ಅಹಮದ್ ಪಟೇಲ್, ಕೆಲವರ ಪಾಲಿಗೆ ‘ಅಹಮದ್ ಪಟೇಲ್ ಜೀ’ ಮತ್ತು ಕೆಲವರ ಪಾಲಿಗೆ ‘ಅಹಮದ್ ಪಟೇಲ್ ಭಾಯ್’ ಆಗಿದ್ದರು. ಅಂದರೆ ಏಕಕಾಲಕ್ಕೆ ರಾಜಕಾರಣದಲ್ಲಿ ಪ್ರಭಾವ ಮತ್ತು ಪ್ರೀತಿ ಎರಡನ್ನೂ ಸಂಪಾದಿಸಿದ್ದರು. ಅಷ್ಟೇಯಲ್ಲ, ಅವರ ಕಾರ್ಯವೈಖರಿ ಬಹಳ ವಿಶಿಷ್ಟವಾಗಿತ್ತು. ಸದಾ ತೆರೆಯ ಹಿಂದಿರುತ್ತಿದ್ದರು. ಹಗಲಿಗಿಂತ ರಾತ್ರಿ ವೇಳೆ ಹೆಚ್ಚು ಸಕ್ರೀಯರಾಗಿರುತ್ತಿದ್ದರು. ಪ್ರಚಾರದಿಂದ ದೂರ ಉಳಿದಿದ್ದರು. ಆದರೂ ರಾಷ್ಟ್ರ ರಾಜಕಾರಣದ ಪ್ರಭಾವಿ ರಾಜಕಾರಣಿಗಳ ಪೈಕಿ ಪ್ರಮುಖರಾಗಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಹಮದ್ ಪಟೇಲ್ ಒಟ್ಟು 4 ಬಾರಿ ಲೋಕಸಭೆಗೆ (1977, 1980, 1984 ಮತ್ತು 1989) ಮತ್ತು 5 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 9 ಬಾರಿ ಸಂಸದರಾಗಿದ್ದ ಅವರು ಕಾಂಗ್ರೆಸಿನಲ್ಲಿ ಪ್ರಧಾನ ಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟು ಏನು ಬೇಕಾದರೂ ಆಗಬಹುದಿತ್ತು. ಆದರೆ ಅವರು ಕಡೆ ಪಕ್ಷ ಮಂತ್ರಿಯೂ ಆಗಲಿಲ್ಲ. 2004ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ಮಂತ್ರಿ ಆಗಬಹುದಿತ್ತು. ಸ್ವತಃ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಅಹಮದ್ ಪಟೇಲ್ ಅವರಿಗೆ ಮಂತ್ರಿಯಾಗುವಂತೆ ಹೇಳಿದ್ದರು. ಆದರೆ ಪಕ್ಷದ ಕೆಲಸಕ್ಕೆ ಒತ್ತು ನೀಡಿದ ಅಹಮದ್ ಪಟೇಲ್ ಮಂತ್ರಿ ಸ್ಥಾನವನ್ನು ನಿರಾಕರಿಸಿದರು. 1985ರಲ್ಲಿ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿದ್ದಷ್ಟೇ ಅವರು ಹೊಂದಿದ್ದ ಸಂವಿಧಾನಿಕ ಹುದ್ದೆ.
ಆಪತ್ಬಾಂಧವ ಅಹಮದ್ ಪಟೇಲ್
ಅಹಮದ್ ಪಟೇಲ್ ಸೂಕ್ಷ್ಮಮತಿ, ತೀಕ್ಷ್ಣಮತಿ. ಅಹಮದ್ ಪಟೇಲ್ ತೀಕ್ಷ್ಣಮತಿ ಎಂಬುದನ್ನು ಅವರ ರಾಜಕೀಯ ವೈರಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ತಮ್ಮ ಸಂತಾಪ ಸೂಚಕ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇಂಥ ತೀಕ್ಷ್ಣಮತಿ ಅಹಮದ್ ಪಟೇಲ್ 1977ರಲ್ಲಿ ಮೊದಲ ಬಾರಿಗೆ ಗುಜರಾತಿನ ಭರೂಚ್ ನಿಂದ ಆಯ್ಕೆಯಾಗಿದ್ದ ಅಹಮದ್ ಪಟೇಲ್ ಮೊದಲ ಸಲಕ್ಕೆ ಹೈಕಮಾಂಡ್ ನಾಯಕರ ಮನಗೆದ್ದಿದ್ದರು. ಇವರ ಚಾಕಚಕ್ಯತೆ ಗೊತ್ತಿದ್ದರಿಂದೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ 1985ರಲ್ಲಿ ಅಹಮದ್ ಪಟೇಲ್ ಅವರನ್ನು ತಮ್ಮ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
ಸಂಸದೀಯ ಕಾರ್ಯದರ್ಶಿಯಾಗಿ ಅಹಮದ್ ಪಟೇಲ್ ತೋರಿದ ಕರ್ತವ್ಯ ನಿಷ್ಠೆ, ಬದ್ಧತೆಗಳು ರಾಜೀವ್ ಗಾಂಧಿ ಅವರಿಗೆ ಬಹಳ ಇಷ್ಟವಾದವು. ರಾಜೀವ್ ಗಾಂಧಿ ಅವರಿಗೆ ಬಹಳ ಹತ್ತಿರ ಇದ್ದರು ಎಂಬ ಕಾರಣಕ್ಕಾಗಿಯೇ ರಾಜೀವ್ ಗಾಂಧಿ ಹತ್ಯೆಯ ಅನುಕಂಪದಿಂದಲೇ ಅಧಿಕಾರ ಹಿಡಿದರೂ ಕಾಂಗ್ರೆಸ್ ನಾಯಕರು ಅಹಮದ್ ಪಟೇಲ್ ಅವರನ್ನು ದೂರ ಇಟ್ಟರು. ಅದಾದ ನಂತರ ಕಾಂಗ್ರೆಸ್ ಪಾಲಿಗೆ ಕೆಟ್ಟ ದಿನಗಳು ಶುರುವಾದವು. ದೇಶಾದ್ಯಂತ ಸೋಲಾಗತೊಡಗಿತು. ಪರಿಣಾಮವಾಗಿ ಕಾಂಗ್ರೆಸ್ ನಾಯಕರು 1998ರಲ್ಲಿ ಕಾಡಿ ಬೇಡಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರಾಗಿ ಕರೆತಂದರು. ಸೋನಿಯಾ ಗಾಂಧಿ ಅವರು ಒಲ್ಲದ ಮನಸ್ಸಿನಿಂದ ಕಾಂಗ್ರೆಸ್ ಅಧ್ಯಕ್ಷೆಯಾದರು. ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ನೆಪ ಇಟ್ಟುಕೊಂಡು ಶರದ್ ಪವಾರ್, ಪಿ.ಎ. ಸಂಗ್ಮಾ ಅವರಂತಹ ಹಿರಿಯ ನಾಯಕರು ಪಕ್ಷ ಬಿಟ್ಟರು. ಇಷ್ಟೆಲ್ಲಾ ಆದರೂ ಅಹಮದ್ ಪಟೇಲ್ ಪಕ್ಷನಿಷ್ಠೆ ಬದಲಾಗಲಿಲ್ಲ. ಸೋನಿಯಾ ಗಾಂಧಿ ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ಅಹಮದ್ ಪಟೇಲ್ ಅವರನ್ನು ನೇಮಿಸಿಕೊಂಡರು.
ಹಲವು ಸಮಸ್ಯೆಗಳ ನಡುವೆಯೂ ಸೋನಿಯಾ ಗಾಂಧಿ ಅವರಿಗೆ ಪಕ್ಷ ಕಟ್ಟಲು ಅಹಮದ್ ಪಟೇಲ್ ಭಂಟನಂತೆ ನೆರವಾದರು. ಕಾಂಗ್ರೆಸ್ ಒಂದೊಂದೇ ರಾಜ್ಯಗಳಲ್ಲಿ ಗೆಲ್ಲುತ್ತಾ ಸಾಗಿತು. ಈ ನಡುವೆ ಎನ್ ಡಿಎ ಮೈತ್ರಿಕೂಟದ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೋರಾಡುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವೇ ಆಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಯಾರೊಬ್ಬರೂ ಭರವಸೆ ಇಟ್ಟಿರಲಿಲ್ಲ. ಆಗ ಮಿತ್ರಪಕ್ಷಗಳ ಮನವೊಲಿಸುವ ಅತ್ಯಂತ ದೊಡ್ಡ ಕೆಲಸ ಮಾಡಿದ್ದು ಅಹಮದ್ ಪಟೇಲ್. ಅದೇ ಕಾರಣಕ್ಕೆ ಸೋನಿಯಾ ಗಾಂಧಿ ಯುಪಿಎ ಸರ್ಕಾರ ಬಂದ ಬಳಿಕ ಅಹಮದ್ ಪಟೇಲ್ ಅವರನ್ನು ಮಂತ್ರಿಯಾಗುವಂತೆ ಕೇಳಿದ್ದು.
ಕರ್ನಾಟಕದಲ್ಲಿ ಸ್ವಸಾಮರ್ಥ್ಯ ಇರುವ ಬೆರಳೆಣಿಕೆಯ ರಾಜಕಾರಣಿಗಳ ಪೈಕಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ‘ತನ್ನ ಬೆಳವಣಿಗೆಯಲ್ಲಿ ಅಹಮದ್ ಪಟೇಲ್ ಅವರ ಪಾತ್ರ ಬಹಳ ಇದೆ’ ಎಂದು ಹೇಳಿಕೊಂಡಿದ್ದಾರೆ. ಇಂಥ ಅದೆಷ್ಟೋ ನಾಯಕರ ಬೆಳವಣಿಗೆಗೆ ನೀರೆರೆದ ಸೃಷ್ಟಿಸಿದ ಕೀರ್ತಿ ಅಹಮದ್ ಪಟೇಲ್ ಅವರಿಗೆ ಸಲ್ಲಬೇಕು. 1998ರಿಂದ ಈವರೆಗೆ ಕಾಂಗ್ರೆಸ್ ಪಕ್ಷದ ಸೋಲು-ಗೆಲುವಿನಲ್ಲಿ, ಅದರಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಯಂತಹ ಪ್ರಮುಖ ವಿಷಯಗಳಲ್ಲಿ ಅಹಮದ್ ಪಟೇಲ್ ಅವರ ಪಾತ್ರ ಬಹಳ ದೊಡ್ಡದು.
ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಹಿರಿಯ ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬದಲಿಸಿ ಆಗಷ್ಟೇ ಪಕ್ಷಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡುವುದು ಸೋನಿಯಾ ಗಾಂಧಿ ಅವರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಇಂಥ ಅಸಂಖ್ಯಾತ ಸಂದಿಗ್ಧ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸೋನಿಯಾ ಗಾಂಧಿ ಅವರಿಗೆ ಸಹಕರಿಸಿದವರು ಅಹಮದ್ ಪಟೇಲ್.
ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ
1976ರ ಗುಜರಾತಿನ ಭರೂಚ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವ ಮೂಲಕ ರಾಜಕೀಯಕ್ಕೆ ಬಂದ ಅಹ್ಮದ್ ಪಟೇಲ್ ರಾಜೀವ್ ಗಾಂಧಿ ಸಾವಿನ ಬಳಿಕ ಮೂಲೆಗುಂಪಾಗಿದ್ದರು. ಇದಾದ ಮೇಲೆ 2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಕೆಲ ದಿನಗಳ ಮಟ್ಟಿಗೆ ಮತ್ತೆ ಅಹಮದ್ ಪಟೇಲ್ ಅವಕೃಪೆಗೆ ಒಳಗಾಗಬೇಕಾಯಿತು. ಆದರೆ 2019ರ ಚುನಾವಣಾ ತಯಾರಿ ವೇಳೆ ಅಹಮದ್ ಪಟೇಲ್ ಅವರ ಪ್ರಾಮುಖ್ಯತೆ ಪಕ್ಷಕ್ಕೆ ಅರ್ಥವಾಗಿತ್ತು. ಹಾಗಾಗಿ 2019ರಲ್ಲಿ ಅಹಮದ್ ಪಟೇಲ್ ಅವರನ್ನು ಎಐಸಿಸಿ ಖಜಾಂಚಿಯನ್ನಾಗಿ ಮಾಡಲಾಗಿತ್ತು. ಹೀಗೆ ಯಾವ್ಯಾವಾಗ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಸಿಲುಕಿತ್ತೋ ಆಗೆಲ್ಲಾ ಆಪತ್ಬಾಂಧವನಾಗಿ ಕೆಲಸ ಮಾಡಿದ್ದು ಅಹಮದ್ ಪಟೇಲ್. ಹಾಗಾಗಿ ನಿಜ ಅರ್ಥದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಮದ್ ಪಟೇಲ್ ಸಾವು ತುಂಬಲಾರದ ನಷ್ಟ.