ವಿಶ್ವದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಆತ್ಮಹತ್ಯೆಗಳ ಸಂಖ್ಯೆಯೂ ಕಡಿಮೆಯೇನಲ್ಲ. ವಿಶ್ವದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಜನರಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಬಹುತೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಮಾನಸಿಕ ಖಿನ್ನತೆ ಮತ್ತು ಜೀವನದಲ್ಲಿ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿ ಯುವ ವಯಸ್ಸಿನ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣ ಆತಂಕ ಹುಟ್ಟಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಂಕಿ ಅಂಶಗಳ ಪ್ರಕಾರ 2019ರಲ್ಲಿ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 10,335 ಅಗಿದೆ. ಈ ಪ್ರಕಾರ ದೇಶದಲ್ಲಿ ಗಂಟೆಗೆ ಒಬ್ಬ ವಿದ್ಯಾರ್ಥಿ/ನಿ ಆತ್ಮಹತ್ಯೆಗೆ ಶರಣಾಗಿದ್ದಾನೆ/ಳೆ. ಕಳೆದ 25 ವರ್ಷಗಳ ಅತ್ಮಹತ್ಯೆಯ ಅಂಕಿ ಅಂಶ ಗಮನಿಸಿದರೆ 1995 ರಿಂದ ಡಿಸೆಂಬರ್ 2019ರ ವರೆಗೆ ಒಟ್ಟು 1.7 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ಶೇಕಡಾ 52 ಹೆಚ್ಚಾಗಿದೆ. 2019ರಲ್ಲಿ ಆತ್ಮಹತ್ಯೆಗೆ ಶರಣಾದವರಲ್ಲಿ ಮಹಾರಾಷ್ಟ್ರ ರಾಜ್ಯ ಮುಂಚೂಣಿಯಲ್ಲಿದ್ದು ಒಟ್ಟು 1487, ಮದ್ಯ ಪ್ರದೇಶ 927, ತಮಿಳುನಾಡಿನಲ್ಲಿ 914 ಮತ್ತು ಕರ್ನಾಟಕದಲ್ಲಿ 603 ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗಲು ಅತಿಯಾದ ಮೊಬೈಲ್ ಬಳಕೆ ಮತ್ತು ಡ್ರಗ್ಸ್ ಕೂಡ ಒಂದು ಕಾರಣವಾಗಿದೆ. ಪೋಷಕರು ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯೇನಲ್ಲ.
ಆರೋಗ್ಯ ತಜ್ಞರ ಪ್ರಕಾರ ನಾವು ದೈಹಿಕ ಆರೋಗ್ಯಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಿದೆ. ಈ ದಿಸೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವಾದರೂ ಸರ್ಕಾರವು ಜನರ ಮಾನಸಿಕ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರೋನಾ ಸಾಂಕ್ರಮಿಕವು ಹರಡುವುದನ್ನು ತಡೆಗಟ್ಟಲು ಮಾರ್ಚ್ ಮೂರನೇ ವಾರದಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿತು. ಈ ದಿಢೀರ್ ಲಾಕ್ಡೌನ್ ನಿಂದಾಗಿ ಜನತೆ ಸಂಕಷ್ಟಕ್ಕೀಡಾದರು. ನಂತರ ಕಳೆದ ಜೂನ್ನಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿತು, ಆದರೆ ಲಾಕ್ ಡೌನ್ ನಿಂದಾಗಿ ಜನರ ಮಾನಸಿಕ ಆರೋಗ್ಯದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳು ಈಗಲೂ ಕಾಣಿಸಿಕೊಳ್ಳುತ್ತಿವೆ. ದೇಶವು ವಿಶ್ವದ ತೀವ್ರವಾದ ಕೋವಿಡ್ -19 ವಿರುದ್ದ ಹೋರಾಡುತ್ತಿದೆ. ಭಾರತದಲ್ಲಿ ಈಗ 4 ದಶ ಲಕ್ಷಕ್ಕೂ ಹೆಚ್ಚಿನ ವೈರಸ್ ಪ್ರಕರಣಗಳಿವೆ, ಇದು ವಿಶ್ವದ ಎರಡನೇ ಸ್ಥಾನದಲ್ಲಿದೆ.

ಸಾಕಷ್ಟು ಜನರು ಈ ಲಾಕ್ಡೌನ್ ನಿಂದಾಗಿ ತಮ್ಮ ಜೀವಮಾನದಲ್ಲೇ ಎಂದೂ ಕಂಡಿರದಷ್ಟು ಕಷ್ಟ ಪಟ್ಟಿದ್ದಾರೆ. ಈ ಕುರಿತು ಕಳೆದ ಮೇ ತಿಂಗಳಿನಲ್ಲಿ ಸಂಶೋಧನೆ ನಡೆಸಿರುವ ಸೂಸೈಡ್ ಪ್ರಿವೆನ್ಷನ್ ಇನ್ ಇಂಡಿಯಾ ಫೌಂಡೇಶನ್ (ಎಸ್ಪಿಐಎಫ್) ಪ್ರಕಾರ, ಸಮೀಕ್ಷೆ ನಡೆಸಿದ 159 ಮಾನಸಿಕ ಆರೋಗ್ಯ ತಜ್ಞರಲ್ಲಿ ಸುಮಾರು 65% ರಷ್ಟು ಜನರು ತಮ್ಮ ರೋಗಿಗಳಲ್ಲಿ ಸ್ವಯಂ-ಹಾನಿಯ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಚಿಕಿತ್ಸಕರು ತಾವು ವೃತ್ತಿಯ ಆಯಾಸವನ್ನು ಅನುಭವಿಸುತ್ತಿದ್ದೇವೆಂದು ಹೇಳಿದರು, ಮತ್ತು 75% ಕ್ಕಿಂತ ಹೆಚ್ಚು ಜನರು ಆಯಾಸವು ತಮ್ಮ ಕೆಲಸದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಏಪ್ರಿಲ್ನಲ್ಲಿ ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ, ಭಾಗವಹಿಸಿದ 1,685 ಜನರಲ್ಲಿ 40% ಜನರು ಸಾಂಕ್ರಾಮಿಕ ರೋಗದಿಂದಾಗಿ ಆತಂಕ ಮತ್ತು ಖಿನ್ನತೆಯಂತಹ ಸಾಮಾನ್ಯ ಮಾನಸಿಕ ಆರೋಗ್ಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತೋರಿಸಿದೆ. ಲಾಕ್ಡೌನ್ ಈಗ ಸಡಿಲಿಕೆ ಆಗಿರಬಹುದು. ಆದರೆ ಜನರ ನಿತ್ಯ ಜೀವನ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸಾಂಕ್ರಾಮಿಕ ರೋಗವು ಯಾವಾಗ ಕೊನೆಗೊಳ್ಳುತ್ತದೆ ಎಂಬ ಬಗ್ಗೆ ಆತಂಕ ಮತ್ತು ಅನಿಶ್ಚಿತತೆ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
ಕೋವಿಡ್ -19 ಕ್ಕಿಂತ ಮೊದಲು, ಆಗ್ನೇಯ ಏಷ್ಯಾದಲ್ಲಿ ಭಾರತವು ಅತಿ ಹೆಚ್ಚು ಆತ್ಮಹತ್ಯೆ ಪ್ರಮಾಣವನ್ನು ಹೊಂದಿತ್ತು. ಈಗ ವೈದ್ಯಕೀಯ ತಜ್ಞರು ದೇಶದ ಮಾನಸಿಕ ಆರೋಗ್ಯ ವ್ಯವಸ್ಥೆಯನ್ನು ಬದಿಗೆ ತಳ್ಳಲಾಗುತ್ತಿದೆ ಎಂದು ಹೇಳುತ್ತಾರೆ. ಈ ವ್ಯವಸ್ಥೆಯು ಈಗಾಗಲೇ ಸೃಷ್ಟಿಯಾಗುತ್ತಿದೆ ಮತ್ತು ಹೆಚ್ಚಿನ ಹೊರೆಯಾಗಿದೆ, ಈಗ ಕೋವಿಡ್ನೊಂದಿಗೆ, ಹೆಚ್ಚಿದ ಬೇಡಿಕೆ, ನಿಧಾನಗತಿಯ ಸರಬರಾಜು ಮತ್ತು ಮುಂಚೂಣಿ ಕೋವಿಡ್ ವಾರಿಯರ್ಸ್ ನ ಕೆಲಸದ ಒತ್ತಡದಿಂದ ಖಿನ್ನತೆ ಹೆಚ್ಚುತ್ತಿದೆ ಎಂದು ಎಸ್ಪಿಐಎಫ್ ಸಂಸ್ಥಾಪಕ ನೆಲ್ಸನ್ ಮೋಸೆಸ್ ಹೇಳುತ್ತಾರೆ.
Also Read: ಕೋವಿಡ್ಗೆ ಆತ್ಮಹತ್ಯೆ ಪರಿಹಾರವಲ್ಲ; ಆತ್ಮಸ್ಥೈರ್ಯದಿಂದ ಎದುರಿಸೋಣ

2016 ರಲ್ಲಿ, 12 ರಾಜ್ಯಗಳಲ್ಲಿ ನಡೆಸಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರಿಗೆ ಬಳಸುವ 50 ಕ್ಕೂ ಹೆಚ್ಚು ಅವಹೇಳನಕಾರಿ ಪದಗಳ ಪಟ್ಟಿಯನ್ನು ದಾಖಲಿಸಿದೆ. ಸಾಮಾನ್ಯವಾಗಿ, ಮನೋವೈದ್ಯಕೀಯ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ಅಸಮರ್ಥರು ಮತ್ತು ಅವಿಶ್ವಾಸಾರ್ಹರು ಎಂದು ಸಾರ್ವಜನಿಕರು ನಂಬುತ್ತಾರೆ, ಇದರ ಪರಿಣಾಮವಾಗಿ ಅವರಿಗೆ ವಿವಾಹ ಮತ್ತು ಉದ್ಯೋಗ ಅವಕಾಶಗಳು ಕಡಿಮೆ ಆಗುತ್ತಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಒಬ್ಬರು ಹೇಳಿದರು. ಭಾರತದಲ್ಲಿ ಮಾನಸಿಕ ಆರೋಗ್ಯವನ್ನು ಪರಿಹರಿಸಲು ಐತಿಹಾಸಿಕ ಹಿಂಜರಿಕೆ ಭಾಗಶಃ ಪರಿಭಾಷೆಯ ಕೊರತೆಯಿಂದಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಭಾರತದ 22 ಭಾಷೆಗಳಲ್ಲಿ ಯಾವುದೂ “ಮಾನಸಿಕ ಆರೋಗ್ಯ” ಅಥವಾ “ಖಿನ್ನತೆ” ಎಂಬ ಅರ್ಥವನ್ನು ಹೊಂದಿಲ್ಲ.
ಉರ್ದು ಮತ್ತು ಇತರ ಭಾರತೀಯ ಭಾಷೆಗಳಲ್ಲಿ ದುಃಖ (ಉದಾಸಿ), ದುಃಖ (ಆಘಾತ) ಅಥವಾ ವಿನಾಶ (ಬೆಜಾಸಿ) ಎಂಬ ಪದಗಳಿದ್ದರೂ, ವಿಭಿನ್ನ ಮಾನಸಿಕ ಕಾಯಿಲೆಗಳನ್ನು ಪರಿಭಾಷೆಯಲ್ಲಿ ಹೆಸರಿಸುವಲ್ಲಿ ಬಳಸಲಾಗುವ ನಿರ್ದಿಷ್ಟ ಪದಗಳ ಕೊರತೆಯಿದೆ. ಮನೋವೈದ್ಯಶಾಸ್ತ್ರದ ಅಭ್ಯಾಸವು ಹೆಚ್ಚಾಗಿ ಪಾಶ್ಚಿಮಾತ್ಯವಾದುದು ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (nimhans) ವಿಭಾಗದ ಮುಖ್ಯಸ್ಥ. ಡಾ ಎಸ್ ಕೆ ಚತುರ್ವೇದಿ ಹೇಳುತ್ತಾರೆ. ಜನರು ತಮ್ಮ ಕುಟುಂಬದವರ ಜತೆಗೆ ತಮ್ಮ ದೈಹಿಕ ಲಕ್ಷಣಗಳು ಮತ್ತು ಕಾಯಿಲೆಗಳ ಬಗ್ಗೆ ಮಾತನಾಡುವುದು ಸುಲಭವಾಗಿದೆ ಆದರೆ ಮಾನಸಿಕ ಖಾಯಿಲೆ ಮತ್ತು ಖಿನ್ನತೆ ಬಗ್ಗೆ ಮಾತನಾಡುವುದು ಕಷ್ಟಕರ ಎಂದು ಅವರು ಹೇಳಿದರು.

2016 ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 83% ಜನರಿಗೆ ಸಾಕಷ್ಟು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಅವಕಾಶವೇ ಇರಲಿಲ್ಲ. ಅದೇ ವರ್ಷ, ಭಾರತವು ಪ್ರತಿ ಮಿಲಿಯನ್ ಜನರಿಗೆ ಮೂರು ಮನೋವೈದ್ಯರನ್ನು ಹೊಂದಿತ್ತು ಮತ್ತು ಕಡಿಮೆ ಮನಶ್ಶಾಸ್ತ್ರಜ್ಞರನ್ನು ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಅಮೇರಿಕದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಮನೋವೈದ್ಯರು ಮತ್ತು ಸುಮಾರು 300 ಮನಶ್ಶಾಸ್ತ್ರಜ್ಞರನ್ನು ಹೊಂದಿದೆ. ದೇಶದ ಗ್ರಾಮೀಣ ಭಾಗಗಳಲ್ಲಿ 15 ರಿಂದ 20 ಹಳ್ಳಿಗಳಲ್ಲಿ ಇರುವ 30 ಸಾವಿರ ಜನಸಂಖ್ಯೆಗೆ ತಾಲ್ಲೂಕು ಕೇಂದ್ರಗಳಲ್ಲಿ ದೈಹಿಕ ಖಾಯಿಲೆಗೆ ಚಿಕಿತ್ಸೆ ವ್ಯವಸ್ಥೆ ಇದ್ದರೂ ಮಾನಸಿಕ ಖಾಯಿಲೆ ತಜ್ಞರೇ ಇಲ್ಲ ಎಂದು ಗುಜರಾತ್ ನ ಮೈಂಡ್ಸ್ ಫೌಂಡೇಶನ್ನ ಕಾರ್ಯಕ್ರಮ ನಿರ್ದೇಶಕ ಅಮುಲ್ ಜೋಶಿ ಹೇಳುತ್ತಾರೆ.
ಭಾರತದಲ್ಲಿ ಜನರು ಗ್ರಾಮೀಣ ಮತ್ತು ನಗರ ಎಂದು ವಿಭಾಗವಾಗಿದ್ದು ಗ್ರಾಮೀಣ ಭಾರತದಲ್ಲಿ, ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ ಮತ್ತು ಅವರ ಸ್ನೇಹಿತರ ಜೊತೆ ಅವರ ಒತ್ತಡಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಇದರಿಂದಾಗಿ ಮಾನಸಿಕ ಖಾಯಿಲೆಗಳು ಇನ್ನಷ್ಟು ಉಲ್ಪಣಗೊಳ್ಳಲು ಕಾರಣವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅನೇಕ ಸಮುದಾಯಗಳಲ್ಲಿ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ತಂತ್ರಜ್ಞಾನವು ಪರಿಣಾಮಕಾರಿ ಆಗಿತ್ತು. ಆದರೆ ಸ್ಮಾರ್ಟ್ಫೋನ್ ಅಥವಾ ಇಂಟರ್ನೆಟ್ ಇಲ್ಲದ ಹಳ್ಳಿಗಳ ಜನರಿಗೆ ಆನ್ಲೈನ್ ಚಿಕಿತ್ಸೆಯು ಲಭ್ಯವಿರಲಿಲ್ಲ.
1.3 ಬಿಲಿಯನ್ ಜನರಿರುವ ದೇಶದಲ್ಲಿ ಜನರ ವರ್ತನೆಗಳನ್ನು ಬದಲಾಯಿಸುವುದು ದೊಡ್ಡ ಸವಾಲು. ಆದರೆ ಇತ್ತೀಚಿನ ತಿಂಗಳುಗಳಲ್ಲಿ, ಬದಲಾವಣೆಯ ಲಕ್ಷಣಗಳು ಕಂಡುಬಂದಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದ ಮೇರೆಗೆ, ನಿಮ್ಹಾನ್ಸ್ ಮಾನಸಿಕ ರೋಗಿಗಳ ಯೋಗಕ್ಷೇಮಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಿತು. ಆರೋಗ್ಯ ಸಚಿವಾಲಯವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಯೋಗದಂತಹ ಸ್ವಾಸ್ಥ್ಯ ಅಭ್ಯಾಸಗಳ ಮಹತ್ವವನ್ನು ಒತ್ತಿಹೇಳುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಸರ್ಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ದೇಶದ 2020-2021ರ ಬಜೆಟ್ನಲ್ಲಿ ಕೇವಲ 2% ರಷ್ಟು ಮಾತ್ರ ಆರೋಗ್ಯ ರಕ್ಷಣೆಗೆ ಮೀಸಲಿಡಲಾಗಿದೆ. ಮತ್ತು ಇದರಲ್ಲಿ, 1% ಕ್ಕಿಂತ ಕಡಿಮೆ ಹಣವನ್ನು ಮಾನಸಿಕ ಆರೋಗ್ಯಕ್ಕೆ ಹಂಚಿಕೆ ಮಾಡಲಾಗಿದೆ. ತಡವಾದರೂ ಚಿಂತೆ ಇಲ್ಲ . ಕೇಂದ್ರ ಸರ್ಕಾರವು ಈಗಲಾದರೂ ಮಾನಸಿಕ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಲೇಬೇಕಾಗಿದೆ ಎಂದು ಮೋಸೆಸ್ ಹೇಳುತ್ತಾರೆ.
ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ನಮ್ಮ ಆರೋಗ್ಯ ಸಹಾಯವಾಣಿ ಸಂಖ್ಯೆ 104ಗೆ ಕರೆಮಾಡಿ 24/7 ಮನೋವೈದ್ಯಕೀಯ ನೆರವು ಪಡೆಯಿರಿ
For Mental Health…
Posted by Department of Health and Family Welfare Services Govt of Karnataka on Sunday, May 10, 2020