ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಪ್ರಕರಣದ ಎ-14 ಆರೋಪಿ ಪ್ರದೋಷ್ ಅವರು ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಆದೇಶವನ್ನು ಕಾಯ್ದಿರಿಸಿದೆ.
ವಿಚಾರಣೆ ವೇಳೆ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರದೋಷ್ ಅವರನ್ನು ನೇರವಾಗಿ ಪ್ರಶ್ನಿಸಿದರು. ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯನ್ನು ಸ್ವಯಂಪ್ರೇರಿತವಾಗಿ ಸಲ್ಲಿಸಿದ್ದೀರಾ ಮತ್ತು ಅರ್ಜಿಯನ್ನು ಓದಿಯೇ ಸಹಿ ಮಾಡಿದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರದೋಷ್, ತಾವು ಸ್ವಯಂಪ್ರೇರಿತವಾಗಿಯೇ ಅರ್ಜಿ ಸಲ್ಲಿಸಿದ್ದು, ಓದಿದ ಬಳಿಕ ಸಹಿ ಮಾಡಿರುವುದಾಗಿ ಉತ್ತರಿಸಿದರು.

ಮಾಫಿ ಸಾಕ್ಷಿಯಾಗುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದರೆ ಜೈಲಿನಲ್ಲೇ ಮುಂದುವರಿಯಬೇಕಾಗಬಹುದು. ಅಲ್ಲದೆ, ವಿಚಾರಣೆ ವೇಳೆ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸದಿದ್ದರೆ ಮತ್ತೆ ಆರೋಪಿಯಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಎಚ್ಚರಿಸಿದರು. ಇದಕ್ಕೆ ಪ್ರದೋಷ್, ಈ ಎಲ್ಲ ಕಾನೂನು ಪರಿಣಾಮಗಳ ಬಗ್ಗೆ ತಮ್ಮ ವಕೀಲರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಗೆ ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜೈಲಿನಿಂದ ಬಿಡುಗಡೆಯಾಗುವ ಉದ್ದೇಶದಿಂದಲೇ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇದೆ ಎಂದು ವಾದಿಸಿದ ಅವರು, ಪ್ರದೋಷ್ ಮೇಲೆ ಯಾರಾದರೂ ಒತ್ತಡ ಹೇರಿದ್ದಾರೆಯೇ ಅಥವಾ ಯಾವುದೇ ಆಮಿಷ, ಭರವಸೆ ನೀಡಲಾಗಿದೆಯೇ ಎಂಬುದನ್ನು ನ್ಯಾಯಾಲಯ ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಮಾಫಿ ಸಾಕ್ಷಿ ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.ಇದರ ನಡುವೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ಹಾಗೂ ನಟ ಧನ್ವೀರ್ ಭೇಟಿಯಾಗಿದ್ದಾರೆ.ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬೆಳವಣಿಗೆಯ ನಡುವೆಯೇ ಇಬ್ಬರೂ ಒಟ್ಟಿಗೆ ದರ್ಶನ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ದರ್ಶನ್ ಅವರ ತಾಯಿ ಮೀನಾ ಅವರ ಸಮ್ಮುಖದಲ್ಲಿ ಜೈಲಿನಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಭೇಟಿಯ ಬಳಿಕ ಮಾತನಾಡಿದ ಧನ್ವೀರ್, ದರ್ಶನ್ ಆರೋಗ್ಯವಾಗಿದ್ದಾರೆ ಮತ್ತು ತಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.

“ನಮ್ಮ ನಡುವೆ ಮನಸ್ತಾಪ ಇದ್ದಿದ್ದರೆ ನಾನು ಅವರನ್ನು ಭೇಟಿಯಾಗಲು ಬರುತ್ತಿರಲಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ” ಎಂದು ಧನ್ವೀರ್ ಹೇಳಿದ್ದಾರೆ.ದರ್ಶನ್ ಭೇಟಿಯ ಬಳಿಕ ಧನ್ವೀರ್ ಜೈಲಿನಿಂದ ಮೊದಲು ಹೊರಬಂದರೆ, ವಿಜಯಲಕ್ಷ್ಮಿ ಮತ್ತು ಮೀನಾ ಪ್ರತ್ಯೇಕ ವಾಹನಗಳಲ್ಲಿ ವಾಪಸಾದರು.






