ಗೌತಮ್ ಬಸವರಾಜು ನಿರ್ಮಿಸಿ, ನಿರ್ದೇಶಿಸಿರುವ ʼಯಥಾಭವʼ ಚಿತ್ರದ ಟೀಸರ್ ವರಮಹಾಲಕ್ಷ್ಮೀ ಹಬ್ಬದ ಶುಭದಿನ ಬಿಡುಗಡೆಯಾಯಿತು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು.
ನಾನು ಕಳೆದವರ್ಷ ಹೈದರಾಬಾದ್ ನಲ್ಲಿ ಈ ಚಿತ್ರದ ಕಥೆ ಸಿದ್ದ ಮಾಡಿದೆ. ನಂತರ ಚಿತ್ರೀಕರಣ ಆರಂಭವಾಯಿತು. ಇಪ್ಪತ್ತೊಂದು ದಿನಗಳಲ್ಲಿ ಚಿತ್ರೀಕರಣ ಪೂರ್ಣ ಮಾಡಿದ್ದೇವೆ. ಯಥಾಭವ ಕೋರ್ಟ್ ರೂಮ್ ಜಾನರ್ ನ ಚಿತ್ರವಾಗಿದ್ದು, ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಕೋರ್ಟ್ ನಲ್ಲೇ ನಡೆಯುತ್ತದೆ. ನ್ಯಾಯಾಧೀಶರಾಗಿ ಹಿರಿಯ ನಟ ದತ್ತಣ್ಣ ಅಭಿನಯಿಸಿದ್ದಾರೆ . ಗೋಪಾಲಕೃಷ್ಣ ದೇಶಪಾಂಡೆ ವಕೀಲರಾಗಿ ಹಾಗೂ ಬಾಲ ರಾಜವಾಡಿ ಅವರು ಗೃಹ ಮಂತ್ರಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಶಂಕರ್, ಸಹನ ಸುಧಾಕರ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿದೆ. A2 music ಮೂಲಕ ಟೀಸರ್ ಬಿಡುಗಡೆಯಾಗಿ, ಎಲ್ಲರ ಮನಸೂರೆಗೊಳ್ಳುತ್ತಿದೆ. ಹೈದರಾಬಾದ್ ಹಾಗೂ ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಗೌತಮ್ ಬಸವರಾಜು ತಿಳಿಸಿದರು.
ಕನ್ನಡದಲ್ಲಿ ಈಗ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಹೊಸ ಚಿತ್ರಗಳು ಗೆಲ್ಲುತ್ತಿದೆ. ನಾನು ಈ ಚಿತ್ರದಲ್ಲಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಬಹುತೇಕರು ಸಿನಿಮಾ ಕುರಿತು ಓದಿಕೊಂಡಿರುವವರು. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದು ಹಿರಿಯನಟ ದತ್ತಣ್ಣ ತಿಳಿಸಿದರು.
ಗೃಹ ಸಚಿವನ ಪಾತ್ರ ನನ್ನದು. ಚಿತ್ರದಲ್ಲಿ ನಾಯಕಿಯ ತಂದೆಯೂ ಹೌದು ಎಂದರು ನಟ ಬಾಲ ರಾಜವಾಡಿ.
ಇದು ನನ್ನ ಮೊದಲ ಚಿತ್ರ . ಎಲ್ಲರೂ ಪ್ರೋತ್ಸಾಹ ನೀಡಿ ಎಂದು ನಾಯಕ ಪವನ್ ಶಂಕರ್ ಹೇಳಿದರು. ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಸಹನ ಸುಧಾಕರ್ ತಿಳಿಸಿದರು. ನಾನು ಹಾಗೂ ನಿರ್ದೇಶಕ ಗೌತಮ್ ಬಸವರಾಜು ಬಾಲ್ಯ ಸ್ನೇಹಿತರು. ಸ್ನೇಹಿತನಿಗಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎನ್ನುತ್ತಾರೆ ಪ್ರಮುಖ ಪಾತ್ರಧಾರಿ ಗೌತಮ್ ಸುಧಾಕರ್.
ಕಲಾವಿದರಾದ ನೀನಾಸಂ ಆನಂದ್, ಮಹೇಶ್ ಕಲಿ, ಯಶಸ್ವಿನಿ ರವೀಂದ್ರ, ಮಾಸ್ಟರ್ ಶಮಂತ್ ಯಥಾಭವ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು.