ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ‌ ಕಲಹಕ್ಕೆ ಜನರ ಬಲಿ ಏಕೆ?

ಕರೋನಾ ಲಸಿಕೆಗಳು ಹಾಗೂ ಆಮ್ಲಜನಕ ವಿಷಯದಲ್ಲಿ ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಜಗಳ ನಡೆಯುತ್ತಿದೆ‌. ಪರಸ್ಪರ ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಎರಡೂ ಸರ್ಕಾರಗಳು ನಾಜೂಕಾಗಿ ಮಾಡುತ್ತಿವೆ. ಪರಿಣಾಮವಾಗಿ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಹೀಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಎರಡು ಲಕ್ಷ ದಾಟಿದೆ. ಆದರೆ ಇನ್ನೂ ಆಳುವವರ ಮನ ಕರಗಿಲ್ಲ. ಕಾದಾಟ ಮುಂದುವರೆದಿದೆ.


ಸರಿಯಾಗಿ ಇನ್ನೆರಡು ದಿನಕ್ಕೆ (ಮೇ 1ರಿಂದ) 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರಿಗೂ ಕರೋನಾ ಲಸಿಕೆ ಹಾಕುವ ಮೂರನೇ ಹಂತ ಶುರುವಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾಳಗ ಮಾತ್ರ ನಿಂತಿಲ್ಲ. ರಾಜಸ್ಥಾನ, ಛತ್ತೀಸ್ಗಢ, ಪಂಜಾಬ್ ಮತ್ತು ಜಾರ್ಖಂಡ್ ಸರ್ಕಾರಗಳು ತಮ್ಮ ಬಳಿ ಅಗತ್ಯಕ್ಕೆ ತಕ್ಕಷ್ಟು ಲಸಿಕೆಗಳಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಕೊಡಲು ಸಾಧ್ಯವಿಲ್ಲ ಎಂದಿವೆ. ಮಹಾರಾಷ್ಟ್ರ ಸರ್ಕಾರ ಈಗ ತಮಗೆ 12 ಕೋಟಿ ಕರೋನಾ ಲಸಿಕೆ ಕೊಡಿ ಎಂದು ಕೋವಿಶೀಲ್ಡ್ ಉತ್ಪಾದನಾ ಸಂಸ್ಥೆ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಪತ್ರ ಬರೆದಿದೆ. 


ಇದೆಲ್ಲದರ ನಡುವೆ ರಾಜ್ಯ ಸರ್ಕಾರಗಳ ಆರೋಪಗಳನ್ನು ತಳ್ಳಿಹಾಕಲು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬುಧವಾರ ಸುದ್ದಿಗೋಷ್ಠಿ ನಡೆಸಿದೆ. ಆ ಸುದ್ದಿಗೋಷ್ಠಿಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕರೋನಾ ಲಸಿಕೆ ಇವೆ ಎಂಬ ಮಾಹಿತಿ ಬಿಚ್ಚಿಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಉತ್ತರ ಪ್ರದೇಶದಲ್ಲಿ 10.10 ಲಕ್ಷ ಲಸಿಕೆಗಳು, ಮಹಾರಾಷ್ಟ್ರದಲ್ಲಿ 9.23 ಲಕ್ಷ ಲಸಿಕೆಗಳು, ಬಿಹಾರದಲ್ಲಿ  7.50 ಲಕ್ಷ ಲಸಿಕೆಗಳು, ಗುಜರಾತ್‌ನಲ್ಲಿ 6.09 ಲಕ್ಷ ಲಸಿಕೆಗಳು ಮತ್ತು ಜಾರ್ಖಂಡ್‌ನಲ್ಲಿ 5.95 ಲಕ್ಷ ಲಸಿಕೆಗಳು ಒಟ್ಟು 1,00,47,157 ಡೋಸ್‌ಗಳು  ಲಭ್ಯವಿವೆ ಎಂದು ತಿಳಿಸಿದೆ. ಜೊತೆಗೆ ಮುಂದಿನ ಮೂರು ದಿನಗಳಲ್ಲಿ 86 ಲಕ್ಷ ಲಸಿಕೆಗಳನ್ನು ನೀಡಲಾಗುವುದು ಎಂದಿದೆ.


ಅಂದರೆ 136 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ 2 ಕೋಟಿ ಲಸಿಕೆಗಳನ್ನು ಸ್ಟಾಕ್ ಇಟ್ಟುಕೊಂಡು ‘ದೊಡ್ಡ ಅಭಿಯಾನ‌’ ಕೈಗೊಳ್ಳಲಾಗಿದೆ. ಅದಕ್ಕೆ ದೊಡ್ಡದಾದ ಸಮರ್ಥನೆ ಬೇರೆ. ಕರೋನಾ ಲಸಿಕೆಗಳನ್ನು ಉಚಿತವಾಗಿ ಕೊಡುವ ವಿಷಯದಲ್ಲಿ, ಸಮಾನ ದರ ನಿಗದಿ ಮಾಡುವುದರಲ್ಲಿ, ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡುವುದರಲ್ಲಿ, ಅಗತ್ಯ ಇರುವಷ್ಟು ಲಸಿಕೆ ಉತ್ಪಾದನೆ ಮಾಡಿಸುವುದರಲ್ಲಿ ಕೇಂದ್ರ ಸರ್ಕಾರ ಸೋತಿದೆ. ಇಷ್ಟು ದೊಡ್ಡ ದೇಶಕ್ಕೆ ಕೇವಲ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸಾಲಲ್ಲ ಎಂಬ ಕಾರಣಕ್ಕೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಅನುಮತಿ ನೀಡಿದೆ. ಆದರೆ ಸ್ಪುಟ್ನಿಕ್ ಇನ್ನೂ ದೇಶದೊಳಗೆ ಬಂದಿಲ್ಲ. ಮೇ 1ಕ್ಕೆ ಸ್ಪುಟ್ನಿಕ್ ಲಸಿಕೆಗಳ ಮೊದಲ ಬ್ಯಾಚ್ ಹೊತ್ತ ಹಡಗು ದೇಶದ ಕಡಲ ತೀರ ತಲುಪುವ ಸಾಧ್ಯತೆ ಇದೆ.
ಸ್ಪುಟ್ನಿಕ್ ವಿ ಲಸಿಕೆಗಳಲ್ಲದೆ ಬೇರೆ ಲಸಿಕೆಗಳಿಗೂ ಅವಕಾಶ ನೀಡಬೇಕೆಂಬ ಮುನ್ನೆಚ್ಚರಿಕೆ ವಹಿಸಬೇಕಿತ್ತು.

ಆದರೆ ಇಡೀ ಪ್ರಪಂಚದಲ್ಲೇ ಅತ್ಯಂತ ಬೇಡಿಕೆ ಇರುವ, ಎಲ್ಲಾ ಲಸಿಕೆಗಳಿಗಿಂತಲೂ ಹೆಚ್ಚು ದಕ್ಷತೆಯ ಪ್ರಮಾಣ (96%) ಹೊಂದಿರುವ ಫೀಜರ್, ನಂತರದ ಸ್ಥಾನದಲ್ಲಿರುವ ಮಾಡರ್ನಾ (94%) ಲಸಿಕೆಗಳನ್ನು ಭಾರತಕ್ಕೆ ಬರಮಾಡಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಯಿತು. ಹೋಗಲಿ, ಕೇವಲ ಶೇಕಡಾ 66ರಷ್ಟು ದಕ್ಷತೆ ಪ್ರಮಾಣ ಹೊಂದಿರುವ, ಅಮೇರಿಕಾ ಮತ್ತಿತರ ದೇಶಗಳಲ್ಲಿ ತಿರಸ್ಕೃತಗೊಂಡಿರುವ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಗಳಿಗೆ ಈಗ ಅನುಮತಿ ನೀಡಲು ಮುಂದಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಈಗಾಗಲೇ ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCA) ಮುಂದೆ ಪ್ರಸ್ತಾಪ ಇಟ್ಟಿದೆ. ಆದರೆ ಈ ಕಂಪನಿ ಲಸಿಕೆಗಳಿಗೆ ಅನುಮತಿ ಕೊಡುವ ಪ್ರಕ್ರಿಯೆಯೂ ತಡವಾಗುತ್ತಿದೆ.


ಹೀಗೆ ಕರೋನಾ ಕಷ್ಟ ಕಾಲದಲ್ಲೂ ಕೇಂದ್ರ ಸರ್ಕಾರ ಕುಂಭಕರ್ಣ ನಿದ್ರೆ ಮಾಡುತ್ತಿದ್ದರೆ ರಾಜ್ಯ ಸರ್ಕಾರಗಳದ್ದೂ ಅದೇ ಕತೆ. ಈಗ ಲಸಿಕೆ ಇಲ್ಲ ಎಂದು ದನಿ ಎತ್ತಿರುವ ರಾಜ್ಯ ಸರ್ಕಾರಗಳು ತಮಗೆ ಖರೀದಿ ಮಾಡಲು ಅವಕಾಶ ಸಿಕ್ಕ ಕೂಡಲೇ ಖರೀದಿಗೆ ಮುಂದಾಗಬೇಕಿತ್ತು. ಕೇಂದ್ರ ಸರ್ಕಾರದ ಕಡೆಯಿಂದ ಸಹಕಾರ ಸಿಗುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ ಆಗಿದ್ದುದರಿಂದ, ಲಸಿಕೆ ಮಾತ್ರವಲ್ಲದೆ ಬೇರೆ ವಿಷಯಗಳಲ್ಲೂ ಇದು ಸಾಬೀತಾಗಿರುವುದರಿಂದ ತಮ್ಮ ತಮ್ಮ ಮಿತಿಯಲ್ಲಿ ಏನನ್ನು ಮಾಡಬೇಕಿತ್ತೋ ಅವುಗಳನ್ನಾದರೂ ಮಾಡಬೇಕಿತ್ತು. ಇದೇ ರೀತಿ ಆಕ್ಸಿಜನ್ ಫ್ಲಾಂಟ್ ಹಾಕುವುದರಿಂದ ಹಿಡಿದು ಔಷಧೀಯ ಉತ್ಪನ್ನಗಳ ಸಂಗ್ರಹದವರೆಗೆ ತನ್ನ ಪಾತ್ರವನ್ನಾದರೂ ಯಶಸ್ವಿಯಾಗಿ ನಿರ್ವಹಿಸಬೇಕಾಗಿತ್ತು. ಹಾಗೆ ನಿರ್ವಹಿಸಿದ ಉದಾಹರಣೆ ಕಣ್ಣ ಮುಂದೆಯೇ ಇದೆ. ಕೇಂದ್ರ ಸರ್ಕಾರ ಎಡ ಪಕ್ಷದ ಆಳ್ವಿಕೆ ಇರುವ ಕೇರಳದ ಬಗ್ಗೆ ಪ್ರೀತಿ ಇಟ್ಟುಕೊಂಡಿಲ್ಲ. ಆದರೂ ಅಲ್ಲಿನ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮಾಡಿ ತೋರಿಸಿದ್ದಾರೆ. ಇಚ್ಛಾಶಕ್ತಿ ಇರಬೇಕು ಅಷ್ಟೇ; ಕೇಂದ್ರ ಸರ್ಕಾರಕ್ಕೂ. ಇಲ್ಲದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ‌ ಕಲಹಕ್ಕೆ ಜನರ ಬಲಿಯಾಗುತ್ತಾರೆ. ಅಧಿಕಾರದಲ್ಲಿರುವವರ ಕಾದಾಟಕ್ಕೆ ಅಮಾಯಕರ ಬಲಿ ಏಕಾಗಬೇಕು?

Related posts

Latest posts

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...

ನಾರದಾ ಲಂಚ ಪ್ರಕರಣ- ಟಿಎಂಸಿ ಶಾಸಕ, ಸಚಿವರ ಬಂಧನ ವಿರೋಧಿಸಿ ಸಿಬಿಐ ಕಚೇರಿ ಮುಂದೆ ಟಿಎಂಸಿ ಬೆಂಬಲಿಗರಿಂದ ಪ್ರತಿಭಟನೆ

ನಾರದಾ ಲಂಚಪ್ರಕರಣದ ಆರೋಪದಡಿ ತೃಣಮೂಲ ಕಾಂಗ್ರೆಸ್ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವು...