ದೇಶದಾದ್ಯಂತ ನಿನ್ನೆ ಒಂದೇ ದಿನ 24 ಗಂಟೆಗಳಲ್ಲಿ 9,887 ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿದ್ದು, 294 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಈವರೆಗೆ ಒಟ್ಟು 2,36,657 ಕರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 6,642 ಜನರು ಸಾವಿಗೀಡಾಗಿದ್ದಾರೆ. ಸದ್ಯ 1,15,942 ಪ್ರಕರಣಗಳು ಸಕ್ರಿಯವಾಗಿದ್ದು, 1,14,73 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 80,229 ಪ್ರಕರಣಗಳು ಬೆಳಕಿಗೆ ಬಂದಿದ್ದು, 2,849 ಜನರು ಮೃತರಾಗಿದ್ದಾರೆ. 42,224 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 35,156 ಮಂದಿ ಗುಣಮುಖರಾಗಿದ್ದಾರೆ. ತಮಿಳುನಾಡಿನಲ್ಲಿ 28,694 ಮಂದಿಗೆ ಸೋಂಕು ತಗುಲಿದ್ದು, 12,700 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 232 ಮಂದಿ ಮೃತಪಟ್ಟಿದ್ದು, 15,762 ಗುಣಮುಖರಾಗಿದ್ದಾರೆ.
ಇನ್ನೊಂದು ಅಚ್ಚರಿಯ ಸುದ್ದಿಯೇನೆಂದರೆ, ಭಾರತದಲ್ಲಿ ಜೂನ್ ಮಧ್ಯ ಭಾಗದಲ್ಲಿ ಪ್ರತಿನಿತ್ಯವೂ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂದು ಚೀನಾ ಅಧ್ಯಯನಕಾರರು ಭವಿಷ್ಯ ನುಡಿದಿದ್ದಾರೆ. ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿರುವ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು ಕರೋನಾ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ಈ ಲ್ಯಾಂಜೋ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೋನಾ ಸೋಂಕು ಹರಡುವಿಕೆಯ ಪ್ರಮಾಣದ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಗ್ಲೋಬಲ್ ಕೋವಿಡ್ -19 ಪ್ರೆಡಿಕ್ಟ್ ಸಿಸ್ಟಮ್ ಎಂಬ ಹೆಸರಲ್ಲಿ ಸಂಶೋಧನೆ ನಡೆಸುತ್ತಿರುವ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು 180 ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತಿದ್ದಾರೆ.
ಆ ಪೈಕಿ ಭಾರತದ ಪರಿಸ್ಥಿತಿಯ ಬಗ್ಗೆಯೂ ಅಂದಾಜು ಮಾಡುತ್ತಿದ್ದಾರೆ. ಈ ಹಿಂದೆ ಭಾರತದಲ್ಲಿ ಜೂನ್ ಆರಂಭದಲ್ಲಿ ಪ್ರತಿನಿತ್ಯ 9 ಸಾವಿರಕ್ಕೂ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ಭವಿಷ್ಯ ನುಡಿದಿದ್ದರು. ಅದಕ್ಕೆ ತಕ್ಕಂತೆ ಭಾರತದಲ್ಲಿ ಜೂನ್ 3ರಿಂದ ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ