ಯಾವುದೇ ರಾಜಕೀಯ ಪಕ್ಷ ಯಶಸ್ಸು ಗಳಿಸಬೇಕಾದರೆ ಜನರ ಜೊತೆಗಿನ ಸಂಪರ್ಕ ಮುಖ್ಯ. ಜೊತೆಗೆ ಪಕ್ಷದ ಸಿದ್ಧಾಂತ ಅನುಸರಿಸುವುದೂ ಪ್ರಮುಖವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ವಿಭಾಗದ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ʼಪಕ್ಷ ಇಂದು ಸಂಕಷ್ಟದಲ್ಲಿದೆ. ಆದರೆ ಅದು ತಾತ್ಕಾಲಿಕ. ಪಕ್ಷ ಹಿಂದೆಯೂ ಕಷ್ಟದ ದಿನಗಳನ್ನು ಎದುರಿಸಿದೆ. ಕಷ್ಟ, ಸುಖ ರಾಜಕೀಯ ಪಕ್ಷಗಳಿಗೆ ಸ್ವಾಭಾವಿಕ. ಅದು ಹಗಲು, ರಾತ್ರಿ ಇದ್ದಂತೆ. 1977ರಲ್ಲಿ ಪಕ್ಷ ಸೋತ್ತಿತ್ತು. ಮೂರು ವರ್ಷಗಳ ಬಳಿಕ ಪಕ್ಷ ಗೆಲುವು ಸಾಧಿಸಿ ಇಂದಿರಾಗಾಂಧಿಯವರು ಪ್ರಧಾನಿಯಾದರು. 2004ರಲ್ಲಿ ಸೋನಿಯಾಗಾಂಧಿಯವರ ಬಗ್ಗೆ ಕುಹಕದ ಮಾತುಗಳನ್ನಾಡಿದರು. ಬಳಿಕ ಅವರ ನಾಯಕತ್ವದಲ್ಲಿ ಪಕ್ಷ ಗೆಲುವು ಸಾಧಿಸಿ ಹತ್ತು ವರ್ಷ ಅಧಿಕಾರ ನಡೆಸಿತುʼ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈಗ ಪಕ್ಷಕ್ಕೆ ಕಷ್ಟ ಎದುರಾಗಿದೆ. ಆದರೆ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ. ಪಕ್ಷಕ್ಕೆ ಹೋರಾಟ ಹೊಸದೇನಲ್ಲ. ಮಹಾತ್ಮ ಗಾಂಧಿಯವರ ಕಾಲದಿಂದಲೂ ಪಕ್ಷ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಅಂದು ಗಾಂಧೀಜಿಯವರು ಹೋರಾಟ ಆರಂಭಿಸದೇ ಹೋಗಿದ್ದರೆ ನಾವು ಸ್ವತಂತ್ರ ಜೀವಿಗಳಾಗುತ್ತಿರಲಿಲ್ಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳೇ ಹೊರತು ಫಲಾನುಭಿಗಳಲ್ಲ. ಈ ವರ್ಷವನ್ನು ಸಂಘರ್ಷ ಹಾಗೂ ಹೋರಾಟದ ವರ್ಷ ಎಂದು ಅಧ್ಯಕ್ಷರು ಘೋಷಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
2918ರಲ್ಲಿ ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ನಾವು ಅಧಿಕಾರ ಕಳೆದುಕೊಳ್ಳಲಿಲ್ಲ. ಬಿಜೆಪಿ, ಜೆಡಿಎಸ್ ನವರ ಅಪ ಪ್ರಚಾರ, ನಮ್ಮ ಪ್ರಚಾರದ ಕೊರತೆಯಿಂದ ನಾವು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿ ಪಕ್ಷ ಸಧೃಡವಾಗಿದೆ. ಅದು ಮಚಾಯಿತಿ ಚುನಾವಣೆಯಲ್ಲಿ ಸಾಬೀತಾಗಿದೆ. ನಾವೇ ಆಧಿಕ ಸ್ಥಾನವನ್ನು ಗೆದ್ದಿದ್ದೇವೆ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಪಂಚಾಯಿತಿ ಚುನಾವಣೆಯಲ್ಲಿ ನಾವೇ ನಂಬರ್ ಒನ್. ಒಂದು ವೇಳೆ ಜೆಡಿಎಸ್ ಜೊತೆ ಸೇರಿ ನಾವು ಸರ್ಕಾರ ರಚನೆ ಮಾಡದೇ ಹೋಗಿದ್ದರೆ 14 ಶಾಸಕರು ಪಕ್ಷ ಬಿಡುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದಲೇ ಶಾಸಕರು ಪಕ್ಷಾಂತರ ಮಾಡುವಂತಾಯಿತು. ಬಿಜೆಪಿಯವರು ಆಮಿಷ ಒಡ್ಡಿ ನಮ್ಮವರನ್ನು ಖರೀದಿ ಮಾಡಿ ಹಿಂಬಾಗಿಲ ಮೂಲಕ ಸರ್ಕಾರ ರಚನೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ವೈಫಲ್ಯಗಳ ಸರಮಾಲೆಯೇ ಇದೆ. ಸರ್ಕಾರ ಸತ್ತಿದೆ. ಆಡಳಿತ ಯಂತ್ರ ಹಳಿ ತಪ್ಪಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದನ್ನು ನಾವು ಜನರಿಗೆ ತಿಳಿಸಬೇಕಾಗಿದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಯಡಿಯೂರಪ್ಪ ಅವರು ಸಂಘ ಪರಿವಾರದವರ ಸಲಹೆ ಮೇರೆಗೆ ಸನಾತನ ಧರ್ಮದ ಮರು ಸೃಷ್ಟಿ ಎಂದು ಹೇಳಿ ಅನುಭವ ಮಂಟಪಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಆದರೆ, ಬಸವಣ್ಣ ಅವರು ಹೋರಾಟ ಮಾಡಿದ್ದೇ ಸನಾತನ ಧರ್ಮದ ವಿರುದ್ಧ. ಇದು ಆರ್ ಎಸ್ ಎಸ್ ನವರ ಕುತಂತ್ರ. ನಾವು ಗಾಂಧಿ, ಲೋಹಿಯಾ ಅವರ ಹಿಂದುತ್ವದ ಪ್ರತಿಪ್ರಾದಕರು. ಆದರೆ ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದಾರೆ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಅವರು ಹೇಳಿದ್ದಾರೆ.
ಹಿಂದುತ್ವ ಎಂದರೆ ಹಿಂದುತ್ವವೇ. ನೆಹರೂ, ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನಾವುಗಳು ಹಿಂದೂಗಳಲ್ಲವೇ. ಆರ್ ಎಸ್ ಎಸ್ ಸಿದ್ಧಾಂತವೇ ಬಿಜೆಪಿಯ ಸಿದ್ಧಾಂತ. ಹಿಂದುತ್ವದಲ್ಲಿ ಕಠಿಣ, ಮೃದು ಎಂಬುದು ಇರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಿಜೆಪಿ, ಆರ್ ಎಸ್ ಎಸ್ ನಿಂದ ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾವುದಾರೂ ಪಕ್ಷಕ್ಕೆ ಕಾರ್ಯಕರ್ತರ ಪಡೆ ಇದ್ದರೆ ಅದು ಕಾಂಗ್ರೆಸ್ ಗೆ ಮಾತ್ರ ಎಂದು ಅವರು ತಿಳಿಸಿದ್ದಾರೆ.
ದೇಶಕ್ಕೆ ಮೋದಿಯವರ ಕೊಡುಗೆ ಏನು. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಕೊಂಡು ಆಡಳಿತ ನಡೆಸುವುದನ್ನು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಮೋದಿಯವರ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಯಾವುದೇ ಹೊಸ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿರುವುದನ್ನು ಹೊರತುಪಡಿಸಿದರೆ ಯಾವುದೇ ಸಾಧನೆ ಮಾಡಿಲ್ಲ. ಡಿ ನೋಟಿಫಿಕೇಷನ್ ಕೇಸಲ್ಲಿ ಕೋರ್ಟ್ ಯಡಿಯೂರಪ್ಪ ಅವರಿಗೆ ಛೀಮಾರಿ ಹಾಕಿ 25 ಸಾವಿರ ದಂಡ ವಿಧಿಸಿದೆ. ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಂಥ ಲಜ್ಜೆಗೆಟ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಇದು ನಾವು ಸುಮ್ಮನೆ ಕೂರುವ ಕಾಲವಲ್ಲ. ಹೋರಾಟ, ಸಂಘಟನೆ ನಮ್ಮ ಗುರಿಯಾಗಬೇಕು. ನಾವು ಹೋರಾಟ ಮಾಡಬೇಕಿರುವುದು ಮೋದಿ, ಯಡಿಯೂರಪ್ಪ ವಿರುದ್ಧ ಅಲ್ಲ. ಆರ್ ಎಸ್ ಎಸ್ ನ ಕೋಮುವಾದದ ವಿರುದ್ಧ. ನಮ್ಮ ಸಾಂಪ್ರದಾಯಿಕ ಮತಗಳು ವಿಭಜನೆ ಆಗಿದೆ. ಅದನ್ನು ವಾಪಸ್ ತರುವ ಪ್ರಯತ್ನ ಆಗಬೇಕು ಎಂದು ಅವರು ಹೇಳಿದ್ದಾರೆ.