75 ವರ್ಷದ ಪ್ರತಿಭಟನಾಕಾರನನ್ನು ಪ್ರತಿಭಟನೆಯ ನಡುವೆ ತಳ್ಳಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು. ಈ ಕ್ರಮವನ್ನು ವಿರೋಧಿಸಿ ತಮ್ಮ ಸಹೋದ್ಯೋಗಿಗಳಿಗೆ ಬೆಂಬಲ ನೀಡಿ ಬಫಲೋ ಪೋಲಿಸ್ ಇಲಾಖೆಯ 57 ಪೋಲಿಸ್ ಉದ್ಯೋಗಸ್ಥರು ತಾವು ನಿಯೋಜನೆಯಾಗಿದ್ದ ತುರ್ತು ಪ್ರತಿಕ್ರಿಯೆ ತಂಡಕ್ಕೆ ರಾಜಿನಾಮೆ ನೀಡಿದ್ದಾರೆ.
ಅಮೇರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಪ್ರತಿಭಟನಾಕಾರರೊಬ್ಬರನ್ನು ಪೋಲಿಸರು ತಳ್ಳಿ ನೆಲಕ್ಕೆ ಬೀಳಿಸುವ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ನೆಲಕ್ಕೆ ಬಿದ್ದ 75 ವರ್ಷದ ಹಿರಿಯ ಪ್ರತಿಭಟನೆಕಾರಮ ತಲೆಯ ಹಿಂಬಾಗ ಒಡೆದು ರಕ್ತಸ್ರಾವವಾಗುವುದು ಕಂಡು ಬಂದಿತ್ತು. ಸದ್ಯ ಪ್ರತಿಭಟನಾಕಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಲಿಸರಿಂದ ದೌರ್ಜನ್ಯಕ್ಕೆ ಒಳಗಾದ ಶಾಂತಿ ಕಾರ್ಯಕರ್ತನನ್ನು ಮಾರ್ಟಿನ ಗುಜಿನೊ ಎಂದು ಗುರುತಿಸಲಾಗಿದೆ. ಮಾರ್ಟಿನ್ ಶಾಂತಿ ಕಾರ್ಯಕರ್ತರಾಗಿದ್ದು, ಹಿಂಸೆಯನ್ನು ಪ್ರಚೋದಿಸುವ ಸ್ವಭಾವದವರಲ್ಲವೆಂದು ಮಾರ್ಟಿನ್ರನ್ನು ಬಲ್ಲವರು ಸ್ಥಳೀಯ ಪತ್ರಿಕೆಗಳಿಗೆ ಹೇಳಿದ್ದಾರೆ. ಅಲ್ಲದೆ ಮಾರ್ಟಿನ್ ಕ್ಯಾನ್ಸರ್ ರೋಗಿಯಾಗಿದ್ದು, ಕಿಮಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀಡಿಯೋ ವೈರಲ್ ಆದ ಬೆನ್ನಿಗೆ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆಯುವ ಆತಂಕದಲ್ಲಿ ಎರಡು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ತಮ್ಮ ಸಹೋದ್ಯೋಗಿಗಳ ಬೆನ್ನಿಗೆ ನಿಂತ 57 BDP ಪೋಲಿಸರು ತಮ್ಮನ್ನು ನಿಯೋಜಿಸಲಾಗಿದ್ದ ತುರ್ತು ಪ್ರತಿಕ್ರಿಯೆ ಸೇವೆಗೆ ರಾಜಿನಾಮೆ ನೀಡಿದ್ದಾರೆ. ಅದಾಗ್ಯೂ ಇವರು BDP ಯ ಉದ್ಯೋಗಿಗಳೇ ಆಗಿರುತ್ತಾರೆ. ಆದರೆ ಇನ್ನು ಮುಂದೆ ಅವರು ತುರ್ತು ಪ್ರತಿಕ್ರಿಯೆ ತಂಡದ ಭಾಗವಾಗಿರುವುದಿಲ್ಲಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಪೋಲಿಸ್ ಅಧಿಕಾರಿಯ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿ ಬಲಿಯಾದ ಬಳಿಕ ಅಮೇರಿಕದಲ್ಲಿ ಬೃಹತ್ ಪ್ರತಿಭಟನೆ ಜರುಗುತ್ತಿದೆ. ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಬಿಳಿಯ ಜನಾಂಗದವರೂ ಸಾಥ್ ನೀಡುತ್ತಿದ್ದಾರೆ.