ನವದೆಹಲಿ : ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ಎದುರಾಗಿದೆ. ಟಿಎಂಸಿ ತೊರೆದಿದ್ದ ಮಾಜಿ ಸಂಸದರು ಇಂದು ಅಧಿಕೃತವಾಗಿ ಕಮಲ ತೆಕ್ಕೆಗೆ ಸೇರಿದ್ದಾರೆ. ಈ ಮೂಲಕ ಪಕ್ಷ ಹೋಳಾಗಿರುವ ನೋವಿನಲ್ಲಿರುವ ದೀದಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ.

ಹಿರಿಯ ಬಿಜೆಪಿ ನಾಯಕ ಹಾಗೂ ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಮಾಜಿ ಸಂಸದರಾದ ಸುಖೇಂದು ಶೇಖರ್ ರೇ, ಸುಷ್ಮಿತಾ ದೇಬ್ ಮತ್ತು ಪ್ರಕಾಶ್ ಚಿಕ್ ಬರೈಕ್ ಮೂವರನ್ನು ಧ್ವಜವನ್ನು ನೀಡುವುದರ ಮೂಲಕ ಬಿಜೆಪಿಗೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಭಟ್ಟಾಚಾರ್ಯ, ನಿಜಕ್ಕೂ ಇದೊಂದು ಬಹಳ ಸಂತೋಷದ ವಿಷಯ. ಈ ಪ್ರಮುಖ ನಾಯಕರು ಇಂದು ಭಾರತೀಯ ಜನತಾ ಪಕ್ಷದ ಮೇಲೆ ತಮ್ಮ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸದಿಂದ ಮುಂದುವರಿಯುತ್ತಿದ್ದಾರೆ. ಹೀಗಾಗಿ ಇವರ ಸೇರ್ಪಡೆ ಪಕ್ಷಕ್ಕೆ ಶಕ್ತಿ ನೀಡಲಿದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ದೇವ್, ರೇ ಮತ್ತು ಬಾರೈಕ್ ಕಳೆದ ತಿಂಗಳು ರಾಜ್ಯಸಭೆಗೆ ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್ ಅನ್ನು ತೊರೆದಿದ್ದರು. ರಾಯ್ ಮತ್ತು ಬಾರೈಕ್ ಅವರ ಅಧಿಕಾರಾವಧಿ 2029ರ ಸೆಪ್ಟೆಂಬರ್ ವರೆಗೆ ಇತ್ತು. ದೇವ್ ಅವರ ಅಧಿಕಾರಾವಧಿ 2030ರ ಏಪ್ರಿಲ್ ವರೆಗೆ ಇತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಮತಾ ಬ್ಯಾನರ್ಜಿ ನಡೆಯ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಹೊರ ಬಂದಿದ್ದರು. ಇಂದು ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಅನ್ನು ಸಂಸದರು ಪ್ರಾರಂಭಿಸಿದ್ದಾರೆ.





