ಮುಂಬರುವ ಉತ್ತರ ಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯು ರಾಷ್ಟ್ರ ರಾಜಕೀಯದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಯೋಗಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸುವ ಮೂಲಕ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರವನ್ನು ನಿರ್ಣಾಮ ಮಾಡುವ ಚಿಂತನೆಯಿಂದ ಪ್ರತಿಪಕ್ಷಗಳು ಬಿಡುವಿಲ್ಲದೆ ಕೆಲಸ ಮಾಡುತ್ತಿವೆ. ಒಬಿಸಿ ರಾಜಕೀಯವು ಮತ್ತೆ ಮುಂಚೂಣಿಗೆ ಬಂದು ರಾಷ್ಟ್ರ ರಾಜಕಾರಣದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಒಬಿಸಿ ಒಲವುಳ್ಳ ಪ್ರತಿಪಕ್ಷಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.
ದೇಶದಲ್ಲಿ ಸದ್ದು ಮಾಡುತ್ತಿರುವ ಜಾತಿ ಆಧಾರಿತ ಜನಗಣತಿಯ ಬೇಡಿಕೆಗೆ ಬಿಜೆಪಿಯ ಕಟ್ಟಾ ವಿರೋಧಿ ಪ್ರತಿಪಕ್ಷಗಳು ಬಹಿರಂಗವಾಗಿ ಬೆಂಬಲಿಸುತ್ತೇವೆ ಎಂದಿದೆ. ಬಿಹಾರದಲ್ಲಿ ಜೆಡಿಯು ಮತ್ತು ಆರ್‌ಜೆಡಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಂಗಾಳದಲ್ಲಿ ತೃಣಮೂಲ ಪಕ್ಷಗಳು ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ಬೆಂಬಲಿಸುತ್ತೇವೆ ಎಂದಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕೆಳಗಿಳಿಸುವುದೇ ಇದರ ಹಿಂದಿರುವ ಮೂಲ ಉದ್ದೇಶ ಎಂದು ದೇಶವ್ಯಾಪ್ತಿ ಚರ್ಚೆಯಾಗುತ್ತಿದೆ.
ಯುಪಿ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಜಾತಿ ಗಣತಿಯ ಪರವಾಗಿ ಬೇಡಿಕೆ ಮಂಡಿಸಿದ್ದಾರೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಯಾವತಿ ಮತ್ತು ಬಿಜೆಪಿಯ ಮಿತ್ರ ಪಕ್ಷಗಳಾದ ಅಪ್ನಾ ದಳ ಮತ್ತು ನಿಷಾದ್ ಪಕ್ಷಗಳೂ ಬೆಂಬಲ ಸೂಚಿಸಿವೆ. ಇತರೆ ಹಿಂದುಳಿದವರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಮತ್ತು ಸಮುದಾಯದ ನಿಖರವಾದ ಜನಸಂಖ್ಯೆಯನ್ನು ಕಂಡುಹಿಡಿಯಲು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದೂ ಅಪ್ನಾ ದಳ ಒತ್ತಾಯಿಸಿದೆ. ರಾಜ್ಯ ಸಭೆಯಲ್ಲಿ ನಿರ್ಣಾಯಕ ಸಂದರ್ಭದಲ್ಲಿ ಬಿಜೆಪಿ ಪರವಾಗಿ ನಿಲ್ಲುತ್ತಿದ್ದ ಬಿಜು ಜನತಾದಳ (ಬಿಜೆಡಿ) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ನಂತಹ ಪಕ್ಷಗಳೂ ಕೂಡ ಜಾತಿ ಆಧಾರಿತ ಜನಗಣತಿಗೆ ಬೆಂಬಲ ಸೂಚಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಮೋದಿ ಸರಕಾರಕ್ಕೆ ಮನವಿ ಮಾಡಿ 2021ರ ಜನಗಣತಿಯಲ್ಲಿ ಒಬಿಸಿಗಳ ಎಣಿಕೆ ಮಾಡುವಂತೆ ಮನವಿ ಸಲ್ಲಿಸಿತ್ತು. ಒಂದು ಸಾಮಾನ್ಯ ಜನಗಣತಿಯಲ್ಲಿ ಒಬಿಸಿಗಳ ಎಣಿಕೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಕೆಯಾದಲ್ಲಿ ಅದರ ವಿರುದ್ಧ ಅಫಿಡವಿಟ್ ಸಲ್ಲಿಸುವಂತೆಯೂ ಸರಕಾರಕ್ಕೆ ಸಲಹೆ ನೀಡಿತ್ತು. ಆದರೆ ಆಯೋಗದ ಈ ಮಧ್ಯಪ್ರವೇಶವು ತುಂಬಾ ತಡವಾಗಿತ್ತು. ಒಬಿಸಿಗಳ ಎಣಿಕೆಯ ತನ್ನ ನಿರ್ಧಾರದಿಂದ ಸರಕಾರವು ಈಗಾಗಲೇ ಹಿಂದೆ ಸರಿದಿದೆ ಮತ್ತು ಆ ವಿಷಯವನ್ನು ಕೈಗೊಳ್ಳುವ ಸಾಧ್ಯತೆ ಕಡಿಮೆ ಎಂದು ಭಾಸವಾಗುತ್ತಿದೆ.
ಒಂದು ವೇಳೆ ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಜನಗಣತಿ ಜಾರಿಯಾದರೆ ಸೋಲನ್ನನುಭವಿಸಬಹುದು ಎಂಬ ಆತಂಕ ಬಿಜೆಪಿಯಲ್ಲಿ ಕಾಡಿದೆ. ಯಾಕೆಂದರೆ ಉತ್ತರ ಪ್ರದೇಶ ರಾಜ್ಯದಲ್ಲಿ ಒಂದೊಂದು ಪ್ರತಿಷ್ಠಿತ ಜಾತಿಗಳಿಗೆ ಪ್ರಭಾವಿ ಪಕ್ಷಗಳು ಅಸ್ತಿತ್ವದಲ್ಲಿದೆ. ಜಾತಿ ಲೆಕ್ಕಾಚಾರಕ್ಕನುಸಾರವಾಗಿ ರಾಜ್ಯದ ಜನತೆ ಜಾತಿ ಓಲೈಕೆಯ ಪಕ್ಷಗಳಿಗೆ ಒಲವು ನೀಡಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಬಹುದು.
ಒಂದು ವೇಳೆ ಜಾತಿ ಜನಗಣತಿ ಜಾರಿಯಾದರೆ ಬಿಜೆಪಿಯ ಹಿಂದುತ್ವದ ಕಲ್ಪನೆ ಮತ್ತು ಸಿದ್ಧಾಂತ ವಿಶೇಷವಾಗಿ ಉತ್ತರ ಪ್ರದೇಶ ರಾಜ್ಯಕ್ಕೆ ಅನುಗುಣವಾಗುವುದು ಕಷ್ಟ. ಯಾಕೆಂದರೆ ಅಲ್ಲಿನ ಬಹುತೇಕ ಜನತೆ ಜಾತಿ ಪದ್ಧತಿಗೆ ತಲ್ಲೀನರಾದ್ದರಿಂದ ಅವರ ಜಾತಿಯನ್ನೇ ಪ್ರತಿನಿಧಿಸುವ ಪಕ್ಷಗಳಿಗೆ , ನಾಯಕರಿಗೆ ಮತ ಹಾಕುವ ಮೂಲಕ ಜಾತಿ ರಾಜಕೀಯಕ್ಕೆ ಓಲೈಕೆಯಾಗುವ ಸಾಧ್ಯತೆಗಳಿವೆ. ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಂತ್ರ ಹೆಣೆದರೆ ಇತರ ನಾಯಕರು ತಮ್ಮದೇ ಆದ ಜಾತಿಯ ಸಮುದಾಯವನ್ನು ಸೆಳೆಯಲು ಪ್ರಯತ್ನಿಸುತ್ತಾರೆ.
ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲನ್ನು ಕಂಡರೆ ಬಿಜೆಪಿಯ ರಾಜಕಾರಣ ರಾಷ್ಟ್ರ ಮಟ್ಟದಲ್ಲಿ ಕುಗ್ಗುತ್ತವೆ. ಇದು ಮುಂದೆ ನಡೆಯುವ ಇತರ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ನಾಂದಿ ಹಾಡಬಹುದು. ಆದ್ದರಿಂದಲೇ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಜಾತಿ ಆಧಾರಿತ ಜನಗಣತಿಯಲ್ಲಿ ನಿರುತ್ಸಾಹ ತೋರಿದೆ.