ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ನೆರೆ ರಾಜ್ಯದ ವಿಧಾನ ಸಭೆಯಲ್ಲಿ ಕರ್ನಾಟಕದಲ್ಲಿ ನಡೆದ ಘಟನೆ ಸಂಬಂಧ ಚರ್ಚೆ ನಡೆದಿದ್ದು, ಪ್ರಕರಣದ ತನಿಖೆಯನ್ನು ಕರ್ನಾಟಕ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದೆ.
ತಮಿಳುನಾಡು ವಿಧಾನ ಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದೆ. ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಣೆ ಮಾಡಿದ್ದು, ಕರ್ನಾಟಕ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಬಿಐಗೆ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಅರಣ್ಯ ಅಧಿಕಾರಿಗಳ ಗುಂಡಿನ ದಾಳಿಗೆ ಮೃತಪಟ್ಟವರು ತಮಿಳುನಾಡು ಮೂಲದವರು. ಮೆಟ್ಟೂರು ಜಲಾಶಯ ನಿರ್ಮಾಣದಿಂದ ಹನೂರಿನಲ್ಲಿ ಅವರು ವಾಸವಿದ್ದು, ಅವರೆಲ್ಲ ತಮಿಳರು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಇನ್ನು, ಹನೂರು ತಾಲೂಕಿನ ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸಕರ ತಂಡ ಭೇಟಿ ನೀಡಿದೆ. ತೋಮಿಯರ್ಪಾಳ್ಯದ ಚರ್ಚ್ನಲ್ಲಿ ಘಟನೆ ಸಂಬಂಧ ಸಭೆ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್ ಎಕ್ಸ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿವೆ.






