
ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಮಹಿಳಾ ಮತದಾರರನ್ನು ಓಲೈಸಿದ ಕಾಂಗ್ರೆಸ್ ಪಕ್ಷಮ ಭರವಸೆಯನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಯಶಸ್ವಿಯೂ ಆಗಿತ್ತು. ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನೂ ಜಾರಿ ಮಾಡಿ ಸೈ ಎನಿಸಿಕೊಂಡಿತ್ತು. ಇದೀಗ ಪಂಚ ಗ್ಯಾರಂಟಿ ಜೊತೆಗೆ ಸೀರೆ ಗ್ಯಾರಂಟಿಯೂ ಸೇರುತ್ತಾ ಅನ್ನೋ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ.

ಸರ್ಕಾರ ಸೀರೆ ಗ್ಯಾರಂಟಿ ಘೋಷಣೆ ಮಾಡುವಂತೆ ಬಿಜೆಪಿ ಶಾಸಕ ಸಿದ್ದು ಸವದಿ ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು ವರ್ಷಕ್ಕೆ ಎರಡು ಸೀರೆ ಖರೀದಿಸಲಿ, ರೇಷನ್ ಕಾರ್ಡ್ ಹೊಂದಿದವರಿಗೆ ಸರ್ಕಾರ ಎರಡು ಸೀರೆಯನ್ನು ಗಿಫ್ಟ್ ಕೊಡಲಿ ಎಂದು ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ ಬಿಜೆಪಿ ಶಾಸಕ ಸಿದ್ದು ಸವದಿ. ಗಮನ ಸೆಳೆಯುವ ಸೂಚನೆ ವೇಳೆ ಹೊಸ ಬೇಡಿಕೆ ಮೂಲಕ ನೇಕಾರರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ನೇಕಾರರು ಉತ್ಪಾದಿಸುವ ಸೀರೆ ಖರೀದಿ ಮಾಡುವವರಿಲ್ಲ, ಹೀಗಾಗಿ ಸರ್ಕಾರಿ ನೌಕರರು ಕಡ್ಡಾಯವಾಗಿ ಎರಡು ಸೀರೆ ಖರೀದಿ ಮಾಡಲಿ. ರೇಷನ್ ಕಾರ್ಡ್ ಇರುವವರಿಗೆ ವರ್ಷಕ್ಕೆ ಎರಡು ಸೀರೆಗಳನ್ನು ಸರ್ಕಾರ ಗಿಪ್ಟ್ ಕೊಡಲಿ. ಐದು ಗ್ಯಾರಂಟಿಗಳನ್ನು ಕೊಟ್ಟ ಸರ್ಕಾರಕ್ಕೆ ಸೀರೆ ಗ್ಯಾರಂಟಿ ಕೊಡಲಿ ಎಂದ ಸಿದ್ದು ಸವದಿ ಮನವಿ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ್, ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಷಯ. ಅವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ. ಶಿವಾನಂದ ಪಾಟೀಲ್ ಉತ್ತರಕ್ಕೆ ಸಮಾಧಾನಗೊಳ್ಳದ ಸಿದ್ದು ಸವದಿ, ಮತ್ತೆ ವಿಚಾರ ಮುಂದುವರಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವರಾಜ ರಾಯರೆಡ್ಡಿ, ಈಗಾಗಲೇ ಬಜೆಟ್ ಮಂಡನೆಯಾಗಿದೆ. ಖರೀದಿ ಮಾಡಬೇಕು ಅಂದ್ರೆ ಹಣ ಇಡಬೇಕು. ಈ ಬಗ್ಗೆ ಸಮಗ್ರ ಆರ್ಥಿಕ ಚರ್ಚೆ ಆಗಬೇಕು. ಆಗ ಮಾತ್ರ ಈ ಯೋಜನೆ ಜಾರಿಗೆ ತರಲು ಸಾಧ್ಯ. ಹೀಗಾಗಿ ಸಿಎಂ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ ಬಸವರಾಜ ರಾಯರೆಡ್ಡಿ.
