ಭಾರತ ಮತ್ತು ಚೀನಾ ಗಡಿ ವಿವಾದ ಸಮಸ್ಯೆ ಇನ್ನೂ ಕೂಡಾ ತಣ್ಣಗಾಗಿಲ್ಲ. ಗಡಿಯಲ್ಲಿ ಸೇನಾ ಜಮಾವಣೆ ಎರಡೂ ದೇಶಗಳಿಂದ ನಡೆಯುತ್ತಲೇ ಇದೆ. ಸತತವಾದ ಮಾತುಕತೆಗಳ ನಂತರವೂ, ಚೀನಾ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಒಪ್ಪಿಕೊಳ್ಳುತ್ತಿಲ್ಲ. ಮಾತುಕತೆಯ ಸಂದರ್ಭದಲ್ಲಿ ಸೇನೆಯನ್ನು ವಾಪಾಸ್ ಪಡೆಯುವ ಆಶ್ವಾಸನೆ ನೀಡುತ್ತಾದರೂ, ನಂತರ ತನ್ನ ನರಿ ಬುದ್ದಿಯನ್ನು ತೋರಿಸುತ್ತಲೇ ಇದೆ. ಈ ಕಾರಣಕ್ಕಾಗಿ ಭಾರತ ಈಗ ತುರ್ತಾಗಿ ಶಸ್ತ್ರಾಸ್ತ್ರಗಳ ಆಮದಿಗೆ ಮುಂದಾಗಿದೆ.
ಸದ್ಯ ಗಡಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ತುರ್ತಾಗಿ 10,000 ಕೋಟಿಗಳಷ್ಟು ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಭಾರತ ಮುಂದಾಗಿದೆ. ಫ್ರಾನ್ಸ್, ಇಸ್ರೇಲ್, ರಷ್ಯಾ ಮತ್ತು ಅಮೇರಿಕಾದಿಂದ ಆಯುಧಗಳನ್ನು ಆಮದು ಮಾಡಿಕೊಳ್ಳುವ ಯೋಜನೆಯನ್ನು ರಕ್ಷಣಾ ಇಲಾಖೆ ಹಮ್ಮಿಕೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇವೆಲ್ಲದರ ಮಧ್ಯೆ ನವೆಂಬರ್ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತ ಮತ್ತು ಚೀನಾ ಮುಖಾಮುಖಿಯಾಗಲಿದೆ. ಲಡಾಖ್ನಲ್ಲಿ ಗಡಿ ವಿವಾದ ತಾರಕಕ್ಕೆ ಏರಿದ ನಂತರ ಮೊದಲ ಬಾರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
Also Read: ಚುನಾವಣಾ ಲಾಭದ ಮೇಲೆ ಕಣ್ಣಿಟ್ಟ ನಮ್ಮವರು ಬರಿದೇ ಬಡಬಡಿಸಿದರು!
ಮಾರ್ಚ್ 26ರಂದು ಸೌದಿ ಅರೇಬಿಯಾದಲ್ಲಿ ನಡೆದಂತಹ ವರ್ಚ್ಯವಲ್ ಜಿ-20 ಶೃಂಗ ಸಭೆಯಲ್ಲಿ ಕೋವಿಡ್-19 ಕುರಿತು ಚರ್ಚೆಸುವ ಸಂದರ್ಭ ಈ ಇಬ್ಬರು ನಾಯಕರು ವೇದಿಕೆಯನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಯಾವುದೇ ರೀತಿಯ ಸಂಭಾಷಣೆ ನಡೆದಿಲ್ಲವೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆದರೆ, ಬ್ರಿಕ್ಸ್ ಸಭೆ ನಡೆಯುವ ಮೊದಲು ಸಂಭಾಷಣೆ ನಡೆಯುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ ಎಂದು ಕೂಡಾ ಹೇಳಿದೆ.
ಗಡಿ ವಿವಾದದ ಕುರಿತು ಬೆಳಕು ಚೆಲ್ಲುವ ಸದಾವಕಾಶ ಇದಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾದ ನರಿ ಬುದ್ದಿಯನ್ನು ಬಯಲು ಮಾಡುವ ಸಂದರ್ಭ ಪ್ರಧಾನಿ ಮೋದಿಯವರಿಗೆ ಸಿಗಲಿದೆ. ಆದರೆ, ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ. ಏಕೆಂದರೆ, ಚೀನೀ ಯೋಧರು, ಭಾರತದ ಪ್ರದೇಶವನ್ನು ಅತಿಕ್ರಮಿಸಿ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿ ಅವರನ್ನು ಹತ್ಯೆಗೈದ ಸಂದರ್ಭದಲ್ಲಿ, ಚೀನಾ ವಿರುದ್ದ ಕಟು ಮಾತಗಳನ್ನು ಮೋದಿಯವರು ಆಡಿರಲಿಲ್ಲ. ಬದಲಾಗಿ, ಚೀನಾ ಸೈನ್ಯ ಯಾವುದೇ ಭೂ ಪ್ರದೇಶವನ್ನು ಅತಿಕ್ರಮಿಸಿಲ್ಲ ಎಂದು ಅವರ ಪರ ವಕಾಲತ್ತು ವಹಿಸಿದ್ದರು. ಈ ಮೂಲಕ ಭಾರತೀಯ ಸೇನೆಯ ಆತ್ಮ ಬಲವನ್ನು ಕುಗ್ಗಿಸುವ ಮಾತುಗಳನ್ನು ಪ್ರಧಾನಿ ಮೋದಿ ಆಡಿದ್ದರು.
Also Read: ಸೈನಿಕರ ಬಲಿದಾನದ ಬಗ್ಗೆಯೂ ಮೋದಿ ಮೌನ, ಪ್ರಶ್ನೆಗಳ ಮಳೆ ಸುರಿಸುತ್ತಿರುವ ರಾಹುಲ್ ಗಾಂಧಿ
2017ರಲ್ಲಿ ಡೋಕ್ಲಾಮ್ನಲ್ಲಿ ಚೀನಾ ಸೈನ್ಯ ಮತ್ತು ಭಾರತೀಯ ಸೇನೆ ಮುಖಾಮುಖಿಯಾಗಿದ್ದಾಗ, ಬ್ರಿಕ್ಸ್ ಶೃಂಗ ಸಭೆ ನಡೆಯುವ ಕೆಲವೇ ದಿನಗಳ ಮುಂಚೆ ಚೀನಾ ತನ್ನ ಸೇನೆಯನ್ನು ವಾಪಸ್ ಕರೆದುಕೊಂಡಿತ್ತು. ಈ ಬಾರಿಯೂ ಇಂತಹುದೇ ಬೆಳವಣಿಗೆ ನಡೆಯುವ ಸಾಧ್ಯತೆಯನ್ನು ಕೂಡಾ ಅಲ್ಲಗೆಳೆಯುವಂತಿಲ್ಲ.
ಒಂದು ವೇಳೆ ಚೀನಾ ತನ್ನ ಸೇನೆಯನ್ನು ವಾಪಾಸ್ ಕರೆದುಕೊಳ್ಳದಿದ್ದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಅಸಲಿ ಮುಖವನ್ನು ಬಯಲಿಗೆಳೆಯುವ ಧೈರ್ಯವನ್ನು ಪ್ರಧಾನಿಯವರು ತೋರಿಸಬೇಕಿದೆ. ತಮ್ಮ 56 ಇಂಚಿನ ಎದೆಯಲ್ಲಿನ ತಾಕತ್ತು, ದೇಶದಲ್ಲಿ ಕೇವಲ ವಿರೋಧ ಪಕ್ಷವನ್ನು ಮಟ್ಟಹಾಕುವಲ್ಲಿ ಮಾತ್ರ ವ್ಯರ್ಥ ಮಾಡದೇ, ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತದ ಬಲವನ್ನು ಇನ್ನಷ್ಟು ಹೆಚ್ಚಿಸುವತ್ತ ಗಮನ ನೀಡಬೇಕಿದೆ.