ಟಾಕ್ಸಿಕ್ ಸಿನಿಮಾದ ತಬಾಹಿ ಆಡಿಯೋ ಸಾಂಗ್ ಯಾವಾಗ ಹೊರಬಂತೋ, ಅಂದಿನಿಂದ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ, ಕುತೂಹಲ ಹೆಚ್ಚಾಗಿದ್ದು ಸುಳ್ಳಲ್ಲ. ಹೌದು, ಟಾಕ್ಸಿಕ್ ಸಿನಿಮಾದ ಆ ಹಾಡು ಅಂಥದ್ದೊಂದು ಕುತೂಹಲಕ್ಕೆ ಕಾರಣವಾಗಿದ್ದು ನಿಜ. ಈಗ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ನೋಡಿದವರೆಲ್ಲರೂ ಹುಬ್ಬೇರಿಸಿದ್ದಾರೆ. ಜೊತೆಗೆ, ಸಿನಿಮಾ ನೋಡಲೇಬೇಕು ಅನ್ನೋ ತವಕದಲ್ಲೂ ಇದ್ದಾರೆ. ಬಾಲಿವುಡ್ ಗಾಯಕ ವಿಶಾಲ್ ಮಿಶ್ರಾ ಸಂಗೀತದ ಜೊತೆ ತಬಾಹಿ ಹಾಡು ಹಾಡಿದ್ದು, ಹಾಡಿನ ಜೊತೆ ದೃಶ್ಯದುದ್ದಕ್ಕೂ ಕಿಕ್ ತುಂಬಿದೆ.

ತಬಾಹಿ ಅನ್ನುವ ಹಾಡು ರಿಲೀಸ್ ಆಗಿದ್ದೇ ತಡ, ಸಖತ್ ರೋಮ್ಯಾಂಟಿಕ್ ಆಗಿದೆ. ಹಾಡಲ್ಲಿ ಕಾಣಿಸಿಕೊಂಡಿರುವ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕಾಂಬಿನೇಷನ್ ಮೋಡಿ ಮಾಡಿದೆ. ಆ ಹಾಡು ಪ್ರಣಯದ ಉತ್ತುಂಗದ ಕಥೆಯನ್ನು ಹೇಳುತ್ತಿದೆ. ಹಾಡು ಕೇಳಲು ಎಷ್ಟೊಂದು ಮಜವೆನಿಸುತ್ತೋ, ನೋಡೋಕು ಅಷ್ಟೇ ರೋಮ್ಯಾಂಟಿಕ್ ಆಗಿ ಕಾಣುತ್ತೆ. ಸಿಕ್ಕಾಪಟ್ಟೆ ರಿಚ್ ಎನಿಸುವ ವಿಷ್ಯುಯಲ್ ಟ್ರೀಟ್ ಖುಷಿಕೊಡುತ್ತೆ. ಹಾಡಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಕೂಡ ಸಖತ್ ವರ್ಕೌಟ್ ಆಗಿದೆ.

ಈ ಮೊದಲು ತಬಾಹಿ ಆಡಿಯೋ ಸಾಂಗ್ ಬಂದಾಗ, ಹಾಡಲ್ಲಿ ಯಶ್ ಮತ್ತು ಕಿಯಾರ ಅವರು ಸಖತ್ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುತ್ತಾರೆ ಎಂಬ ಲೆಕ್ಕಾಚಾರಗಳಿದ್ದವು. ಆ ಸಾಂಗ್ ನೋಡಿದವರಿಗೆ ಹಾಡಿನುದ್ದಗಲಕ್ಕೂ ಬರೀ ಕಿಸ್ಸಿಂಗ್ ಸೀನ್ ತುಂಬಿವೆ. ಜೊತೆಗೆ ಆಲಿಂಗನದ ದೃಶ್ಯಗಳೇ ರಾರಾಜಿಸುತ್ತಿವೆ. ಇನ್ನು ಯೋಗರಾಜ್ ಭಟ್ ಅವರ ಸಾಹಿತ್ಯ ಅಂದಮೇಲೆ ಕೇಳಬೇಕೇ. ಪ್ರತಿ ಪದದಲ್ಲೂ ಮಾದಕತೆಯ ಅರ್ಥ ತುಂಬಿದೆ. ಸದ್ಯ ಹಾಡು ಸಖತ್ ವೈರಲ್ ಆಗುತ್ತಿದೆ.

ಇನ್ನು, ಇದು ಕನ್ನಡ ಸಿನಿಮಾ ನಿಜ. ಹಾಗಂತ, ಕನ್ನಡತನ ಹುಡುಕುವಂತಿಲ್ಲ. ಇಡೀ ಸಿನಿಮಾದ ಹಾಡು ಇಂಗ್ಲೀಷ್ ಫೀಲ್ ಕಟ್ಟಿಕೊಡುತ್ತೆ. ಹಾಲಿವುಡ್ ಸಾಂಗ್ ನೋಡಿದವರಿಗೆ ಯಾವ ಫೀಲ್ ಕೊಡುತ್ತೋ, ಅಂಥದ್ದೊಂದು ಫೀಲ್ ಈ ಹಾಡಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಕ್ಯಾಮೆರಾ ವರ್ಕ್ ಇರಬಹುದು. ಹಾಡಿನ ಲೋಕೇಷನ್ಸ್ ಇರಬಹುದು. ಮೇಕಿಂಗ್ ಎಲ್ಲವೂ ಸಖತ್ ರಿಚ್ ಅನಿಸುತ್ತವೆ. ವಿಶಾಲ್ ಮಿಶ್ರಾ ಸಖತ್ ವಾಯ್ಸ್ ಜೊತೆ, ಜಬರ್‌ದಸ್ತ್ ಮ್ಯೂಸಿಕ್ ಕೊಟ್ಟಿದ್ದಾರೆ. ಅ ಕಾರಣಕ್ಕೆ ಹಾಡು ಹೊಸ ಫೀಲ್ ಕೊಟ್ಟಿದೆ.

ಅದೇನೆ ಇರಲಿ, ಸಿನಿಮಾ ಅಗಸ್ಟ್ 26 ಕ್ಕೆ ರಿಲೀಸ್ ಆಗುತ್ತಿದೆ. ಈ ತಬಾಹಿ ಹಾಡು ಅಂದು ಬಂದು ಸಿನಿಮಾ ನೋಡುವಂತೆ ಉತ್ತೇಜಿಸುವಂತಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಯಶ್ ಅವರದು ರಗಡ್ ಪಾತ್ರ ಅನ್ನೋದು ಗೊತ್ತಾಗುತ್ತೆ. ಮುತ್ತು ಮತ್ತಿನ ನಶೆಯಲ್ಲೇ ಹಾಡು ಮೂಡಿಬಂದಿದೆ. ಅಲ್ಲಿ ಯಶ್ ಒಬ್ಬ ಸ್ವಾರ್ಥಿ ಯಾವತ್ತಾದರೂ ಪ್ರೀತಿಲಿ ಬೀಳಬಹುದಾ ಅನ್ನೋ ಮಾತಿದೆ. ಅದು ತುಂಬಾ ಕಷ್ಟ ಅನ್ನೋ ಮಾತೂ ಕೇಳಿಬರುತ್ತೆ. ಅದೇನೆ ಇದ್ದರೂ, ಹಾಡು ಮಜವಾಗಿದೆ. ನೋಡಿಲ್ಲವೆಂದರೆ ಒಂದೊಮ್ಮೆ ನೋಡಲ್ಲಡ್ಡಿಯಿಲ್ಲ.







