ಗಲ್ವಾನ್ ಸಂಘರ್ಷದ ಹತ್ತು ದಿನಗಳ ಮೊದಲು, ಲೆಫ್ಟಿನೆಂಟ್ ಜನರಲ್ ಮಟ್ಟದ ಅಧಿಕಾರಿಗಳ ಮಾತುಕತೆ ನಡೆದಿತ್ತು ಮತ್ತು ಗಸ್ತು ಪಾಯಿಂಟ್ 14 ರಲ್ಲಿ ಎರಡೂ ಕಡೆಯವರ ನಡುವೆ ಭಿನ್ನಾಭಿಪ್ರಾಯವು ಪ್ರಾರಂಭವಾಗಿತ್ತು, ಏಕೆಂದರೆ ಇಬ್ಬರೂ ವಾಸ್ತವಿಕ ನಿಯಂತ್ರಣ ರೇಖೆಗೆ ಬಹಳ ಹತ್ತಿರದಲ್ಲಿದ್ದರು. ಗಾಲ್ವಾನ್ ನದಿತಟದಲ್ಲಿರುವ ಶೃಂಗದಲ್ಲಿ ಸ್ಥಾಪಿಸಲಾದ ಚೀನಾದ ವೀಕ್ಷಣಾ ಪೋಸ್ಟ್, ಮಾತುಕತೆಯ ಸಮಯದಲ್ಲಿ, ಎಲ್ಎಸಿಯ ಭಾರತದ ನಿಯಂತ್ರಣಕ್ಕೊಳಪಡುವ ಭಾಗದಲ್ಲಿದೆ ಎಂದು ಸಾಬೀತಾಯಿತು ಮತ್ತು ಅದನ್ನು ತೆಗೆದುಹಾಕಲು ಒಪ್ಪಂದ ಆಯಿತು. ಈ ಮಾತುಕತೆಯ ಕೆಲವು ದಿನಗಳ ನಂತರ ಚೀನಿಯರು ಈ ಪೋಸ್ಟ್ ಅನ್ನು ತೆಗೆದು ಹಾಕಿದರು. ಈ ಪ್ರದೇಶದ ಗಸ್ತನ್ನು ನಿಯಂತ್ರಿಸುವ 16 ಬಿಹಾರ ಇನ್ಫಾಂಟ್ರಿ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ ಸಂತೋಷ್ ಬಾಬು ಅವರು ಚೀನಾವು ಶಿಬಿರವನ್ನು ತೆಗೆದು ಹಾಕಿದ ಮರುದಿನ ಚೀನಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಆದರೆ ಜೂನ್ 14 ರಂದು, ಚೀನಾದ ವೀಕ್ಷಣಾ ಪೋಸ್ಟ್ ಅನ್ನು ರಾತ್ರೋ ರಾತ್ರಿ ಮರು ನಿರ್ಮಾಣ ಮಾಡಲಾಯಿತು. ಜೂನ್ 15 ರಂದು ಸಂಜೆ 5 ಗಂಟೆ ಸುಮಾರಿಗೆ, ಕರ್ನಲ್ ಬಾಬು ತಮ್ಮ ನೇತೃತ್ವದಲ್ಲಿ ಸೈನಿಕರ ತಂಡವನ್ನು ಚೀನಾ ನಿರ್ಮಿತ ಶಿಬಿರದೆಡೆಗೆ ಕರೆದೊಯ್ಯಲು ನಿರ್ಧರಿಸಿದರು. ಆ ಸಂದರ್ಭದಲ್ಲಿ ಚೀನಾದ ಕಡೆಯೊಂದಿಗೆ ಕೆಲವೇ ದಿನಗಳ ಮೊದಲು ಮಾತುಕತೆ ನಡೆಸಿದ್ದ ಕಮಾಂಡಿಂಗ್ ಆಫೀಸರ್ ಬಾಬು ಏನೋ ತಪ್ಪಾಗಿದೆ ಎಂದು ಆಶ್ಚರ್ಯಪಟ್ಟಿದ್ದಾರೆ ಎನ್ನಲಾಗಿದೆ. ಚೀನಾವು ಅಕ್ರಮವಾಗಿ ನಿರ್ಮಿಸಿರುವ ಶಿಬಿರವನ್ನು ತೆಗೆದುಹಾಕಲು ಭಾರತದ ಯುವ ಅಧಿಕಾರಿಗಳು ಮತ್ತು ಸೈನಿಕರು ಯೋಚಿಸಿದ್ದರು. ಕರ್ನಲ್ ಬಾಬು ಅವರು ಹೆಚ್ಚು ನಿಷ್ಠುರ, ದಿಟ್ಟ ಹಾಗೂ ಸದಾ ಕೂಲ್ ಆಗಿರುವ ಅಧಿಕಾರಿ ಅಗಿದ್ದು, ಅವರು ಈ ಹಿಂದೆ ಕಂಪನಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.
ಸಾಮಾನ್ಯವಾಗಿ ಈ ರೀತಿಯ ಅತಿಕ್ರಮಣದ ಸಂದರ್ಭಗಳಲ್ಲಿ ಮೇಜರ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಸೈನಿಕರ ತಂಡವನ್ನು ಪರಿಶೀಲನೆಗೆ ಕಳಿಸುವುದು ವಾಡಿಕೆ. ಅದರಂತೆ ಮೇಜರ್ ದರ್ಜೆಯವರನ್ನೇ ಕಳುಹಿಸಬಹುದಿತ್ತು. ಆದರೆ ಕರ್ನಲ್ ಬಾಬು ಅದನ್ನು ಘಟಕದಲ್ಲಿರುವ ಯುವ ಮೇಜರ್ಗಳಿಗೆ ಬಿಡದಿರಲು ನಿರ್ಧರಿಸಿ ತಾವೇ ಸಣ್ಣ ತುಕಡಿಯೊಂದನ್ನು ಮುನ್ನೆಡೆಸಿಕೊಂಡು ಹೋಗಿದ್ದಾರೆ. ಇವರ ನಿರ್ಧಾರಕ್ಕೆ ಮುಖ್ಯ ಕಾರಣ ಇಲ್ಲಿ ಈ ಹಿಂದೆ ಯಾವುದೇ ರೀತಿಯ ಗಡಿ ಬಿಕ್ಕಟ್ಟು ಉದ್ಭವಿಸಿರಲಿಲ್ಲ ಅಷ್ಟೇ ಅಲ್ಲ ಅಲ್ಲಿ ಗಸ್ತು ತಿರುಗುತಿದ್ದ ಚೀನಿ ಸೈನಿಕರು ಕೂಡ ಭಾರತದ ಸೈನಿಕರೊಂದಿಗೆ ಸ್ನೇಹ ಪರರೇ ಅಗಿದ್ದರು.
ಅಂದು ಸಂಜೆ 7 ಗಂಟೆಗೆ, ಕರ್ನಲ್ ಬಾಬು ಮತ್ತು ಇಬ್ಬರು ಮೇಜರ್ಗಳು ಸೇರಿದಂತೆ ಸುಮಾರು 35 ಸೈನಿಕರ ತಂಡದೊಂದಿಗೆ ಕಾಲ್ನಡಿಗೆಯಲ್ಲಿ ಚೀನಿ ನಿರ್ಮಿತ ವೀಕ್ಷಣಾ ಪೋಸ್ಟ್ ಕಡೆಗೆ ತೆರಳಿದರು. ಆ ತಂಡವು ಚೀನೀ ಸೈನಿಕರೊಂದಿಗೆ ಯುದ್ಧಮಾಡುವಿಕೆಯ ಮನಸ್ಥಿತಿಯನ್ನು ಹೊಂದಿರಲಿಲ್ಲ. ಬದಲಿಗೆ ವಿಚಾರಿಸುವ ಇರಾದೆ ಹೊಂದಿತ್ತು. ಅವರು ಚೀನೀ ಶಿಬಿರವನ್ನು ತಲುಪಿದಾಗ, ಭಾರತೀಯ ತಂಡವು ಅಲ್ಲಿ ಗಮನಿಸಿದ ಮೊದಲ ವಿಷಯವೆಂದರೆ ಚೀನಾದ ಸೈನ್ಯವು ಎಂದಿನ ಪರಿಚಿತವಾಗಿ ಕಾಣಲಿಲ್ಲ – ಅವರು ಸಾಮಾನ್ಯವಾಗಿ ಈ ಪ್ರದೇಶದಲ್ಲಿ ನಿಯೋಜಿಸಲಾಗುವ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಡೆಗಳಾಗಿರಲಿಲ್ಲ.
16 ಬಿಹಾರದ ಇನ್ಫಾಂಟ್ರಿ ಬೆಟಾಲಿಯನ್ ಮತ್ತು ಚೀನಾದ ಸೈನಿಕರು ಪರಸ್ಪರ ಪರಿಚಿತರೇ ಆಗಿದ್ದರು. ಆದರೆ ಈ ಹೊಸ ಸೈನಿಕರ ಮುಖಗಳನ್ನು ನೋಡಿದ ಕರ್ನಲ್ ಬಾಬು ಮತ್ತು ತಂಡಕ್ಕೆ ಆಶ್ಚರ್ಯವೇ ಅಗಿತ್ತು. ಈ ಹೊಸ ಚೀನೀ ಸೈನಿಕರನ್ನು ಟಿಬೆಟ್ನಿಂದ ಎಲ್ಎಸಿಯ ಬದಿಯಲ್ಲಿರುವ ‘ಆಳ’ ಪ್ರದೇಶಗಳಿಗೆ ಸೀಮಿತಗೊಳಿಸಲಾಗಿದೆ ಎಂಬುದು ನಂತರ ತಿಳಿದು ಬಂದಿದೆ.
ಬಾಬು ನೇತೃತ್ವದ ಭಾರತೀಯ ತಂಡ ಬಂದ ಕೂಡಲೇ ಈ ‘ಹೊಸ’ ಚೀನೀ ಪಡೆಗಳು ತಕ್ಷಣ ಪ್ರತಿರೋಧ ವ್ಯಕ್ತಪಡಿಸಿವೆ. ಕರ್ನಲ್ ಬಾಬು ಅವರು ಈ ಪೋಸ್ಟ್ ಅನ್ನು ಏಕೆ ಪುನಃ ನಿರ್ಮಿಸಲಾಗಿದೆ ಎಂದು ಕೇಳಿದಾಗ, ಚೀನಾದ ಸೈನಿಕನೊಬ್ಬ ಮುಂದೆ ಬಂದು ಚೀನೀ ಭಾಷೆಯಲ್ಲಿ ನಿಂದಿಸಿ ಕರ್ನಲ್ ಬಾಬು ಅವರನ್ನು ಹಿಂದಕ್ಕೆ ತಳ್ಳಿದ್ದಾನೆ. ತಮ್ಮ ಕಮಾಂಡಿಂಗ್ ಅಧಿಕಾರಿಯನ್ನೇ ಅವಮಾನಿಸಿದ ಕೂಡಲೇ ಭಾರತದ ಸೈನಿಕರು ರೊಚ್ಚಿಗೆದ್ದಿದ್ದಾರೆ. ಏಕೆಂದರೆ ಸೇನೆಯಲ್ಲಿ ಮೇಲಧಿಕಾರಿಗಳ ಮೇಲೆ ಹಲ್ಲೆ, ಅಗೌರವ ತೋರುವುದು ಸ್ವತಃ ತಮ್ಮ ಪೋಷಕರ ಮೇಲೆ ಆದ ಹಲ್ಲೆ ಮತ್ತು ಅಗೌರವ ಎಂದು ಭಾವಿಸಲಾಗುತ್ತದೆ. ಭಾರತೀಯ ತಂಡ ಚೀನಿಯರ ಮೇಲೆ ಹಲ್ಲೆಗೆ ಮುಂದಾಯಿತು. ಈ ಘರ್ಷಣೆಯು ಯಾವುದೇ ರೀತಿಯ ಶಸ್ತ್ರಾಸ್ತ್ರಗಳಿಲ್ಲದ ಮುಷ್ಟಿ-ಹೋರಾಟವಾಗಿತ್ತು. ಇದು ಮೊದಲ ಘರ್ಷಣೆ ಆಗಿದ್ದು ಮತ್ತು ಸುಮಾರು 30 ನಿಮಿಷಗಳ ನಂತರ ಎರಡೂ ಕಡೆಯಲ್ಲಿ ಸೈನಿಕರ ಗಾಯಗಳೊಂದಿಗೆ ಕೊನೆಗೊಂಡಿತು, ಇದರಲ್ಲಿ ಭಾರತ ತಂಡವು ಮೇಲುಗೈ ಸಾಧಿಸಿತು.
ನಂತರ ಭಾರತೀಯ ಸೈನಿಕರು ಚೀನೀ ಸೈನಿಕರು ನಿರ್ಮಿಸಿದ್ದ ಪೋಸ್ಟ್ ಅನ್ನು ತೆಗೆದು ಹಾಕಿದರು. ಅವರ ಸೇನೆಯ ಕಮಾಂಡಿಂಗ್ ಅಧಿಕಾರಿಯನ್ನು ಚೀನಿ ಸೈನಿಕನೊಬ್ಬ ತಳ್ಳುವುದನ್ನು ನಮ್ಮ ಸೈನಿಕರು ಚೀನಾದ ಸೇನೆ ಕೆಂಪು ರೇಖೆಯನ್ನೇ ದಾಟಿದಂತೆ ಎಂದು ಭಾವಿಸಿದ್ದರು. ಚೀನೀ ಪೋಸ್ಟ್ ಕಿತ್ತೆಸೆದ ನಂತರ ಕರ್ನಲ್ ಬಾಬು ಅವರು ಗಾಯಗೊಂಡಿದ್ದ ಭಾರತೀಯ ಸೈನಿಕರನ್ನು ಶಿಬಿರಕ್ಕೆ ವಾಪಾಸ್ ಕಳಿಸಿ ಹೆಚ್ಚಿನ ಸೈನ್ಯವನ್ನು ಕಳಿಸುವಂತೆ ಸೂಚಿಸಿದರು. ಈ ಹಿಂದೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಬೋಧಕರಾಗಿದ್ದ ಕರ್ನಲ್ ಬಾಬು, ಈ ‘ಹೊಸ’ ಚೀನೀ ಸೈನ್ಯದ ಉಪಸ್ಥಿತಿ ಮತ್ತು ಚೀನಾದ ಯುವ ಸೈನಿಕನ ಸಂಪೂರ್ಣ ಅನಿರೀಕ್ಷಿತ ‘ಮೊದಲ ಹೊಡೆತ ಅನುಭವಿಸಿದರೂ ಶಾಂತವಾಗೇ ಇದ್ದು ಆಕ್ರೋಶಿತರಾಗಿದ್ದ ತನ್ನ ಪಡೆಯ ಸೈನಿಕರನ್ನು ಸಮಾಧಾನಿಸಿದ್ದರೆನ್ನಲಾಗಿದೆ.
ಅಧಿಕಾರ ವಹಿಸಿಕೊಂಡಿದ್ದ ‘ಹೊಸ’ ಚೀನೀ ಪಡೆಗಳನ್ನು ಕರ್ನಲ್ ಬಾಬು ಬಲವಂತವಾಗಿ ಎಲ್ಎಸಿಯಿಂದ ಹಿಂದಕ್ಕೆ ಹಿಮ್ಮೆಟ್ಟಿಸಿದ್ದರು. ಇದು ಮೊದಲ ಘಟನೆ ಆಗಿದ್ದು ಎರಡನೆಯ ಘಟನೆಯು ಕೆಲ ಘಂಟೆಗಳ ನಂತರ ನಡೆಯುತ್ತದೆ. ಈ ಎರಡನೆಯ ಜಗಳದಲ್ಲಿಯೇ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ. ಕರ್ನಲ್ ಬಾಬು ಅವರು ಅನುಮಾನಿಸಿದ್ದಂತೆ ರಾತ್ರಿ 9 ಘಂಟೆಯ ವೇಳೆಗೆ ‘ಹೊಸ’ ರೀತಿಯ ಹೆಚ್ಚಿನ ಚೀನೀ ಪಡೆಗಳು ಗಾಲ್ವಾನ್ ತೀರದಲ್ಲಿ ಮತ್ತು ಬಲಕ್ಕೆ ಒಂದು ಪರ್ವತದ ಮೇಲಿರುವ ಸ್ಥಾನಗಳಲ್ಲಿ ಕಾಯುತ್ತಿದ್ದವು. ಭಾರತೀಯ ಸೈನಿಕರು ಬಂದ ಕೂಡಲೇ ದೊಡ್ಡ ದೊಡ್ಡ ಕಲ್ಲುಗಳನ್ನು ಮೇಲಿನಿಂದ ಚೀನೀಯರು ಉರುಳಿಸತೊಡಗಿದ್ದಾರೆ. ಆಗ ಕರ್ನಲ್ ಬಾಬು ಅವರ ತಲೆಗೆ ದೊಡ್ಡ ಕಲ್ಲೊಂದು ಬಡಿದು ಅವರು ಗಾಲ್ವಾನ್ ನದಿಗೆ ಬಿದ್ದರು. ಅದು ಕರ್ನಲ್ ಮೇಲೆ ಗುರಿಯಿಟ್ಟ ನೇರ ದಾಳಿಯಾಗಿರದೆ ಇರಬಹುದು, ಆದರೆ ಈ ಘರ್ಷಣೆಯಲ್ಲಿ ಅವರಿಗೆ ಹೊಡೆತ ಬಿದ್ದಿತು.
ಈ ಎರಡನೇ ಘರ್ಷಣೆ ಸುಮಾರು 45 ನಿಮಿಷಗಳ ಕಾಲ ನಡೆಯಿತು, ಮತ್ತು ಈ ಘರ್ಷಣೆಯು ಎಲ್ಎಸಿಯಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿಭಿನ್ನ ಗುಂಪುಗಳ ನಡುವೆ ನಡೆಯಿತು. ಸುಮಾರು 300 ರಷ್ಟು ಯೋಧರು ಪರಸ್ಪರ ಜಗಳವಾಡಿದ್ದಾರೆ. ಹೋರಾಟ ನಿಂತಾಗ, ಭಾರತೀಯ ಕಮಾಂಡಿಂಗ್ ಅಧಿಕಾರಿ ಸೇರಿದಂತೆ ಭಾರತೀಯ ಮತ್ತು ಚೀನಾದ ಸೈನ್ಯದ ಹಲವಾರು ದೇಹಗಳು ನದಿಯಲ್ಲಿದ್ದವು. ಚೀನಾದವರು ಮುಳ್ಳುತಂತಿ ಸುತ್ತಿದ ರಾಡ್ಗಳಿಂದ ಲೋಹದ ಮೊನಚಾದ ದೊಣ್ಣೆಗಳ ಬಳಕೆ ಮಾಡಿದ್ದರು. ನಂತರ, ಎರಡು ಸೈನ್ಯದದವರು ಹಿಂದೆ ಸರಿದಿದ್ದಾರೆ, ರಾತ್ರಿ 11 ಗಂಟೆಗೆ ಉದ್ವಿಗ್ನತೆ ಶಮನಗೊಂಡಿತು. ಕರ್ನಲ್ ಬಾಬು ಅವರ ದೇಹ ಮತ್ತು ಇತರ ಕೆಲವು ಸೈನಿಕರ ದೇಹಗಳನ್ನು ಭಾರತದ ಕಡೆಗೆ ಕೊಂಡೊಯ್ಯಲಾಯಿತು, ಚೀನೀ ಸೈನಿಕರ ದೇಹಗಳನ್ನು ಅವರು ಕೊಂಡೊಯ್ದರು. ಆದರೆ ಉಳಿದ ಭಾರತದ ಸೈನಿಕ ತಂಡದವರು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಯೇ ಇದ್ದರು.
ಮೃತದೇಹಗಳನ್ನು ಎತ್ತುವ ಸಮಯದಲ್ಲಿ, ಮತ್ತು ಕತ್ತಲೆಯಲ್ಲಿ ಗಾಯಗೊಂಡ ಸಿಬ್ಬಂದಿಗಳ ನರಳುವಿಕೆಯ ಮಧ್ಯೆ, ಚೀನಾದಿಂದ ಬಂದ ಡ್ರೋನ್ ಕಾಣಿಸಿಕೊಂಡಿತು ಅದು ನಿಧಾನವಾಗಿ ಕಣಿವೆಯ ಮೂಲಕ ಚಲಿಸುತ್ತಿತ್ತು. ಬಹುಶಃ ರಾತ್ರಿ ಇನ್ಫ್ರಾರೆಡ್ಕ್ಯಾಮೆರಾಗಳನ್ನು ಬಳಸಿ ಆಗಿರುವ ಹಾನಿಯನ್ನು ಅಂದಾಜಿಸಲು ಮತ್ತು ಬದುಕುಳಿದವರ ಮೇಲೆ ಮತ್ತೊಂದು ಆಕ್ರಮಣವನ್ನು ಮಾಡುವ ಉದ್ದೇಶ ಹೊಂದಿದ್ದಿರಬೇಕು. ನಂತರ ಭಾರತದ 16 ಬಿಹಾರ ಮತ್ತು 3 ಪಂಜಾಬ್ ರೆಜಿಮೆಂಟ್ನ ಘಾತಕ್ ಪ್ಲಟೂನ್ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದ ನಿಯೋಜನೆಗೆ ವಿನಂತಿಸಲಾಯಿತು. ಪ್ರತಿ ಕಾಲಾಳುಪಡೆ ಬೆಟಾಲಿಯನ್ನಲ್ಲಿ ಘಾತಕ್ ದಳಗಳಿವೆ, ಅದು ದಾಳಿಯನ್ನು ಮುನ್ನಡೆಸುತ್ತದೆ ಮತ್ತು ‘ಆಘಾತ ಪಡೆ’ಗಳಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಹೆಚ್ಚಿನ ಪಡೆಗಳು ಸ್ಥಳಕ್ಕೆ ಬಂದಾಗ ಸೈನ್ಯವು ಚೀನಾದ ಭಾಗದ ಭೂ ಪ್ರದೇಶಕ್ಕೆ ನುಗ್ಗಿದರು. ಚೀನೀ ಪಡೆಗಳು ಪುನಃ ಅತಿಕ್ರಮಣ ಮಾಡದಂತೆ ಹಿಮ್ಮೆಟ್ಟಿಸುವುದು ಇವುಗಳ ಉದ್ದೇಶವಾಗಿತ್ತು.
ಇದಾದ ನಂತರ ಮೂರನೇ ಹಂತದ ಘರ್ಷಣೆ ರಾತ್ರಿ 11 ಗಂಟೆಯ ನಂತರ ಪ್ರಾರಂಭವಾಯಿತು ಆಗ ಚೀನಾದ ಕಡೆಯಿಂದಲೂ ಹೆಚ್ಚಿನ ಪಡೆಗಳು ಬಂದಿದ್ದವು. ಸುಮಾರು 5 ಘಂಟೆಗಳ ವರೆಗೆ ಎರಡೂ ಕಡೆಗಳ ಸೈನಿಕರು ಚೀನಾದ ಭೂ ಪ್ರದೇಶದಲ್ಲೇ ಪರಸ್ಪರ ಕೈ ಮಿಲಾಯಿಸಿ ಹೋರಾಡಿದರು. ಮುಷ್ಟಿ ಹೊಡೆತದ ತೀವ್ರತೆಗೆ ಎರಡೂ ಪಡೆಗಳ ಸೈನಿಕರು ಬಂಡೆಗಳ ಮೇಲೆ ಮತ್ತು ಕಿರಿದಾದ ಗಾಲ್ವನ್ ನದಿಯೊಳಗೆ ಬಿದ್ದು ಗಾಯಗೊಂಡರು. ನದಿ ತೀರದಲ್ಲಿ ಚೀನೀ ಸೈನಿಕರು ಮೊದಲೇ ತೋಡಿದ್ದ ಕಂದಕದಿಂದಾಗಿ ಸಾವು ಹೆಚ್ಚಾಗಿ ಸಂಭವಿಸಿದೆ ಎನ್ನಲಾಗಿದೆ.
ಘಟನೆ ಪ್ರಾರಂಭವಾದಾಗಿನಿಂದ ಐದು ಗಂಟೆಗಳ ಹೋರಾಟದ ನಂತರ ಶಕ್ತಿಯು ಸಂಪೂರ್ಣವಾಗಿ ವ್ಯಯಿಸಿ ಮೌನ ಆವರಿಸಿತು. ಸತ್ತ ಮತ್ತು ಗಾಯಗೊಂಡ ಸೈನಿಕರನ್ನು ಸ್ಥಳಾಂತರಿಸಲು ಭಾರತೀಯ ಮತ್ತು ಚೀನಾದ ವೈದ್ಯರ ತಂಡವೂ ಬಂದಿತು. ಎರಡೂ ಕಡೆಯ ಸೈನಿಕರು ಮೃತ ಅವಶೇಷಗಳನ್ನು ಕತ್ತಲೆಯಲ್ಲಿ ವಿನಿಮಯ ಮಾಡಿಕೊಂಡರು. ಹೋರಾಟದ ನಂತರ ಭಾರತದ ಇಬ್ಬರು ಮೇಜರ್ ಗಳು, ಇಬ್ಬರು ಕ್ಯಾಪ್ಟನ್ , ಮತ್ತು 6 ಸೈನಿಕರು ಚೀನಾದ ಸೈನ್ಯದ ವಶಕ್ಕೆ ಸಿಲುಕಿದರು ಎನ್ನಲಾಗಿದೆ. ಈ ಘಟನೆಯ ಕುರಿತು ಮಾಜಿ ಸೇನಾ ಮುಖ್ಯಸ್ಥ ಮತ್ತು ಹಾಲಿ ಸಚಿವ ಜನರಲ್ ವಿ.ಕೆ.ಸಿಂಗ್ ಮಾಧ್ಯಮ ಸಂದರ್ಶನಗಳಲ್ಲಿ ಚೀನಾದ ಸಾವು ನೋವುಗಳು ಭಾರತೀಯ ಸೇನೆಯು ಅನುಭವಿಸಿದಕ್ಕಿಂತಲೂ ದುಪ್ಪಟ್ಟು ಅಧಿಕವಾಗಿದೆ. ಇದರಲ್ಲಿ ಭಾರತದ ಕಡೆಯ ಇಪ್ಪತ್ತು ಸೈನಿಕರು ಮೃತಪಟ್ಟಿದ್ದರೆ ಚೀನಾದ ಕಡೆಯ 5 ಅಧಿಕಾರಿಗಳು ಸೇರಿದಂತೆ 16 ಚೀನೀ ಸೈನಿಕರ ದೇಹಗಳನ್ನು ಚೀನಾದ ಕಡೆಗೆ ಹಸ್ತಾಂತರಿಸಲಾಗಿದೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
16 ಮಂದಿ ಚೀನಾದ ಸೇನೆಯ ಸೈನಿಕರು ಯುದ್ಧಭೂಮಿಯಲ್ಲಿ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದ್ದರೂ ಅಮೇರಿಕ ಗುಪ್ತಚರ ಮೂಲಗಳ ಪ್ರಕಾರ ಮೃತಪಟ್ಟವರ ಸಂಖ್ಯೆ 35 ಕ್ಕೂ ಹೆಚ್ಚಾಗಿದೆ. ಗಾಯಗೊಂಡ ಚೀನಿಯರಲ್ಲಿ ಇನ್ನೂ ಅನೇಕರು ಅವರ ಗಾಯಗಳಿಂದ ನಂತರ ಸಾವನ್ನಪ್ಪಿರಬಹುದು, ಆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಜೂನ್ 16 ರಂದು ಮುಂಜಾನೆ, ಭಾರತೀಯ ಪಡೆಗಳು ಎಲ್ಎಸಿಯಿಂದ ಹಿಂದಕ್ಕೆ ಸರಿದವು. ಸೂರ್ಯ ಉದಯಿಸಿದಾಗ, ಎರಡೂ ಕಡೆ ಮೇಜರ್ ಜನರಲ್ಗಳಿಗೆ ಮಾಹಿತಿಯನ್ನು ನೀಡಲಾಯಿತು ಮತ್ತು ಸೆರೆಯಲ್ಲಿರುವ ಸೈನಿಕರ ವಿನಿಮಯದ ವಿಧಾನಗಳ ಕುರಿತು ಮಾತುಕತೆ ನಡೆಯಿತು.
ಎರಡೂ ಕಡೆಯ ಸೈನಿಕರನ್ನು ಆಯಾ ಕಡೆ ಕಳುಹಿಸಲು ಇನ್ನೂ ಮೂರು ದಿನಗಳು ಬೇಕಾಗಬಹುದು ಎಂದು ಅಗ ಎರಡೂ ಪಡೆಗಳ ಮುಖ್ಯಸ್ಥರು ಹೇಳುತಿದ್ದರು. “ಇವರು ಸೆರೆಯಲ್ಲಿರುವ ಸೈನಿಕರಲ್ಲ ಅಥವಾ ಅ ರೀತಿಯ ಪರಿಸ್ಥಿತಿ ಇಲ್ಲ, ನಾವು ಅವರ ಸೈನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೆವು ಮತ್ತು ಅವರು ನಮ್ಮ ಪುರುಷರಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದರು.
ಈ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನೀ ಪಡೆಗಳು ಎಲ್ಎಸಿಯ ಮುಂಚೂಣಿಯಲ್ಲಿ ನಿಯೋಜಿಸಲ್ಪಟ್ಟ ಸಾಮಾನ್ಯ ಘಟಕವಲ್ಲ ಮತ್ತು ಈ ಹಿಂದೆ ಅನೇಕ ಸುತ್ತಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದವೂ ಅಲ್ಲ. ಗಾಲ್ವಾನ್ ಕಣಿವೆಯಲ್ಲಿ ಆಕ್ರಮಣಕಾರಿಯಾಗಿ ಮುನ್ನಡೆಯಲು ಇದು ಹೆಚ್ಚು ‘ಆಕ್ರಮಣಕಾರಿ ಮತ್ತು ಕಡಿಮೆ ಸಂದರ್ಭೋಚಿತವಾಗಿ ಒಗ್ಗಿಕೊಂಡಿರುವ ಸೈನಿಕರನ್ನು ಚೀನಾ ನಿಯೋಜಿಸಿದ್ದು ಇದು ಗಡಿ ಅತಿಕ್ರಮಣಕ್ಕೆ ಪೂರ್ವ ನಿಯೋಜಿತ ತಂತ್ರದ ಭಾಗ ಎನ್ನಲಾಗಿದೆ. 16 ಬಿಹಾರ ರೆಜಿಮೆಂಟ್ ಚೀನಿಯರಿಗೆ ಹೊಸದೇನಲ್ಲ. 2017 ರ ಡೋಕ್ಲಾಮ್ ಘರ್ಷಣೆಯ ಸಮಯದಲ್ಲಿ, ಈ ಘಟಕವನ್ನು ಆಳವಾದ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.
ಗಾಲ್ವಾನ್ ಕಣಿವೆಯಲ್ಲಿ, 16 ಬಿಹಾರ ಘಟಕವು ಒಂದೆರಡು ವರ್ಷಗಳಿಂದ ಸಂಪೂರ್ಣವಾಗಿ ಒಗ್ಗಿಕೊಂಡಿತ್ತು ಮತ್ತು ಚೀನಾದ ಕಡೆಯ ಸೈನಿಕರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿತ್ತು. ಆದ್ದರಿಂದ ಚೀನಾದ ಆಕ್ರಮಣಶೀಲತೆ ಹಾಗೂ ಚೀನಾ ಸೈನಿಕರ ತಕ್ಷಣದ ಯುದ್ಧತಂತ್ರವು ಭಾರತದ ಸೇನೆ ಗ್ರಹಿಕೆಯನ್ನು ಮೀರಿ ನಡೆದಿದೆ.
ಕರ್ನಲ್ ಬಾಬು ಅವರ ನಷ್ಟವು ಬಿಹಾರ ರೆಜಿಮೆಂಟ್16ಗೆ ಬಿದ್ದ ಭಾರೀ ಹೊಡೆತವಾಗಿದೆ. ಸದ್ಯ ಬಿಹಾರ್ ರೆಜಿಮೆಂಟ್ 16 ಗೆ ಭಡ್ತಿ ಪಡೆದ ಯುನಿಟ್ ಅಧಿಕಾರಿಯನ್ನು ಕಮಾಂಡಿಂಗ್ ಆಫೀಸರ್ ಆಗಿ ನೇಮಿಸಲಾಗಿದೆ. ಪ್ಯಾಟ್ರೋಲ್ ಪಾಯಿಂಟ್ 14 ರಲ್ಲಿ ಈಗ ಪರಿಸ್ಥಿತಿ ಗಮನಾರ್ಹವಾಗಿ ಶಾಂತವಾಗಿದೆ, ಗಾಲ್ವಾನ್ ಕಣಿವೆಯಲ್ಲಿನ ಉದ್ವಿಗ್ಗತೆಯನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ಪ್ರಗತಿಯನ್ನು ಸಾಧಿಸುವ ನಿರೀಕ್ಷೆಯಿದೆ.