ಒಂದು ಕಡೆ; ರೌಡಿ ಶೀಟರ್ ಒಬ್ಬನ ಮೇಲೆ ನಡೆದ ಹಲ್ಲೆಯನ್ನು ಕೋಮು ಗಲಭೆಯಾಗಿ ಬಿಂಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹೇಯ ರಾಜಕಾರಣಕ್ಕೆ ಶಿವಮೊಗ್ಗದ ಜನತೆ ಹೈರಾಣಾಗಿದ್ದರೆ, ಮತ್ತೊಂದು ಕಡೆ ಗಲಭೆ ನಿಯಂತ್ರಿಸಲು ಪೊಲೀಸರು ಹೇರಿದ ಕರ್ಫ್ಯೂ ಮತ್ತು ನಿಷೇಧಾಜ್ಞೆಗಳು ಅಮಾಯಕ ಹೆಣ್ಣುಮಕ್ಕಳನ್ನು ಹರಿದುಮುಕ್ಕುವವರಿಗೆ ರಹದಾರಿ ಒದಗಿಸಿವೆ.
ಕಳೆದ ವಾರ ಗಲಭೆ ಘಟನೆಗಳು ನಡೆದ ಶಿವಮೊಗ್ಗ ನಗರದ ಕೋಟೆ, ತುಂಗಾ ನಗರ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಉಳಿದಂತೆ ನಗರಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಜಿಲ್ಲಾ ಪೊಲೀಸ್ ಪ್ರಕಾರ, ಗಲಭೆ ಮರುಕಳಿಸುವ ಸಾಧ್ಯತೆ ಹೆಚ್ಚಿರುವ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ, ವಾಸ್ತವವಾಗಿ ಪೊಲೀಸರು ನಗರದ ಬಹುತೇಕ ಕಡೆ ಅಂಗಡಿಮುಂಗಟ್ಟು, ಹೋಟೆಲ್, ಕಚೇರಿಗಳನ್ನು ಬಂದ್ ಮಾಡಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಹುತೇಕ ಆಸ್ಪತ್ರೆ, ಕ್ಲಿನಿಕ್, ಔಷಧ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಗಳು ಕೂಡ ಮುಚ್ಚಿದ್ದವು. ನಿಷೇಧಾಜ್ಞೆ ವ್ಯಾಪಾರ, ವಹಿವಾಟು, ಹೋಟೆಲ್, ಪೆಟ್ರೋಲ್ ಬಂಕ್ ಗಳಿಗೆ ಅನ್ವಯವಾಗದೇ ಇದ್ದರೂ, ಕೇವಲ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ, ಶಸ್ತ್ರಾಸ್ತ್ರ ಮತ್ತು ಆಯುಧಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ ಎಂಬುದಕ್ಕೆ ಆ ಕಾನೂನು ಸೀಮಿತವಾಗಿದ್ದರೂ, ಪೊಲೀಸರು ಕಳೆದ ನಾಲ್ಕು ದಿನಗಳಿಂದಲೂ ನಗರದಲ್ಲಿ ಕರ್ಫ್ಯೂ ಅನ್ವಯವಾಗದ ಪ್ರದೇಶದಲ್ಲೂ ಅಕ್ಷರಶಃ ಕರ್ಫ್ಯೂ ಹೇರಿದ್ದರು.
ಅಧಿಕೃತ ಕರ್ಫ್ಯೂ ಎಂದು ಘೋಷಿಸಿದ್ದರೆ ನಗರದ ಹೊರಗಿನವರು ಸಾಧ್ಯವಾದಷ್ಟು ನಗರಕ್ಕೆ ಬರುವುದನ್ನೇ ಮುಂದೂಡುತ್ತಿದ್ದರು. ಆದರೆ, ಜಿಲ್ಲಾಡಳಿತ ಹಾಗೆ ಮಾಡದೇ, ನಿಷೇಧಾಜ್ಞೆ ಎಂದು ಘೋಷಿಸಿ, ಅಕ್ಷರಶಃ ಪಾಲನೆಯಲ್ಲಿ ಕರ್ಫ್ಯೂ ಜಾರಿಗೊಳಿಸಿತ್ತು. ಹಾಗಾಗಿ, ಅನಾರೋಗ್ಯ, ತುರ್ತು ಕೆಲಸಗಳ ಮತ್ತಿತರ ಕಾರಣಕ್ಕೆ ನಗರಕ್ಕೆ ಆಗಮಿಸುವ ಸುತ್ತಮುತ್ತಲ ಹಳ್ಳಿ, ತಾಲೂಕು ಕೇಂದ್ರಗಳ ಜನ ಊಟ, ತಿಂಡಿ, ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜನರ ಇಂತಹ ಅಸಹಾಯಕತೆಯನ್ನು, ವ್ಯವಸ್ಥೆ ಸೃಷ್ಟಿಸಿದ ಯಡವಟ್ಟನ್ನು ಅಪರಾಧಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಕರ್ಫ್ಯೂ ನಡುವೆಯೇ ಶನಿವಾರ ಒಂದೇ ದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಪ್ರತ್ಯೇಕ ಲೈಂಗಿಕ ದಾಳಿಗಳು ನಡೆದಿರುವುದೇ ಸಾಕ್ಷಿ.
Also Read: ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ತಾಯಿನ ನೆರವಿಗೆ ಬಂದಿದ್ದ ಹಳ್ಳಿಯ ಹೆಣ್ಣುಮಗಳೊಬ್ಬಳಿಗೆ ಊಟ ಕೊಡಿಸುವ ನೆಪದಲ್ಲಿ ರಾತ್ರಿ ಹೊರಗೆ ಕರೆದೊಯ್ದು ಸ್ವತಃ ಆಸ್ಪತ್ರೆಯ ವಾರ್ಡ್ ಬಾಯ್ ಮತ್ತು ಆತನ ಮೂವರು ಸಹಚರರು ಸಾಮೂಹಿಕ ಅತ್ಯಾಚಾರ ನಡೆಸಿರುವ ಹೇಯ ಘಟನೆ ನಡೆದಿದೆ. ಬಹುಶಃ ಆಸ್ಪತ್ರೆಯ ಆವರಣದಲ್ಲೇ ಆಕೆಗೆ ರಾತ್ರಿಯ ಊಟ ಸಿಕ್ಕಿದ್ದರೆ, ಆ ಬಾಲಕಿ ಹೀಗೆ ನರರಕ್ಕಸರ ದಾಳಿಯಿಂದ ಪಾರಾಗುತ್ತಿದ್ದಳು. ಈಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಪಾತಕಿಗಳ ಬಂಧನವೂ ಅತಿ ಶೀಘ್ರವೇ ಆಗಲೂಬಹುದು.
ಅದೇ ಶನಿವಾರ ನಡೆದ ಮತ್ತೊಂದು ಘಟನೆಯಲ್ಲಿ ನಗರದ ಮತ್ತೊಂದು ಪ್ರದೇಶದಲ್ಲಿ ವಯಸ್ಕನೊಬ್ಬ ಒಂಭತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೂ ನಡೆದಿದೆ.
ಆದರೆ, ಒಬ್ಬ ರೌಡಿ ಶೀಟರ್ ಮೇಲಿನ ಹಲ್ಲೆ ವಿಷಯದಲ್ಲಿ ಸಕಾಲಿಕ ಸೂಕ್ತ ಕ್ರಮ ಜರುಗಿಸುವಲ್ಲಿ ಆದ ಲೋಪ, ಶಿವಮೊಗ್ಗದಲ್ಲಿ ಕೋಮು ಹಿಂಸೆಯ ಬೆಂಕಿಯಲ್ಲಿ ತುಪ್ಪ ಕಾಯಿಸಿಕೊಳ್ಳುವ ರಾಜಕೀಯ ಅವಕಾಶವಾದಿಗಳು ಹಾಸಿಗೆ ಹಾಕಿಕೊಂಡಂತಾಗಿದೆ. ಅದರಿಂದಾಗಿ ನಗರದ ಜನತೆ ಏಳೆಂಟು ತಿಂಗಳ ಕರೋನಾ ಸಂಕಷ್ಟ, ಲಾಕ್ ಡೌನ್ ಹೊಡೆತಗಳಿಂದ ಹೈರಾಣಾಗಿರುವ ಹೊತ್ತಲ್ಲೇ ವಾರಗಟ್ಟಲೆ ಘೋಷಿತ ಮತ್ತು ಅಘೋಷಿತ ಕರ್ಫ್ಯೂಗೆ ತಲೆಕೊಡಬೇಕಾಗಿದೆ. ಅಷ್ಟೇ ಅಲ್ಲ; ಹೀಗೆ ಸಾಲು ಸಾಲು ಅಮಾಯಕ ಬಾಲಕಿಯರು ಪೈಶಾಚಿಕ ದಾಳಿಗೆ ಈಡಾಗಬೇಕಿದೆ.
ವಿಪರ್ಯಾಸವೆಂದರೆ; ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣವಾದ ರೌಡಿ ಶೀಟರ್(ಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಲವು ಅಪರಾಧ ಪ್ರಕರಣದ ದಾಖಲಾಗಿವೆ ಮತ್ತು ಅಧಿಕೃತವಾಗಿ ರೌಡಿ ಶೀಟ್ ತೆರೆಯಲಾಗಿದೆ!) ಮೇಲಿನ ದಾಳಿ ಘಟನೆ ನಡೆದು ಐದು ದಿನ ಕಳೆದರೂ, ಹಲ್ಲೆ ನಡೆಸಿದವರು ಯಾರು? ಯಾವ ಕಾರಣಕ್ಕೆ ಹಲ್ಲೆ ನಡೆಯಿತು? ಹಲ್ಲೆ ರಸ್ತೆಯಲ್ಲಿ ಆದ ತತಕ್ಷಣದ ಕ್ರಿಯೆ-ಪ್ರತಿಕ್ರಿಯೆ ಫಲವೇ? ಘಟನೆಯ ಹಿಂದೆ ವೈಯಕ್ತಿಕ ದ್ವೇಷವಿದೆಯೆ? ಅಥವಾ ವ್ಯವಸ್ಥಿತ ಸಂಚಿನ ಭಾಗವೆ? ಅಥವಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಯಂತೆ, ಭಾರತೀಯ ಜನತಾ ಪಕ್ಷ ಹಾಗೂ ಸಂಘಪರಿವಾರ ಬಿಂಬಿಸಿದಂತೆ ಅದು ಕೋಮು ದ್ವೇಷದ ಉದ್ದೇಶಿತ ಕೃತ್ಯವೇ ಎಂಬುದನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ಯಶಸ್ವಿಯಾಗಿಲ್ಲ! ಈವರೆಗೆ ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಯಲ್ಲಿ ಕೂಡ ಯಾರು ಹಲ್ಲೆ ನಡೆಸಿದ್ದು ಎಂಬುದನ್ನು ಖಚಿತಪಡಿಸಿಲ್ಲ. ಮುಸುಕುದಾರಿಗಳು ಹಲ್ಲೆ ನಡೆಸಿದರು ಎಂದಷ್ಟೇ ಹೇಳಿರುವುದಾಗಿ ಎಫ್ ಐಆರ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಇಡೀ ನಗರದ ಜನಜೀವನವನ್ನೇ ಅಸ್ತವ್ಯಸ್ಥಗೊಳಿಸಿದ ಘಟನೆಯ ಕುರಿತು ಸರಿಯಾದ ಮತ್ತು ಕ್ಷಿಪ್ರ ತನಿಖೆ ನಡೆಸಿ, ಬಿಗಿ ಕ್ರಮಜರುಗಿಸುವಲ್ಲಿ ಜಿಲ್ಲಾ ಪೊಲೀಸ್ ಎಡವಿದೆ ಎಂಬ ಮಾತುಗಳು ಈಗ ರಾಜಕೀಯ ಮತ್ತು ರಾಜಕೀಯೇತರ ಸಾಮಾಜಿಕ ಸಂಘಟನೆಗಳಿಂದಲೂ ಕೇಳಿಬರತೊಡಗಿದೆ. ಮೊದಲನೆಯದಾಗಿ, ಗಲಭೆಯ ದಿನ ಒಂದು ಕಡೆ ಕರ್ಫ್ಯೂ ಜಾರಿಯಲ್ಲಿಲ್ಲದ ಪ್ರದೇಶಗಳಲ್ಲಿ ಪೊಲೀಸರು ಅಕ್ಷರಶಃ ಕರ್ಫ್ಯೂ ವಾತಾವರಣ ನಿರ್ಮಿಸುತ್ತಿದ್ದರೆ, ಮತ್ತೊಂದು ಕಡೆ ಆಡಳಿತ ಪಕ್ಷದ ಸಚಿವರು ಸೇರಿದಂತೆ ಅವರು ನೂರಾರು ಹಿಂಬಾಲಕರು ಒಂದು ಕೋಮಿನ ಜನರ ಪರ ಗುಂಪುಕಟ್ಟಿಕೊಂಡು ಮನೆಮನೆ ಭೇಟಿ, ಪ್ರಚೋದನಕಾರಿ ಹೇಳಿಕೆಗಳಲ್ಲಿ ನಿರತರಾಗಿದ್ದರು. ಆ ಬಗ್ಗೆ ಪೊಲೀಸ್ ವ್ಯವಸ್ಥೆ ಮೌನ ವಹಿಸಿತ್ತು ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.
‘ಸ್ವರಾಜ್ ಇಂಡಿಯಾ’ ಸಂಘಟನೆಯ ಜಿಲ್ಲಾ ವಕ್ತಾರ ಮತ್ತು ಹಿರಿಯ ವಕೀಲ ಕೆ ಪಿ ಶ್ರೀಪಾಲ್, “ಹಲ್ಲೆ ಘಟನೆಯ ಬಗ್ಗೆ ಕೂಡಲೇ ತನಿಖೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸುವಲ್ಲಿ ಜಿಲ್ಲಾ ಪೊಲೀಸ್ ವಿಫಲವಾಗಿದೆ. ಜೊತೆಗೆ ಗಲಭೆ ನಿಯಂತ್ರಿಸುವ ಕ್ರಮವಾಗಿ ಹೇರಿದ ನಿಷೇಧಾಜ್ಞೆ ಮತ್ತು ಪ್ರಚೋದನಕಾರಿ ಹೇಳಿಕೆ, ಸಂದೇಶಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಜಾರಿಮಾಡಿದ ಎಚ್ಚರಿಕೆಯು ಒಂದು ಕೋಮಿನ ಪರ ಮತ್ತು ಮತ್ತೊಂದು ಕೋಮಿನ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಮತ್ತು ಕರ್ಫ್ಯೂ ಉಲ್ಲಂಘಿಸಿ ಗುಂಪುಗೂಡಿ ಪ್ರಚೋದನಕಾರಿಯಾಗಿ ವರ್ತಿಸಿದ ಸಚಿವರು ಮತ್ತು ಅವರ ಹಿಂಬಾಲಕರಿಗೆ ಅನ್ವಯವಾಗುವುದಿಲ್ಲವೆ?” ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಯುವ ನಾಯಕ ಎಚ್ ಸಿ ಯೋಗೇಶ್ ಕೂಡ, ಈ ಕುರಿತ ಹೇಳಿಕೆಯಲ್ಲಿ, “ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಗಲಭೆ ನಿಯಂತ್ರಣದ ವಿಷಯದಲ್ಲಿ ಸಕಾಲಿಕವಾಗಿ ಕ್ರಮ ಜರುಗಿಸಿದ್ದರೆ, ಪರಿಸ್ಥಿತಿಯನ್ನು ಆರಂಭದಲ್ಲೇ ನಿಯಂತ್ರಿಸುವುದು ಸಾಧ್ಯವಿತ್ತು. ಆದರೆ, ಅಲ್ಲಿ ಅವರು ಎಡವಿದ ಕಾರಣ ಇಡೀ ನಗರದ ಜನತೆ ಈಗ ಕರ್ಫ್ಯೂ ಮತ್ತು ನಿಷೇಧಾಜ್ಞೆಯಂತಹ ಆತಂಕದ ಸ್ಥಿತಿ ಎದುರಿಸಬೇಕಾಗಿದೆ. ಬಡವರ ಬದುಕು ಹೈರಾಣಾಗುತ್ತಿದೆ” ಎಂದು ಹೇಳಿದ್ದಾರೆ.
ಒಟ್ಟಾರೆ, ಕೋಮು ರಾಜಕಾರಣದ ಹಪಾಹಪಿಯ ರಾಜಕಾರಣಿಗಳ ದಾಹಕ್ಕೆ ನಗರದ ಜನರ ಬದುಕಷ್ಟೇ ಅಲ್ಲ; ಅಮಾಯಕ ಹೆಣ್ಣುಮಕ್ಕಳೂ ಬಲಿಯಾಗುತ್ತಿದ್ದಾರೆ. ಘೋಷಿತ ಮತ್ತು ಅಘೋಷಿತ ಕರ್ಫ್ಯೂ ಜನರ ಬದುಕನ್ನು ಹೈರಾಣಾಗಿಸುತ್ತಿವೆ.