ಸಂಸ್ಥೆಯ ಸಹಸಂಸ್ಥಾಪಕ ಮಹಮ್ಮದ್ ಝುಬೈರ್ ಅವರ ವಿರುದ್ಧ ದಾಖಲಾಗಿರುವ FIR ಕಾನೂನಿನ ದುರ್ಬಳಕೆ ಎಂದು ಆಲ್ಟ್ ನ್ಯೂಸ್ ತಂಡ ಆರೋಪಿಸಿದೆ. ಝುಬೈರ್ ಅವರ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಎಂದೂ ಹೇಳಿದೆ. ಮಹಮ್ಮದ್ ಝುಬೈರ್ ಅವರ ವಿರುದ್ಧ ಪೋಸ್ಕೊ ಹಾಗೂ ಐಟಿ ಕಾಯ್ದೆಯಡಿಯಲ್ಲಿ ದೆಹಲಿ ಸೈಬರ್ ಸೆಲ್ ಹಾಗೂ ರಾಯಪುರ ಪೊಲೀಸ್ ಸ್ಟೇಷನ್ನಲ್ಲಿ ಎರಡು ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನು ವಿರೋಧಿಸಿ ಆಲ್ಟ್ ನ್ಯೂಸ್ ತಂಡ ತನ್ನ ಸಹಸಂಸ್ಥಾಪಕರ ಪರ ನಿಂತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದಿಂದ (National Commission for Protection of Child Rights) ದೂರು ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆನ್ಲೈನ್ನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ಹಾಗೂ ಹಿಂಸೆ ನೀಡಿದ ಆರೋಪದ ಮೇಲೆ ಪತ್ರಕರ್ತ ಮೇಲೆ ದೂರು ದಾಖಲಿಸಲಾಗಿದೆ.
ಸ್ವತಃ ಫ್ಯಾಕ್ಟ್ ಚೆಕರ್ ಹಾಗೂ ಫ್ಯಾಕ್ಟ್ ಚೆಕ್ ವೆಬ್ಸೈಟ್ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕರಾಗಿರುವ ಮಹಮ್ಮದ್ ಝುಬೈರ್ ಆಗಸ್ಟ್ 6 ರಂದು ಜಗದೀಶ್ ಸಿಂಗ್(@JSINGH2252) ಎಂಬ ಖಾತೆಯಿಂದ ಬಂದಂತಹ ನಿಂದನೀಯ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸುವಾಗ ಜಗದೀಶ್ ಅವರ ಪ್ರೊಫೈಲ್ ಫೊಟೊವನ್ನು ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಆತನ ಮೊಮ್ಮಗಳ ಭಾವಚಿತ್ರವಿತ್ತು. ಆದರೆ ಮಗುವಿನ ಮುಖ ಕಾಣಿಸದಂತೆ ಬ್ಲರ್ ಮಾಡಿರುವ ಝುಬೈರ್, ಹೆಲೋ ಜಗದೀಶ್ ಸಿಂಗ್, ನಿಮ್ಮ ಮುದ್ದಾದ ಮೊಮ್ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಅವರಿಗೆ ಸೂಚಿಸಿದ್ದಾರೆ.
ಈ ಕಾರಣಕ್ಕಾಗಿ ಮಹಮ್ಮದ್ ಝುಬೈರ್ ವಿರುದ್ಧ ಪೋಕ್ಸೋ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಝುಬೈರ್ ವಿರುದ್ಧ ಬಂದಿರುವ ಆರೋಪವನ್ನು ಆಲ್ಟ್ ನ್ಯೂಸ್ ತಂಡ ಸಂಪೂರ್ಣ ಅಲ್ಲಗೆಳೆದಿದೆ. ಕಾನೂನು ದುರುಪಯೋಗದ ಮೂಲಕ ಆಲ್ಟ್ ನ್ಯೂಸ್ನ ಸಹ-ಸಂಸ್ಥಾಪಕ ಮಹಮ್ಮದ್ ಜುಬೈರ್ ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಲ್ಟ್ ನ್ಯೂಸ್ ನ ಇನ್ನೋರ್ವ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಹೇಳಿದ್ದಾರೆ. ಅಲ್ಲದೆ, ಆಲ್ಟ್ ನ್ಯೂಸ್ ಝುಬೈರ್ ಬೆಂಬಲಕ್ಕೆ ನಿಲ್ಲುತ್ತದೆ ಎಂದೂ ಸೇರಿಸಿದ್ದಾರೆ.
ಸುಳ್ಳು ನಿರೂಪಣೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಝುಬೈರ್ರ ಕೆಲಸಗಳು ಭಾರತೀಯ ಪ್ರಜಾಪ್ರಭುತ್ವವನ್ನು ಮಟ್ಟಹಾಕಲು ಸುಳ್ಳು ಮಾಹಿತಿಯನ್ನೇ ಆಯುಧವನ್ನಾಗಿಸಿದವರಿಗೆ ನುಂಗಲಾರದ ತುತ್ತಾಗಿವೆ. ಹಾಗಾಗಿ ಝುಬೈರ್ರ ಸ್ಥೈರ್ಯವನ್ನು ಕುಗ್ಗಿಸಲು ಈ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹಿಂದಿನ ಶನಿವಾರ, ಜುಬೇರ್ ತಮ್ಮ ವಿರುದ್ಧ ಬಂದಿರುವ ದೂರನ್ನು “ಸಂಪೂರ್ಣವಾಗಿ ನಿಷ್ಪ್ರಯೋಜಕ” ಎಂದು ಕರೆದಿದ್ದರು. “ನಾನು ಅದಕ್ಕೆ ಕಾನೂನುಬದ್ಧವಾಗಿ ಪ್ರತಿಕ್ರಿಯಿಸುತ್ತೇನೆ” ಎಂದು ಅವರು ಹೇಳಿದ್ದರು.