ಭಾರತದಿಂದ ತೊಲಗಿಸಬೇಕಿರುವುದು ದ್ವೇಷಾಸೂಯೆ ದಬ್ಬಾಳಿಕೆ ಶೋಷಣೆ ಕ್ರೌರ್ಯವನ್ನು
ಸಾಮಾಜಿಕ-ಆರ್ಥಿಕ ಸಮಾನತೆಗಾಗಿ
ಆದರೂ ಇಂದು ಭಾರತದ ಜನತೆಗೆ “ ಕ್ವಿಟ್ ಇಂಡಿಯಾ ” ಘೋಷಣೆ ಬೇಕಾಗಿದೆ. ಇದು ಬೌದ್ಧಿಕ ನೆಲೆಯಲ್ಲಿ ಮೊಳಗಬೇಕಾದ ಸಾರ್ವತ್ರಿಕ ಅಭಿವ್ಯಕ್ತಿಯಾಗಿ ಮೊಳಗಬೇಕಿದೆ. ವಿರೋಧ-ಪ್ರತಿರೋಧಗಳನ್ನು ಸಹಿಸಿಕೊಳ್ಳುತ್ತಲೇ, ಪ್ರಜಾಪ್ರಭುತ್ವವನ್ನು ಸಾಧಿಸಲು ಮುನ್ನಡೆದಿರುವ ರಾಜಕೀಯ ಚಿಂತನೆಗೆ ಪೂರಕವಾಗಿ ಶೋಷಿತ, ದಮನಿತ, ಅವಕಾಶವಂಚಿತ ಜನತೆಯನ್ನು ಒಳಗೊಳ್ಳುವ-ಕೂಡಿ ಬಾಳುವ ಒಂದು ಸಮ ಸಮಾಜದ ನಿರ್ಮಾಣಕ್ಕಾಗಿ ತನ್ನ ಸುತ್ತಲಿನ ಹಲವಾರು ಅಪಸವ್ಯಗಳನ್ನು ಭಾರತದಿಂದ ಹೊಡೆದೋಡಿಸಬೇಕಿದೆ. 140 ಕೋಟಿ ಜನಸಂಖ್ಯೆಯ ಭಾರತ ಮಾನವ ಸಂಪನ್ಮೂಲದ ಚಿನ್ನದ ಗಣಿ ಎಂದೇ ಜಾಗತಿಕ ಆರ್ಥಿಕ ವಲಯದಲ್ಲಿ ಗುರುತಿಸಲ್ಪಡುತ್ತಿದೆ. ವಿಶ್ವ ಮಾರುಕಟ್ಟೆಗೆ ಅತಿ ಹೆಚ್ಚಿನ ಪ್ರಮಾಣದ ಶ್ರಮವನ್ನು, ಹೆಚ್ಚಿನ ಸಂಖ್ಯೆಯ ಶ್ರಮಿಕರನ್ನು, ಅತಿ ಕಡಿಮೆ ಬೆಲೆಯಲ್ಲಿ ಪೂರೈಸಲು ಭಾರತ ಸಜ್ಜಾಗುತ್ತಿದೆ.
ನವ ಉದಾರವಾದದ ಮಾರುಕಟ್ಟೆ ಬಂಡವಾಳವು ಈ ಶ್ರಮಶಕ್ತಿಯನ್ನು ಬಳಸಿಕೊಂಡೇ ದೇಶದ ಸಕಲ ಸಂಪತ್ತು, ಸಂಪನ್ಮೂಲಗಳನ್ನು ಆಕ್ರಮಿಸಿಕೊಳ್ಳುತ್ತಿರುವುದನ್ನು ಗಮನಿಸಿದಾಗ ಭಾರತ ಮತ್ತೊಮ್ಮೆ ಶೋಷಕ ಬಂಡವಾಳಶಾಹಿಗೆ ʼಕ್ವಿಟ್ ಇಂಡಿಯಾʼ ಎಂದು ಹೇಳುವುದು ಅನಿವಾರ್ಯವಾಗುತ್ತದೆ. ಕೈಗಾರಿಕಾ ಬಂಡವಾಳವನ್ನು ಬಳಸಿಕೊಂಡೇ ಭಾರತದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿ ಪಶ್ಚಿಮ ರಾಷ್ಟ್ರಗಳ ಮಾರುಕಟ್ಟೆ ಭಂಡಾರವನ್ನು ತುಂಬಿಸಿದ ಬ್ರಿಟೀಷ್ ವಸಾಹತುಶಾಹಿಯ ಹಾಗೆಯೇ ಇಂದು ಜಾಗತಿಕ ಹಣಕಾಸು ಮಾರುಕಟ್ಟೆ ಶಕ್ತಿಗಳು ಡಿಜಿಟಲೀಕರಣದ ಮೂಲಕ, ಸಾರ್ವಜನಿಕ ಸಂಪತ್ತಿನ ಕಾರ್ಪೋರೇಟೀಕರಣದ ಮೂಲಕ, ಜನಸಂಪನ್ಮೂಲಗಳ ವಾಣಿಜ್ಯೀಕರಣದ ಮೂಲಕ ಭಾರತದ ನಿಸರ್ಗ ಸಂಪತ್ತನ್ನು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಬಳಸಿಕೊಳ್ಳುತ್ತಿವೆ. ಶಿಕ್ಷಣ, ಸಾರಿಗೆ, ಆರೋಗ್ಯ ಮತ್ತು ಸಾಂಸ್ಕೃತಿಕ ವಲಯಗಳನ್ನೂ ವ್ಯಾಪಿಸುತ್ತಿರುವ ನವ ಉದಾರವಾದವು ತಂತ್ರಜ್ಞಾನ ಕ್ರಾಂತಿಯ ಪ್ರಧಾನ ಫಲಾನುಭವಿಗಳಾದ ಕಾರ್ಪೋರೇಟ್ ಶಕ್ತಿಗಳನ್ನು ಪೋಷಿಸುತ್ತಿದೆ.

ಮತ್ತೊಂದೆಡೆ ಈ ತಂತ್ರಜ್ಞಾನ ಯುಗದ ನೈಜ ಫಲಾನುಭವಿಗಳಾಗಬೇಕಾಗಿದ್ದ ಶ್ರಮಿಕ ವರ್ಗ ಕ್ರಮೇಣ ನಿರ್ಗತಿಕತೆಯತ್ತ ಚಲಿಸುತ್ತಿದೆ. ಡಿಜಿಟಲ್ ಆರ್ಥಿಕತೆಯ ದೂರದ ಗೋಲ್ಪೋಸ್ಟ್ಗಳನ್ನು ತಲುಪಲಾಗದೆ, ಎತ್ತರದ ಅಭೇದ್ಯ ಗೋಡೆಗಳನ್ನು ದಾಟಲಾಗದೆ ಭಾರತದ ಬಹುಕೋಟಿ ಶ್ರಮಜೀವಿಗಳು ಬಂಡವಾಳ ಮತ್ತು ಮಾರುಕಟ್ಟೆಯನ್ನು ಪೋಷಿಸುವ ಕಾಲಾಳುಗಳಾಗುತ್ತಿದ್ದಾರೆ. ತಂತ್ರಜ್ಞಾನದ ಬಳಕೆದಾರರಾಗಿ ಹೆಮ್ಮೆಯಿಂದ ಡಿಜಿಟಲ್ ಆರ್ಥಿಕತೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತಿರುವ ದುಡಿಯುವ ವರ್ಗಗಳು ತಮ್ಮ ಸುಭದ್ರ ನೆಲೆಯನ್ನೂ, ಸುಸ್ಥಿರ ಬದುಕಿನ ಜೀವನೋಪಾಯ ಮಾರ್ಗಗಳನ್ನೂ ಕಂಡುಕೊಳ್ಳಲು ಸಾಧ್ಯವಾಗದೆ ಇರುವುದರಿಂದಲೇ ಸಮಾಜದಲ್ಲಿ ಈಗಾಗಲೇ ಬೇರೂರಿರುವ ತಾರತಮ್ಯದ ನೆಲೆಗಳು ಮತ್ತಷ್ಟು ವಿಸ್ತರಿಸುತ್ತಲೇ ಹೋಗುತ್ತಿವೆ. ಬಡವ-ಶ್ರೀಮಂತರ ನಡುವಿನ ಕಂದರ ಹೆಚ್ಚಾಗುತ್ತಲೇ ಇದೆ. ಭಾರತದ ದುಡಿಯುವ ವರ್ಗಗಳು ಈ ಮಾರುಕಟ್ಟೆ ಬಂಡವಾಳಶಾಹಿಗೆ “ ಕ್ವಿಟ್ ಇಂಡಿಯಾ” ಎಂದು ಹೇಳಬೇಕಿದೆ.
ತನ್ಮೂಲಕ ತಮ್ಮ ಶ್ರಮಶಕ್ತಿಯ ಬೆವರಿನಿಂದ ಉತ್ಪತ್ತಿಯಾಗುವ ಸಂಪತ್ತಿನ ಒಡೆತನವನ್ನು ಜಾಗತಿಕ ಬಂಡವಾಳಶಾಹಿಯ ಹಿಡಿತದಿಂದ ತಪ್ಪಿಸಬೇಕಿದೆ. ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಸಾಧಿಸದೆ ಕೇವಲ ರಾಜಕೀಯ ಸಮಾನತೆಯನ್ನು ಸಾಧಿಸುವುದರಿಂದ ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ದಿವ್ಯವಾಣಿಯನ್ನು ಇಂದು ಮತ್ತೊಮ್ಮೆ ಸ್ಮರಿಸಬೇಕಿದೆ. ಸಾಮಾಜಿಕ ಸಮಾನತೆಗೆ ಅಡ್ಡಿಯಾಗಿರುವ ಊಳಿಗಮಾನ್ಯದ ಪಳೆಯುಳಿಕೆಗಳಿಂದಲೂ ಭಾರತ ಮುಕ್ತವಾಗಬೇಕಿದೆ. ಕಳೆದ ಎರಡು ಮೂರು ದಶಕಗಳಲ್ಲಿ ತೀವ್ರವಾಗುತ್ತಿರುವ ಜಾತಿ ಶೋಷಣೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಸಾಮಾಜಿಕ ತಾರತಮ್ಯಗಳನ್ನು ಪೋಷಿಸುವ ಬಂಡವಾಳಶಾಹಿ ವ್ಯವಸ್ಥೆ ಈ ಅನ್ಯಾಯಗಳ ಬಗ್ಗೆ ಸಾರ್ವಜನಿಕ ಚರ್ಚೆಯೂ ನಡೆಯದಂತೆ ಮುದ್ರಣ-ದೃಶ್ಯ ಮಾಧ್ಯಮಗಳ ಮೇಲೆ ತನ್ನ ಒಡೆತನವನ್ನು ಸಾಧಿಸಿದೆ. ಬೌದ್ಧಿಕವಾಗಿ ನಿಷ್ಕ್ರಿಯವಾಗಿರುವ ಈ ಧ್ವನಿಗಳಿಗೆ ಪುನಃ ಜೀವ ನೀಡುವುದು ನಮ್ಮ ಆದ್ಯತೆಯಾಗಬೇಕಿದೆ.
ಸಾಮಾಜಿಕ ಅನ್ಯಾಯಗಳ ವಿರುದ್ಧ

21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ಒಂದು ನಾಗರಿಕತೆಯ ಒಡಲಲ್ಲಿ ಇಂದಿಗೂ ಸಾಮಾಜಿಕ ಬಹಿಷ್ಕಾರ, ಸಾಂಸ್ಕೃತಿಕ ಪ್ರತ್ಯೇಕತೆ, ಪಿತೃಪ್ರಧಾನತೆ, ಅಸ್ಪೃಶ್ಯತೆಯಂತಹ ಹೀನ ಆಚರಣೆಗಳು ಜಾರಿಯಲ್ಲಿರುವುದು ನಮ್ಮೊಳಗಿನ ಆತ್ಮಸಾಕ್ಷಿಯನ್ನು ವಿಚಲಿತಗೊಳಿಸಬೇಕಿದೆ. ಪಿತೃಪ್ರಧಾನ ಧೋರಣೆ, ಪುರುಷಾಹಮಿಕೆಯ ಮನಸ್ಥಿತಿ ಹಾಗೂ ಸ್ತ್ರೀ ದ್ವೇಷದ ಪರಾಕಾಷ್ಠೆಯನ್ನು ಮಣಿಪುರದ ಕೆಲವು ಘಟನೆಗಳು ಸೂಚಿಸುತ್ತವೆ. ಈ ಅಮಾನುಷ ಘಟನೆಗಳು ದೇಶದ ಸಮಸ್ತ ಮಹಿಳಾ ಸಮೂಹದ-ಜನಸಮೂಹದ ಅಂತಃಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿತ್ತು. ಆದರೆ ಈ ಪ್ರಜ್ಞೆ ಜಾಗೃತವಾಗದಂತೆ ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆ ಎಚ್ಚರವಹಿಸುತ್ತದೆ. ಹಾಗೆಯೇ ಸತತ ಬೆಲೆ ಏರಿಕೆ, ಬಡತನ, ಹಸಿವು ಹಾಗೂ ಶ್ರೀಸಾಮಾನ್ಯನ ನಿತ್ಯಬದುಕಿನ ಸಂಕಷ್ಟಗಳ ವಿರುದ್ಧ , ಅತ್ಯಾಚಾರ ದೌರ್ಜನ್ಯ ತಾರತಮ್ಯ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಸೊಲ್ಲೆತ್ತದ ಬೃಹತ್ ಜನಸಮೂಹವನ್ನು ಸೃಷ್ಟಿಸುವುದರಲ್ಲೂ ಇದೇ ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳು ಯಶಸ್ವಿಯಾಗಿವೆ.
ಭಾರತ ಖಂಡಿತವಾಗಿಯೂ ಮುನ್ನಡೆಯ ಹಾದಿಯಲ್ಲಿದೆ. ಪ್ರಧಾನಿ ಮೋದಿ ಅವರ ಕನಸಿನ ಅಮೃತಕಾಲದ ಭಾರತ ನಿಸ್ಸಂದೇಹವಾಗಿಯೂ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಬಹುದು. ಆದರೆ ಇದು ಕೇವಲ ಮಾರುಕಟ್ಟೆಯ ಬೆಳವಣಿಗೆಯಲ್ಲಿ ನೋಡುವಂತಹುದಲ್ಲ. ಭಾರತ ಒಂದು ಉತ್ಕೃಷ್ಟ ನಾಗರಿಕತೆಯ, ಉದಾತ್ತ ಮಾನವೀಯ ಮೌಲ್ಯಗಳ, ಉನ್ನತ ಸಾಂವಿಧಾನಿಕ ಮಾದರಿಯಾಗಿ ಜಾಗತಿಕ ಮಟ್ಟದಲ್ಲಿ ಕಂಗೊಳಿಸುವ ಜನಸಾಮಾನ್ಯರ ಕನಸು ಸ್ವಾತಂತ್ರ್ಯಕ್ಕಾಗಿ ಮಡಿದ ಸಾವಿರಾರು ಜೀವಗಳ ಕನಸೂ ಹೌದು. ಈ ಕನಸು ನನಸಾಗಬೇಕಾದರೆ ನಮ್ಮ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಹಾಗೂ ಇಂದಿಗೂ ಜೀವಂತಿಕೆಯಿಂದಿರುವ ಪಿತೃಪ್ರಧಾನತೆ, ಪುರುಷಾಧಿಪತ್ಯ, ಅರೆ ಊಳಿಗಮಾನ್ಯ ಲಕ್ಷಣಗಳು, ಜಾತಿ ಶ್ರೇಷ್ಠತೆ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆ ಪೋಷಿಸುತ್ತಿರುವ ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀದ್ವೇಷ ಮತ್ತು ಸಾಮಾಜಿಕ ತರತಮಗಳನ್ನು ನಾವು ಹೋಗಲಾಡಿಸಬೇಕಿದೆ. ಝಗಮಗಿಸುವ ಮಾರುಕಟ್ಟೆಯ ಆಡಂಬರದ ಪರದೆಯ ಹಿಂದೆ ಅಡಗಿರುವ ಈ ಸಾಮಾಜಿಕ ಕ್ರೌರ್ಯ ಮತ್ತು ಅಮಾನುಷತೆಯನ್ನು ಹೋಗಲಾಡಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯತೆಯಾಗಬೇಕಿದೆ.
ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಬಯಸುವ ಮತ್ತು ಅಪೇಕ್ಷಿಸುವ ವಿಘಟಿತ ಸಮಾಜವನ್ನು ಒಗ್ಗೂಡಿಸಲು ನಮ್ಮೊಳಗೆ ಆಳವಾಗಿ ಇಳಿಯುತ್ತಲೇ ಇರುವ ತಾರತಮ್ಯದ ಆಲೋಚನೆಗಳ ವಿರುದ್ಧ ಭಾರತದ ಬಹುಸಂಖ್ಯಾತ ದುಡಿಯುವ ಕೈಗಳು ದನಿಎತ್ತಬೇಕಿದೆ. ಹುಟ್ಟು ಸಾವುಗಳನಷ್ಟೇ ಅಲ್ಲದೆ ಅಮಾನುಷ ಪಾತಕ ಕೃತ್ಯಗಳನ್ನೂ ಅಸ್ಮಿತೆಗಳ ಚೌಕಟ್ಟಿನೊಳಗೇ ನೋಡುವ ಒಂದು ವಿಕೃತ ಪರಂಪರೆಗೆ ಭಾರತ ಸಾಕ್ಷಿಯಾಗುತ್ತಿದೆ. ಇದರೊಟ್ಟಿಗೆ ಕೋಟ್ಯಂತರ ಜನರು ಬೆವರು ಸುರಿಸಿ ಕ್ರೋಢೀಕರಿಸುವ ಸಂಪತ್ತು ಕೆಲವೇ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿದೆ, ಉತ್ಪಾದಕೀಯ ಶಕ್ತಿಗಳು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. 75 ವರ್ಷಗಳಲ್ಲಿ ಈ ಶ್ರಮಿಕ ವರ್ಗದ ಶ್ರಮಶಕ್ತಿಯಿಂದಲೇ ಸೃಷ್ಟಿಯಾಗಿರುವ ಅಪಾರ ಸಂಪತ್ತನ್ನು ಹಾಗೂ ಪೂರಕವಾದ ನೈಸರ್ಗಿತ ಸಂಪನ್ಮೂಲಗಳನ್ನು ಸಂರಕ್ಷಿಸುವುದೇ ಅಲ್ಲದೆ, ಬೆಳೆಯುತ್ತಿರುವ ಮಾರುಕಟ್ಟೆ, ವ್ಯಾಪಿಸುತ್ತಿರುವ ತಂತ್ರಜ್ಞಾನ ಮತ್ತು ಕ್ರೋಢೀಕೃತವಾಗುತ್ತಿರುವ ಆರ್ಥಿಕ ಸಂಪತ್ತಿನ ಫಲಾನುಭವಿಗಳು ಈ ದುಡಿಮೆಯ ಕೈಗಳೇ ಆಗಿರಬೇಕು ಎನ್ನುವುದು ನಮ್ಮ ಘೋಷವಾಕ್ಯವಾಗಬೇಕಿದೆ.

ಇಲ್ಲವಾದಲ್ಲಿ 80 ವರ್ಷದ ಹಿಂದೆ ದೇಶದ ಸಂಪತ್ತು ವಸಾಹತುಶಾಹಿಯ ಪಾಲಾದಂತೆಯೇ ಮುಂದೆಯೂ ಸಹ ನವ ಉದಾರವಾದದ ಮಾರುಕಟ್ಟೆ ವಸಾಹತುಶಾಹಿಯ ಪಾಲಾಗುತ್ತದೆ. ಹಾಗಾಗಿ ದೇಶದ ಸಂಪತ್ತಿನ-ಸಂಪನ್ಮೂಲಗಳ ರಕ್ಷಣೆಗಾಗಿ ಪಣತೊಡುವ ದುಡಿಮೆಯ ಕೈಗಳು ಮಾರುಕಟ್ಟೆ ವಸಾಹತುಶಾಹಿಗೆ ʼಕ್ವಿಟ್ ಇಂಡಿಯಾʼ ಎಂದು ಹೇಳಬೇಕಿದೆ. ಈ ತಾರತಮ್ಯಗಳನ್ನು ಪೋಷಿಸುವ ಕೋಮುದ್ವೇಷ, ಮತದ್ವೇಷ, ಮತಾಂಧತೆ, ರಾಜಕೀಯ ದ್ವೇಷ, ಸ್ತ್ರೀದ್ವೇಷ-ಸ್ತ್ರೀವಿರೋಧಿ ಧೋರಣೆ, ಪಿತೃಪ್ರಧಾನತೆ ಮತ್ತು ಜಾತಿ ವ್ಯವಸ್ಥೆಯ ಎಲ್ಲ ಅಮಾನುಷತೆಯ ವಿರುದ್ಧ ದನಿಎತ್ತುವುದೇ ಅಲ್ಲದೆ, ಈ ಮನಸ್ಥಿತಿಗೆ-ಧೋರಣೆಗೆ ʼಕ್ವಿಟ್ ಇಂಡಿಯಾʼ ಎಂದು ಹೇಳಬೇಕಿದೆ. ಭಾರತದ ಪ್ರತಿಯೊಬ್ಬರಲ್ಲೂ ವಿಶ್ವಮಾನವನನ್ನು ಕಾಣುವ ನಿಟ್ಟಿನಲ್ಲಿ ಭಾರತದ ಭೌತಿಕ ಸಮೃದ್ಧಿ ಮತ್ತು ಏಳಿಗೆಗೆ ಮಾರಕವಾಗಿರುವ ಪ್ರಾಚೀನ ಬೌದ್ಧಿಕ ಆಲೋಚನೆಗಳಿಗೆ ʼಕ್ವಿಟ್ ಇಂಡಿಯಾʼ ಎಂದು ಹೇಳಬೇಕಿದೆ. ತನ್ಮೂಲಕ ನವ ಭಾರತ ಅಮೃತಕಾಲದತ್ತ ಸಾಗುತ್ತಲೇ ತನ್ನೊಳಗಿನ ಎಲ್ಲ ರೀತಿಯ ತಾರತಮ್ಯಗಳ ನೆಲೆಗಳನ್ನು ಧ್ವಂಸ ಪಡಿಸುತ್ತಾ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಬಹುದಾಗಿದೆ.
-೦-೦-೦-೦-