ಕರೋನಾ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಕರೋನಾ ಪೀಡಿತರ ಸಂಖ್ಯೆ ದುಪ್ಪಟ್ಟು ಆಗುತ್ತಿದೆ ಕಳೆದ ವಾರ ಒಂದಿಬ್ಬರು ಸೋಂಕಿತರು ಇದ್ದರು. ಆದರೆ ಇದೀಗ ಬರೋಬ್ಬರಿ 14 ಜನ ಸೋಂಕಿತರು ನಮ್ಮ ಕರ್ನಾಟಕದಲ್ಲೇ ಇದ್ದಾರೆ. ಆದರೂ ಸರ್ಕಾರ ಮಾತ್ರ ಅಧಿವೇಶ ಮಾಡುವುದರಲ್ಲಿ ಸಖತ್ ಬ್ಯುಸಿ ಇದೆ. ಹಣ ಬಿಡುಗಡೆ ಮಾಡುವಲ್ಲೂ ಮೀನಾ ಮೇಷ ಎಣಿಸುತ್ತಿದೆ ಎನಿಸುತ್ತದೆ.
ಕರೋನಾ ಸೋಂಕಿತರ ನಿರ್ವಹಣೆ ಸೇರಿದಂತೆ ಹಣದ ವ್ಯವಹಾರ ಯಾವ ಇಲಾಖೆ ಮೂಲಕ ಮಾಡಬೇಕು ಎನ್ನುವ ವಿಚಾರದಲ್ಲೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ ಎನ್ನುವ ಮಾತುಗಳಲ್ಲಿ ಅಲ್ಲಲ್ಲಿ ಚಾಲ್ತಿಯಲ್ಲಿವೆ. ಇದರ ಜೊತೆಗೆ ಸರ್ಕಾರ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಾ ಕರೋನಾ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ ಎನ್ನುವ ಮಾತುಗಳು ಆಡಳಿತ ವರ್ಗದಲ್ಲಿ ಕೇಳಿ ಬರುತ್ತಿದೆ.
ಕರೋನಾ ಸೋಂಕು ತಡೆಗಟ್ಟಲು ಸರ್ಕಾರ ಹಲವಾರು ನಿರ್ಬಂಧಗಳನ್ನು ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಲೇ ಇದೆ. ಆದರೆ ಯಾವುದೂ ಜಾರಿಯಾಗುತ್ತಿದೆ ಎಂದು ಅನಿಸುತ್ತಿಲ್ಲ. ಯಾಕಂದ್ರೆ ಬೆಂಗಳೂರಿನ ಟ್ರಾಫಿಕ್ ಒಂದಿಂಚು ಕಡಿಮೆ ಆಗಿಲ್ಲ. ಜನರ ಸಂಚಾರ ಯಥಾಸ್ಥಿತಿ ಮುಂದುವರಿದಿದೆ. ಒಬ್ಬರಿಂದ ಒಬ್ಬರಿಗೆ ಕಾಯಿಲೆ ಹರಡುತ್ತದೆ ಎನ್ನುವುದು ಗೊತ್ತಿದ್ದರೂ ಜನರು ಹೋಟೆಲ್ ಸೇರಿದಂತೆ ಹಲವಾರು ಕಡೆಗಳಲ್ಲಿ ಕುಳಿತು ಹರಟೆ ಹೊಡೆಯುವುದು ಸಾಮಾನ್ಯವಾಗಿದೆ. ಇನ್ನು ಮದುವೆ, ನಾಮಕರಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಆಗಿದೆ. ಆಗುವುದೂ ಇಲ್ಲ ಎನಿಸುತ್ತದೆ. ಇದಕ್ಕೆ ಕಾರಣ ಆದೇಶ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಪರಿಷತ್ ಸದಸ್ಯರ ಮಗಳ ಅದ್ಧೂರಿ ಮದುವೆಯಲ್ಲಿ ಭಾಗಿಯಾಗುವುದಾದರೆ ಸಾಮಾನ್ಯ ಜನರು ಮದುವೆ ಮಾಡುವುದನ್ನು ಬಿಡಲಾದಿತೆ ಎನ್ನುವ ಮಾತುಗಳನ್ನು ಜನರು ಹೇಳುತ್ತಿದ್ದಾರೆ.
ಸರ್ಕಾರ ನಡೆಸುವುದಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಮಾಡುವುದು ಬಹಳ ಅಗತ್ಯ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಕರೋನಾ ಎಂಬ ಹೆಮ್ಮಾರಿ ಮನೆಯೊಳಕ್ಕೆ ನುಗ್ಗಿದರೂ ಎಚ್ಚೆತ್ತುಕೊಳ್ಳದಿದ್ದರೆ ಮೂರ್ಖತನ ಎನ್ನುವುದಿಲ್ಲವೇ? ಒಂದು ಪ್ರಕರಣ ರಾಜ್ಯಕ್ಕೆ ಬರುವ ಮುಂಚೆಯೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು ಎನ್ನುವುದು ನಿಜ.
ವಿಮಾನ ನಿಲ್ದಾಣದಲ್ಲಿ ಬಂದವರನ್ನು ಒಂದು ಕಡೆ 14 ದಿನಗಳ ಕಾಲ ಐಸೋಲೇಟ್ ಮಾಡಿ ಇಟ್ಟ ಬಳಿಕ ಬಿಡುಗಡೆ ಮಾಡುವ ಕೆಲಸ ಮಾಡಬೇಕಿತ್ತು. ಒಂದು ವೇಳೆ ಕರೋನಾ ಇದೆ ಎನ್ನುವುದು ತಿಳಿದರೆ ಬೇರೊಂದು ಕಡೆಗೆ ವರ್ಗಾವಣೆ ಮಾಡಿ ಚಿಕಿತ್ಸೆ ಕೊಡುವ ಕೆಲಸ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಸರ್ಕಾರ ಮಾಡಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಆದರೆ ಈಗಲೂ ಸರ್ಕಾರ ಎಚ್ಚತ್ತುಕೊಳ್ಳುತ್ತಿಲ್ಲ ಎನ್ನುವುದು ಬೇಜವಾಬ್ದಾರಿತನ ಪ್ರದರ್ಶನದ ಪರಮಾವಧಿ ಎನ್ನಬಹುದು.
ವಿಮಾನದಲ್ಲಿ ಬರುವ ಜನರನ್ನು ತಡೆಯಬೇಕಿರುವುದು ಕೇಂದ್ರ ಸರ್ಕಾರ ಎನ್ನುವುದು ಸತ್ಯ. ಆದರೆ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ರಾಜ್ಯವೂ ಕೈಚೆಲ್ಲಿದರೆ ಜನಸಮಾನ್ಯರು ಬಲಿಯಾವುದು ನಿಶ್ಚಿತ. ಸರ್ಕಾರದ ಎದುರು ಎರಡು ಬಹುಮುಖ್ಯ ಅಸ್ತ್ರಗಳಿವೆ. ಅವುಗಳೆಂದರೆ ಬಾರ್ ಅಂಡ್ ರೆಸ್ಟೋರೆಂಟ್ ಹಾಗು ಪೆಟ್ರೋಲ್ ಬಂಕ್ಗಳು. ಈ ಎರಡೂ ಮಾರ್ಗದಿಂದ ಸರ್ಕಾರಕ್ಕೆ ಹೆಚ್ಚಿನ ವರಮಾನ ಹರಿದುಬರುತ್ತಿದೆ. ಅದೇ ಕಾರಣದಿಂದ ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರವೂ ಯಾವುದೇ ಕಠಿಣ ನಿರ್ಧಾರ ಮಾಡಲು ಮುಂದಾಗುತ್ತಿಲ್ಲ.
ಒಂದು ವೇಳೆ ಬಾರ್ಗಳನ್ನು ಬಂದ್ ಮಾಡಿದರೆ ನೂರಾರು ಜನರು ಒಂದು ಕಡೆ ಸೇರುವುದನ್ನು ತಡೆಯಬಹುದು. ಪೆಟ್ರೋಲ್ ಬಂಕ್ಗಳನ್ನು ಸರಿಯಾದ ನಿರ್ವಹಣೆ ಮಾಡಿದ್ದಲ್ಲಿ, ಜನರು ಬೇಕಾಬಿಟ್ಟಿ ರಸ್ತೆಗೆ ಇಳಿಯುವುದು ನಿಲ್ಲುತ್ತದೆ. ಇಲ್ಲದಿದ್ದರೆ ನೂರಾರು ಅಷ್ಟೇ ಅಲ್ಲ, ಸಾವಿರಾರು ಜನರನ್ನು ಕಳೆದುಕೊಳ್ಳುವುದು ನಿಶ್ಚಿತ ಎನ್ನಬಹುದು. ಸರ್ಕಾರದಲ್ಲೂ ಕೋಟಿ ಕೋಟಿ ಹಣ ವೆಚ್ಚ ಮಾಡಲು ಪೈಪೋಟಿ ನಡೆಯುತ್ತಿರುವುದು ನಮ್ಮ ಜನರ ದುರ್ದೈವ ನ್ನಬಹುದು.