
ಒಂದು ಕಡೆ ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಮತ್ತೊಂದು ಕಡೆ ಅದೇ ಸಮಯದಲ್ಲಿ ಫೆಬ್ರವರಿ 01 ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಆದರೆ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುವುದರಿಂದ ವಿರೋಧ ಪಕ್ಷಗಳಿಗೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರದ ಬಜೆಟ್ ದೆಹಲಿಯನ್ನು ಹೊರತುಪಡಿಸಿ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ.
ಈ ಬಾರಿಯ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ನಲ್ಲಿ ದೆಹಲಿಗೆ ಸಂಬಂಧಿಸಿದ ಯಾವುದೇ ಯೋಜನೆ ಘೋಷಣೆ ಮಾಡುವಂತಿಲ್ಲ. ಈ ಬಗ್ಗೆ ಈಗಾಗಲೇ ಸಚಿವ ಸಂಪುಟ ಕಾರ್ಯದರ್ಶಿಗೆ ಅಧಿಕೃತ ಸೂಚನೆ ಕಳುಹಿಸಿಕೊಟ್ಟಿದ್ದೇವೆ. ಕೇಂದ್ರ ಬಜೆಟ್ನಲ್ಲಿ ದೆಹಲಿಗೆ ಸಂಬಂಧಿಸಿದ ವಿಚಾರ ಇರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಹಾಗಿದ್ದರೆ ದೆಹಲಿಗೆ ಪ್ರತ್ಯೇಕವಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಬಜೆಟ್ ಮಂಡನೆ ಮಾಡುತ್ತಾ ಅನ್ನೋ ಅನುಮಾನ ಬರುವುದು ಸಹಜ. ಆದರೆ..
ಕೇಂದ್ರ ಸರ್ಕಾರ ದೆಹಲಿಗೆ ಕೊಡಬೇಕಿರುವ ಯೋಜನೆಗಳಿಗೆ ಹಣವನ್ನು ಮೀಸಲಿಡುತ್ತದೆ. ಆದರೆ ಕೇಂದ್ರದ ಬಜೆಟ್ ಪುಸ್ತಕದಲ್ಲಿ ಸೇರಿಸುವುದಿಲ್ಲ ಅಷ್ಟೆ. ಚುನಾವಣೆ ಆದ ಬಳಿ ದೆಹಲಿಗೆ ಇಂತಿಷ್ಟು ಯೋಜನೆಗಳನ್ನು ನೀಡಿದ್ದೇವೆ ಎಂದು ಸರ್ಕಾರವೇ ಒಂದು ಪ್ರಕಟಣೆ ಹೊರಡಿಸಬಹುದು ಅಷ್ಟೆ. ಅಥವಾ ಯೋಜನೆಗಳಿಗೆ ಚಾಲನೆ ಕೊಟ್ಟಾಗ ತನ್ನಷ್ಟಕ್ಕೆ ತಾನೇ ಬಹಿರಂಗ ಆಗಲಿದೆ. ಇನ್ನು ದೆಹಲಿಯನ್ನು ಕೇಂದ್ರಿತವಾಗಿ ಇಟ್ಟುಕೊಂಡು ಬೇರೆ ಬೇರೆ ರಾಜ್ಯಗಳಿಗೆ ಯೋಜನೆ ಘೋಷಣೆ ಆದಾಗ ದೆಹಲಿಗೂ ಆ ಯೋಜನೆಯ ಲಾಭ ಸಿಗುವುದಾದರೆ ಅದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಆದರೆ ಈಗಾಗಲೇ ಅತ್ಯುತ್ತಮವಾಗಿರುವ ಶಾಲೆಗಳು, ಉನ್ನತ ಮಟ್ಟದ ಆರೋಗ್ಯ ಸೇವೆ, ಉದ್ಯಾನವನಗಳು, ಉಚಿತ ವಿದ್ಯುತ್, ಉಚಿತ ನೀರು ಸೇರಿದಂತೆ ಜನತೆಗೆ ಬೇಕಿರುವ ಯೋಜನೆಗಳನ್ನು ಜಾರಿ ಮಾಡಿರುವ ಆಮ್ ಆದ್ಮಿ ಸರ್ಕಾರವನ್ನು ಕೆಳಗಿಳಿಸಲು ಕೇಂದ್ರ ಸರ್ಕಾರ ಬಜೆಟ್ನಲ್ಲಿ ತನಗೆ ಇಷ್ಟ ಬಂದ ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇತ್ತು. ಅದೇ ಕಾರಣಕ್ಕಾಗಿ ಚುನಾವಣಾ ಆಯೋಗ ಮಧ್ಯಂತರ ಸೂಚನೆ ನೀಡಿದೆ. ದೆಹಲಿಗೆ ಕೇಂದ್ರಿತವಾಗಿ ದೆಹಲಿಗಷ್ಟೇ ಸೀಮಿತವಾದ ಅದರಲ್ಲೂ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಘೋಷಣೆಗಳನ್ನು ಆಯೋಗ ತಡೆದಿದೆ.












