ಮುಂದಿನ ಸಾರ್ವತ್ರಿಕ ಚುನಾವಣೆಯ ತಳಪಾಯ ಎಂದೇ ಹೇಳಲಾಗುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವ ಹವಾ ಸೃಷ್ಟಿಯಾಗಿದೆ.
ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಬಾರಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ತೋರುತ್ತಿದ್ದು, ಗ್ರಾಮಗಳ ಅಭಿವೃದ್ಧಿಗೆ ಹೊಸ ಶಕೆ ಮೂಡುವ ಆಶಾಭಾವ ಸೃಷ್ಟಿಯಾಗಿದೆ.
ಲಾಕ್ಡೌನ್ನಿಂದಾಗಿ ಮಹಾನಗರಗಳಲ್ಲಿ ಕೆಲಸ ಕಳೆದುಕೊಂಡು ಗ್ರಾಮದಲ್ಲೇ ಬೀಡು ಬಿಟ್ಟಿರುವ ಯುವಕರು ಸ್ಥಳೀಯ ಚುನಾವಣೆಯಲ್ಲಿ ಒಂದು ಕೈ ನೋಡುವಾ ಎನ್ನುತ್ತಿದ್ದು, ಹಿರಿಯರು ತೆರೆ ಮರೆಗೆ ಸರಿಯುವಂತಾಗುತ್ತಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮ ಚಂಚಾಯಿತಿ ವ್ಯಾಪ್ತಿಯ ಕಾಲಕಾಲೇಶ್ವರ ಗ್ರಾಮದ ಎರಡು ಸದಸ್ಯರ ಪೈಕಿ ಸಾಮಾನ್ಯರಿಗೆ ಮೀಸಲಿರುವ ಸ್ಥಾನಕ್ಕೆ ಎಲ್ಲರೂ ಯುವಕರೇ ಸ್ಪರ್ಧಿಸಲು ಮುಂದಾಗಿರುವುದು ಯುವಕರ ಉತ್ಸಾಹ ಎತ್ತಿ ತೋರುತ್ತಿದೆ. ಇತರೆ ಗ್ರಾಪಂಚಾಗಳಲ್ಲೂ ಇದೇ ರೀತಿಯ ಬೆಳವಣಿಗೆಗಳು ಕಂಡು ಬರುತ್ತಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಂಗೇರಿದ ಕಣ:
ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲಎನ್ನುವ ಮಾತು ಹಳ್ಳಿ ಭಾಗದಲ್ಲಿ ಪ್ರಚಲಿತದಲ್ಲಿದೆ. ಅಂದರೆ, ಗ್ರಾಮಮಟ್ಟದಲ್ಲಿ ನಡೆಯುವ ಚುನಾವಣೆ ಅತ್ಯಂತ ಪೈಪೋಟಿಯಿಂದ ಕೂಡಿರುತ್ತದೆ. ಸ್ಥಳೀಯ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯುವುದರಿಂದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ಚುನಾವಣಾ ಕಣ ರಂಗೇರುತ್ತದೆ.
ಯುವಕರಿಂದ ಅನುದಾನ ಸದ್ಬಳಕೆ ಆಶಯ:
ಗ್ರಾಮ ಪಂಚಾಯ್ತಿಗಳಿಗೆ ಸಾಕಷ್ಟು ಅನುದಾನ ಬರುತ್ತಿದ್ದು, ಗ್ರಾಮದ ಅಭಿವೃದ್ಧಿಗೋಸ್ಕರ ಅಕ್ಷರಸ್ಥ ಯುವಕರು ಸ್ಪರ್ಧಿಸಿದರೆ ಒಳ್ಳೆಯದಾಗಲಿದೆ ಎನ್ನುತ್ತಾರೆ, ಗ್ರಾಮದ ಮಾಜಿ ಸದಸ್ಯ ದೇವಪ್ಪ.
‘ಓದಿದ್ದೇನೆ. ಬೆಂಗಳೂರುನಲ್ಲಿ ಹಲವು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಸದ್ಯ ಗ್ರಾಮದಲ್ಲೇ ಇರುವುದರಿಂದ ನಮ್ಮೂರಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಯಾವ ವಾರ್ಡ್ಗಳಿಗೆ ಏನು ಬೇಕು ಎಂಬ ಮಾಹಿತಿ ಇದ್ದು, ಜನರ ಬೇಕು ಬೇಡಗಳಿಗೆ ಹಲವು ವರ್ಷಗಳಿಂದ ಸ್ಪಂದಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕೈಯಲ್ಲಿ ಅಧಿಕಾರವಿದ್ದರೆ ಜನ ಸೇವೆ ಮಾಡಲು ಅನುಕೂಲವಾಗುತ್ತದೆ, ನಮ್ಮ ಗ್ರಾಮದ ಅಭಿವೃದ್ಧಿಯೂ ಆಗುತ್ತದೆ’ ಎನ್ನುತ್ತಾರೆ ಕಾಲಕಾಲೇಶ್ವರ ಗ್ರಾಮದ ಯುವ ಅಭ್ಯರ್ಥಿ ಮುತ್ತಣ್ಣ ತಳವಾರ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಬಿರುಸು..!
ಗದಗ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಬಾರಿ ಯುವಕರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುದ್ದಿಗಳು ಹೊರ ಬೀಳುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ಯುವಕರು ಜೋರು ಪ್ರಚಾರ ಆರಂಭಿಸಿದ್ದಾರೆ.
ವಾಟ್ಸಪ್, ಫೇಸ್ ಬುಕ್ಗಳ ಮೂಲಕ ಈಗಾಗಲೇ ಮತಯಾಚನೆಯನ್ನೂ ಶುರುವಿಟ್ಟುಕೊಂಡಿದ್ದಾರೆ. ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುದನ್ನು ನೋಡಬೇಕು. ಈ ಬಾರಿ ಯುವ ಹವಾ ಸೃಷ್ಟಿಯಾಗುತ್ತದೋ ಅಥವಾ ಮತ್ತೆ ಹಿರಿಯರ ಕಾರೋಬಾರು ಮುಂದುವರೆಯಲಿದೆಯೋ ಕಾದು ನೋಡಬೇಕಿದೆ.
ಢಾಬಾ, ಹೋಟೆಲ್ಗಳಿಗೆ ಶುಕ್ರದೆಸೆ
ಗ್ರಾಮ ಪಂಚಾಯಿತಿ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದೇ ತಡ ಗ್ರಾಮಗಳಿಗೆ ಸಮೀಪ ಇರುವ ಹೊಟೆಲ್, ಢಾಬಾಗಳು ತುಂಬಿ ತುಳುಕುತ್ತಿವೆ. ಕೊರೊನಾ ಲಾಕ್ಡೌನ್ನಿಂದಾಗಿ ಗ್ರಾಹಕರೇ ಇಲ್ಲದೇ ಕಂಗಾಲಾಗಿದ್ದ ಢಾಬಾ, ಹೊಟೆಲ್ಗಳಿಗೆ ಗ್ರಾಪಂ ಚುನಾವಣೆಯಿಂದ ಮರು ಜೀವ ಬಂದಂತಾಗಿದೆ. ಆಕಾಂಕ್ಷಿ ಅಭ್ಯರ್ಥಿಗಳು ಈಗಿನಿಂದಲೇ ಊಟ, ಮದ್ಯ ಕೊಡಿಸಿ ಮತದಾರರ ಮನವೊಲಿಸುತ್ತಿರುವುದು ಸುಳ್ಳಲ್ಲ.
ಕೆಲವರಂತೂ ಒಂದು ದಿನ ಒಬ್ಬ ಅಭ್ಯರ್ಥಿ ಕಡೆ ಖರ್ಚು ಮಾಡಿಸಿದರೆ, ಮರುದಿನ ಮತ್ತೊಬ್ಬ ಅಭ್ಯರ್ಥಿ ಕಡೆ ಖರ್ಚು ಮಾಡಿಸುತ್ತಿರುವುದೂ ನಡೆಯುತ್ತಿದೆ. ಡಿ. 22ರ ವರೆಗೆ ಹೀಗೆ ನಡೆಯಲಿದ್ದು, ಬಾರ್, ಹೊಟೇಲ್, ಢಾಬಾಗಳಿಗೆ ಇದೀಗ ಶುಕ್ರದೆಸೆ ಬಂದಿರುವುದಂತೂ ಸುಳ್ಳಲ್ಲ.
ಕೈ ಕಡ, ಬಡ್ಡಿಯ ಸಾಲ ಪಡೆದು ಸ್ಪರ್ಧೆ..!
ಗ್ರಾಮ ಪಂಚಾಯಿತಿ ಸದಸ್ಯರಾಗಬೇಕು ಎಂಬ ಕನಸು ಕಾಣುತ್ತಿರುವವರು ಗ್ರಾಮದ ಉಳ್ಳವರ ಬಳಿ ಬಡ್ಡಿಗೆ ಸಾಲ ತರುವುದೂ ಬೆಳಕಿಗೆ ಬಂದಿದೆ. ಚುನಾವಣೆಯ ಖರ್ಚಿಗಾಗಿ ಹೆಚ್ಚಿನ ಬಡ್ಡಿಯ ದರದಲ್ಲಿ ಸಾಲ ಪಡೆಯುತ್ತಿದ್ದು, ಇದಕ್ಕಾಗಿ ಚಿನ್ನ, ಬೈಕ್, ಟ್ರ್ಯಾಕ್ಟರ್, ಜಮೀನು ಅಡವಿಡುತ್ತಿರುವುದು ಅಲ್ಲಿಲ್ಲಿ ಕೇಳಿ ಬರುತ್ತಿದೆ. ಇನ್ನೂ ಕೆಲವರು ಕೆಲ ದಿನಗಳಿಗೋಸ್ಕರ ಕೈ ಸಾಲವನ್ನೂ ಪಡೆಯುತ್ತಿದ್ದಾರೆ.