
ಕನ್ನಡ ಚಲನಚಿತ್ರರಂಗದ ಅಭಿನಯ ಶಾರದೆ ಜಯಂತಿ ಜೀವನಗಾಥೆ ಕುರಿತ ಪುಸ್ತಕ ಲವ್ಲೀ & ಲೋನ್ಲಿ ಪುಸ್ತಕ ಬಿಡುಗಡೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿನಿಮಾ ಪತ್ರಕರ್ತ ಕೆ. ಸದಾಶಿವಶಣೈ ಬರೆದಿರುವ Lovely & Lonely ಪುಸ್ತಕವನ್ನು ಹಿರಿಯ ನಟ, ನಟಿಯರಿಗೆ ಪುಸ್ತಕ ವಿತರಿಸಿದ್ದಾರೆ ಸಿಎಂ ಸಿದ್ದರಾಮಯ್ಯ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸದಾಶಿವ ಶೆಣೈ ಅವರು ಅಭಿನವ ಶಾರದೆ ಶ್ರೀಮತಿ ಜಯಂತಿ ಅವರ ಬಗ್ಗೆ ಪುಸ್ತಕ ರಚನೆ ಮಾಡಿದ್ದಾರೆ. ಅದಕ್ಕೆ ಬಹಳ ಸೂಕ್ತವಾದ Heading ಕೊಟ್ಟಿದ್ದಾರೆ. Lovely And Lonely ಅಂತ ಕೊಟ್ಟಿದ್ದಾರೆ. ಅವರಿಗೆ ಅನ್ವಯ ಆಗುವ ಹೆಸರು ಇಟ್ಟಿದ್ದಾರೆ. ಸದಾಶಿವ ಶೆಣೈ ಅವರು ಪತ್ರಕರ್ತರಾಗಿ ಬಹಳ ವರ್ಷಗಳಿಂದ ಪರಿಚಯ. ನನ್ನ ಬಗ್ಗೆ ಅಪಾರವಾದ ಅಭಿಮಾನ, ಗೌರವ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
ಜಯಂತಿ ಅವರ ಬದುಕಿನ ಚಿತ್ರವನ್ನು ಪುಸ್ತಕದ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪುಸ್ತಕ ಓದಲು ಆಗಲಿಲ್ಲ, ಇವತ್ತು ನಿರಂತರ ಕಾರ್ಯಕ್ರಮ ಇತ್ತು, ಕಾಯಿಸಿದ್ದೇನೆ ಹೀಗಾಗಿ ಕ್ಷಮೆ ಕೋರುತ್ತೇನೆ ಎಂದಿರುವ ಸಿಎಂ ಸಿದ್ದರಾಮಯ್ಯ, ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಾಗ, ಜಯಂತಿ ಅವರ ಮೇಲೆ ಪುಸ್ತಕ ಬರೆದ ಮೇಲೆ ಬರಲು ಸಾಧ್ಯವಿಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ. ಪುಸ್ತಕ ಓದಿದ್ದಿದ್ದರೆ ಇನ್ನೂ ಚೆನ್ನಾಗಿ ಇರ್ತಿತ್ತು. ಜಯಂತಿ ನನಗೆ ಬಹಳ ಆತ್ಮೀಯರು, ವರ್ಷಗಳ ಕಾಲ ಒಡನಾಟ ಇತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.
ನಾವು ಒಂದೇ ಪಕ್ಷದಲ್ಲಿ ಇದ್ದೆವು. ಜನತಾದಳದಲ್ಲಿ ನಾವು ಇದ್ವಿ. ಚಿಕ್ಕಬಳ್ಳಾಪುರ ಲೋಕಸಭೆಗೆ ಸ್ಪರ್ಧೆ ಮಾಡಿಸಿದ್ವಿ. ನನ್ನನ್ನು ಯಾವಾಗಲು ಹೀರೋ ಅಂತ ಕರಿಯೋರು. ಜಯಂತಿ ಅವರಿಗೆ ನನ್ನ ಮೇಲೆ ಪ್ರೀತಿ ಇದ್ದದ್ದರಿಂದ ಹಾಗೆ ಕರಿಯೋರು. ಬಹಳ ಕಡೆ ಪ್ರಚಾರ ಮಾಡಿದ್ವಿ, ಒಂದೇ ರಾಜಕೀಯ ಅಭಿಪ್ರಾಯ ಇತ್ತು, ಬಹಳ ಅಭಿಮಾನ, ಪ್ರೀತಿಯಿಂದ ಕಾಣುತ್ತಿದ್ದರು. ಜಯಂತಿ ಅವರಿಗೆ ಬಹಳ ಮುಖ್ಯವಾಗಿ ಮನುಷ್ಯತ್ವ ಇತ್ತು. ಸ್ನೇಹಮಯಿ ಜೀವನ ಮಾಡಿದ್ದರು. ಎಷ್ಟೇ ನೋವಿದ್ದರೂ, ತೋರಿಸಿಕೊಳ್ಳಲಿಲ್ಲ ಎಂದಿದ್ದಾರೆ.
ವಿದ್ಯಾರ್ಥಿ, ಲಾಯರ್ ಆಗಿದ್ದಾಗ ಎಲ್ಲಾ ಕನ್ನಡ ಸಿನಿಮಾ ನೋಡ್ತಿದ್ದೆ. ನಟಿ ಜಯಂತಿ ಅವರ ಸಿನಿಮಾ ಮಿಸ್ ಮಾಡುತ್ತಿರಲಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ಅವರು ಒಬ್ಬ ಅದ್ಭುತ ಕಲಾವಿದೆ. ನಾನು ಮಂತ್ರಿ ಆದ ಮೇಲೆ ಸಿನಿಮಾ ನೋಡಲಿಲ್ಲ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ನಾನು ನೋಡಿದ ಕೊನೆ ಸಿನಿಮಾ ಅಂತಾನೂ ತಿಳಿಸಿದ್ದಾರೆ. ಜಯಂತಿ ಅವರಿಗೆ ಜಯಂತಿಯವರೇ ಸಾಟಿ ಆಗಿದ್ದರು. ನನ್ನ ಅವರ ಸಂಬಂಧ ಬಹಳ ಆತ್ಮೀಯವಾಗಿತ್ತು. ಅವರ ಜೀವನದ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದರು, ರಾಜಕೀಯ ವಿಚಾರ ಹೇಳಿಕೊಂಡಿದ್ದರು. ಜೀವನವನ್ನು, ಸಮಾಜವನ್ನು ಪ್ರೀತಿಸುವ ನಟಿ ಜಯಂತಿ ಆಗಿದ್ದರು ಎಂದಿದ್ದಾರೆ.
ಜಯಂತಿ ಅವರ ಹೆಸರಲ್ಲಿ ಪ್ರಶಸ್ತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ಪ್ರೋತ್ಸಾಹಿಸುವವನು, ಕನ್ನಡ ಯಾವುದೇ ಕಳಪೆ ಅಲ್ಲ, 2 ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ. ರಾಷ್ಟ್ರ ಮಟ್ಟದಲ್ಲಿ ಕನ್ನಡ ಚಿತ್ರರಂಗ ಬೆಳೆಯಬೇಕು. ನಾನು ಚಿತ್ರರಂಗಕ್ಕೆ ಶೇಕಡ 100ರಷ್ಟು ತೆರಿಗೆ ವಿನಾಯಿತಿ ಕೊಟ್ಟಿದ್ದೇನೆ. ಪಿ.ಲಂಕೇಶ್ ನಮಗೆ ಗುರುಗಳು ಇದ್ದ ಹಾಗೆ. ಪ್ರತಿ ಭಾನುವಾರ ಅವರ ಆಫೀಸ್ಗೆ ಹೋಗ್ತಿದ್ದೆ. ಅವರ ಸಲಹೆ ಕೇಳುತ್ತಿದ್ದೆ ಎಂದಿದ್ದಾರೆ.

ಪಿ. ಲಂಕೇಶ್ ಸೃಜನಶೀಲ ಸಾಹಿತಿ ನೋಡುವುದು ಅಪರೂಪ. ಜಯಂತಿ ಅವರ ಅಭಿನಯ ಮರೆಯಲಿಕ್ಕೆ ಸಾಧ್ಯವಿಲ್ಲ. ಚಿಕ್ಕ, ದೊಡ್ಡ ಯಾವುದೇ ಪಾತ್ರ ಇರಲಿ ಜೀವ ತುಂಬುತ್ತಿದ್ದರು. ನಮ್ಮನ್ನು ನಾವು ಮರೆಯುವಂತೆ ಅಭಿನಯ ಮಾಡ್ತಿದ್ರು. ಆ ರೀತಿಯ ನಟನೆ ಕರಗತವಾಗಿತ್ತು. ಅವರು ಹುಟ್ಟು ಕಲಾವಿದೆ ಎಂದಿರುವ ಸಿಎಂ, ನಾನು ಲೋನ್ಲಿನೆಸ್ ಬಗ್ಗೆ ನಾನು ಮಾತಾನಾಡಲ್ಲ. ಆ ಅಧಿಕಾರ ಇರುವುದು ಮಗನಿಗೆ ಮಾತ್ರ. ಜಯಂತಿ ನನಗಿಂತ ದೊಡ್ಡವರು, ನನಗೆ 78 ವರ್ಷ ಆಗಿದೆ. ಈಗಿನ ಕಲಾವಿದರು ಜಯಂತಿ ಅವರಿಂದ ಕಲಿಯಬೇಕು. ಉತ್ತಮ ಗುಣಗಳನ್ನು ಹೊಂದಿದ್ದ ಹೆಣ್ಣು ಮಗಳು ಆಕೆ. ಎಲ್ಲರೂ ಈ ಪುಸ್ತಕ ಓದಬೇಕು ಎಂದಿದ್ದಾರೆ.
ನಮ್ಮಲ್ಲಿ ಸಮಾಜವನ್ನು ಪ್ರೀತಿಸುವ ಗುಣ ಇರಬೇಕು. ಸಮಾಜದಲ್ಲಿ ಜಾತಿ, ಯಾವ ಧರ್ಮ ಮುಖ್ಯವಲ್ಲ. ಹುಟ್ಟು ಸಹಜ, ಸಾವು ಖಚಿತ, ಬದುಕು ಸಾರ್ಥಕ ಮಾಡಿಕೊಳ್ಳಬೇಕು. ಜಯಂತಿ ಅವರು ತಮ್ಮ ಬದುಕು ಸಾರ್ಥಕ ಮಾಡಿಕೊಂಡಿದ್ದಾರೆ. ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ, ನಂತರ ಅಲ್ಪಮಾನವರಾಗಿ ಬೆಳೆಯುತ್ತಾರೆ. ನಾವು ವಿಶ್ವಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು. ನಾವು ಸಮಾಜಕ್ಕೆ ತೀರಿಸುವ ಋಣ. ಸಮಾಜದ ಋಣ ನಮ್ಮ ಮೇಲೆ ಇರುತ್ತದೆ. ಆ ಕೆಲಸ ಮಾಡಬೇಕು. ಪುಸ್ತಕವನ್ನು ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದಿದ್ದಾರೆ.
ಜಯಂತಿ ಅವರ ಹೆಸರನ್ನು ಅಜರಾಮರ ಮಾಡಲು ಸಿಎಂ ಅವರಿಂದ ಮಾತ್ರ ಸಾಧ್ಯ. ಪುಸ್ತಕ ಕೊಡಬೇಕು ಅಂದಿದ್ರು, ಆದರೆ ಕೊಡಲು ಸಾಧ್ಯವಾಗಲಿಲ್ಲ. ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಲು ಸಾಧ್ಯವಾದರೆ, ಅದನ್ನು ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ಸದಾಶಿವ ಶೆಣೈ ಅವರು ಮನವಿ ಮಾಡಿದ್ದಾರೆ. ಪ್ರಶಸ್ತಿ ನೀವು ಒಪ್ಪಿದರೆ ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಮಾಡುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತದೆ. ಪ್ರಯತ್ನ ಮೊದಲಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.







