದರಿಸುವುದನ್ನೇ ರಾಜಕೀಯ ಸಂಸ್ಕೃತಿಯಾಗಿ ಇತ್ತೀಚಿನ ವರ್ಷಗಳಲ್ಲಿ ಬೆಳೆಸಿದ ಪಕ್ಷವೇ ಅಧಿಕಾರದಲ್ಲಿರುವಾಗ ಇಂತಹ ಅಪಸವ್ಯಗಳು ಸಹಜ ತಾನೆ? ಟ್ರೋಲ್ ಮತ್ತು ಆನ್ ಲೈನ್ ಅಪಪ್ರಚಾರದ ಮೂಲಕ ಚುನಾವಣೆಗಳನ್ನು ಹೈಜಾಕ್ ಮಾಡುವ ತಂತ್ರಗಾರಿಕೆ ಸಿದ್ಧಿಸಿಕೊಂಡು, ಅದಕ್ಕೆಂದೇ ಸಾವಿರಾರು ಮಂದಿಯನ್ನು ಬಾಡಿಗೆಗೆ ಪಡೆದು ನಿಂದನೆಯ, ಅಪಪ್ರಚಾರದ ಕ್ಯಾಂಪೇನ್ ನಡೆಸುವ ಮೂಲಕವೇ ಅಧಿಕಾರಕ್ಕೆ ಬಂದವರ ನಾಡಿನಲ್ಲಿ ಇಂತಹ ಅಸಹ್ಯಗಳು ನಿರೀಕ್ಷಿತವೇ ಅಲ್ಲವೆ? ಎಂಬ ಪ್ರಶ್ನೆಗಳು ಹುಟ್ಟುಹಾಕಿದೆ.
ಹಾಗೇ ಕ್ರಿಕೆಟ್ ಎಂಬ ಒಂದು ಆಟ, ಆಟದ ಕ್ರೀಡಾಸ್ಫೂರ್ತಿಯನ್ನು ಕಳೆದುಕೊಂಡು ಒಂದು ಕಡೆ ಜೂಜು-ಬಾಜಿಯ ದಂಧೆಯಾಗಿ, ಮತ್ತೊಂದು ಕಡೆ ಉನ್ಮಾದದ, ಉದ್ರೇಕದ ಪುಕ್ಕಟ್ಟೆ ಎದೆ ತಟ್ಟಿಕೊಳ್ಳುವ ವಿಕಲ ರಾಷ್ಟ್ರೀಯತೆ ಮತ್ತು ಹುಸಿ ದೇಶಪ್ರೇಮ ಪ್ರದರ್ಶನದ ಆಟವಾಗಿರುವಾಗ, ಮನಸ್ಸನ್ನು ಅರಳಿಸುವ ಕ್ರೀಡೆಯಾಗುವ ಬದಲು, ದುಡ್ಡು, ದಂದೆ ಮತ್ತು ಉನ್ಮಾದದ ಸಟ್ಟಾಬಾಜಿ ಹಂಗಾಮವಾದಾಗ ಇಂತಹ ಅಮಲಿನ, ಪ್ರಜ್ಞಾಹೀನ ಪ್ರತಿಕ್ರಿಯೆಗಳು ಕೂಡ ಆ ಎಲ್ಲದರ ಒಂದು ಬೈ-ಪ್ರಾಡಕ್ಟೇ ಅಲ್ಲವಾ? ಎಂಬ ಪ್ರಶ್ನೆಯನ್ನೂ ಎತ್ತಿದೆ.
ಅದೇನೇ ಇರಲಿ; ಈ ಘಟನೆ ದೇಶ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ಹುಟ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಘಾತದ ಪ್ರತಿಕ್ರಿಯೆ ನೀಡಿರುವ ಬಹುತೇಕ ಮಂದಿ ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನಾಗುತ್ತಿದೆ? ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಇಷ್ಟು ಕ್ರೌರ್ಯ, ಅಮಾನುಷ, ಹೇಯ ನಡತೆ ಹೇಗೆ ಮತ್ತು ಎಲ್ಲಿಂದ ಹುಟ್ಟುತ್ತಿದೆ? ಇಂತಹ ಮೃಗೀಯ ಮನಸ್ಸುಗಳಿಗೆ ಯಾವುದು ಪ್ರಚೋದನೆ? ನಮ್ಮ ಶಿಕ್ಷಣ, ನಮ್ಮ ಸಾಮಾಜಿಕ ಮೌಲ್ಯಗಳು ಏನಾಗುತ್ತಿವೆ? ಏನನ್ನು ಕಲಿಸುತ್ತಿವೆ? ಎಂಬ ಪ್ರಶ್ನೆಗಳು ಎತ್ತಿದ್ದಾರೆ. ನವಭಾರತದ ಘೋಷಣೆ ಕೂಗುವ ಮಂದಿ ಈಗ ನಿಜಕ್ಕೂ ದೇಶದ ಯುವ ತಲೆಮಾರಿಗೆ ತಾವು ಕೊಟ್ಟಿರುವ ಅಮಲು ಎಂಥ ಭೀಕರ ವಿಷವಾಗಿ ಹೊರ ಬರುತ್ತಿದೆ ಎಂಬುದನ್ನು ಈಗಲಾದರೂ ಯೋಚಿಸಬೇಕಿದೆ.