ನವದೆಹಲಿ: ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಹಾಡುವುದಿಲ್ಲ. ಬಂಕಿಮಚಂದ್ರ ಚಟರ್ಜಿ ರಚಿಸಿದ ಗೀತೆಯ ಮೊದಲ ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುತ್ತದೆ. ಆದರೆ ವಂದೇ ಮಾತರಂಗೆ ಕಾಂಗ್ರೆಸ್ ವಿರೋಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೇಣು ಹಾಕಿದರೂ, ಜೈಲಿಗೆ ಹಾಕಿದರೂ ನಾವು ಹಾಡುವುದು ಎರಡು ಪ್ಯಾರಾ ಮಾತ್ರ. ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲ್ಲ” ಎಂದು ಹೇಳಿದರು.

ಸೋನಿಯಾ ಗಾಂಧಿ ಅವರು ವಂದೇ ಮಾತರಂ ಹಾಡಲು ತಡೆದಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಹರಿಪ್ರಸಾದ್, “ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಂದೇ ಮಾತರಂ ಹಾಡದಂತೆ ತಡೆದಿದ್ದಾರೆ ಎಂಬುದು ಸುಳ್ಳು. ಎಐಸಿಸಿ ಕಚೇರಿಯಲ್ಲಿ ಗೀತೆ ಹಾಡುವ ವೇಳೆ ಕೆಲವು ತಪ್ಪುಗಳಿದ್ದ ಕಾರಣ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಸೂಚಿಸಿದ್ದರು. ಅಲ್ಲದೇ ವಯಸ್ಸಿನ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ನೀಡುವಂತೆ ಹೇಳುತ್ತಿದ್ದರು” ಎಂದು ವಿವರಿಸಿದರು.

“ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ಜನಗಣಮನದ ಮಹತ್ವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದ ಅವರು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಗೌರವ ತೋರುತ್ತಿವೆ” ಎಂದು ಕಿಡಿಕಾರಿದರು. ಕೆಪಿಸಿಸಿ ಅಧ್ಯಕ್ಷರ ಈ ಹೇಳಿಕೆಯಿಂದ ವಂದೇ ಮಾತರಂ ಕುರಿತು ರಾಜಕೀಯ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದೆ.







