ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಚಾಲನಾ ಸಿಬ್ಬಂದಿಗೆ ಸುರಕ್ಷಾ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಬಿಎಂಟಿಸಿ ಪ್ರಸ್ತುತ ಬೆಂಗಳೂರಿನಿಂದ ಸುಮಾರು 60 ಕಿ.ಮೀ. ವ್ಯಾಪ್ತಿಯವರೆಗೆ ಪ್ರತಿದಿನ 1,811 ಮಾರ್ಗಗಳಲ್ಲಿ 6,234 ಅನುಸೂಚಿಗಳ ಮೂಲಕ 65,518 ಸುತ್ತುವಳಿಗಳನ್ನು ನಡೆಸುತ್ತಿದ್ದು, ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಆಧಾರವಾಗಿದೆ.
ಸಂಸ್ಥೆಯಲ್ಲಿ 9,462 ಚಾಲಕರು, 7,969 ಚಾಲಕ-ಕಂ-ನಿರ್ವಾಹಕರು ಸೇರಿದಂತೆ ಒಟ್ಟು 17,431 ಚಾಲನಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ 2,989 ವಿದ್ಯುತ್ ಬಸ್ ಚಾಲಕರು ಸಹ ಸೇವೆ ಸಲ್ಲಿಸುತ್ತಿದ್ದು, ಸುರಕ್ಷಿತ ಹಾಗೂ ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 18ರಿಂದ ಪ್ರತೀ ಮಂಗಳವಾರ ಮತ್ತು ಗುರುವಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ ಸುರಕ್ಷಿತ ಚಾಲನೆ, ಸಂಚಾರ ನಿಯಮಗಳ ಪಾಲನೆ, ರಸ್ತೆ ಸುರಕ್ಷತೆ, ಅಪಘಾತ ತಡೆ ಕ್ರಮಗಳು ಹಾಗೂ ಜವಾಬ್ದಾರಿಯುತ ಚಾಲನೆಯ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತದೆ.

ಪೊಲೀಸ್ ಇಲಾಖೆಯ ತಜ್ಞ ಅಧಿಕಾರಿಗಳು ಸಂಚಾರ ನಿಯಮಗಳ ಅನುಸರಣೆ, ರಸ್ತೆ ಬಳಕೆದಾರರ ಸುರಕ್ಷತೆ ಮತ್ತು ಅಪಘಾತಗಳಿಗೆ ಕಾರಣವಾಗುವ ಅಂಶಗಳ ಕುರಿತು ಚಾಲನಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.

ಇದೇ ವೇಳೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲೂ ಸುರಕ್ಷಿತ ಚಾಲನೆ ಕುರಿತ ನಿಯಮಿತ ತರಬೇತಿ ಮುಂದುವರಿದಿದ್ದು, ವಲಯ ಮಟ್ಟದಲ್ಲಿಯೂ ವಾರಕ್ಕೊಮ್ಮೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಮೂಲಕ ಚಾಲನಾ ಕೌಶಲ್ಯವನ್ನು ಹೆಚ್ಚಿಸುವುದು, ಅಪಘಾತಗಳನ್ನು ಕಡಿಮೆ ಮಾಡುವುದು ಹಾಗೂ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಅನುಭವ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.

“ಸುರಕ್ಷಿತ ಚಾಲನೆ – ಸುರಕ್ಷಿತ ಪ್ರಯಾಣ” ಎಂಬ ಆಶಯದೊಂದಿಗೆ ಚಾಲನಾ ಸಿಬ್ಬಂದಿಯ ತರಬೇತಿ, ಜಾಗೃತಿ ಹಾಗೂ ಮೇಲ್ವಿಚಾರಣೆಗೆ ಬಿಎಂಟಿಸಿ ಹೆಚ್ಚಿನ ಆದ್ಯತೆ ನೀಡಿದ್ದು, ಸಾರ್ವಜನಿಕರ ಸಹಕಾರ ಹಾಗೂ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದ ಅಪಘಾತಮುಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿರ್ಮಿಸಲು ಸಂಸ್ಥೆ ಬದ್ಧವಾಗಿದೆ.







