ಸರ್ವಾಧಿಕಾರ ಸರ್ವ ದಿಕ್ಕಿನಲ್ಲೂ ಹಬ್ಬುತ್ತಿರುವ ಹೊತ್ತಿನಲ್ಲಿ ಅದರ ಅಹಂಕಾರಕ್ಕೇ ಸವಾಲು ಹಾಕಿ ನಿಲ್ಲುವುದು ಸುಲಭದ ವಿಚಾರವಲ್ಲ. ಅದನ್ನು ಪಂಜಾಬ್ ಮತ್ತು ಹರಿಯಾಣಾದ ರೈತರು ಮಾಡಿದ್ದಾರೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ರೈತರು ಸಾತ್ ನೀಡಿದ್ದಾರೆ. ಬಿಹಾರ, ಮಹರಾಷ್ಟ್ರ, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯದ ರೈತ ಮತ್ತು ರೈತ ಪರ ಸಂಘಟನೆಗಳು ಕಾಲದ ಕರೆಗೆ ಓಗೊಡುವ ಪ್ರಯತ್ನದಲ್ಲಿವೆ.
ರಾಜಧಾನಿಗೆ ಹರಿದು ಬರುವ ಹೆದ್ದಾರಿಗಳನ್ನು ತಿಂಗಳಿಗಿಂತಲೂ ಹೆಚ್ಚು ಕಾಲ ಬಂದ್ ಮಾಡಿ ಸರ್ವಾಧಿಕಾರಿಗೆ ಸಂದೇಶ ಕಳುಹಿಸಿದ್ದಾರೆ. ನೀನೇನು ಪ್ರಶ್ನಾತೀತನಲ್ಲ, ಅಜೇಯನಲ್ಲ ಎಂದು. ಒಂದು ತಿಂಗಳಾದರೂ ರೈತ ಹೋರಾಟ ಒಂದು ಚೂರೂ ಸಡಿಲಗೊಂಡಿಲ್ಲ, ದಣಿವು ಕಾಣುತ್ತಿಲ್ಲ. ಸರ್ಕಾರ ಸ್ವಲ್ಪ ಸ್ವಲ್ಪವೇ ಹಿಂದೆ ಸರಿಯುವ ಸೂಚನೆ ತೋರಿಸುತ್ತಿದೆಯೇ ಹೊರತು, ಹೋರಾಟಗಾರರು ಹಿಂದೆ ಸರಿದಿಲ್ಲ. ಅಲ್ಲಿನ ನಾಯಕತ್ವಕ್ಕೆ ಇರುವ ಸಮಸ್ಯೆ….ನುಗ್ಗಲು ಹವಣಿಸುತ್ತಿರುವ ಯುವ ತಲೆಮಾರು ಸಂಯಮ ಕಾಪಾಡಿಕೊಳ್ಳುವಂತೆ ಮಾಡುವುದು ಹೇಗೆ? . ಯುವ ಹೋರಾಟಗಾರರು ಚಡಪಡಿಸುತ್ತಿದ್ದಾರೆ. ಹುತಾತ್ಮರಾಗಲೂ ಸಿದ್ಧರಾಗಿದ್ದಾರೆ. ನಾಯಕತ್ವ ಪ್ರಬುದ್ಧತೆ ಜೊತೆ ದಿಟ್ಟ ಶಾಂತಿಯುತ ಹೋರಾಟಕ್ಕೆ ಬದ್ಧವಾಗಿದ್ದು ಎಲ್ಲರನ್ನೂ ಮಾನಸಿಕವಾಗಿ ಹದಗೊಳಿಸುವ ಪ್ರಯತ್ನದಲ್ಲಿದೆ. ಈ ನಾಯಕತ್ವ ಇಷ್ಟೊಂದು ಪ್ರಬುದ್ಧವಾಗಿ ರೂಪಗೊಂಡದ್ದು ಹೇಗೆ? ಇದರ ಹಿಂದಿನ ಗುಟ್ಟಾದರೂ ಏನು?
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಾಯಕತ್ವ ನೀಡುತ್ತಿರುವುದು ಮತ್ತು ಅಖಿಲ ಭಾರತ ಮಟ್ಟದಲ್ಲಿ ಇತರೆ ರಾಜ್ಯಗಳ ಹೋರಾಟಗಳ ಜೊತೆ ಸಮನ್ವಯ ಮಾಡುತ್ತಿರುವುದು ಸಂಯುಕ್ತ ಕಿಸಾನ್ ಮೋರ್ಚ ಎಂಬ 541 ರೈತ ಸಂಘಟನೆಗಳ ಒಕ್ಕೂಟ. ಈ ಒಕ್ಕೂಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಪಂಜಾಬಿನ 30 ರೈತ ಸಂಘಟನೆಗಳು. ಅತಿ ಹೆಚ್ಚು ಜನರನ್ನು ಸಂಘಟಿಸಿರುವುದೂ ಈ ಸಂಘಟನೆಗಳೆ. ಅತಿ ಹೆಚ್ಚು ಸ್ಪಷ್ಟತೆ ಮತ್ತು ಛಲದ ಜೊತೆಗೆ ಹೋರಾಡುತ್ತಿರುವ ಸಂಘಟನೆಗಳೂ ಸಹ ಇವುಗಳೇ. ಅದು ಎಲ್ಲರಿಗೂ ಗೊತ್ತು. ಅದರ ಬಗ್ಗೆ ಇತರೆ ಸಂಘಟನೆಗಳಿಗೆ ಅಸೂಯೆ ಇಲ್ಲ, ಬದಲಿಗೆ ಹೆಮ್ಮೆ ಇದೆ. ಇದೊಂದು ಸಂತಸದ ಸಂಗತಿ. ಉದಾಹರಣಗೆ ಹರಿಯಾಣಾದ ರೈತ ಸಂಘಟನೆಗಳೆಲ್ಲಾ ಸೇರಿ ನಾವೆಲ್ಲಾ ಐಕ್ಯ ಹೋರಾಟದಲ್ಲಿ ಸಮಭಾಗಿತ್ವ ಹೊಂದಿದ್ದರೂ ಈ ಹೋರಾಟದ ಕೇಂದ್ರ ರೂವಾರಿಗಳು ಪಂಜಾಬಿನ ರೈತ ಸಂಘಟನೆಗಳಾಗಿರುವುದರಿಂದ ಅವರೇನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ನಾವು ಸಮರ್ಥಿಸುತ್ತೇವೆ ಎಂಬ ನಿಲುವಿಗೆ ಬಂದಿವೆ.
ಪಂಜಾಬಿನ ಸಂಘಟನೆಗಳೂ ಸಹ ಈ ವಿಶ್ವಾಸಕ್ಕೆ ಅರ್ಹ ಎನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿವೆ. ಯಾರ ಮೇಲೂ ಮೇಲಾಧಿಪತ್ಯ ನಡೆಸದೆ, ವಿನಯ ಮತ್ತು ಸಂಯಮದ ಜೊತೆ ಎಲ್ಲರ ಜೊತೆಗೂಡಿ ಹೆಜ್ಜೆ ಹಾಕುತ್ತಿವೆ. ಹಾಗಾಗಿ ಪಂಜಾಬ್ ರೈತ ಸಂಘಟನೆಗಳ ಐಕ್ಯತೆ ಮತ್ತು ಪ್ರಬುದ್ಧತೆಯಲ್ಲಿ ಈ ಹೋರಾಟದ ಯಶಸ್ಸಿನ ಗುಟ್ಟು ಅಡಗಿದೆ.
ಈ ಐಕ್ಯತೆ ಮತ್ತು ಪ್ರಬುದ್ಧತೆ ಒಂದೆರಡು ದಿನದಲ್ಲಿ ರೂಪಗೊಂಡಿರುವುದಲ್ಲ, ಕಳೆದ ಒಂದು ದಶಕದಲ್ಲಿ ಇದರಲ್ಲಿನ ಕೆಲವು ಸಂಘಟನೆಗಳು ನಡೆಸಿದ ಸತತ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಜೊತೆಗೂಡಿ ಹೋರಾಡುವುದು ಒಂದು ವಿಧಾನವಾಗಿ ಮಾತ್ರವಲ್ಲ, ಒಂದು ಸಂಸ್ಕೃತಿಯಾಗಿ ಇವರಲ್ಲಿ ಮೈಗೂಡಿಬಿಟ್ಟಿದೆ. ಈ ಮಾತನ್ನು ನಾನು ಈಗ ಹೇಳುತ್ತಿಲ್ಲ. ಹತ್ತು ವರ್ಷದ ಹಿಂದೆಯೇ ನಮಗಿದರ ಅನುಭವವಾಗಿತ್ತು. 2011 ರಲ್ಲಿ ಪಂಜಾಬಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ವಿದ್ಯುತ್ ಖಾಸಗೀಕರಣದ ವಿರುದ್ಧ ಇವರ ಜಂಟಿ ಹೋರಾಟ ನಡೆದಿತ್ತು. ಆ ಹೋರಾಟದ ನಿಕಟ ವರದಿ ದೊರಕುತ್ತಿತ್ತು. ಸಂಘಟನೆಗಳ ನಡುವಿನ ಸಮನ್ವಯ ಕಂಡು ಅಚ್ಚರಿ ಅನಿಸುತ್ತಿತ್ತು. ಹಾಗಾಗಿ ಅವರ ಜೊತೆ ಒಡನಾಟ ಮುಂದುವರಿದಿತ್ತು. 2016ರಲ್ಲಿ ಕರ್ನಾಟಕ ಜನಶಕ್ತಿ ಮತ್ತು ಬಿಕೆಯು ಪಂಜಾಬಿನ ಸಂಘಟನೆಗಳು ಸೇರಿ ಎರಡು ದಿನಗಳ ಕೃಷಿ ಬಿಕ್ಕಟ್ಟಿನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿದ್ದರು. ಅದರಲ್ಲಿ ನಮ್ಮಲ್ಲಿ ಕೆಲವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆವು.
ಪಂಜಾಬಿನ 22 ರೈತ ಸಂಘಟನೆಗಳು ಭಾಗವಹಿಸಿದ್ದವು. ಇವರನ್ನೆಲ್ಲಾ ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಹಿರಿ ತಲೆಮಾರಿನ ನಾಯಕತ್ವ ಯುವಕರಂತೆ ಕೆಲಸ ಮಾಡುತ್ತಿತ್ತು. ಹಿರಿಯರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರೆ ಅವರಿಂದ ಸೇವೆ ಪಡೆಯಲು ಬಹಳ ಮುಜುಗುರವಾಗುತ್ತಿತ್ತು. ಅದಿರಲಿ, ಈ 22 ಸಂಘಟನೆಗಳ ನಡುವೆ ಇದ್ದ ಒಡನಾಟ ಅಚ್ಚರಿ ಅನಿಸಿತ್ತು. ಇವರೆಲ್ಲರ ನಡುವೆ ಗಂಭೀರ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವು. ಆದರೆ ಹೋರಾಟದ ವಿಚಾರಕ್ಕೆ ಬಂದರೆ ಒಟ್ಟಾಗಿ ಸಾಗುವ, ಹೆಸರಿಗಾಗಿ ಪೈಪೋಟಿ ನಡೆಸದಿರುವ, ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮುಂದೆ ಸಾಗುವ ಪ್ರಜಾತಾಂತ್ರಿಕ ಮತ್ತು ಸ್ನೇಹಯುತ ನಡವಳಿಕೆಯನ್ನು ಸಂಘಟನಾ ಸಂಸ್ಕೃತಿಯನ್ನಾಗಿಸಿಕೊಂಡಿದ್ದರು.
ಕೇವಲ ಪ್ರಜಾತಾಂತ್ರಿಕ ಮತ್ತು ಸ್ನೇಹಯುತವಾಗಿರುವುದ ಮಾತ್ರವಲ್ಲ ಹಿಡಿದ ಪಟ್ಟನ್ನು ಬಿಡದೆ, ಸಾಧಿಸುವ ತನಕ ಹೋರಾಡುವ ಛಲದ ಸ್ವಭಾವ ಈ ಸಂಘಟನೆಗಳ ಮತ್ತೊಂದು ಅದಮ್ಯ ಶಕ್ತಿ. ಇದಕ್ಕೊಂದು ಉದಾಹರಣೆ ನೀಡಬೇಕು: 1997ರಲ್ಲಿ ಒಬ್ಬ ಎಳೆ ವಯಸ್ಸಿನ ಗ್ರಾಮೀಣ ಬಾಲಕಿಯನ್ನು ಕೆಲವರು ಪುಂಡರು ಅತ್ಯಾಚಾರಗೈದು ಕೊಲೆ ಮಾಡುತ್ತಾರೆ. ಅಕಾಲಿ ದಳಕ್ಕೆ ಸೇರಿದ ಪ್ರಭಾವಿ ಜಮಿನ್ದಾರಿ ಕುಟುಂಬದ ಪೋಕರಿಗಳ ಕೃತ್ಯ ಇದು ಎಂಬುದು ಗೊತ್ತಾಗುತ್ತದೆ.
ರೈತ ಸಂಘಟನೆಗಳೆಲ್ಲಾ ಒಗ್ಗೂಡಿ ಈ ಜಮಿನ್ದಾರಿ ಕುಟುಂಬದ ಮಕ್ಕಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಹೋರಾಟಕ್ಕಿಳಿಯುತ್ತಾರೆ. ಸರ್ಕಾರ ಸಹಜವಾಗಿ ಜಮಿನ್ದಾರನ ಪರ ನಿಲ್ಲುತ್ತದೆ. ಈ ಹೋರಾಟ ಎಡಬಿಡದೆ ಎರಡು ವರ್ಷಗಳ ಕಾಲ ನಡಿಯುತ್ತದೆ. ಮಹಿಳೆ, ಮಕ್ಕಳನ್ನೂ ಒಳಗೊಂಡಂತೆ, ಇಡೀ ಪಂಜಾಬಿನ ಜನ ಈ ಹೋರಾಟಕ್ಕೆ ಧುಮುಕುತ್ತಾರೆ. ಕೊನೆಗೆ ಜನ ಪ್ರವಾಹಕ್ಕೆ ಹೆದರಿ ಸರ್ಕಾರ ಅವರನ್ನು ಬಂಧಿಸುತ್ತದೆ ಮತ್ತು ಅವರಿಗೆ ಶಿಕ್ಷೆಯೂ ಆಗುತ್ತದೆ.
ಇದಾದ ಸ್ವಲ್ಪ ದಿನದಲ್ಲಿ ಆ ಜಮಿನ್ದಾರನ ಕೊಲೆಯಾಗುತ್ತದೆ. ಅದು ಅವರ ಕೌಟುಂಬಿಕ ಕಲಹದ ಭಾಗವಾಗಿ ನಡೆಯುವ ಕೊಲೆ. ಆದರೆ ಅವರ ಕುಟುಂಬದವರರು ಮತ್ತು ಸರ್ಕಾರ ಸೇರಿ ಹೋರಾಟಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಘಟನೆಯನ್ನು ಬಳಸಿಕೊಳ್ಳುತ್ತಾರೆ. ಹೋರಾಟಕ್ಕೆ ಮುಂದಾಳತ್ವ ನೀಡಿದ್ದ ಮಂಜೀತ್ ಸಿಂಗ್ ಮತ್ತು ಇತರೆ ಮೂವರು ಕಟ್ಟಾಳುಗಳ ಮೇಲೆ ಕೊಲೆ ಆರೋಪ ಹೊರಿಸಿ ಬಂಧಿಸುತ್ತಾರೆ. ಸುಳ್ಳು ಸಾಕ್ಷ್ಯವನ್ನು ಸಿದ್ಧಪಡಿಸಿ ಜೀವಾವಧಿ ಶಿಕ್ಷೆಯಾಗುವಂತೆ ಮಾಡುತ್ತಾರೆ. ಹೈಕೋರ್ಟು ಸಹ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯುತ್ತದೆ. ಸುಪ್ರೀ ಕೋರ್ಟಿನಲ್ಲಿ ಸುದೀರ್ಘ ಕಾಲ ಕೇಸ್ ನಡೆದು 2019ರಲ್ಲಿ ಅದೂ ಸಹ ಜೀವಾವಧಿ ಶಿಕ್ಷೆಯನ್ನು ಅಂತಿಮಗೊಳಿಸುತ್ತದೆ.
ಈಗ ಮಾಡುವುದೇನು? ಇಡೀ ವ್ಯವಸ್ಥೆ ನ್ಯಾಯಕ್ಕಾಗಿ ಹೋರಾಡಿದವರನ್ನು ದಮನಿಸಲು ನಿಂತಿದೆ. ಉಚ್ಛ ನ್ಯಾಯಲವೇ ಅಂತಿಮ ಷರ ಬರೆದಾಗಿದೆ. ಆದರೂ ಈ ರೈತ ಸಂಘಟನೆಗಳು ಸೊಲೊಪ್ಪಿಕೊಳ್ಳುವುದಿಲ್ಲ. ಜಾಮೀನಿನ ಮೇಲಿದ್ದ ಮನ್ಜೀತ್ ಸಿಂಗ್ ಶಿಕ್ಷೆ ಅನುಭವಿಸಲು ಜೈಲಿಗೆ ಹೋಗಬೇಕಿರುತ್ತದೆ. ಪಂಜಾಬಿನ ಅಷ್ಟೂ ಸಂಘಟನೆಗಳು ಒಟ್ಟು ಸೇರಿ ಲಕ್ಷ ಜನರ ಅಭೂತಪೂರ್ವ ಮೆರವಣಿಗೆಯೊಂದಿಗೆ ಮನ್ಜೀತ್ ಸಿಂಗರನ್ನು ಕರೆದುಕೊಂಡು ಬಂದೀಖಾನೆಗೆ ಹೋಗುತ್ತಾರೆ.
ಅವರಿಗೆ ಹೋರಾಟದ ಸೆಲ್ಯೂಟ್ ಹೇಳಿ. “ಹೋಗಿ ಬನ್ನಿ…ನಿಮಗಾಗಿ ಇಲ್ಲೇ ಕಾದಿರುತ್ತೇವೆ” ಎಂದು ಹೇಳಿ ಜೈಕಾರದ ಜೊತೆ ಒಳಗೆ ಕಳುಹಿಸುತ್ತಾರೆ ಮತ್ತು ಜೈಲಿನ ಎದುರೇ ಕೂರುತ್ತಾರೆ. “ನಿರಪರಾಧಿ ಮನ್ಜೀತರನ್ನು ಬಿಡುಗಡೆ ಮಾಡುವ ತನಕ ಇಲ್ಲಿಂದ ಹೊರಡುವುದಿಲ್ಲ” ಎಂದು ಘೋಷಿಸುತ್ತಾರೆ.
ಒಂದಲ್ಲ ಎರಡಲ್ಲ 47 ದಿನಗಳ ಕಾಲ ಸಹಸ್ರಾರು ಜನರು ಜೈಲಿನ ಮುಂದೆಯೇ ನಿರಂತರ ಧರಣಿ ಹೂಡುತ್ತಾರೆ. ಈಗಾಗುತ್ತಿರುವ ರೀತಿಯಲ್ಲೇ ಈ ಹೋರಾಟಕ್ಕೆ ಇಡೀ ಪಂಜಾಬಿನ ಬೆಂಬಲ ಹರಿದು ಬರುತ್ತದೆ. ತಪ್ಪಿಸಿಕೊಳ್ಳಲು ದಾರಿ ಇಲ್ಲದೆ ಸರ್ಕಾರ ಮಣಿದು ಮಾತುಕತೆಗೆ ಬರುತ್ತದೆ. ಅವರ ಯಾವ ಹುಸಿ ಮನವಿಗೂ ರೈತ ಸಂಘಟನೆಗಳು ಬಗ್ಗುವುದಿಲ್ಲ. ಕೊನಗೆ [ನಾಮ ಮಾತ್ರಕ್ಕೆ ಮನ್ಜೀತ್ ಸಿಂಗ್ ಕ್ಷಮಾಧಾನದ ಪತ್ರ ಬರೆದಂತೆ ಮಾಡಿಕೊಂಡು] ರಾಜ್ಯಪಾಲರು ಅವರ ಬಿಡುಗಡೆಯ ಆದೇಶ ನೀಡುತ್ತಾರೆ. ರಾಜ್ಯದಾದ್ಯಂತ ವಿಜಯೋತ್ಸವ ನಡೆಸಲಾಗುತ್ತದೆ. ಢೋಲು ಮೆರವಣಿಗೆಯ ಜೊತೆ ಮನ್ಜೀತ್ ಸಿಂಗ್ ರನ್ನು ಕರೆದುಕೊಂಡೇ ರೈತ ಸಂಘಟನೆಗಳು ಹಿಂದಿರುಗುತ್ತವೆ. ಅವರ ಐಕ್ಯತೆ ಮತ್ತು ದಿಟ್ಟತೆಗೆ ಇದೊಂದು ಝಲಕ್.
ಈ ಐಕ್ಯತೆ ಮತ್ತು ಬದ್ಧತೆ ಈ ರೈತ ಸಂಘಟನೆಗಳಲ್ಲಿ ಈಗ ಮತ್ತಷ್ಟು ಬಲವಾಗಿದೆ. ಅಷ್ಟೇ ಅಲ್ಲ ತಮ್ಮ ಮೂಲ ಶತೃಗಳನ್ನು ಸರಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗಾಗಿಯೇ ಬಾಯ್ಕಾಟ್ ಅದಾನಿ ಅಂಬಾನಿ ಎಂಬ ಕರೆ ಕೊಟ್ಟಿದ್ದಾರೆ. ಮೋದಿಯ ಹಿಂದಿರುವ ಈ ಸೂತ್ರದಾರಿಗಳನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ. ಹಾಗಾಗಿ ಇದು ದಿಟ್ಟ ನಾಯಕತ್ವ ಮಾತ್ರವಲ್ಲ ವೈಚಾರಿಕ ಸ್ಪಷ್ಟತೆ ಇರುವ ನಾಯಕತ್ವವಾಗಿದೆ. ಇದನ್ನು ಮುರಿಯುವುದು ಸರ್ವಾಧಿಕಾರಿ ಶಕ್ತಿಗಳಿಗೆ ಸುಲಭವಲ್ಲ.
ಹಾಗಂತ ಎಲ್ಲವೂ ಸಲೀಸು ಎಂದೂ ಅಲ್ಲ. ಪಂಜಾಬಿನ ರೈತ ಸಂಘಟನೆಗಳಲ್ಲಿ ಇಂತಹ ಆಂತರಿಕ ಬಲ ಇದೆಯಾದರೂ ಒಂದೆರಡು ಬಲವಾಗಿರುವ ರೈತ ಸಂಘಟನೆಗಳು ಸಂಪೂರ್ಣವಾಗಿ ಐಕ್ಯ ಹೋರಾಟದ ಜೊತೆ ಬೆರೆತುಕೊಂಡಿಲ್ಲ. ತಮ್ಮದು ದೊಡ್ಡ ಸಂಘಟನೆ ಎಂಬ ಅಹಂಕಾರ ಆಗಾಗ ಭಿನ್ನ ಸ್ವರಕ್ಕೆ ಕಾರಣವಾಗುತ್ತಿದೆ. ಈ ನಿರ್ಣಾಯಕ ಹಂತದಲ್ಲಿ ಒಳಗಿರುವ ಬಿರುಕು ಬೆಳಿಯಿತೆಂದರರೆ ಅನಾಹುತಕಾರಿ ಆಗಿಬಿಡುವ ಅಪಾಯವೂ ಇದೆ. ಇದನ್ನು ಅಲ್ಲಿನ ನಾಯಕತ್ವ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು.
ಹೋರಾಟದ ಮತ್ತೊಂದು ಮುಖ್ಯ ದೌರ್ಬಲ್ಯವೆಂದರೆ ಅದಿನ್ನು ಎಲ್ಲಾ ರಾಜ್ಯಗಳಲ್ಲೂ ತೀವ್ರತೆ ಪಡೆದುಕೊಂಡಿಲ್ಲದಿರುವುದು. ಬಂಡವಾಳಶಾಹಿ ಕೃಷಿ ಎಂದರೆ ಏನು ಎಂಬುದನ್ನು ಪಂಜಾಬಿನ ರೈತರು ನಮಗಿಂತ ಬಹಳ ಮುಂಚಿನಿಂದಲೇ ಮತ್ತು ಹತ್ತಿರದಿಂದಲೇ ಕಂಡಿರುವುದಿರಿಂದ [ ಬಂಡವಾಳಶಾಹಿ ಪ್ರಾಯೋಜಿತ ಹಸಿರು ಕ್ರಾಂತಿ ಪ್ರಾರಂಭಗೊಂಡಿದ್ದು ಪಂಜಾಬಿನಿಂದ ಎಂಬುದನ್ನು ನೆನಪಿಸಿಕೊಂಡರೆ ಮಿಕ್ಕ ಕೊಂಡಿಗಳೆಲ್ಲಾ ಅರ್ಥವಾಗಿಬಿಡುತ್ತವೆ] ಬರಲಿರುವ ಅನಾಹುತ ಅರಿವು ಅವರಿಗೆ ನಿಚ್ಚಳವಾಗಿದೆ.
ಅಲ್ಲದೆ ಎಪಿಎಂಸಿ ರದ್ದಾಗಿ ಎಂ ಎಸ್ ಪಿ ನಿಂತು ಹೋದರೆ ತಕ್ಷಣದ ಅಪಾರ ನಷ್ಟಕ್ಕೆ ಗುರಿಯಾಗುವುದು ಪಂಜಾಬಿನ ರೈತರು. ಹಾಗಾಗಿ ಅವರು ಜೀವನ್ಮರಣದ ಹೋರಾಟಕ್ಕೆ ಇಳಿದಿದ್ದಾರೆ. ಆದರೆ ಮಿಕ್ಕ ರಾಜ್ಯಗಳ ರೈತಾಪಿಗೆ ಅದರ ಅರಿವಿನ್ನು ಬಂದಿಲ್ಲ. ಮಾಧ್ಯಮಗಳು ಸತ್ಯ ಹೇಳುವುದಿಲ್ಲ ಬದಲಿಗೆ ಸುಳ್ಳು ಹೇಳಿ ವಂಚಿಸುತ್ತಿವೆ. ಜನರಿಗೆ ವಾಸ್ತವದ ಅರಿವು ಮೂಡಿಸುವಷ್ಟು ಜನ ಸಂಘಟನೆಗಳು ಬಲವಾಗಿಲ್ಲ ಮತ್ತು ಒಗ್ಗಟ್ಟಾಗಿಲ್ಲ. ಇದು ಇಲ್ಲಿನ ಬಿಕ್ಕಟ್ಟು. ದೆಹಲಿಯ ಹೋರಾಟ ಗೆಲ್ಲಬೇಕಾದರೆ ಇಡೀ ದೇಶದಲ್ಲಿ ಹೋರಾಟ ಬಿರುಸು ಪಡೆಯಲೇಬೇಕು.
ಕರ್ನಾಟಕದವರಾದ ನಮ್ಮ ಮೇಲೆ ಈ ಚಾರಿತ್ರಿಕ ಜವಬ್ದಾರಿ ಇದೆ. ನಾವು, ಕೇವಲ ರೈತ ಸಂಘಟನೆಗಳು ಮಾತ್ರವಲ್ಲ, ಎಲ್ಲಾ ಜೀವಪರ ಸಂಘಟನೆಗಳು ಒಕ್ಕೊರಲ ಜೊತೆ ಒಂದಾಗಲೇಬೇಕು. ದೆಹಲಿ ದನಿಗೆ ದನಿಗೂಡಿಸಲೇಬೇಕು. ಕರ್ನಾಟಕದಲ್ಲಿ ಹೋರಾಟ ರಭಸ ಪಡೆದರೆ ದಕ್ಷಿಣ ರಾಜ್ಯಗಳಲ್ಲೂ ಮಾರ್ದನಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ನುಗ್ಗಿತ್ತಿರುವ ಕಾರ್ಪೋರೇಟ್ ಶಕ್ತಿಗಳಿಗೆ ಕಡಿವಾಣ ಹಾಕುವಲ್ಲಿ ನಾವು ಯಶಸ್ಚಿಯಾದರೆ ಇತರೆ ರಂಗಗಳಲ್ಲೂ ಅವರು ನುಗ್ಗದಂತೆ ತಡೆಯುವ ಚೈತನ್ಯ, ಜಗೃತಿ ಮತ್ತು ಒಗ್ಗಟ್ಟು ಜನಚಳವಳಿಗಳಿಗೆ ಬರುತ್ತದೆ. ಇದನ್ನು ಸಾಧಿಸಲು ಮುಂದಾಗೋಣ.