ಬಹುಶಃ ಭಾರತದ ವಿಧಾನ ಮಂಡಳಗಳ ಇತಿಹಾಸದಲ್ಲೇ ಸ್ವಪಕ್ಷಿಯರಿಂದ ಅತ್ಯಂತ ಹೆಚ್ಚಿನ ಮಟ್ಟದ ನೋವನ್ನು ಅನುಭವಿಸಿ ತನ್ನ ರಾಜಕೀಯ ಜೀವನದ ವಿದಾಯ ಭಾಷಣವನ್ನು ಅತ್ಯಂತ್ಯ ನೋವಿನಿಂದ ಕೊನೆಗೊಳಿಸಿದ ಏಕೈಕ ಜನನಾಯಕ ಯಡಿಯೂರಪ್ಪನವರು ಎಂದರೆ ತಪ್ಪಾಗಲಿಕ್ಕಿಲ್ಲ. ಕಳೆದ ನಾಲ್ಕು ದಶಕಗಳ ಉದ್ದಕ್ಕೂ ಯಡಿಯೂರಪ್ಪ ಕರ್ನಾಟಕ ರಾಜಕೀಯದ ಅವಿಭಾಜ್ಯ ಅಂಗವಾಗಿದ್ದರು. ಆರಂಭದಿಂದಲೂ ಅವರನ್ನು ಲಿಂಗಾಯತ ಸಮುದಾಯದ ಮತ ಸೆಳೆಯುವ ಶಕ್ತಿಯಾಗಿ ಬಿಜೆಪಿ ಮತ್ತು ಸಂಘ ಬಳಸಿಕೊಂಡಿತೆ ಹೊರತು ಒಬ್ಬ ರಾಜಕೀಯ ನಾಯಕನಾಗಿ ಯಡಿಯೂರಪ್ಪನವರ ಶಕ್ತಿಯನ್ನು ಅವು ಧನಾತ್ಮಕವಾಗಿ ಬಳಸಿಕೊಳ್ಳಲಿಲ್ಲ.
ಯಡಿಯೂರಪ್ಪ ನಿನ್ನೆ ನಡೆದ ವಿಧಾನಮಂಡಲದ ಬಜೆಟ್ ಅಧಿವೇಷನದಲ್ಲಿ ತಮ್ಮ ಅತ್ಯಂತ ನೋವಿನಿಂದ ಕೂಡಿದ ವಿಧಾಯ ಭಾಷಣವನ್ನು ಮಾಡಿದ್ದಾರೆ. ಇದು ಸದನದಲ್ಲಿ ನನ್ನ ಕೊನೆಯ ಮಾತು ಎನ್ನುವಾಗ ಯಡಿಯೂರಪ್ಪನವರ ಧ್ವನಿಯಲ್ಲಿ ಅತ್ಯಂತ ಹೆಚ್ಚಿನ ನೋವು ಎದ್ದು ಕಾಣುತ್ತಿತ್ತು. ಕರ್ನಾಟಕದಲ್ಲಿ ಜೀರೊ ಹಂತದಲ್ಲಿದ್ದ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಬೆಳೆಸಿದ ಯಡಿಯೂರಪ್ಪನವರಿಗೆ ಕನಿಷ್ಟ ಸರಳ ಬಹುಮತದಿಂದ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಎರಡು ಸಲ ಅಡ್ಡ ಮಾರ್ಗದಿಂದ ಸರಕಾರ ರಚಿಸಿದಾಗಲೂ ಕೂಡ ಅವರನ್ನು ಅವಧಿ ಪೂರ್ಣ ಅಧಿಕಾರದಲ್ಲಿ ಅವರ ಪಕ್ಷ ಮುಂದುವರೆಸಲಿಲ್ಲ ಎನ್ನುವ ನೋವಿನೊಂದಿಗೆ ಅವರು ತಮ್ಮ ಸದನದಲ್ಲಿ ರಾಜಕೀಯ ಜೀವನದ ಕೊನೆಯ ಭಾಷಣ ಮಾಡಬೇಕಾಯಿತು.

ಬಿಜೆಪಿ ಮತ್ತು ಸಂಘದ ವಿಭಜಕ ನೀತಿಯನ್ನು ಯಡಿಯೂರಪ್ಪ ದೂರದಲ್ಲಿಟ್ಟೆ ಪಕ್ಷವನ್ನು ಕಟ್ಟಿದವರು. ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದಷ್ಟೆ ಅಲ್ಲದೆ ಕೇವಲ ಲಿಂಗಾಯತರನ್ನು ನಂಬಿಕೊಂಡರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅಸಾಧ್ಯವೆಂದು ಅವರು ಅರಿತಿದ್ದರು. ಏಕೆಂದರೆ ವಿರೋಧ ಪಕ್ಷಗಳಲ್ಲಿ ಬಹುತೇಕ ನಾಯಕರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಮತ್ತು ಲಿಂಗಾಯತ ಸಮುದಾಯದಲ್ಲಿ ಅಪಾರ ಸಂಖ್ಯೆಯ ಮತದಾರರು ಜಾತ್ಯಾತೀತರು ಆಗಿದ್ದು ಅವರೆಲ್ಲರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವುದು ಯಡಿಯೂರಪ್ಪನವರು ಚೆನ್ನಾಗಿ ಅರಿತಿದ್ದರು. ಆ ಕಾರಣದಿಂದಲೆ ಅವರು ಈಡಿಗˌ ಉಪ್ಪಾರˌ ಮುಂತಾದ ಅಲ್ಪ ಸಂಖ್ಯಾತ ಹಿಂದುಳಿದ ವರ್ಗಗಳ ಮತ್ತು ಭೋವಿˌ ಲಂಬಾಣಿ ಮುಂತಾದ ಸ್ಪರ್ಶ ದಲಿತರ ಹಾಗು ಎಡ ಅಸ್ಪರ್ಶ ದಲಿತ ಮಾದಿಗ ಜನಾಂಗದ ಸಂಪೂರ್ಣ ಬೆಂಬಲವನ್ನು ಬಿಜೆಪಿ ಪರವಾಗಿ ಸಂಘಟಿಸುವ ಮೂಲಕ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಮೈಕ್ರೋ ಸೋಷಲ್ ಇಂಜಿನೀಯರಿಂಗ್ ಪ್ರಯೋಗ ಮಾಡಿದ ನಾಯಕರೆನ್ನಿಸಿಕೊಂಡರು.
ಯಡಿಯೂರಪ್ಪ ತಮ್ಮ ಪಕ್ಷದ ಮೇಲೆ ಹೊಂದಿದ್ದ ನಿಯಂತ್ರಣವನ್ನು ತಪ್ಪಿಸಲು ಕೇಶವಕೃಪಾದ ಆಚಾರ್ಯರು ಸದಾ ಹೊಂಚು ಹಾಕುತ್ತಲೆ ಇದ್ದರು. ಕೇವಲ ಪಕ್ಷದ ಮೇಲಷ್ಟೆ ಅಲ್ಲದೆ ಲಿಂಗಾಯತ ಸಮುದಾಯದ ಮೇಲೆ ಯಡಿಯೂರಪ್ಪ ಹೊಂದಿರುವ ನಿಯಂತ್ರಣದ ಮೇಲೂ ಕೇಶವಕೃಪಾದ ಆಚಾರ್ಯರಿಗೆ ಹೊಟ್ಟೆಕಿಚ್ಚು ಇತ್ತು ಎನ್ನುವುದು ಇತ್ತೀಚಿನ ಪಂಚಮಸಾಲಿ ಮೀಸಲಾತಿ ಹೋರಾಟದಿಂದ ಬಹಿರಂಗಗೊಂಡಿತ್ತು. ಒಟ್ಟಾರೆ ಯಡಿಯೂರಪ್ಪನವರ ಬಿಜೆಪಿ ಮೇಲಿನ ಹಾಗು ಲಿಂಗಾಯತ ಸಮುದಾಯದ ಮೇಲಿನ ಹಿಡಿತವನ್ನು ಒಟ್ಟೊಟ್ಟಿಗೆ ಹುಡಿಗೊಳಿಸಿ ಬ್ರಾಹ್ಮಣ ನಿಯಂತ್ರಿತ ಹಿಂದುತ್ವದ ಆಧಾರದಲ್ಲಿ ಬಿಜೆಪಿಯನ್ನು ಬಲಪಡಿಸುವುದು ಕೇಶವಕೃಪಾದ ಆಚಾರ್ಯರ ಹುನ್ನಾರ ಮೇಲುಗೈ ಪಡೆಯಿತು. ಯಡಿಯೂರಪ್ಪನವರ ನಂತರ ಅವರ ಮಗನನ್ನು ಮುನ್ನೆಲೆಗೆ ಬರದಂತೆ ತಡೆಯುವಲ್ಲಿಯೂ ಕೂಡ ಆಚಾರ್ಯರ ಪಡೆ ಭಾಗಶಃ ಯಶಸ್ವಿಯಾಗಿದೆ. ೨೦೨೩ ರ ಚುನಾವಣೆಯು ಬಿಜೆಪಿ ಪಾಲಿಗು ಮತ್ತು ಕರ್ನಾಟಕದ ರಾಜಕೀಯ ಕ್ಷೇತ್ರದ ಪಾಲಿಗು ಯಡಿಯೂರಪ್ಪನವರನ್ನು ಹೊರತುಪಡಿಸಿದ ಚುನಾವಣೆಯಾಗಲಿದೆ.
ಮೊನ್ನಿನ ವಿದಾಯ ಭಾಷಣದಲ್ಲಿ ಯಡಿಯೂರಪ್ಪನವರು ಬಹಳ ಸೂಚ್ಯವಾಗಿ “ಈ ಯಡಿಯೂರಪ್ಪ ಸುಮ್ಮನೆ ಕೂಡುವವನಲ್ಲ” ಎಂದು ಬಹಳ ಮಾರ್ಮಿಕವಾಗಿ ತಮ್ಮ ಒಳ-ಹೊರಗಿನ ವಿರೋಧಿಗಳಿಗೆ ಒಂದು ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ನಿಜˌ ಯಡಿಯೂರಪ್ಪ ಎಂದಿಗೂ ಸುಮ್ಮನೆ ಕೂಡುವವರಲ್ಲ. ಯಡಿಯೂರಪ್ಪನವರನ್ನು ಬಳಸಿಕೊಂಡು ಬೆಳೆದು ಅಧಿಕಾರ ಮತ್ತು ಹಣ ಗಳಿಸಿದವರು ಅವರನ್ನು ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಿಹಾಕಲು ಮಾಡುತ್ತಿರುವ ಹುನ್ನಾರಗಳಿಗೆ ಯಡಿಯೂರಪ್ಪ ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ಸಂದೇಶವಂತೂ ಅವರ ವಿದಾಯದ ಭಾಷಣ ರವಾನಿಸಿದ್ದು ಸುಳ್ಳಲ್ಲ.