‘ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ತಮ್ಮ ಆಕಾಂಕ್ಷೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿರುವ’ ಶ್ರೀಲಂಕಾದ ಜನತೆಯೊಂದಿಗೆ ಭಾರತ ನಿಲ್ಲುತ್ತದೆ ಎಂದ ಭಾರತ ನವದೆಹಲಿಯು ಶ್ರೀಲಂಕಾಕ್ಕೆ ಸೈನ್ಯವನ್ನು ಕಳುಹಿಸಿದೆ ಎಂಬ ವದಂತಿಗಳನ್ನು ಮತ್ತು ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನ ಮಾಡಲು ಭಾರತ ಸಹಾಯ ಮಾಡಿದೆ ಎಂಬ ಗುಲ್ಲುಗಳನ್ನು ಅತ್ಯಂತ ತ್ವರಿತವಾಗಿ ಅಲ್ಲಗೆಳೆಯಿತು. ಆ ದೇಶದ ಒಂದು ರಾಜಕೀಯ ಮನ್ವಂತರವನ್ನು ಗಮನಿಸುತ್ತಿರುವ ಭಾರತ ಪ್ರತಿಪಕ್ಷಗಳೆಲ್ಲಾ ಸೇರಿ ಶೀಘ್ರದಲ್ಲಿ ಮಧ್ಯಂತರ ಸರ್ವಪಕ್ಷ ಸರ್ಕಾರವನ್ನು ಸ್ಥಾಪಿಸುತ್ತದೆ ಎಂದೇ ಆಶಿಸುತ್ತದೆ.
ಆದರೆ ಶ್ರೀಲಂಕಾದಲ್ಲಿನ ರಾಜಕೀಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ರಾಜಪಕ್ಸೆಗಳ ವಿರುದ್ಧ ಸಾರ್ವಜನಿಕ ಕೋಪವನ್ನು ಗಮನಿಸಿದರೆ ಈ ಪ್ರಕ್ರಿಯೆಯು ಸುದೀರ್ಘವಾಗಲಿದೆ ಎಂದೇ ತೋರುತ್ತದೆ. ಅವರ ಪಕ್ಷವಾದ ಶ್ರೀಲಂಕಾ ಪೊದುಜನ ಪೆರುಮಾನ (SLPP), ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದೆ. ಹೊಸ ಅಧ್ಯಕ್ಷರ ನೇಮಕವಾದರೂ ಸಹ ಎಸ್‌ಎಲ್‌ಪಿಪಿ ತನ್ನ ನಿಯಂತ್ರಣವನ್ನು ಮುಂದುವರಿಸುತ್ತದೆ ಎಂಬ ಭಯ ಇದ್ದೇ ಇರುತ್ತದೆ.
ಹಾಗಾಗಿ ರಾಜಪಕ್ಸೆ ವಂಶದ ದುರಾಡಳಿತದಿಂದ ಬೇಸತ್ತಿರುವ ಶ್ರೀಲಂಕನ್ನರಿಗೆ ಈಗ ಉಳಿದಿರುವ ಆಯ್ಕೆ ಚುನಾವಣೆಯೊಂದೇ. ಆದರೆ ಅಷ್ಟು ಸುಲಭವಾಗಿ ಚುನಾವಣೆ ನಡೆಸಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ರಾಜಕೀಯ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆಯಿದೆ.

ಸದ್ಯಕ್ಕೆ ಶ್ರೀಲಂಕಾಕ್ಕೆ ಅಂತರರಾಷ್ಟ್ರೀಯ ಸಮುದಾಯದ ನೆರವಿನ ಅಗತ್ಯವಿದ್ದು ‘ನೈಬರ್‌ಹುಡ್ ಫಸ್ಟ್’ ಎಂಬ ತನ್ನ ನಿಲುವು ಮತ್ರು ದ್ವೀಪ ರಾಷ್ಟ್ರದಲ್ಲಿನ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಭಾರತ ಅದಕ್ಕೆ $3.8 ಶತಕೋಟಿ ಮೌಲ್ಯದ ಬೆಂಬಲವನ್ನು ಒದಗಿಸಿದೆ. ಆ ದೇಶದ ಆಂತರಿಕ ವಿಚಾರದಲ್ಲಿ ಚೀನಾದ ಹಸ್ತಕ್ಷೇಪದ
ಅವಕಾಶವನ್ನು ಗ್ರಹಿಸಿದ ಭಾರತವು ದಿವಾಳಿಯಾದ ರಾಷ್ಟ್ರಕ್ಕೆ ಇಂಧನ ಮತ್ತು ಆಹಾರವನ್ನು ಸಾಲವಾಗಿ ನೀಡುವ ಮೂಲಕ ತ್ವರಿತ ನೆರವು ಒದಗಿಸಿತು. ಅಲ್ಲದೆ ಔಷಧಿಗಳು, ವೈದ್ಯಕೀಯ ಸರಬರಾಜುಗಳು ಮತ್ತು ಇತರ ಮಾನವೀಯ ಸಹಾಯವನ್ನು ಶ್ರೀಲಂಕಾಕ್ಕೆ ರವಾನಿಸಿತು.
ಇದರ ಜೊತೆಗೆ, 1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಶ್ರೀಲಂಕಾ ಈಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ್ನು ಎದುರಿಸುತ್ತಿದ್ದು ಭಾರತ ಅದರೊಂದಿಗೆ ಕರೆನ್ಸಿ ವಿನಿಮಯವನ್ನೂ ಮಾಡಲು ಉದ್ದೇಶಿಸಿದೆ. ಜೊತೆಗೆ ಭಾರತ ಶ್ರೀಲಂಕಾಕ್ಕೆ 44,000 MT ಯೂರಿಯಾವನ್ನು ಕ್ರೆಡಿಟ್ ಲೈನ್ ಅಡಿಯಲ್ಲಿ ಒದಗಿಸಿದೆ. ಇದು ಆ ದೇಶದ ರೈತರು ಮತ್ತು ಅದರ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಭಾರತದ ಬದ್ಧತೆಯನ್ನು ಸಂಕೇತಿಸುತ್ತದೆ ಎಂದೂ ಭಾರತ ಹೇಳಿಕೊಂಡಿದೆ.
ಆದರೆ ವಾಸ್ತವವೇನೆಂದರೆ ಶ್ರೀಲಂಕಾದ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಒಂದು ದೇಶದ ಸಹಾಯದಿಂದ ಮಾತ್ರ ಸಾಧ್ಯವಿಲ್ಲ. ಇಡೀ ವಿಶ್ವದ ನೆರವು ಅದಕ್ಕೀಗ ಬೇಕು. ವಿಪರ್ಯಾಸವೆಂದರೆ, ರಾಜಪಕ್ಸೆ ವಂಶದ ನೆರವಿನಿಂದ ದ್ವೀಪ ರಾಷ್ಟ್ರದಲ್ಲಿ ಪಟ್ಟುಬಿಡದೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿದ ಚೀನಾ, ಅಗತ್ಯದ ಸಮಯದಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡಿಲ್ಲ. ಇದು ಶ್ರೀಲಂಕಾಕ್ಕೆ ಕೇವಲ $33 ಮಿಲಿಯನ್ ಸಹಾಯವನ್ನು ಒದಗಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ಹಣಕಾಸಿನ ನೆರವು ನೀಡಿಲ್ಲ.

ಒಂದು ಕಾಲದಲ್ಲಿ ಯುರೋಪಿಯನ್ ದೇಶಗಳಂತೆ ಉಚಿತ ಆರೋಗ್ಯ ಮತ್ತು ಕಾಲೇಜಿನವರೆಗಿನ ಶಿಕ್ಷಣವನ್ನು ಉಚಿತವಾಗಿ ಒದಗಿಸಿದ ಶ್ರೀಲಂಕಾ, ಈಗ ಭಿಕ್ಷಾಟನೆಯ ಬಟ್ಟಲನ್ನು ಹಿಡಿದು ನಿಂತಿದೆ. ಶ್ರೀಲಂಕಾದ ಈ ಸ್ಥಿತಿಗೆ ಹಲವು ಕಾರಣಗಳಿವೆ. ಇತರ ಕೆಲವು ರಾಷ್ಟ್ರಗಳಂತೆ ಶ್ರೀಲಂಕಾ ಕೂಡ ಚೀನಾದ ‘ಸಾಲದ ಬಲೆಯ ರಾಜತಾಂತ್ರಿಕತೆ’ಗೆ ಬಲಿಯಾಗಿದೆ. ಗೋಟಾ ಅವರ ಹಿರಿಯ ಸಹೋದರ ಮಹಿಂದಾ ಅಧ್ಯಕ್ಷರಾಗಿದ್ದಾಗ ಕಾರ್ಯಗತಗೊಳಿಸಿದ ಹಂಬಂಟೋಟಾ ಬಂದರು ಅಥವಾ ಮಟ್ಟಾಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಬೃಹತ್ ಚೀನಾ ಅನುದಾನಿತ ಮೂಲಸೌಕರ್ಯ ಯೋಜನೆಗಳು ಈಗ ದುಬಾರಿ ಮತ್ತು ಅನುತ್ಪಾದಕ ಆಸ್ತಿಗಳೆಂದು ಸಾಬೀತಾಗಿದೆ. ಈ ಸಾಲಗಳು ಶ್ರೀಲಂಕಾದ ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಿದೆ. ಅದರ ಜೊತೆಗೆ ವಿನಾಶಕಾರಿ ಆರ್ಥಿಕ ನಿರ್ಧಾರಗಳು ಸಹ ತಮ್ಮ ಕೊಡುಗೆ ನೀಡಿವೆ. ವ್ಯಾಟ್ ಕಡಿತ, ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸೋದ್ಯಮಕ್ಕಾದ ಹಿನ್ನಡೆ, ಸಾಂಕ್ರಾಮಿಕ ರೋಗ, ರಾಸಾಯನಿಕ ಗೊಬ್ಬರಗಳ ಮೇಲಿನ ನಿಷೇಧ ಮುಂತಾದವು ಕೆಟ್ಟ ಆಡಳಿತದ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು.
ಉಭಯ ದೇಶಗಳ ನಡುವೆ ಆಳವಾದ ಆರ್ಥಿಕ ಸಂಪರ್ಕಕ್ಕೆ ಒತ್ತು ನೀಡುತ್ತಿರುವ ಭಾರತ, ಶ್ರೀಲಂಕಾಕ್ಕೆ ಸಹಾಯ ಮಾಡುವ ತನ್ನ ಪ್ರಯತ್ನಗಳನ್ನು ದ್ವಿಗುಣಗೊಳಿಸಿದೆ. ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ವಿಕ್ರಮ್ ಮಿಶ್ರಿ ಅವರು ಇತ್ತೀಚೆಗೆ ಈ ಸಂಬಂಧಗಳನ್ನು ಬಲಪಡಿಸಬಹುದಾದ ಕ್ಷೇತ್ರಗಳ ಕುರಿತು ಚರ್ಚಿಸಲು ಅಂತರ ಸಚಿವಾಲಯ ಸಭೆಯನ್ನು ಕರೆದಿದ್ದರು. ಇಂಧನ, ಶಕ್ತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಮತ್ತು ಆಯಕಟ್ಟಿನ ಟ್ರಿಂಕೋಮಲಿ ಬಂದರಿನ ಅಭಿವೃದ್ಧಿಯು ಪರಿಗಣನೆಯಲ್ಲಿರುವ ಕ್ರಮಗಳಲ್ಲಿ ಸೇರಿವೆ.
ಆದರೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾ, ಸಹಜವಾಗಿ, ಈ ವಿಷಯದಲ್ಲಿ ತನ್ನದೇ ಆದ ಹಿಂಜರಿಕೆಗಳನ್ನು ಹೊಂದಿದೆ .ಅದು ಮತ್ತೊಮ್ಮೆ ದೊಡ್ಡ ಆರ್ಥಿಕತೆಯಿಂದ ಮುಳುಗಲು ಬಯಸುವುದಿಲ್ಲ. ಭಾರತವು ಮೊದಲು ಶ್ರೀಲಂಕಾದ ಈ ಕಳವಳವನ್ನು ಅರ್ಥಮಾಡಿಕೊಳ್ಳಬೇಖ. ಕೊಲಂಬೊದಲ್ಲಿ ಹೊಸ ರಾಜಕೀಯ ಉದಯವಾದ ನಂತರ ಆದಷ್ಟು ಶೀಘ್ರವಾಗಿ ಅದರ ವಿಶ್ವಾಸ ಗಳಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ನಮ್ಮ ನೆರೆ ರಾಷ್ಟ್ರ ಮತ್ತೆ ಚೀನಾ ಪರ ನಿಲ್ಲುವ ಸಾಧ್ಯತೆ ಇದ್ದೇ ಇದೆ.
ಮೂಲ: ಪಾರುಲ್ ಚಂದ್ರ, ಡೆಕ್ಕನ್ ಹೆರಾಲ್ಡ್