ಸರ್ಕಾರದ ದಬ್ಬಾಳಿಕೆ ಹೇಗಿದೆಯೆಂದರೆ ನಾಲ್ಕು ಜನ ನಿವಾಸಿಗಳು ಒಂದೆಡೆ ಕುಳಿತು ಮಾತನಾಡಿಕೊಳ್ಳುವುದನ್ನೂ ಹತ್ತಿಕ್ಕುವಂತಿದೆ. ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿಯೂ ಇಂತಹ ಘಟನೆ ನಡೆದಿದೆ. ಇಲ್ಲಿನ ಕೆಲವು ನಿವಾಸಿಗಳು ರಜಾ ದಿನವಾದ ಭಾನುವಾರ ಕಾಲೋನಿಯಲ್ಲಿರುವ ಪಾರ್ಕಿನಲ್ಲಿ ಕುಳಿತು ವಿವಾದಿತ ಸಿಎಎ ಕುರಿತಾಗಿ ವಿಚಾರ ಮಂಥನ ಮಾಡಲು ಸಿದ್ಧರಾಗಿದ್ದರು. ಆದರೆ, ಸ್ಥಳಕ್ಕೆ ಬಂದ ಪೊಲೀಸ್ ಪಡೆ ಇಂತಹ ಚರ್ಚೆಯನ್ನು ಮಾಡುವಂತಿಲ್ಲ ಎಂದು ಗದರಿಕೊಂಡು ಅಲ್ಲಿ ನೆರೆದಿದ್ದ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿದೆ.
ದಕ್ಷಿಣ ದೆಹಲಿಯಲ್ಲಿರುವ ಈ ಡಿಫೆನ್ಸ್ ಕಾಲೋನಿಯಲ್ಲಿನ ದುರ್ಗಾಪೂಜಾ ಪಾರ್ಕಿನಲ್ಲಿ ಸೇರಿ ಸಿಎಎ ಬಗ್ಗೆ ಚರ್ಚೆ ನಡೆಸಲು ಕೆಲವು ಯುವಕರನ್ನೊಳಗೊಂಡ ನಿವಾಸಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದರು. ಈ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಕಾಲೋನಿಯ ಹಲವು ನಿವಾಸಿಗಳು, ಹಿರಿಯ ನಾಗರಿಕರು ಉತ್ಸುಕರಾಗಿ ಆಗಮಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಕಾಲೋನಿಯ ನಿವಾಸಿಗಳ ಸಂಘದ ಅಧ್ಯಕ್ಷ ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಸ್ಥಳಕ್ಕೆ ಒಂದು ಡಜನ್ ಗೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಗಮಿಸಿ ಚರ್ಚೆಯನ್ನು ನಡೆಸಬಾರದು ಎಂದು ನಿವಾಸಿಗಳಿಗೆ ತಾಕೀತು ಮಾಡಿದ್ದಾರೆ. ಈ ಪೊಲೀಸರೊಂದಿಗೆ ಡಿಫೆನ್ಸ್ ಕಾಲೋನಿ ನಿವಾಸಿಗಳ ಹಿತರಕ್ಷಣಾ ಸಂಘದ ಅಧ್ಯಕ್ಷ ರಂಜಿತ್ ಸಿಂಗ್ ಅವರೂ ಇದ್ದರು. ಅಂದರೆ, ಪೊಲೀಸರಿಗೆ ಕರೆ ಮಾಡಿ ಅವರೊಂದಿಗೆ ಸಿಂಗ್ ಸಹ ಆಗಮಿಸಿದ್ದರು.
ಪೊಲೀಸರೊಂದಿಗೆ ಸೇರಿಕೊಂಡ ಸಿಂಗ್ ಮತ್ತು ಸಂಘದ ಮತ್ತಿಬ್ಬರು ಪದಾಧಿಕಾರಿಗಳು ಅಲ್ಲಿದ್ದ ನಿವಾಸಿಗಳಿಗೆ ನೀವು ಇಲ್ಲಿ ಇಂತಹ ಯಾವುದೇ ವಿಚಾರವನ್ನು ಚರ್ಚಿಸುವಂತಿಲ್ಲ. ಇಲ್ಲಿಂದ ಹೊರಡಿ, ನಿಮ್ಮ ನಿಮ್ಮ ಕೆಲಸಗಳನ್ನು ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ಪ್ರತಿನಿಧಿ ನಿಹಾ ಮಸಿಹ್ ಅವರ ಹೇಳುವಂತೆ, ಸಿಂಗ್ ಅವರು ನಮ್ಮ ಕಾಲೋನಿಯಲ್ಲಿ ಇಂತಹ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅವಕಾಶವಿಲ್ಲ ಎಂದು ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ನಿವಾಸಿಗಳು ತೀವ್ರ ಪ್ರತಿರೋಧ ತೋರಿದ್ದಾರೆ. ನಮ್ಮದೇ ಆದ ಪಾರ್ಕಿನಲ್ಲಿ ಮಾತನಾಡಲು ನಾವು ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲಿದ್ದ ಮಹಿಳಾ ವಕೀಲರೊಬ್ಬರು ಕಾನೂನಿನ ಬಗ್ಗೆ ವಿವರಣೆ ನೀಡುತ್ತಿದ್ದಾಗ ವಿರೋಧ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಯೊಬ್ಬರು, ಇಲ್ಲಿ ಅಸ್ಸಾಂ ವಿಚಾರವನ್ನು ಮಾತನಾಡುವಂತಿಲ್ಲ. ಇದು ದೆಹಲಿ ಎಂದು ಸೂಚಿಸಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ಸ್ವಾಮಿ ಅಸ್ಸಾಂ ಇರುವುದು ಭಾರತದಲ್ಲಿಯೇ ಅಲ್ಲವೇ? ಆ ರಾಜ್ಯವೂ ಸಹ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಚರ್ಚೆಗೆ ಮುಂದಾಗಿದ್ದವರು ಮತ್ತು ವಿರೋಧ ವ್ಯಕ್ತಪಡಿಸುತ್ತಿದ್ದವರ ಮಧ್ಯೆ ಮಾತಿನ ಚಕಮಕಿ ಹೆಚ್ಚಾಗುತ್ತಿರುವುದನ್ನು ಕಂಡ ಬಾಲಕಿಯರ ಗುಂಪೊಂದು ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದ್ದಾರೆ. ಆಗ ಎಲ್ಲರೂ ಗೌರವ ನೀಡಿದರೆ ಚರ್ಚೆ ನಡೆಸುವುದನ್ನು ವಿರೋಧಿಸುತ್ತಾ ಗದ್ದಲವೆಬ್ಬಿಸಿದ ವ್ಯಕ್ತಿ ಮಾತ್ರ ಅಗೌರವ ತೋರಿ ವಾಗ್ವಾದವನ್ನು ಮುಂದುವರಿಸಿದ್ದ.
ಕಾಲೋನಿಯ ಅಧಿಕೃತ ಫೇಸ್ ಬುಕ್ ಗ್ರೂಪ್ ನಲ್ಲಿ ನಿವಾಸಿಯಾದ ರಾಜೀವ್ ಸೂರಿ ಅವರು, ನಾಗರಿಕ ಸಮಾಜದ ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು ಸೇರಿ ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಚರ್ಚೆ ನಡೆಸಲು ಸಭೆ ಆಯೋಜಿಸಿದ್ದರು. ಅಲ್ಲಿಗೆ ಪೊಲೀಸರು ಬಂದಿದ್ದರಿಂದ ನಾನು ಅಲ್ಲಿಗೆ ಹೋದೆ. ಪೊಲೀಸರು ಎಷ್ಟೇ ಧಮಕಿ ಹಾಕಿದರೂ ನಿವಾಸಿಗಳ ಧ್ವನಿಯನ್ನು ಅಡಗಿಸಲು ಕಾರ್ಯಕ್ರಮವನ್ನು ರದ್ದು ಮಾಡಲು ಸಾಧ್ಯವಾಗಲಿಲ್ಲ. ವಾಗ್ವಾದದಲ್ಲಿ ತೊಡಗಿದ್ದ ಬಹುತೇಕ ಜನರು ಸಮಾಧಾನಗೊಂಡಿದ್ದರು. ಆದರೆ, ಅರ್ಥಪೂರ್ಣವಾದ ಚರ್ಚೆ ನಡೆಸಲು ಮುಂದಾಗಿದ್ದವರನ್ನು ತಡೆಯಲು ಪೊಲೀಸರನ್ನು ಕರೆಯಿಸಿದ ನಿವಾಸಿಗಳ ಹಿತರಕ್ಷಣಾ ಸಂಘದ ಕ್ರಮ ಅಕ್ಷಮ್ಯವಾಗಿದೆ ಎಂದು ಬರೆದಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯಾದ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕನ್ನು ನೀಡಲಾಗಿದೆ. ಕಾನೂನಿನಡಿಯಲ್ಲಿ ಎಲ್ಲರೂ ಸರಿಸಮಾನರೇ ಆಗಿದ್ದಾರೆ. ನಮ್ಮ ದೇಶದಲ್ಲಿ ನಾಗರಿಕರಿಗೆ ವಾಕ್ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಪ್ರತಿ ನಾಗರಿಕನೂ ತನ್ನ ನಿಲುವನ್ನು ಪ್ರಕಟಿಸುವ ಹಕ್ಕನ್ನು ಹೊಂದಿದ್ದಾನೆ. ಆದರೆ, ಕಳೆದ ಹಲವು ವರ್ಷಗಳಿಂದ ಅಂದರೆ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆ ಆದಾಗಿನಿಂದ ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ.
ಯಾರಾದರೂ ಅಧಿಕಾರಸ್ಥರ ವಿರುದ್ಧ ಧ್ವನಿ ಎತ್ತಿದರೆ ಅವರ ಧ್ವನಿಯನ್ನೇ ಅಡಗಿಸುವಂತಹ ಷಡ್ಯಂತ್ರ ದೇಶದ ಎಲ್ಲಾ ಭಾಗಗಳಲ್ಲಿ ನಡೆಯುತ್ತಿದೆ. ಇದೇ ರೀತಿಯ ಷಡ್ಯಂತ್ರಕ್ಕೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ನಡೆದ ಈ ಪ್ರಕರಣ ಸಾಕ್ಷಿಯಾಗಿ ನಿಂತಿದೆ. ದೇಶಾದ್ಯಂತ ಸಿಎಎ ಬಗ್ಗೆ ಭಾರೀ ಚರ್ಚೆಗಳು, ವಿವಾದಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ತಿಳಿದುಕೊಳ್ಳಲೆಂದೇ ಇಲ್ಲಿನ ನಿವಾಸಿಗಳು ಸಭೆ ಆಯೋಜನೆ ಮಾಡಿದ್ದರು. ಈ ಸಭೆಯಲ್ಲಿ ಸಿಎಎ ಬಂದರೆ ಜನರಿಗೆ ಅನುಕೂಲವಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಚರ್ಚೆ ನಡೆಸುವವರಿದ್ದರೇ ಹೊರತು, ದೇಶದ ಯಾವ ಭಾಗದಲ್ಲಿ ಬಾಂಬ್ ಇಡಬೇಕು? ಎಲ್ಲಿ ಘರ್ಷಣೆಗಳನ್ನು ಮಾಡಿಸಬೇಕು? ಯಾವ ವಿಶ್ವವಿದ್ಯಾಲಯಗಳಿಗೆ ನುಗ್ಗಿ ದಾಂಧಲೆ ನಡೆಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸುತ್ತಿರಲಿಲ್ಲ. ಏಕೆಂದರೆ, ಇವರೆಲ್ಲಾ ದೇಶದ ಸಾಮಾನ್ಯ ನಾಗರಿಕರೇ ಹೊರತು ಅಪ್ಪಟ ದೇಶಾಭಿಮಾನಿಗಳಾಗಿದ್ದರು. ಆದರೆ, ದೇಶಾಭಿಮಾನದ ಮುಖವಾಡ ಧರಿಸಿ ಯಾವುದೇ ವಿಚ್ಛಿದ್ರಕಾರಿ ಸಂಘರ್ಷಕ್ಕೆ ಕಾರ್ಯತಂತ್ರ ರೂಪಿಸುವವರಲ್ಲ.
ಇಂತಹ ಕಳಕಳಿಯನ್ನಿಟ್ಟುಕೊಂಡು ಸಭೆ ನಡೆಸಲು ಮುಂದಾದವರಿಗೆ ಅಡ್ಡಿಪಡಿಸುವ ಪೊಲೀಸರು, ಜೆಎನ್ ಯು ಪ್ರವೇಶ ದ್ವಾರದಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಗದ್ದಲವೆಬ್ಬಿಸಿದ, ಸಮಾಜದಲ್ಲಿ ಅಶಾಂತಿ ಉಂಟು ಮಾಡಿದ ರೌಡಿಪಡೆಗಳನ್ನೇಕೆ ಮಟ್ಟ ಹಾಕಲು ಮುಂದಾಗಲಿಲ್ಲ.
ಏಕೆಂದರೆ, ಡಿಫೆನ್ಸ್ ಕಾಲೋನಿಯ ನಿವಾಸಿಗಳು ಸಿಎಎ ವಿರುದ್ಧ ಧ್ವನಿ ಎತ್ತುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಣಿಯಲು ಸರ್ಕಾರ ಪೊಲೀಸರನ್ನು ಬಳಸಿಕೊಂಡಿದ್ದರೆ, ರಾಜಾರೋಷವಾಗಿ ಬಡಿಗೆ, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ರೌಡಿ ಪಡೆಗಳು ಇದೇ ಸರ್ಕಾರದ ಕಣ್ಣಿಗೆ ದೇಶಭಕ್ತರಂತೆ ಕಂಡುಬಂದಿವೆ. ಇವರೆಲ್ಲಾ ದೇಶದಲ್ಲಿ ಅಶಾಂತಿ ಉಂಟು ಮಾಡಿ ಸಿಎಎ ಪರವಾಗಿ ಧ್ವನಿ ಎತ್ತುವವರು ಎಂಬ ಕಾರಣಕ್ಕೆ ಇವರ ವಿಚಾರದಲ್ಲಿ ಸರ್ಕಾರಕ್ಕೆ ಸಾಫ್ಟ್ ಕಾರ್ನರ್.
ತಮ್ಮ ಪಾಡಿಗೆ ತಾವು ಸಭೆ ನಡೆಸುವುದರ ವಿರುದ್ಧ ದೂರು ನೀಡಿ ಪೊಲೀಸರು ಬರುವಂತೆ ಮಾಡಿದ ನಿವಾಸಿಗಳ ಸಂಘದ ಅಧ್ಯಕ್ಷನ ವಿರುದ್ಧ ಅಲ್ಲಿನ ನಾಗರಿಕರು ತಿರುಗಿಬಿದ್ದಿದ್ದಾರೆ. ಈ ವ್ಯಕ್ತಿ ನಿವಾಸಿಗಳ ಹಿತ ಕಾಯಬೇಕೇ ಹೊರತು, ಕಾಲೋನಿಯೊಳಗೆ ಪೊಲೀಸರನ್ನು ಕರೆಸಿ ಎಲ್ಲರಲ್ಲೂ ಆತಂಕ ಮನೆ ಮಾಡುವಂತೆ ಮಾಡಿದ್ದಾನೆ. ಈ ವ್ಯಕ್ತಿಯಿಂದ ನಿವಾಸಿಗಳು ತಮ್ಮ ಪರವಾಗಿ ಇನ್ನೇನು ನಿರೀಕ್ಷಿಸಲು ಸಾಧ್ಯವಿದೆ?
ಕೃಪೆ: ದಿ ವೈರ್