ಇತ್ತೀಚೆಗೆ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮರುದಿನವೇ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದಿದ್ದರು. ವಿರೋಧ ಪಕ್ಷಗಳು ಅವರ ಈ ನಡೆಯನ್ನು ಅಪಹಾಸ್ಯ ಮಾಡಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಿಯಾಂಕಾ ಮುಖ್ಯಮಂತ್ರಿ ಅಭ್ಯರ್ಥಿಯ ಬಗೆಗಿನ ಪ್ರಶ್ನೆಯಿಂದಾಗಿ ‘ಕಿರಿಕಿರಿ’ಯಾಗಿ ಹಾಗೆ ಉತ್ತರಿಸಿದ್ದೆ ಎಂದಿದ್ದರು. ಶೇಕಡಾ ಆರರಿಂದ ಏಳುರಷ್ಟೂ ಓಟ್ ಶೇರ್ ಇಲ್ಲದ, ಕೇವಲ ಮೂರು ಶಾಸಕರಿರುವ ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪ್ರಶ್ನಿಸುವುದು ನಿಜಕ್ಕೂ ಕಿರಿಕಿರಿ ಎಂಬ ಮಾತುಗಳು ಈಗ ಜನಸಾಮಾನ್ಯರ ನಡುವೆ ಕೇಳಿ ಬರುತ್ತಿದೆ.
ಪುರುಷ ಕೇಂದ್ರಿತ ಉತ್ತರ ಪ್ರದೇಶದ ಚುನಾವಣಾ ರಾಜಕೀಯದಲ್ಲಿ ಇದೇ ಮೊದಲನೇ ಬಾರಿ ಮಹಿಳಾ ಕೇಂದ್ರಿತ ರಾಜಕೀಯ ಚರ್ಚೆಗಳನ್ನು ಹುಟ್ಟು ಹಾಕಿದ್ದಾರೆ ಪ್ರಿಯಾಂಕಾ. ಆದರೆ ಇದರ ಬಗ್ಗೆ ಚರ್ಚಿಸದೆ ಕೇವಲ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಮಾತನಾಡುವ ಮಾಧ್ಯಮಗಳ ಧೋರಣೆ ಸಹಜವಾಗಿಯೇ ‘ಕಿರಿಕಿರಿ’ ಸೃಷ್ಟಿಸಿರಬಹುದು. ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ 40 ಪ್ರತಿಶತ ಮೀಸಲಾತಿ, 25 ಪ್ರತಿಶತ ಪೊಲೀಸ್ ಹುದ್ದೆಗಳು, 50 ಪ್ರತಿಶತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಂಗಡಿಗಳು, ಫೋನ್ಗಳು, ಸ್ಕೂಟರ್ಗಳು ಹೀಗೆ ಭರವಸೆ ನೀಡಲಾಗಿದೆ. ಅಭ್ಯರ್ಥಿಯ ಆಯ್ಕೆಯಲ್ಲೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಅತ್ಯಾಚಾರ ಸಂತ್ರಸ್ತೆಯ ತಾಯಿ, ಮಾಜಿ ಮಿಸ್ ಬಿಕಿನಿ ಇಂಡಿಯಾ ವಿಜೇತೆ ಮತ್ತು ಟಿವಿ ನಿರೂಪಕಿ ಮುಂತಾದ ಪರುಷ ಸಮಾಜದಿಂದ ಅವಹೇಳನಕ್ಕೆ ಒಳಗಾದವರಿಗೆ ಟಿಕೆಟ್ ನೀಡಲಾಗಿದೆ. ಬಹಳ ಸಮಯದ ನಂತರ ಮಹಿಳಾ ಹಕ್ಕುಗಳು ಮತ್ತು ಸಬಲೀಕರಣವುಕ ಪಕ್ಷವೊಂದರ ಚುನಾವಣಾ ಪ್ರಚಾರದ ಭಾಗವಾಗಿದೆ.
ಬಿಜೆಪಿಯ ಪುರುಷ ಪ್ರಧಾನ ರಾಜಕಾರಣ
ಯುಪಿಯಲ್ಲಿ ಪ್ರಿಯಾಂಕಾ ವಾದ್ರಾ ಅವರ ಮಹಿಳಾ ಕೇಂದ್ರಿತ ಚುನಾವಣಾ ಪ್ರಚಾರದ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತಲೆಕೆಡಿಸಿಕೊಳ್ಳದಿರಬಹುದು. ತನ್ನ ಸಂದೇಶವನ್ನು ಜನರಿಗೆ ತಲುಪಿಸಲು ತಳಮಟ್ಟದಲ್ಲಿ ಯಾವುದೇ ಸಾಂಸ್ಥಿಕ ಕಾರ್ಯಕರ್ತರಿಲ್ಲದ ಯುಪಿಯಲ್ಲಿ ಕಾಂಗ್ರೆಸ್ ವಾಸ್ತವಿಕವಾಗಿ ಅಳಿದುಹೋಗಿದೆ. ಆದರೆ ಪ್ರಿಯಾಂಕಾ ವಾದ್ರಾ ಅವರು ಯುಪಿ 2022 ರ ಆಚೆಗೆ ತನ್ನ ‘ಲಡ್ಕಿ ಹೂ, ಲಡ್ ಶಕ್ತಿ ಹೂ’ ಅಭಿಯಾನವನ್ನು ನಡೆಸಿದರೆ ಅದು ಬಿಜೆಪಿಗೆ ತೊಂದರೆಯಾಗಬಹುದು. ಲೋಕನೀತಿ-CSDS ಸಮೀಕ್ಷೆಗಳು ಬಿಜೆಪಿಗೆ ‘ಉಜ್ವಲ’ ಮತ್ತು ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಗಳು ಮಹಿಳೆಯರ ಓಟು ತಂದುಕೊಡಲಿದೆ ಎಂದಿದೆ. ಆದರೆ ಬಿಜೆಪಿಯ ಸಾಂಸ್ಥಿಕ (ಅಧಿಕಾರ) ಶ್ರೇಣಿಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಕಳೆದ 41 ವರ್ಷಗಳಲ್ಲಿ ಬಿಜೆಪಿಯ ಡಜನ್ ಅಧ್ಯಕ್ಷರ ಪೈಕಿ ಒಬ್ಬರೇ ಒಬ್ಬ ಮಹಿಳಾ ನಾಯಕಿ ಇಲ್ಲ.
30 ಸದಸ್ಯರ ಕೇಂದ್ರ ಸಂಪುಟದಲ್ಲಿ ಕೇವಲ ಇಬ್ಬರು ಮಹಿಳೆಯರಿದ್ದಾರೆ – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ. ಬಿಜೆಪಿಯ ಹತ್ತಾರು ಮುಖ್ಯಮಂತ್ರಿಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ. ಏಳು ಉಪ ಮುಖ್ಯಮಂತ್ರಿಗಳ ಪೈಕಿ ಬಿಹಾರದಲ್ಲಿ ರೇಣು ದೇವಿ ಮಾತ್ರ ಮಹಿಳೆ . ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಏಳು ಸದಸ್ಯರಿರುವ ಸಂಸದೀಯ ಮಂಡಳಿ ಪುರುಷ ಕೇಂದ್ರಿತವೇ ಆಗಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧ್ಯಕ್ಷರಲ್ಲಿ ಮಣಿಪುರದ ಶಾರದಾ ದೇವಿ ಮಾತ್ರ ಮಹಿಳೆ. ಪಿಎಂ ಮೋದಿ ಸ್ಟಾರ್ ಆಕರ್ಷಣೆಯಾಗಿ ಉಳಿಯುವವರೆಗೂ ಬಿಜೆಪಿ ತನ್ನ ಸಾಂಸ್ಥಿಕ ನಿರ್ಧಾರ ತೆಗೆದುಕೊಳ್ಳುವ ಶ್ರೇಣಿಯಲ್ಲಿ ಮಹಿಳೆಯರಿಗಿರುವ ಕಡಿಮೆ ಪ್ರಾತಿನಿಧ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಮ್ಮೆ ಮೋದಿ ನಿವೃತ್ತರಾದರೆ ಮಹಿಳೆಯರ ಪ್ರಾತಿನಿಧ್ಯವಿಲ್ಲದ ಬಿಜೆಪಿ ಅವರ ಮತಗಳನ್ನು ಪಡೆಯಲು ವಿಫಲವಾಗಬಹುದು ಮತ್ತು ಪ್ರಿಯಾಂಕಾರ ಮಹಿಳಾ ಕೇಂದ್ರಿತ ರಾಜಕಾರಣ ದೀರ್ಘಕಾಲದಲ್ಲಿ ರಾಜಕೀಯ ಚಿತ್ರಣವನ್ನೇ ಬದಲಿಸಬಹುದು ಎನ್ನಲಾಗುತ್ತಿದೆ.
ಭಾರತೀಯ ರಾಜಕಾರಣಕ್ಕೆ ಹೊಸ ದಿಕ್ಕು ತೋರಲಿರುವ ಪ್ರಿಯಾಂಕಾ ಯೋಜನೆ.

2019 ರ ಲೋಕಸಭೆ ಚುನಾವಣೆಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ವೆಬ್ನಾರ್ ಒಂದರಲ್ಲಿ ಹೇಳಿದಂತೆ, ಭಾರತದ ಸ್ವಾತಂತ್ರ್ಯಾ ನಂತರದ ಏಳು ದಶಕಗಳು ಮತ್ತು 17 ಲೋಕಸಭಾ ಚುನಾವಣೆಗಳ ನಂತರ ಮತದಾನದಲ್ಲಿ ಮಹಿಳಾ ಮತದಾರರ ಭಾಗವಹಸುವಿಕೆ 67.18% ಇದ್ದರೆ ಪುರುಷ ಭಾಗವಹಿಸುವಿಕೆ 67.01% ಮಾತ್ರ ಇದೆ.
ಈ ಅಂಕಿಅಂಶಗಳನ್ನಿಟ್ಟುಕೊಂಡೇ ಪ್ರಿಯಾಂಕಾ ವಾದ್ರಾ ತನ್ನ ಪಕ್ಷದ ಪುನರುಜ್ಜೀವನದ ಪ್ರಯತ್ನಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. . ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದನ್ನು ಹೊಸ ಬಾಟಲಿಯಲ್ಲಿ ಹಳೆಯ ವೈನ್ ಎಂದು ಪ್ರತಿಪಕ್ಷಗಳು ತಳ್ಳಿ ಹಾಕುತ್ತಿದ್ದರೂ ಪ್ರಿಯಾಂಕಾ ಅವರ ಮಹಿಳಾ ಕೇಂದ್ರಿತ ಚುನಾವಣಾ ಪ್ರಚಾರವು ರಾಷ್ಟ್ರೀಯತೆ ಮತ್ತು ಆಕ್ರಮಣಕಾರಿ ಹಿಂದುತ್ವದ ಸುತ್ತ ನಿರ್ಮಿಸಲಾದ ಬಿಜೆಪಿಯ ಚುನಾವಣಾ ಪ್ರಚಾರಗಳಿಗೆ ಉತ್ತಮ ಪ್ರತ್ಯುತ್ತರವಾಗಿದೆ. ಮಹಿಳಾ ಕೇಂದ್ರಿತ ರಾಜಕಾರಣ ಹೊಸ ಆವಿಷ್ಕಾರವಲ್ಲ ಆದರೆ ಅದನ್ನು ಮಂಡಿಸುತ್ತಿರುವ ರೀತಿ ಖಂಡಿತವಾಗಿಯೂ ಜನರನ್ನು ಆಕರ್ಷಿಸುತ್ತಿದೆ. ಯುಪಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಮ್ಯಾರಥಾನ್ಗಳಲ್ಲಿ ಕಂಡು ಬಂದ ಭಾರಿ ಹಾಜರಾತಿ ಇದಕ್ಕೆ ಸಾಕ್ಷಿಯಾಗಿದೆ.
ಸದ್ಯಕ್ಕೆ ದಲಿತರು, ಮೇಲ್ಜಾತಿಗಳು ಮತ್ತು ಬುಡಕಟ್ಟು ಜನಾಂಗದವರ ಬೆಂಬಲ ಕಾಂಗ್ರೆಸ್ಗಿಲ್ಲ . ಇತರೆ ಹಿಂದುಳಿದ ವರ್ಗಗಳು (OBC ಗಳು) ಭಾರತೀಯ ಜನತಾ ಪಕ್ಷ (BJP) ಮತ್ತು ಪ್ರಾದೇಶಿಕ ಸಂಘಟನೆಗಳ ನಡುವೆ ವಿಭಜಿಸಲ್ಪಟ್ಟಿವೆ. ಅಲ್ಪಸಂಖ್ಯಾತ ಸಮುದಾಯಗಳೂ ಇತರ ಪಕ್ಷಗಳ ಮತಬ್ಯಾಂಕ್ ಆಗಿರುವ ಸಮುದಾಯಗಳಿಗೆ ಆ ಪಕ್ಷಗಳಿಂದ ಭ್ರಮನಿರಸನವಾದರೆ ಮಾತ್ರ ಅವರು ಭವಿಷ್ಯದಲ್ಲಿ ಕಾಂಗ್ರೆಸ್ನತ್ತ ಹರಿದು ಬರಬಹುದು. ಅಂದರೆ ಸದ್ಯಕ್ಕೆ ಕಾಂಗ್ರೆಸ್ಗೆ ಮತಬ್ಯಾಂಕೇ ಇಲ್ಲ. ಹೀಗಿರುವಾಗ ಪ್ರಿಯಾಂಕಾ ಅವರ ‘ಮಹಿಳಾ ಗ್ಯಾಂಬಿಟ್’ ಕಾಂಗ್ರೆಸ್ಗೆ ಹೊಸ ಆರಂಭವಾಗಬಹುದೇ? ಕಾಲವೇ ಉತ್ತರಿಸಬೇಕು.